ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ಯಾರಂಟಿ ಯೋಜನೆ ನಿಲ್ಲುವುದಿಲ್ಲ: ಗಣೇಶ್ ಪ್ರಸಾದ್

Published 18 ಏಪ್ರಿಲ್ 2024, 14:24 IST
Last Updated 18 ಏಪ್ರಿಲ್ 2024, 14:24 IST
ಅಕ್ಷರ ಗಾತ್ರ

ಗುಂಡ್ಲುಪೇಟೆ:‘ಗ್ಯಾರಂಟಿ ಯೋಜನೆಗಳು ಯಾವುದೇ ಕಾರಣಕ್ಕೂ ನಿಲ್ಲದೆ ಖಂಡಿತ ಮುಂದುವರೆಯುತ್ತವೆ. ಈ ಕುರಿತು ಬಿಜೆಪಿಯವರು ಸುಳ್ಳು, ಅಪಪ್ರಚಾರ ಮಾಡುತ್ತಿದ್ದಾರೆ. ಇದರ ಬಗ್ಗೆ ಮತದಾರರು ತಲೆಕಡೆಸಿಕೊಳ್ಳುವ ಅಗತ್ಯವಿಲ್ಲ’ ಎಂದು ಶಾಸಕ ಎಚ್.ಎಂ.ಗಣೇಶಪ್ರಸಾದ್ ತಿಳಿಸಿದರು.

ತಾಲ್ಲೂಕಿನ ಹರವೇ, ಕಬ್ಬಹಳ್ಳಿ ಹಾಗೂ ಬೇಗೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ಲೋಕಸಭಾ ಚುನಾವಣೆಯಲ್ಲಿ ನನಗೆ ಅಧಿಕ ಮತಗಳಿಂದ ಆರ್ಶೀವಾದ ಮಾಡಿದ್ದೀರಾ. ಹರವೇ ಭಾಗದಿಂದ 2800 ಲೀಡ್ ಕೊಡುವ ಮೂಲಕ ವಿರೋಧ ಪಕ್ಷದವರು ಸೋತು ಮನೆಯಲ್ಲೇ ಕೂರುವಂತಾಗಿದೆ’ ಎಂದು ಟೀಕಿಸಿದರು.

‘ಹರವೇ ಭಾಗಕ್ಕೆ ಎಚ್.ಎಸ್.ಮಹದೇವಪ್ರಸಾದ್ ಅವಧಿಯಲ್ಲಿ ಹೆಚ್ಚು ಕೆಲಸಗಳಾಗಿದ್ದು, ಧ್ರುವನಾರಾಯಣ್ ಅಭಿವೃದ್ಧಿ ಕಾರ್ಯಗಳು ನಮ್ಮ ಕಣ್ಣ ಮುಂದೆಯೇ ಇವೆ. ಕಳೆದ ಬಾರಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಸಾಕಷ್ಟು ಅಭಿವೃಧಿಯಾಗಿದ್ದು,  ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೆ ತಂದರೂ ಅದನ್ನು ಬಿಜೆಪಿಯವರು ನಾವೇ ಮಾಡಿದ್ದು ಎಂದು ಸುಳ್ಳು ಹೇಳುತ್ತಿದ್ದಾರೆ. ಎಚ್.ಸಿ.ಮಹದೇವಪ್ಪ ಸಹ ಲೋಕೋಪಯೋಗಿ ಸಚಿವರಾಗಿದ್ದ ವೇಳೆ ನಮ್ಮ ಭಾಗಕ್ಕೆ ಹಲವು ರಸ್ತೆಗಳನ್ನು ಮಂಜೂರು ಮಾಡಿದ್ದಾರೆ’ ಎಂದು ತಿಳಿಸಿದರು.

ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಮಾತನಾಡಿ, ‘ಕಳೆದ ಬಾರಿ ಎಚ್.ಎಂ.ಗಣೇಶಪ್ರಸಾದ್‌‌‌ಗೆ 36 ಸಾವಿರ ಮತಗಳ ಲೀಡ್ ನೀಡುವ ಮೂಲಕ ಆರ್ಶಿವಾದ ಮಾಡಿದ್ದೀರಿ. ಇದರಿಂದ ಹತ್ತು ತಿಂಗಳ ಅವಧಿಯಲ್ಲಿ ಅಧಿಕ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೊಟ್ಟ ಭರವಸೆಯಂತೆ ಗ್ಯಾರಂಟಿ ಯೋಜನೆ ಸಮರ್ಪಕವಾಗಿ ಈಡೇರಿಸಿದ್ದಾರೆ. ಇದರಿಂದ ರಾಜ್ಯದ ಲಕ್ಷಾಂತರ ಮಂದಿ ಫಲಾನುಭವಿಗಳಿಗೆ ಅನುಕೂಲವಾಗಿದೆ’ ಎಂದು ತಿಳಿಸಿದರು.

‘ಕೆಲಸ ಮಾಡಿದವರಿಗೆ ಕೂಲಿ ಕೊಡುವ ಸಂದರ್ಭ ಲೋಕಸಭಾ ಚುನಾವಣೆಯ ಮೂಲಕ ಬಂದಿದೆ. ಈಗ ಶಕ್ತಿ ತುಂಬಿದರೆ ಇನ್ನೂ ಹೆಚ್ಚಿನ ಅಭಿವೃದ್ಧಿ ಮಾಡುವ ಹುಮ್ಮಸ್ಸು ಬರುತ್ತದೆ. ಇದಕ್ಕೆ ಅಧಿಕ ಮತಗಳು ಕಾಂಗ್ರೆಸ್‌‌‌ಗೆ ಬರಬೇಕು. ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ ಪ್ರತಿ ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡುವ ಮೂಲಕ ಜನ ಸಾಮಾನ್ಯರಿಗೆ ಹೊರೆಯಾಗಿದೆ. ಜೊತೆಗೆ ಶ್ರೀಮಂತರ ಪರವಾಗಿ ಕೆಲಸ ಮಾಡುತ್ತಿರುವ ಬಿಜೆಪಿಯನ್ನು ಮನೆಯಲ್ಲಿ ಕೂರಿಸಬೇಕು. ಬಡವರು, ನೊಂದವರು, ಶೋಷಿತರು ಕಾಂಗ್ರೆಸ್ ಬೆಂಬಲಿಸುವಂತೆ ಮುಖಂಡರು, ಕಾರ್ಯಕರ್ತರು ತಮ್ಮ ತಮ್ಮ ಬೂತ್ ಜವಾಬ್ದಾರಿ ತೆಗೆದುಕೊಂಡು ಕಾಂಗ್ರೆಸ್‌‌‌ಗೆ ಹೆಚ್ಚು ಮತ ಹಾಕಿಸಬೇಕು’ ಎಂದು ಮನವಿ ಮಾಡಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಾಗೂ ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಶೇಖರ್, ಮುಖಂಡರಾದ ಎಚ್.ಎಸ್.ನಂಜಪ್ಪ, ನಂಜುಂಡಪ್ರಸಾದ್,  ಕೆರೆಹಳ್ಳಿ ನವೀನ್, ಕಬ್ಬಹಳ್ಳಿ ಮಹೇಶ್, ಚೆನ್ನಪ್ಪ, ಬೊಮ್ಮಯ್ಯ, ಶಿವನಾಗಪ್ಪ, ಲತಾ ಜತ್ತಿ, ಹರೀಣಿಗೌಡ, ರವಿಕುಮಾರ್, ಮಲೆಯೂರಿನ ಸಿದ್ದರಾಜು, ಹೊರೆಯಾಲ ಗೋಪಾಲ್, ಗುರುಸಿದ್ದೇಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT