ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂಗ್ರೆಸ್‌ ಅಪಪ್ರಚಾರದಿಂದ ಸೋಲು: ಬಿಎಸ್‌ಪಿ

ಬಿಎಸ್‌ಪಿಗೆ ಸೋಲು ಗೆಲುವು ಮುಖ್ಯವಲ್ಲ, ಅಭಿವೃದ್ಧಿ, ಸೌಲಭ್ಯಗಳಿಗಾಗಿ ಹೋರಾಟ ಮುಂದುವರಿಸಲಿದೆ: ಕೃಷ್ಣಮೂರ್ತಿ
Published 5 ಜೂನ್ 2024, 16:30 IST
Last Updated 5 ಜೂನ್ 2024, 16:30 IST
ಅಕ್ಷರ ಗಾತ್ರ

ಚಾಮರಾಜನಗರ: ‘ಕಾಂಗ್ರೆಸ್‌ನ ಅಪಪ್ರಚಾರ, ಪಿತೂರಿಯಿಂದ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಪಕ್ಷಕ್ಕೆ ಸೋಲಾಗಿದೆ. ಯಾವುದೇ ಆಸೆ ಆಮಿಷಕ್ಕೆ ಬಲಿಯಾಗದ 15,903 ಮತದಾರರು ನನಗೆ ಮತ ಹಾಕಿದ್ದಾರೆ. ಸೋಲಿನಿಂದ ಧೃತಿಗೆಟ್ಟಿಲ್ಲ. ಕ್ಷೇತ್ರದಲ್ಲಿ ಮತ್ತೆ ಪಕ್ಷವನ್ನು ಕಟ್ಟಲಿದ್ದೇವೆ’ ಎಂದು ಬಿಎಸ್‌ಪಿ ರಾಜ್ಯ ಸಂಯೋಜಕ ಮತ್ತು ಕ್ಷೇತ್ರದ ಅಭ್ಯರ್ಥಿ ಎಂ.ಕೃಷ್ಣಮೂರ್ತಿ ಬುಧವಾರ ಹೇಳಿದರು. 

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಎಸ್‌ಪಿಗೆ ಮತ ಹಾಕಿದರೆ ಬಿಜೆಪಿ ಗೆಲ್ಲುತ್ತದೆ. ಬಿಜೆಪಿಯವರು ಸಂವಿಧಾನವನ್ನು ಬದಲಾಯಿಸುತ್ತಾರೆ ಎಂದು ಕಾಂಗ್ರೆಸ್‌ನವರು, ಸಾಮಾಜಿಕ ಸಂಘಟನೆಗಳಾದ ಡಿಎಸ್‌ಎಸ್, ಅನೇಕರು ಹಳ್ಳಿಹಳ್ಳಿಗಳಿಗೆ ತೆರಳಿ ಬಿಎಸ್‌ಪಿಯ ಮತದಾರರಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದವರಿಗೆ ತಿಳಿಸಿದ್ದರಿಂದ ಪ್ರಜ್ಞಾವಂತ ಮತದಾರರು ಕಾಂಗ್ರೆಸ್‌ ಬೆಂಬಲಿಸಿದ್ದಾರೆ’ ಎಂದು ಎಂದರು.  

‘ನಾನು ಆಕಸ್ಮಿಕವಾಗಿ ಅಭ್ಯರ್ಥಿಯಾದವನು. ಅಭ್ಯರ್ಥಿ ಎಂದು ಘೋಷಿಸಲಾದ ವ್ಯಕ್ತಿ, ಕಾಂಗ್ರೆಸ್‌ ಪಿತೂರಿಯಿಂದ ಕೊನೆ ಕ್ಷಣದಲ್ಲಿ ಪಕ್ಷ ತೊರೆದರು’ ಎಂದು ಹೇಳಿದರು.  

‘ಸುನಿಲ್‌ ಬೋಸ್‌ ಅವರು 1.88 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಅವರ ತಂದೆ ಎಚ್.ಸಿ.ಮಹದೇವಪ್ಪ ಸಚಿವರಾಗಿದ್ದಾರೆ. ಕ್ಷೇತ್ರದಲ್ಲಿ ಏಳು ಕಾಂಗ್ರೆಸ್ ಶಾಸಕರು ಇದ್ದಾರೆ. ಜೊತೆ ಉಸ್ತುವಾರಿ ಸಚಿವರು ಇದ್ದಾರೆ. ಎಲ್ಲರೂ ಸೇರಿ ಜನರು ಇಟ್ಟಿರುವ ನಂಬಿಕೆಯನ್ನು ಹುಸಿಗೊಳಿಸದೆ ಕ್ಷೇತ್ರದ ಅಭಿವೃದ್ದಿಗೆ ಪಣತೊಟ್ಟು ಕೆಲಸ ಮಾಡಬೇಕು’ ಎಂದು ಅವರು ಒತ್ತಾಯಿಸಿದರು.

ಪಕ್ಷ ಸಂಘಟಿಸುವೆ: ಬಿಎಸ್‌ಪಿ ಎಂದರೆ ಪಕ್ಷವಲ್ಲ, ಅದು ಸಮಾಜ ಪರಿವರ್ತನಾ ಚಳವಳಿ. ಚುನಾವಣೆಯಲ್ಲಿ ಗೆದ್ದರೂ, ಸೋತರೂ ಜನರ ಪರವಾಗಿ, ಸಂವಿಧಾನ ಪರವಾಗಿ ಹೋರಾಟ ಮುಂದುವರಿಸುತ್ತದೆ. ಜಾಗೃತಿ ಮೂಡಿಸುತ್ತದೆ. ಚುನಾವಣೆಯಲ್ಲಿ ಮತಗಳ ಮಾರಾಟವನ್ನು ತಡೆಯುವ ಉದ್ದೇಶದಿಂದ ಪಕ್ಷ ಸ್ಪರ್ಧಿಸುತ್ತದೆ. ಮುಂದಿನ ದಿನಗಳಲ್ಲಿ ನಾನು ಕ್ಷೇತ್ರದಲ್ಲಿ ಇದ್ದುಕೊಂಡು ಪಕ್ಷ ಸಂಘಟಿಸುತ್ತೇನೆ. ಅಭಿವೃದ್ದಿಗೆ ನಿರಂತರ ಹೋರಾಟ ಮಾಡುತ್ತೇನೆ. ಕ್ಷೇತ್ರದ ಜನರ ಸಂಕಷ್ಠಗಳಿಗೆ ಸ್ಪಂದಿಸುತ್ತೇನೆ. ಮುಂಬರುವ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಎಸ್‌ಪಿ ಸ್ಪರ್ಧಿಸಲಿದೆ’ ಎಂದರು. 

‘ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ದೇಶದಲ್ಲಿ ಎರಡು ಪಕ್ಷಗಳು ಇರಬೇಕು ಎಂದು ಬಯಸುತ್ತವೆ. ತಾವೇ ಸಾಮ್ರಾಟರಾಗಿ ಇರಬೇಕು ಎಂಬುದು ಅವುಗಳ ಆಶಯ. ಇದೇ ಕಾರಣದಿಂದ ಈ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿರುವ ಪಕ್ಷಗಳಿಗೆ ಸೋಲಾಗಿದೆ. ಈ ದೇಶದ ಸಂವಿಧಾನ, ಪ್ರಜಾಪ್ರಭುತ್ವ ಉಳಿಯಬೇಕಾದರೆ ಬಹು ಪಕ್ಷಗಳು ಇರಬೇಕು’ ಎಂದು ಕೃಷ್ಣಮೂರ್ತಿ ಹೇಳಿದರು. 

ಬಿಎಸ್‌ಪಿ ಜಿಲ್ಲಾಧ್ಯಕ್ಷ ಎನ್.ನಾಗಯ್ಯ, ಉಪಾಧ್ಯಕ್ಷ ಬ್ಯಾಡಮೂಡ್ಲು ಬಸವಣ್ಣ, ಜಿಲ್ಲಾ ಸಂಯೋಜಕ ಅಮಚವಾಡಿ ಪ್ರಕಾಶ್, ಜಿಲ್ಲಾ ಉಸ್ತುವಾರಿ ರಾಜಶೇಖರ್‌, ಟೌನ್ ಅಧ್ಯಕ್ಷ ಗಾಳಿಪುರ ರಂಗಸ್ವಾಮಿ, ಮುಖಂಡ ಕೃಷ್ಣಮೂರ್ತಿ ಹಾಜರಿದ್ದರು.

‘ಬಿಎಸ್‌ಪಿಯಿಂದ ಮಾತ್ರ ಸಂವಿಧಾನ ರಕ್ಷಣೆ’

‘ಸಂವಿಧಾನ ರಕ್ಷಣೆಯ ಬಗ್ಗೆ ಮಾತನಾಡುತ್ತಾ ಕಾಂಗ್ರೆಸ್‌ ಚುನಾವಣೆ ಗೆದ್ದಿದೆ. ಆದರೆ ದೇಶದ ಸಂವಿಧಾನ ರಕ್ಷಿಸಲು ಮತ್ತು ಅದನ್ನು ಜಾರಿ ಮಾಡುವುದಕ್ಕಾಗಿಯೇ ಕಾನ್ಶಿರಾಂ ಅವರು ಬಿಎಸ್‌ಪಿ ಸ್ಥಾಪನೆ ಮಾಡಿದ್ದರು. ಬಿಎಸ್‌ಪಿ ಸ್ಥಾಪನೆಯಾಗುವವರೆಗೂ ಕಾಂಗ್ರೆಸ್ ಆಗಲಿ ಬಿಜೆಪಿ ಜೆಡಿಎಸ್ ಆಗಲಿ ಯಾವುದೇ ರಾಜಕೀಯ ಸಂವಿಧಾನ ಪರ ಧ್ವನಿ ಎತ್ತಿಲ್ಲ. ಕಚೇರಿಗಳಲ್ಲಿ ಅಂಬೇಡ್ಕರ್‌ ಭಾವಚಿತ್ರ ಇಟ್ಟಿರಲಿಲ್ಲ. ಬಿಜೆಪಿ ಸರ್ಕಾರ ಸಂವಿಧಾನ ಪರಾಮರ್ಶೆಗೆ ಆಯೋಗ ರಚಿಸಿದಾಗ ಅದರ ವಿರುದ್ಧ ದೇಶದಾದ್ಯಂತ ರ‍್ಯಾಲಿ ನಡೆಸಿದ್ದು ಬಿಎಸ್‌ಪಿ’ ಎಂದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT