ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಧಾರ್ಮಿಕ ತಾಣಗಳ ಯಾತ್ರಿ ನಿವಾಸಗಳಲ್ಲಿ ಇಲ್ಲ ಮೂಲಸೌಕರ್ಯ

Last Updated 21 ನವೆಂಬರ್ 2021, 19:30 IST
ಅಕ್ಷರ ಗಾತ್ರ

ಬೀದರ್‌: ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರವಾಸೋದ್ಯಮ ಇಲಾಖೆ ಅಡಿ ನಿರ್ಮಿಸಿದ ಯಾತ್ರಿ ನಿವಾಸಗಳು ಮೂಲ ಸೌಕರ್ಯಗಳ ಸಮಸ್ಯೆ ಎದುರಿಸುತ್ತಿವೆ. ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಕಟ್ಟಡಗಳನ್ನು ನಿರ್ಮಿಸಿದರೂ ಅವುಗಳಲ್ಲಿ ಸರಿಯಾದ ನೀರಿನ ಸೌಕರ್ಯ ಇಲ್ಲ. ಸ್ವಚ್ಛತೆ ಮರೀಚಿಕೆಯಾಗಿದೆ. ಒಟ್ಟಾರೆ ಯಾತ್ರಿ ನಿವಾಸಗಳಿಂದ ಯಾತ್ರಿಗಳಿಗೆ ಅನುಕೂಲ ಆಗಿಲ್ಲ.

ಹುಮನಾಬಾದ್‌ನಲ್ಲಿ ನಿರ್ಮಿಸಿದ ಯಾತ್ರಿ ನಿವಾಸ ಬಳಕೆಗೆ ಮುಕ್ತವಾಗಿಲ್ಲ .ಹಳ್ಳಿಖೇಡದಲ್ಲಿರುವ ಕಟ್ಟಡ ಕಾಮಗಾರಿ ಅಪೂರ್ಣವಾಗಿದೆ. ಚಿಟಗುಪ್ಪದಲ್ಲಿರುವ ಯಾತ್ರಿ ನಿವಾಸದಲ್ಲಿ ಸೌಲಭ್ಯಗಳ ಕೊರತೆ ಇದೆ.

ಬೀದರ್ ನಗರದಲ್ಲಿ ಎರಡು ಯಾತ್ರಿ ನಿವಾಸಗಳಿದ್ದರೂ ಭಕ್ತರ ಉಪಯೋಗಕ್ಕೆ ಬರುತ್ತಿಲ್ಲ. ಔರಾದ್‌, ಕಮಲನಗರ ಹಾಗೂ ಹುಲಸೂರಿನಲ್ಲಿ ಯಾತ್ರಿ ನಿವಾಸಗಳೇ ಇಲ್ಲ. ಔರಾದ್‌ನ ಅಮರೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಯಾತ್ರಿ ನಿವಾಸಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದರೂ ಮಂಜೂರಾಗಿಲ್ಲ.

ಬಸವಕಲ್ಯಾಣದಲ್ಲಿ ಅತಿ ಹೆಚ್ಚು ಯಾತ್ರಿ ನಿವಾಸಗಳಿವೆ. ಅವುಗಳ ನಿರ್ವಹಣೆ ಸಮರ್ಪಕವಾಗಿಲ್ಲ. ಯಾತ್ರಿ ನಿವಾಸಿಗಳ ಸಿಬ್ಬಂದಿಯೂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಒಬ್ಬರು ಕೊಠಡಿಯಲ್ಲಿ ಉಳಿದು ಹೋದ ಮೇಲೆ ಬೆಡ್‌ಶೀಟ್‌ ಸಹ ಬದಲಿಸುವುದಿಲ್ಲ. ಅದೇ ಬೆಡ್‌ಶೀಟ್‌ ಮೇಲೆ ಇನ್ನೊಬ್ಬರು ಮಲಗಬೇಕು. ಕೊಳಕು ವ್ಯವಸ್ಥೆಯಿಂದಾಗಿಯೇ ಪ್ರವಾಸಿಗರು ಯಾತ್ರಿ ನಿವಾಸಗಳಲ್ಲಿ ಉಳಿದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.

‘ಯಾತ್ರಿ ನಿವಾಸಗಳ ಸ್ಥಿತಿಗತಿಗಳ ಕುರಿತು ಜಿಲ್ಲಾ ಮಟ್ಟದಲ್ಲಿ ಒಮ್ಮೆಯೂ ಅಧಿಕಾರಿಗಳ ಸಭೆ ನಡೆದಿಲ್ಲ. ಯಾತ್ರಿನಿವಾಸಗಳು ಅವ್ಯವಸ್ಥೆಗಳ ಗೂಡಾಗಿವೆ’ ಎಂದು ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ ಬೇಸರ ವ್ಯಕ್ತಪಡಿಸುತ್ತಾರೆ.

‘ನರಸಿಂಹ ಝರಣಾದಲ್ಲಿ ಯಾತ್ರಿ ನಿವಾಸ ಇದ್ದರೂ ಲೋಕೋಪಯೋಗಿ ಇಲಾಖೆ ಧರ್ಮದತ್ತಿ ಇಲಾಖೆಗೆ ಹಸ್ತಾಂತರ ಮಾಡಿಲ್ಲ. ಕಟ್ಟಡದ ಆವರಣ ಸಮತಟ್ಟುಗೊಳಿಸಿಲ್ಲ. ಇನ್ನೂ ಸಣ್ಣಪುಟ್ಟ ಕೆಲಸಗಳು ಬಾಕಿ ಇವೆ. ಭಕ್ತರ ಪಾಲಿಗೆ ಯಾತ್ರಿ ನಿವಾಸ ಇದ್ದೂ ಇಲ್ಲದಂತಾಗಿದೆ’ ಎನ್ನುತ್ತಾರೆ ಬೀದರ್‌ ನಿವಾಸಿ ನಾಗವೇಣಿ ರೆಡ್ಡಿ.

ಜಿಲ್ಲೆಯ ಯಾತ್ರಿ ನಿವಾಸಗಳು ದುಃಸ್ಥಿತಿಗೆ ತಲುಪಲು ಅಧಿಕಾರಿಗಳೇ ಕಾರಣ. ಉಪ ವಿಭಾಗಾಧಿಕಾರಿಗಳು ನಿರಂತರವಾಗಿ ಮೇಲ್ವಿಚಾರಣೆ ನಡೆಸುತ್ತಿದ್ದರೆ ಸಮಸ್ಯೆಗಳೇ ಉದ್ಭವಿಸುವುದಿಲ್ಲ. ಅಧಿಕಾರಿಗಳ ನಿರಾಸಕ್ತಿ ಸಮಸ್ಯೆಗಳನ್ನು ಇನ್ನಷ್ಟು ಜಟಿಲಗೊಳಿಸಿದೆ ಎಂದು ಹೇಳುತ್ತಾರೆ ಪ್ರವಾಸಿ ಬಸವಕುಮಾರ.

ಕಟ್ಟಡ ನಿರ್ಮಿಸಿದ ಗುತ್ತಿಗೆದಾರರಿಗೆ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ ಎಂದು ಕೆಲವರು ಆರೋಪಿಸಿದರೆ, ಯೋಜನೆ ಅನುಸಾರ ಕಟ್ಟಡ ನಿರ್ಮಾಣವಾಗಿಲ್ಲ ಎಂದು ಅಧಿಕಾರಿಗಳು ದೂರುತ್ತಾರೆ. ಜನ ಸಾಮಾನ್ಯರ ತೆರಿಗೆ ಹಣದಲ್ಲಿ ಕಟ್ಟಲಾದ ಕಟ್ಟಡಗಳು ಮಣ್ಣುಪಾಲಾಗುತ್ತಿವೆ.

ಬಸವಕಲ್ಯಾಣದಲ್ಲಿ ಹೆಚ್ಚು ಯಾತ್ರಿ ನಿವಾಸಗಳು

ಬಸವಕಲ್ಯಾಣ: ನಗರದಲ್ಲಿ ಯಾತ್ರಿ‌ ನಿವಾಸಗಳ ಸಂಖ್ಯೆ ಹೆಚ್ಚಿದ್ದರೂ ಯಾತ್ರಿಗಳು ಬರುವುದು ಮಾತ್ರ ಕಡಿಮೆ. ನಗರವು ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವದ ಸ್ಥಳ ಆಗಿದೆ. ಇಲ್ಲಿ ಬಸವಾದಿ ಶರಣರ ಸ್ಮಾರಕಗಳಿರುವ ಕಾರಣ ಯಾತ್ರಿ ನಿವಾಸಗಳನ್ನು ನಿರ್ಮಿಸಲಾಗಿದೆ.

ಲೋಕೋಪಯೋಗಿ ಇಲಾಖೆಯ ಮೂರು ಯಾತ್ರಿ ನಿವಾಸಗಳು ಇವೆ. ತ್ರಿಪುರಾಂತದಲ್ಲಿನ ಕಟ್ಟಡದಲ್ಲಿ ಹಳೆಯ ಪದ್ಧತಿ ವ್ಯವಸ್ಥೆ ಇರುವುದರಿಂದ ಅಲ್ಲಿಗೆ ಪ್ರವಾಸಿಗರು‌ ಬರುತ್ತಿರಲಿಲ್ಲ. ಆದ್ದರಿಂದ ಅದನ್ನು‌ ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿ ಕಚೇರಿಯನ್ನಾಗಿ ಪರಿವರ್ತಿಸಲಾಗಿದೆ.

ರೇಣಾ ಹತ್ತಿರದ ಯಾತ್ರಿ ನಿವಾಸ ಯಾವಾಗಲೂ ಖಾಲಿಯಾಗಿಯೇ ಇರುತ್ತದೆ. ಜೆಸ್ಕಾಂ ಕಚೇರಿ ಬಳಿಯ ಯಾತ್ರಿ ನಿವಾಸ ಸುಸಜ್ಜಿತವಾಗಿರುವ ಕಾರಣ ಗಣ್ಯರ ವಾಸಕ್ಕೆ ಮೀಸಲಿಡಲಾಗಿದೆ.

ಬಸವಕಲ್ಯಾಣ ಅಭಿವೃದ್ಧಿ ‌ಮಂಡಳಿಯ ಮೂರು ಯಾತ್ರಿ‌ ನಿವಾಸಗಳಿದ್ದು, ಎಲ್ಲ ವ್ಯವಸ್ಥೆ ಇರುವ ಕಾರಣ ಯಾತ್ರಿಗಳು ಇಲ್ಲಿಯೇ ಇರುವುದಕ್ಕೆ ಇಷ್ಟಪಡುತ್ತಾರೆ. ನಗರದಲ್ಲಿ‌ ಖಾಸಗಿ ಲಾಡ್ಜ್ ಗಳು‌ ಕೂಡ ಇರುವ ಕಾರಣ ಗಣ್ಯರು ಹಾಗೂ ಪ್ರವಾಸಿಗಳು ಉಳಿದುಕೊಳ್ಳುವುದಕ್ಕೆ‌ ಯಾವುದೇ‌ ಸಮಸ್ಯೆ ಇಲ್ಲ. ಸ್ವಚ್ಛತೆ ಹಾಗೂ ಇತರೆ ವ್ಯವಸ್ಥೆ ನಿತ್ಯ ಕೈಗೊಳ್ಳಬೇಕು ಎಂದು ವ್ಯಾಪಾರಿ ಗುರುನಾಥ ಗೌಡೆ‌ ಮನವಿ ಮಾಡುತ್ತಾರೆ.

ಜನ ಕಡಿಮೆ ಇರುವುದರಿಂದ ಪ್ರತಿದಿನ ಎಲ್ಲ ವ್ಯವಸ್ಥೆ ಕೈಗೊಳ್ಳಲು ಆಗುವುದಿಲ್ಲ. ಆದರೆ, ಯಾರಾದರೂ ಕೊಠಡಿ ಬುಕ್ ಮಾಡಿದರೆ ತಕ್ಷಣ ಎಲ್ಲ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಬಸವಕಲ್ಯಾಣ ಅಭಿವೃದ್ಧಿ ‌ಮಂಡಳಿಯ ಅಧಿಕಾರಿ ಹೇಳುತ್ತಾರೆ.

ಯಾತ್ರಿ ನಿವಾಸದಲ್ಲಿ ವಾಸ್ತವ್ಯ ಕಡಿಮೆ

ಭಾಲ್ಕಿ: ತಾಲ್ಲೂಕಿನ ಖಾನಾಪುರ ಗ್ರಾಮದ ಮಲ್ಲಣ್ಣ ದೇವಸ್ಥಾನ ದಕ್ಷಿಣ ಕಾಶಿ ಎಂದು ಪ್ರಸಿದ್ಧಿ ಪಡೆದಿದೆ. ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣದಿಂದ ಅನೇಕ ಭಕ್ತರು ಮಲ್ಲಣ್ಣ ದೇವರ ದರುಶನಕ್ಕೆ ಬರುತ್ತಾರೆ. ಆದರೆ, ಯಾತ್ರಿ ನಿವಾಸದಲ್ಲಿ ತಂಗುವ ಭಕ್ತರ ಸಂಖ್ಯೆ ಮಾತ್ರ ವಿರಳ.

ಯಾತ್ರಿ ನಿವಾಸದ ಸುತ್ತಮುತ್ತ ಸ್ವಚ್ಛತೆ ಇಲ್ಲ. ಕಟ್ಟಡ ಹಿಂಭಾಗದ ಕಾಮಗಾರಿ ಸಮರ್ಪಕವಾಗಿಲ್ಲ. ಆವರಣವನ್ನೂ ಸಮತಟ್ಟುಗೊಳಿಸಿಲ್ಲ. ದಿನವೊಂದಕ್ಕೆ ಒಂದು ಕೋಣೆಗೆ ಕೇವಲ ₹ 200 ಬಾಡಿಗೆ ಇದ್ದರೂ ಸಹ ಯಾತ್ರಿ ನಿವಾಸದಲ್ಲಿ ಉಳಿದುಕೊಳ್ಳಲು ಭಕ್ತರು ಹಿಂದೇಟು ಹಾಕುತ್ತಿದ್ದಾರೆ.
‘ಈ ಮುಂಚೆ ಯಾತ್ರಿ ನಿವಾಸದಲ್ಲಿ ಇದ್ದ ಶೌಚಾಲಯ, ನೀರಿನ ಸಮಸ್ಯೆಯನ್ನು ಬಗೆ ಹರಿಸಲಾಗಿದೆ. ಯಾತ್ರಿ ನಿವಾಸದಲ್ಲಿ ಉಳಿದುಕೊಳ್ಳುವರು ಒಬ್ಬರು ಇಲ್ಲವೇ ಇಬ್ಬರು ಭಕ್ತರು ಮಾತ್ರ. ಭಾನುವಾರ ಮಾತ್ರ ಐದರಿಂದ ಆರು ಜನ ತಂಗುತ್ತಾರೆ’ ಎಂದು ದೇವಸ್ಥಾನದ ವ್ಯವಸ್ಥಾಪಕ ಸಂಜು ಹೇಳುತ್ತಾರೆ.

ಗಣ್ಯರ ವಾಸಕ್ಕೆ ಮಾತ್ರ ಅವಕಾಶ

ಚಿಟಗುಪ್ಪ ತಾಲ್ಲೂಕಿನ ಚಾಂಗಲೇರಾ ವೀರಭದ್ರೇಶ್ವರ ದೇವಾಲಯ ಆವರಣದಲ್ಲಿ ವೀರೇಂದ್ರ ಪಾಟೀಲ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿನ ಯಾತ್ರಿ ನಿವಾಸ ಯಾತ್ರಿಗಳಿಗೆ ಸರಿಯಾಗಿ ದೊರಕುತ್ತಿಲ್ಲ. ಇಲ್ಲಿ ಗಣ್ಯರಿಗೆ ಮಾತ್ರ ಅವಕಾಶ ಇದೆ.ಕಟ್ಟಡದಲ್ಲಿ ಸಮರ್ಪಕವಾಗಿ ನೀರು ಪೂರೈಕೆಯಾಗುವುದಿಲ್ಲ. ವಿದ್ಯುತ್ ದೀಪಗಳು ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ. ಬೇಡಿಕೆ ಇದ್ದರೂ ನಿರ್ವಹಣೆ ಸಮಸ್ಯೆ ಹಾಗೂ ಸೌಲಭ್ಯಗಳ ಕೊರತೆಯಿಂದ ಬಳಕೆಯಾಗುತ್ತಿಲ್ಲ ಎನ್ನುತ್ತಾರೆ ಎಂದು ಸಮಾಜ ಸೇವಕ ಪ್ರಭುರಾವ್ .

ಬಳಕೆಗೆ ಮುಕ್ತವಾಗದ ಯಾತ್ರಿ ನಿವಾಸ

ಹುಮನಾಬಾದ್ ಪಟ್ಟಣದ ವೀರಭದ್ರೇಶ್ವರ ದೇವಾಲಯ ಎದುರು ಯಾತ್ರಿ ನಿವಾಸ ನಿರ್ಮಾಣವಾಗಿ ಐದು ವರ್ಷ ಕಳೆದರೂ ಭೂಸೇನಾ ನಿಗಮದ ಅಧಿಕಾರಿಗಳು ಧರ್ಮದತ್ತಿ ಇಲಾಖೆಗೆ ಹಸ್ತಾಂತರ ಮಾಡಿಲ್ಲ. ನಿರ್ವಹಣೆ ಸಮಸ್ಯೆಯಿಂದಾಗಿ ಉದ್ಘಾಟನೆಗೊಳ್ಳುವ ಮೊದಲೇ ಕಟ್ಟಡ ಹಾಳಾಗುತ್ತಿದೆ.
ವೀರಭದ್ರೇಶ್ವರ ದೇವಸ್ಥಾನಕ್ಕೆ ಜಿಲ್ಲೆ ಹಾಗೂ ನೆರೆಯ ಜಿಲ್ಲೆಗಳಿಂದಲೂ ನಿತ್ಯ ನೂರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಆದರೆ, ಭಕ್ತರಿಗೆ ಯಾತ್ರಿನಿವಾಸ ಬಳಕೆಗೆ ಅವಕಾಶ ಕಲ್ಪಿಸಿಲ್ಲ. ಅಧಿಕಾರಿಗಳ ನಿರ್ಲಕ್ಷ್ದದಿಂದ ಕಟ್ಟಡ ಹಾಳಾಗುತ್ತಿದೆ ಎಂದು ಭಕ್ತರು ಬೇಸರ ವ್ಯಕ್ತಪಡಿಸುತ್ತಾರೆ.

‘ಯಾತ್ರಿ ನಿವಾಸದ ಸುತ್ತುಮುತ್ತ ಹುಲ್ಲು ಬೆಳೆದಿದೆ. ದೇವಾಲಯಕ್ಕೆ ಹಸ್ತಾಂತರ ಮಾಡಿದರೆ, ನಿವಾಸವನ್ನು ಸ್ವಚ್ಛಗೊಳಿಸಿ ಯಾತ್ರಿಗಳಿಗೆ ಅನುಕೂಲ ಮಾಡಿಕೊಢಲಾಗುವುದ’ ಎಂದು ದೇವಾಲಯ ಕಾರ್ಯದರ್ಶಿ ಮಹಾರುದ್ರಪ್ಪ ಹೇಳುತ್ತಾರೆ.

ಹಳ್ಳಿಖೇಡ(ಬಿ) ಪಟ್ಟಣದ ಸೀಮಿನಾಗನಾಥ ದೇವಾಲಯದ ಆವರಣದಲ್ಲಿ ಹೊಸದಾಗಿ ಯಾತ್ರಿ ನಿವಾಸ ನಿರ್ಮಿಸಲಾಗುತ್ತಿದೆ. ಶಾಸಕ ರಾಜಶೇಖರ ಪಾಟೀಲ ಅವರು ಕೆಕೆಆರ್ ಡಿಬಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕಟ್ಟಡಕ್ಕೆ ಅನುದಾನ ಒದಗಿಸಿದ್ದಾರೆ.

‘ಕಟ್ಟಡದ ಕಾಮಗಾರಿ ಮುಗಿದಿಲ್ಲ. ಎಲೆಕ್ಟ್ರಿಕ್‌ ವೈರಿಂಗ್ ಹಾಗೂ ಕಟ್ಟಡಕ್ಕೆ ಬಣ್ಣ ಬಳಿಯುವ ಕಾರ್ಯ ಬಾಕಿ ಇದೆ. ಬಹುದಿನಗಳಿಂದ ಕಟ್ಟಡ ಕಾಮಗಾರಿ ಸ್ಥಗಿತಗೊಂಡಿರುವ ಕಾರಣ ಕಟ್ಟಡ ಹಾಳಾಗುತ್ತಿದೆ. ಕಾಮಗಾರಿ ಪೂರ್ಣಗೊಳಿಸಿ ಇಲಾಖೆಗೆ ಹಸ್ತಾಂತರಿಸಿದರೆ ಯಾತ್ರಿಗಳಿಗೆ ಅನುಕೂಲವಾಗಲಿದೆ’ ಎಂದು ದೇವಾಲಯ ಕಾರ್ಯದರ್ಶಿ ಮುತ್ತಪ್ಪ ಹೇಳುತ್ತಾರೆ. ‌

ನಿರ್ಮಾಣದ ಹಂತದಲ್ಲಿ 12 ಯಾತ್ರಿ ನಿವಾಸಗಳು

ಬೀದರ್‌: ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಜಿಲ್ಲೆಯಲ್ಲಿ ಒಟ್ಟು 12 ಯಾತ್ರಿ ನಿವಾಸಗಳನ್ನು ನಿರ್ಮಿಸಲಾಗುತ್ತಿದೆ. ಇವುಗಳಲ್ಲಿ ಎರಡು ಕಟ್ಟಡಗಳ ಕಾಮಗಾರಿಗಳೂ ಪೂರ್ಣಗೊಂಡಿವೆ.

ಬೀದರ್‌ನ ರಾಮಕೃಷ್ಣ ಆಶ್ರಮದ ಬಳಿ, ತಾಲ್ಲೂಕಿನ ರೇಕುಳಗಿಯ ಬುದ್ಧ ವಚನ ಧಾರ್ಮಿಕ ಅಧ್ಯಯನ ಕೇಂದ್ರ, ಬಸವಕಲ್ಯಾಣದ ಅನುಭವ ಮಂಟಪದ ಆವರಣ, ಹುಮನಾಬಾದ್ ತಾಲ್ಲೂಕಿನ ಘೋಡವಾಡಿ, ದುಬಲಗುಂಡಿ, ಮಾಣಿಕನಗರ ದೇವಸ್ಥಾನ ಬಳಿ, ರಾಂಪೂರ ರಾಮಲಿಂಗೇಶ್ವರ ದೇವಸ್ಥಾನ ಸಮೀಪ, ಭಾಲ್ಕಿ ತಾಲ್ಲೂಕಿನ ಡೊಣಗಾಪುರ ಹಿರೇಮಠದ ಆವರಣದಲ್ಲಿ ಯಾತ್ರಿ ನಿವಾಸ ನಿರ್ಮಿಸಲಾಗುತ್ತಿದೆ.

‘ಭಾಲ್ಕಿಯ ಹಿರೇಮಠದ ಆವರಣದಲ್ಲಿ ಹೊಸದಾಗಿ ಯಾತ್ರಿ ನಿವಾಸ ನಿರ್ಮಿಸಲು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿ ಬೇಬಿ ಹೇಳುತ್ತಾರೆ.

ಪೂರಕ ಮಾಹಿತಿ: ಮಾಣಿಕ ಭುರೆ, ಗುಂಡು ಅತಿವಾಳ, ಬಸವರಾಜ ಪ್ರಭಾ, ಮನ್ಮಥ ಸ್ವಾಮಿ, ವೀರೇಶ ಮಠಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT