ಬಸವಕಲ್ಯಾಣ: ತಾಲ್ಲೂಕಿನ ಉಮಾಪುರದಲ್ಲಿ ಉಮಾ- ಮಹೇಶ್ವರ ಮತ್ತು ಗಣಪತಿ ದೇವಸ್ಥಾನಗಳ ಸಂಕುಲವಿದ್ದು ಗಣೇಶ ಚತುರ್ಥಿ ಅಂಗವಾಗಿ ವಾರದಿಂದ ಇಲ್ಲಿ ಹರಿನಾಮ ಸಪ್ತಾಹ ನಡೆದಿದೆ. ಸೆಪ್ಟೆಂಬರ್ 14 ರಿಂದ ವಿವಿಧ ಕಾರ್ಯಕ್ರಮಗಳು ಮತ್ತು ಸೆಪ್ಟೆಂಬರ್ 17ಕ್ಕೆ ಗಣೇಶ ಜಾತ್ರೆ ವಿಜೃಂಭಣೆಯಿಂದ ನೆರವೆರಲಿದ್ದು ಸಾವಿರಾರು ಭಕ್ತರು ಪಾಲ್ಗೊಳ್ಳುವರು.
ಇಲ್ಲಿನ ಎರಡೂ ದೇವಸ್ಥಾನಗಳು ನಾಗರ ಶೈಲಿಯದ್ದಾಗಿದ್ದು ಅಕ್ಕಪಕ್ಕದಲ್ಲಿವೆ. ಇಂಥ ವಿಶಿಷ್ಟ ಶೈಲಿಯ ಮತ್ತು ಇಷ್ಟೊಂದು ಪುರಾತನವಾದ ಐತಿಹಾಸಿಕ ತಾಣ ಜಿಲ್ಲೆಯಲ್ಲಿ ಇದೊಂದೇ ಆಗಿದೆ. ಪ್ರಾಚ್ಯವಸ್ತು ಇಲಾಖೆ ಕೆಲ ವರ್ಷಗಳ ಹಿಂದೆ ಇವುಗಳ ಜೀರ್ಣೋದ್ಧಾರ ಕಾರ್ಯ ನಡೆಸಿದೆ. ಗರ್ಭಗೃಹಗಳು ಎತ್ತರದ ಅದಿಷ್ಠಾನದ ಮೇಲೆ ಪೂರ್ವಾಭಿಮುಖವಾಗಿದ್ದು ಒಳಗಡೆ ಶಿವಲಿಂಗಗಳಿವೆ. ಎದುರಿಗೆ ಕೆತ್ತನೆಯ ಕಲ್ಲುಕಂಬಗಳ ಮುಖಮಂಟಪ, ಅರ್ಧಮಂಟಪ, ಅಂತರಾಳ ಹೊಂದಿವೆ. ಎತ್ತರದ ಶಿಖರ ಮತ್ತು ಅಮಲಕ, ಕಲಶದ ಭಾಗವೂ ಆಕರ್ಷಕವಾಗಿದೆ.
ದೇವಸ್ಥಾನ ಮತ್ತು ಎದುರಿನ ಮಂಟಪದ ಹೊರಭಿತ್ತಿಯಲ್ಲಿ ಮನಮೋಹಕ ಪ್ರಭಾವಳಿ, ವಿವಿಧ ದೇವತೆಗಳ, ಪುಷ್ಪಗಳ ಮತ್ತು ಮನುಷ್ಯರ ವಿವಿಧ ಭಂಗಿಯ ಶಿಲ್ಪಗಳು, ವೀರಗಲ್ಲು ಮತ್ತು ಮಾಸ್ತಿಗಲ್ಲುಗಳಿವೆ. ಆವರಣದಲ್ಲಿ ಬಾವಿಯಿದೆ. ಸುತ್ತಲಿನಲ್ಲಿ ವಿಶಾಲವಾದ ಜಾಗವಿದ್ದು ಆವರಣಗೋಡೆ ಇದೆ. ಎರಡು ಸ್ಥಳಗಳಲ್ಲಿ ಹೊಸದಾಗಿ ನಿರ್ಮಿಸಿದ ಪ್ರವೇಶದ್ವಾರಗಳಿವೆ. ಉಮಾ- ಮಹೇಶ್ವರ ದೇವಸ್ಥಾನಗಳ ಎದುರಿನ ಖಾಲಿ ಜಾಗದಲ್ಲಿ ಕಟ್ಟೆಯ ಮೇಲೆ ಉತ್ತರಾಭಿಮುಖವಾಗಿ ಗಣೇಶನ ಏಳು ಅಡಿ ಎತ್ತರದ ವಿಗ್ರಹವಿದೆ. ಆದ್ದರಿಂದ ಈ ತಾಣ ಗಣಪತಿ ಕ್ಷೇತ್ರವೆಂದೇ ಪ್ರಸಿದ್ಧವಾಗಿದೆ. ಅಮಾವಾಸ್ಯೆ, ಹುಣ್ಣಿಮೆ, ಇತರೆ ಹಬ್ಬ ಹರಿದಿನಗಳಿಗೆ ಅನೇಕ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ.
`ವಾರದಿಂದ ಹರಿನಾಮ ಸಪ್ತಾಹ, ವಿವಿಧ ಧಾರ್ಮಿಕ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ. ಪಲ್ಲಕ್ಕಿ, ಪತಾಕೆ, ಮಂತ್ರದಂಡ ಮತ್ತು ದಿಂಡಿ ಮೆರವಣಿಗೆಯೂ ನಡೆಯುತ್ತದೆ. ಸೆಪ್ಟೆಂಬರ್ 17ರಂದು ಭಜನೆ, ಭಾರೂಡ ಮತ್ತು ಸಂಜೆ ದಹಿಹಂಡಿ ಕಾರ್ಯಕ್ರಮವಿರುತ್ತದೆ' ಎಂದು ದೇವಸ್ಥಾನ ಸಮಿತಿ ಪ್ರಮುಖರಾದ ಚಂದ್ರಕಾಂತ ಪಾಟೀಲ ತಿಳಿಸಿದ್ದಾರೆ.
`ಜಾತ್ರೆಯಲ್ಲಿ ಭಕ್ತರು ಗಣೇಶನಿಗೆ ವಿಶಿಷ್ಟ ಪುಷ್ಪಮಾಲೆ ಅರ್ಪಿಸಿ ತೆಂಗು ಒಡೆದು ಸಕ್ಕರೆ ವಿತರಿಸಿ ಹರಕೆ ತೀರಿಸುತ್ತಾರೆ' ಎಂದು ಗ್ರಾಮ ಪಂಚಾಯಿತಿ ಸದಸ್ಯ ಸಂಜೀವ ಗೋಡಬೋಲೆ, ಶಿವಕುಮಾರಸ್ವಾಮಿ ಕನಾಡೆ ತಿಳಿಸಿದ್ದಾರೆ.
`ಜಾತ್ರೆಗೆ ಮಹಾರಾಷ್ಟ್ರ, ತೆಲಂಗಾಣಾದ ಭಕ್ತರು ಕೂಡ ಬಂದು ಪ್ರಸಾದ ಸ್ವೀಕರಿಸುತ್ತಾರೆ. ಆದ್ದರಿಂದ ಆವರಣದಲ್ಲಿ ಕುಳಿತುಕೊಳ್ಳುವುದಕ್ಕೆ ಶೆಡ್, ಉದ್ಯಾನ ನಿರ್ಮಿಸಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಜಾತ್ರೆಯ ಹುಗ್ಗಿಯ ಪ್ರಸಾದ ಸೇವನೆ ವಿಶೇಷ. ರಾಜಕೀಯ ಮುಖಂಡರು, ಗಣ್ಯರು ಪಾಲ್ಗೊಳ್ಳುತ್ತಾರೆ' ಎಂದು ಗ್ರಾಮ ಪಂಚಾಯಿತಿ ಸದಸ್ಯ ಬಬಲು ಶೇಖ್ ತಿಳಿಸಿದ್ದಾರೆ.
ಈ ಭಾಗದ ಏಕೈಕ ವಿಶಿಷ್ಟ ಗಣೇಶ ಜಾತ್ರೆ ನಾಗರಶೈಲಿ ದೇವಸ್ಥಾನಗಳ ಸಂಕುಲ ಸೆ.17ಕ್ಕೆ ದಿಂಡಿ, ದಹಿಹಂಡಿ ಕಾರ್ಯಕ್ರಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.