ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಕಲ್ಯಾಣ: ವಲಸೆ ಕಾರ್ಮಿಕನ ಮಗಳ ಯುಪಿಎಸ್ಸಿ ಸಾಧನೆ- ಬಂಜಾರಾ ತಾಂಡಾದಲ್ಲಿ ಸಂಭ್ರಮ

ಬಸವಕಲ್ಯಾಣ ತಾಲ್ಲೂಕಿನ ಚಿಕ್ಕನಾಗಾಂವ ಬಂಜಾರಾ ತಾಂಡಾದಲ್ಲಿ ಸಂಭ್ರಮ
Published 20 ಏಪ್ರಿಲ್ 2024, 22:43 IST
Last Updated 20 ಏಪ್ರಿಲ್ 2024, 22:43 IST
ಅಕ್ಷರ ಗಾತ್ರ

ಬಸವಕಲ್ಯಾಣ (ಬೀದರ್‌ ಜಿಲ್ಲೆ): ಜೀವನೋಪಾಯಕ್ಕಾಗಿ ಮುಂಬೈಗೆ ವಲಸೆ ಹೋಗಿ ಬದುಕು ಕಟ್ಟಿಕೊಂಡಿದ್ದ ಕಾರ್ಮಿಕರೊಬ್ಬರ ಮಗಳು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದು, 492ನೇ ರ‍್ಯಾಂಕ್‌ ಪಡೆದಿದ್ದಾರೆ.

ತಾಲ್ಲೂಕಿನ ಚಿಕ್ಕನಾಗಾಂವ ಬಂಜಾರ ತಾಂಡಾದಲ್ಲಿ ಈಗ ಸಂಭ್ರಮದ ಹೊನಲು ಹರಿದಿದೆ. ತಾಂಡಾದ ಮೋಹನ ರಾಠೋಡ ಅವರ ಪುತ್ರಿ ಸ್ವಾತಿ ಅವರುೀಗ ಯುಪಿಎಸ್‌ಸಿ ಪರೀಕ್ಷೆಯಲ್ಲಿ 492ನೇ ರ‍್ಯಾಂಕ್‌ ಪಡೆದಿರುವ ಸಾಧಕಿ. 

ತಾಂಡಾದಲ್ಲಿ ತಗಡಿನ ಮನೆಯಲ್ಲಿ ವಾಸಿಸುತ್ತಿದ್ದ ಮೋಹನ ರಾಠೋಡ ಅವರಿಗೆ ಅಲ್ಪ ಜಮೀನಿತ್ತು. ‌ಕುಟುಂಬ ನಿರ್ವಹಣೆಗಾಗಿ ಪತ್ನಿ ಲಲಿತಾ ಜೊತೆ ಮುಂಬೈಗೆ ವಲಸೆ ಹೋಗಿ ಕೂಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಸ್ವಾತಿ ಅಲ್ಲಿನ ನಗರಪಾಲಿಕೆಯ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದರು. ಮುಂದೆ ಕುಟುಂಬ ನಿರ್ವಹಣೆಗಾಗಿ ಮೋಹನ ರಾಠೋಡ ಸೋಲಾಪುರದಲ್ಲಿ ತರಕಾರಿ ವ್ಯಾಪಾರ ಆರಂಭಿಸಿದರು. ಬಳಿಕ ಸ್ವಾತಿ ಅವರು ಭಾರತಿ ವಿದ್ಯಾಪೀಠದಲ್ಲಿ ಪಿಯುಸಿ, ವಸುಂಧರಾ ಕಾಲೇಜಿನಲ್ಲಿ ಬಿಎ ಪದವಿ ಪಡೆದರು. ವಾಲಚಂದ ಕಾಲೇಜಿನಲ್ಲಿ ಎಂ.ಎ(ಭೂಗೋಳಶಾಸ್ತ್ರ) ಶಿಕ್ಷಣ ಪೂರ್ಣಗೊಳಿಸಿದ್ದರು.10 ವರ್ಷಗಳಿಂದ ಸೋಲಾಪುರದಲ್ಲೇ ವಾಸವಿದ್ದಾರೆ.

‘5ನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸು ಲಭಿಸಿದೆ. ತಂದೆ–ತಾಯಿಯ ಕಷ್ಟ ನೋಡಿದ್ದ ನಾನು ಉನ್ನತ ಹುದ್ದೆ ಪಡೆದು ಜೀವನದಲ್ಲಿ ಮಹತ್ವದನ್ನು ಸಾಧಿಸಬೇಕು ಎಂಬ ಗುರಿ ಇಟ್ಟುಕೊಂಡು ಅಧ್ಯಯನ ಕೈಗೊಂಡಿದ್ದೆ. ಸ್ನಾನ, ಊಟ, ಕೆಲಕಾಲ ನಿದ್ರೆ ಬಿಟ್ಟರೆ, ಇಡೀ ದಿನ ಓದುವುದೇ ನನ್ನ ಕೆಲಸವಾಗಿತ್ತು. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರದ ಕಾರಣ ಮನೆಯಲ್ಲೇ ಓದಿದ್ದೇನೆ. ಒಂದು ಬಾರಿ ದೆಹಲಿಗೂ ಹೋಗಿ ಪರೀಕ್ಷೆ ಸಿದ್ಧತೆ ಕುರಿತಾಗಿ ಮಾಹಿತಿ ಪಡೆದುಕೊಂಡು ಬಂದಿದ್ದೆ’ ಎಂದು ಸ್ವಾತಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಅಕ್ಕನ ಸಾಧನೆಯಿಂದ ಅಪಾರ ಸಂತಸವಾಗಿದೆ. ನಾವು ಮಹಾರಾಷ್ಟ್ರದಲ್ಲಿ ಶಿಕ್ಷಣ ಪಡೆದರೂ ಕರ್ನಾಟಕ ಮೂಲದವರು ಎಂಬುದನ್ನು ಮರೆಯುವುದಿಲ್ಲ’ ಎಂದು ಸ್ವಾತಿಯ ಸಹೋದರ ಗಣೇಶ ರಾಠೋಡ ಹೇಳಿದರು.

‘ಸ್ವಾತಿಯ ಕುಟುಂಬದವರು ವರ್ಷದಲ್ಲಿ ಕೆಲ ಬಾರಿ ತಾಂಡಾಕ್ಕೆ ಬಂದು ಹೋಗುತ್ತಾರೆ. ಅವರೆಲ್ಲರ ಆಧಾರ್‌ ಕಾರ್ಡ್ ಹಾಗೂ ಇತರೆ ದಾಖಲೆಗಳಲ್ಲಿ ಇಲ್ಲಿನ ವಿಳಾಸವೇ ಇದೆ’ ಎಂದು ಗ್ರಾಮ ಸಹಾಯಕ ಪೀರಪ್ಪ ಸಜ್ಜನ್ ಮಾಹಿತಿ ನೀಡಿದರು.

ಬಸವಕಲ್ಯಾಣ ತಾಲ್ಲೂಕಿನ ಚಿಕ್ಕನಾಗಾಂವ ಬಂಜಾರಾ ತಾಂಡಾದ ಸ್ವಾತಿ ರಾಠೋಡ ಯು.ಪಿ.ಎಸ್.ಸಿಯಲ್ಲಿ 492ನೇ ರ‍್ಯಾಂಕ್‌ ಪಡೆದಿದ್ದಕ್ಕಾಗಿ ಅವರ ತಂದೆ ಮೋಹನ ರಾಠೋಡ ಮತ್ತು ತಾಯಿ ಲಲಿತಾ ರಾಠೋಡ ಪುಷ್ಪಗುಚ್ಛ ನೀಡಿ ಅಭಿನಂದಿಸಿದರು
ಬಸವಕಲ್ಯಾಣ ತಾಲ್ಲೂಕಿನ ಚಿಕ್ಕನಾಗಾಂವ ಬಂಜಾರಾ ತಾಂಡಾದ ಸ್ವಾತಿ ರಾಠೋಡ ಯು.ಪಿ.ಎಸ್.ಸಿಯಲ್ಲಿ 492ನೇ ರ‍್ಯಾಂಕ್‌ ಪಡೆದಿದ್ದಕ್ಕಾಗಿ ಅವರ ತಂದೆ ಮೋಹನ ರಾಠೋಡ ಮತ್ತು ತಾಯಿ ಲಲಿತಾ ರಾಠೋಡ ಪುಷ್ಪಗುಚ್ಛ ನೀಡಿ ಅಭಿನಂದಿಸಿದರು

ಚಿಕ್ಕಂದಿನಿಂದಲೇ ಜಿಲ್ಲಾಧಿಕಾರಿಯಂತಹ ಮಹತ್ವದ ಹುದ್ದೆ ಪಡೆಯಬೇಕು ಎಂಬ ಕನಸಿತ್ತು. ದಿನದಲ್ಲಿ 12 ಗಂಟೆ ಸತತವಾಗಿ ಓದಿರುವುದು ಯಶಸ್ಸು ತಂದುಕೊಟ್ಟಿತು. ಸ್ವಾತಿ ರಾಠೋಡ ಯು.ಪಿ.ಎಸ್‌.ಸಿ 492ನೇ -ರ‍್ಯಾಂಕ್‌ ವಿಜೇತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT