ಶನಿವಾರ, ಅಕ್ಟೋಬರ್ 8, 2022
21 °C

ಉಮಾಪುರದ ಗಣೇಶ ಜಾತ್ರೆ; ಮಹಾದಾಸೋಹ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಸವಕಲ್ಯಾಣ: ತಾಲ್ಲೂಕಿನ ಉಮಾಪುರದಲ್ಲಿನ ದೊಡ್ಡ ಗಣೇಶ ಮೂರ್ತಿಯು ಭಕ್ತರ ಶ್ರದ್ಧಾ ಕೇಂದ್ರವಾಗಿದೆ. ಶುಕ್ರವಾರ(ಸೆ.9) ನಡೆಯುವ ಜಾತ್ರೆ ಅಂಗವಾಗಿ ಹುಗ್ಗಿ, ಅನ್ನ, ಸಾಂಬಾರಿನ ಮಹಾದಾಸೋಹ ನಡೆಯಲಿದೆ.

ಚಾಲಕ್ಯರ ರಾಜಧಾನಿ ಆಗಿದ್ದ ಕಲ್ಯಾಣಕ್ಕೆ ಇದು ಸಮೀಪದಲ್ಲಿದ್ದರೂ ಇಲ್ಲಿನ ದೇವಸ್ಥಾನ ಅತಿ ಹಳೆಯದ್ದು. ಉತ್ತರ ಭಾರತದ ನಾಗರ ಶೈಲಿಯ ಗೋಪುರ, ಗರ್ಭಗೃಹ ಹಾಗೂ ಸಭಾ ಮಂಟಪವಿರುವ ಉಮಾ ಮಹೇಶ್ವರರ ಜೋಡಿ ದೇವಸ್ಥಾನಗಳು ಇಲ್ಲಿವೆ.

ಸುತ್ತಲಿನಲ್ಲಿ ಆವರಣಗೋಡೆ ಇದ್ದು ಎದುರಿನ ವಿಶಾಲವಾದ ಅಂಗಳದಲ್ಲಿ ಕೆಲ ಹಳೆಯ ದೇವಸ್ಥಾನಗಳು ಮತ್ತು ಎತ್ತರದ ಗಣೇಶ ವಿಗ್ರಹವಿದೆ. ಕಟ್ಟೆಯ ಮೇಲೆ ಪ್ರತಿಷ್ಠಾಪಿಸಿದ ಈ ಮೂರ್ತಿಯ ಮೇಲೆ ಮಾತ್ರ ಯಾವುದೇ ಆಸರೆ ಇಲ್ಲ. ಆದರೂ, ರಾಜ್ಯದ ಹಾಗೂ ಮಹಾರಾಷ್ಟ್ರ, ತೆಲಂಗಾಣದ ಭಕ್ತರು ಇಲ್ಲಿ ಪೂಜೆಗಾಗಿ ಮತ್ತು ಹರಕೆ ತೀರಿಸಲು ಬರುತ್ತಾರೆ.

ಊರ ಪಕ್ಕದ ರಾಯವಾಡೆ ಎಂಬ ಸ್ಥಳದಲ್ಲಿಯೂ ಹಳೆಯ ಮೂರ್ತಿಗಳು, ಕಲ್ಲಿನ ಕೆತ್ತನೆಯ ಕಂಬಗಳು ದೊರೆತಿವೆ. ಸಮೀಪವೇ ಪದ್ಮಾವತಿ ಕೆರೆಯಿದೆ. ಇನ್ನೊಂದು ವಿಶೇಷವೆಂದರೆ ಉತ್ತರ ದಿಕ್ಕಿನ ಅಗಸೆಯಿಂದ ದಕ್ಷಿಣಕ್ಕೆ ಪಾಟೀಲರ ಹಳೆಯ ಮನೆ ಪಕ್ಕದಿಂದ ಹೋಗುವ ರಸ್ತೆಯು ಊರನ್ನು ಉಮಾಪುರ ಮತ್ತು ಲಾಹೇಶ್ವರ
ಎಂದು ಎರಡು ಭಾಗಗಳನ್ನಾಗಿ ವಿಂಗಡಿಸುತ್ತದೆ.

‘ಹಿಂದಿನಿಂದಲೂ ಪ್ರತಿವರ್ಷದ ಗಣೇಶ ಹಬ್ಬಕ್ಕೆ ಇಲ್ಲಿನ ಗಣೇಶನ ಮೂರ್ತಿ ಎದುರಲ್ಲಿ ವಿವಿಧ ಧಾರ್ಮಿಕ ಚಟುವಟಿಕೆಗಳು ನಡೆಯುತ್ತವೆ. ವಿಸರ್ಜನೆಯ ದಿನಕ್ಕಿಂತ ಮೊದಲು ಗ್ರಾಮದಲ್ಲಿ ಧ್ವಜ ಮತ್ತು ಪಲ್ಲಕ್ಕಿ ಮೆರವಣಿಗೆ ನಡೆಯುತ್ತದೆ. ಮರುದಿನ ಅನ್ನಸಂತರ್ಪಣೆ ಏರ್ಪಡಿಸಲಾಗುತ್ತದೆ’ ಎಂದು ರಾಮ ಪಂಚಾಳ ಮತ್ತು ಶಿವಕುಮಾರ ಸ್ವಾಮಿ ತಿಳಿಸಿದ್ದಾರೆ.

‘ಹತ್ತು ದಿನಗಳಿಂದ ಇಲ್ಲಿ ಪಾರಾಯಣ, ಭಜನೆ, ಜಾಗರಣೆ ನಡೆದಿದೆ. ದೇವಸ್ಥಾನಕ್ಕೆ ವಿದ್ಯುತ್ ದೀಪಾ ಲಂಕಾರ ಮಾಡಲಾಗಿದೆ. ಎದುರಿಗೆ ತಾತ್ಕಾಲಿಕ ಮಂಟಪ ಅಳವಡಿಸಲಾಗಿದೆ. ಮಹಾದೇವ ಮಂದಿರದಲ್ಲಿನ ಲಿಂಗಕ್ಕೆ ಪುಷ್ಪಾಲಂಕಾರ ಮಾಡಿ ಪೂಜೆಗೈಯಲಾಗಿದೆ' ಎಂದು ರಾಜಪ್ಪ ತಿಳಿಸಿದ್ದಾರೆ.

‘ದಾಸೋಹದ ದಿನದಂದು 15 ಸಾವಿರಕ್ಕೂ ಹೆಚ್ಚಿನ ಭಕ್ತರು ದರ್ಶನ ಪಡೆಯುತ್ತಾರೆ. ಶಾಸಕರು, ಇತರೆ ಜನಪ್ರತಿನಿಧಿಗಳು ಮತ್ತು ರಾಜಕೀಯ ಮುಖಂಡರು ಕೂಡ ಬರುತ್ತಾರೆ. ಹೀಗಾಗಿ, ಅಗತ್ಯ ವ್ಯವಸ್ಥೆ ಮಾಡಲಾಗಿದೆ’ ಎಂದು ಪಿಡಿಒ ಚಂದ್ರಾಮ ಧೂಳಖೇಡ ಹೇಳಿದರು.

ವೆಂಕಟೇಶ್ವರ ದೇಗುಲಕ್ಕೆ ಭೂಮಿಪೂಜೆ
ಔರಾದ್: ತಾಲ್ಲೂಕಿನ ಕೊಳ್ಳೂರ್ ಗ್ರಾಮದಲ್ಲಿ ಸುಮಾರು ₹20 ಕೋಟಿ ವೆಚ್ಚದ ವೆಂಕಟೇಶ್ವರ ದೇವಸ್ಥಾನದ ಭೂಮಿ ಪೂಜೆ ಗುರುವಾರ
ನೆರವೇರಿತು.
ಹೆಡಗಾಪುರ ಶಿವಲಿಂಗ ಶಿವಾಚಾರ್ಯರು, ಅವಧುತಗಿರಿ ಮಹಾರಾಜರು, ಶಂಕರಲಿಂಗ ಶಿವಾಚಾರ್ಯರು, ಕೌಳಾಸ ದೇವಗಿರಿ ಮಹಾರಾಜ, ಹರಿಚಂದ್ರ ಮಹಾರಾಜರ ಸಮ್ಮುಖದಲ್ಲಿ ಧಾರ್ಮಿಕ ವಿಧಿ ವಿಧಾನ ಮೂಲಕ ದೇವಸ್ಥಾನದ ಭೂಮಿ ಪೂಜೆ ನೆರವೇರಿತು.
ಬಾಲಾಜಿ ವೆಂಕಟೇಶ್ವರ ಟ್ರಸ್ಟ್ ಆಶ್ರಯದಲ್ಲಿ ಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇದಕ್ಕಾಗಿ 2 ಎಕರೆ ಜಮೀನು ಖರೀದಿಸಲಾಗಿದೆ. ಇದೊಂದು ಧಾರ್ಮಿಕ ಹಾಗೂ ಐತಿಹಾಸಿಕ ಕೇಂದ್ರವಾಗಲಿದೆ ಎಂದು ಟ್ರಸ್ಟ್‌ನ ಪ್ರಮುಖರು
ತಿಳಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸಂಗ್ರಾಮ, ಟ್ರಸ್ಟ್ ಅಧ್ಯಕ್ಷ ಉಮಾಕಾಂತ ಸ್ವಾಮಿ, ವಿಶ್ವನಾಥ ದೀನೆ, ಆನಂದ ಚವಾಣ್, ಬಸವರಾಜ ಶೆಟಕಾರ, ಸುಧಾಕರ ಕೊಳ್ಳೂರ್, ವಿಜಯಕುಮಾರ ನಾಗಶೆಟ್ಟಿ, ವಿಶ್ವನಾಥ ದಬಾಡೆ, ನವೀನ ರಾಜು, ಭರತ ಪೋಕಲವಾರ ಹಾಗೂ ಇತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು