ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಅಂತರರಾಷ್ಟ್ರೀಯ ಹುಲಿ ದಿನ: ವನ್ಯಜೀವಿ ಪಥ ರಕ್ಷಣೆಗೆ ಬೇಕಿದೆ ಕಾಳಜಿ

ವ್ಯಾಘ್ರಗಳ ಸಂತತಿ ರಕ್ಷಣೆಯಲ್ಲಿ ಕಾರಿಡಾರ್‌ ಪಾತ್ರ ಮಹತ್ವದ್ದು
Last Updated 28 ಜುಲೈ 2022, 19:30 IST
ಅಕ್ಷರ ಗಾತ್ರ

ಹನೂರು: ತಾಲ್ಲೂಕಿನ ಮಲೆಮಹದೇಶ್ವರ ಹಾಗೂ ಕಾವೇರಿ ವನ್ಯಧಾಮಗಳ ವ್ಯಾಪ್ತಿಯಲ್ಲಿರುವ ವನ್ಯಜೀವಿ ಪಥಗಳು (ಕಾರಿಡಾರ್‌) ಹುಲಿ ಸೇರಿದಂತೆ ಹಲವು ವನ್ಯಪ್ರಾಣಿಗಳ ಆವಾಸಸ್ಥಾನ ಹಾಗೂ ವಂಶಾಭಿವೃದ್ಧಿಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿದ್ದು, ಇವುಗಳ ಸಂರಕ್ಷಣೆಗೆ ಸರ್ಕಾರ ಹೆಚ್ಚು ಒತ್ತು ನೀಡಬೇಕು ಎಂಬ ಕೂಗು ದೀರ್ಘ ಸಮಯದಿಂದ ಕೇಳಿ ಬರುತ್ತಿದೆ.

ಹುಲಿಗಳ ಸಂತತಿಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ವನ್ಯಜೀವಿ ಪಥಗಳ ಸಂರಕ್ಷಿಸುವ ಅನಿವಾರ್ಯತೆ ಇದೆ ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಕೂಡ ಹೇಳಿದೆ. ಹಾಗಿದ್ದರೂ, ಸರ್ಕಾರಗಳು ಕಾರಿಡಾರ್‌ಗಳ ರಕ್ಷಣೆಗೆ ಕ್ರಮವಹಿಸುತ್ತಿಲ್ಲ ಎಂಬುದು ವನ್ಯಪ್ರೇಮಿಗಳ ದೂರು.

ಪ್ರಾಣಿಗಳು ಒಂದು ಅರಣ್ಯದಿಂದ ಇನ್ನೊಂದು ಅರಣ್ಯದ ನಡುವೆ ಸಂಚರಿಸಲು ಕಾರಿಡಾರ್‌ಗಳು ‌ಬಹಳ ಮುಖ್ಯ. ಇದರಿಂದಾಗಿ ಪ್ರಾಣಿಗಳ ಆವಾಸ ವಿಸ್ತಾರವಾಗುತ್ತದೆ. ಪ್ರಾಣಿಗಳ ವಂಶಾಭಿವೃದ್ಧಿ ಹಾಗೂ ಮಾನವ–ವನ್ಯಜೀವಿ ಸಂಘರ್ಷ ತಡೆಯುವ ನಿಟ್ಟಿನಲ್ಲೂ ಇವುಗಳ ಪಾತ್ರ ಹಿರಿದು.

ಹನೂರು ತಾಲ್ಲೂಕಿನಲ್ಲಿರುವ 1.6 ಕಿ.ಮೀ ಉದ್ದದ ಎಡೆಯಾರಳ್ಳಿ ಕಾರಿಡಾರ್‌ ಬಿಳಿಗಿರಿರಂಗನಾಥಸ್ವಾಮಿ ದೇವಾಲಯ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶ ಹಾಗೂ ಮಲೆ ಮಹದೇಶ್ವರ ವನ್ಯಧಾಮದ ನಡುವಿನ ಬಹುಮುಖ್ಯ ಕೊಂಡಿ. ಈ ಕಾರಿಡಾರ್‌ ಇಲ್ಲದಿದ್ದರೆ ಎರಡೂ ರಕ್ಷಿತಾರಣ್ಯಗಳ ನಡುವೆ ಪ್ರಾಣಿಗಳ ಓಡಾಟ ಕಷ್ಟ. ಹಾಗಾಗಿ ಈ ಕಾರಿಡಾರ್‌ಗೆ ಬಹಳ ಮಹತ್ವ ಇದೆ.

ಎರಡು ಅಭಯಾರಣ್ಯಗಳ ವನ್ಯಪ್ರಾಣಿಗಳು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸರಾಗವಾಗಿ ಸಂಚರಿಸಲು ವೇದಿಕೆಯಂತಿರುವ ಈ ಕಾರಿಡಾರ್ ಅನ್ನು ಸಂರಕ್ಷಣೆಯ ಅವಶ್ಯಕತೆಯಿದೆ. ಈ ರಸ್ತೆಯಲ್ಲಿ ವಾಹನಗಳು ಅತಿ ವೇಗವಾಗಿ ಸಂಚರಿಸುತ್ತಿದ್ದು, ವಾಹನಗಳು ಡಿಕ್ಕಿ ಹೊಡೆದು ಪ್ರಾಣಿಗಳು ಮೃತಪಟ್ಟಿರುವ, ಗಾಯಗೊಂಡಿರುವ ಪ್ರಕರಣಗಳು ವರದಿಯಾಗಿವೆ.

ನೇಚರ್ ಕನ್ಸರ್ವೇಷನ್ ಫೌಂಡೇಷನ್‌ (ಎನ್‌ಸಿಎಫ್‌) ವತಿಯಿಂದ ಸೂಚನಾ ಫಲಕಗಳು ಹಾಗೂ ರಸ್ತೆ ಡುಬ್ಬಗಳನ್ನು ನಿರ್ಮಿಸಲಾಗಿತ್ತು. ಆದರೆ ನಿರ್ಮಿಸಿದ ಕೆಲವೇ ತಿಂಗಳಲ್ಲೇ ಕಿಡಿಗೇಡಿಗಳು ರಸ್ತೆ ಡುಬ್ಬಗಳನ್ನು ಕಿತ್ತು ಹಾಕಿದ್ದಾರೆ.

ತಾಲ್ಲೂಕಿನ ಸೂಳೆಕೋಬೆ, ಯರಂಬಾಡಿ, ಮಿಣ್ಯ ರಸ್ತೆಗಳು ಕೂಡ ವನ್ಯಜೀವಿಗಳ ಸಂಚಾರದ ಹಾದಿಗಳಾಗಿದ್ದು ಎನ್ ಸಿಎಫ್ ವತಿಯಿಂದ ಸೂಚನಾ ಫಲಕಗಳನ್ನು ಅಳವಡಿಸಲಾಗುತ್ತಿದೆ.

‘ವನ್ಯಜೀವಿಗಳ ಹಿತರಕ್ಷಣೆಯ ದೃಷ್ಟಿಯಿಂದ ಕಾರಿಡಾರ್ ರಕ್ಷಣೆ ಅತ್ಯಂತ ಮುಖ್ಯವಾಗಿದೆ. ಅರಣ್ಯ ಇಲಾಖೆಯೂ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿದೆ’ ಎನ್ನುತ್ತಾರೆ ಅರಣ್ಯಾಧಿಕಾರಿಗಳು.

ಕಾರಿಡಾರ್‌ಗಳ ಪ್ರಾಮುಖ್ಯದ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವನ್ಯಜೀವಿ ತಜ್ಞ ಸಂಜಯ್‌ ಗುಬ್ಬಿ, ‘ದೊಡ್ಡವ್ಯಾಪ್ತಿಯಲ್ಲಿತಿರುಗಾಡುವಪ್ರಾಣಿಗಳಿಗೆವನ್ಯಜೀವಿಪಥಗಳು ಬಹುಮುಖ್ಯ.ಒಂದುಕಾಡಿನಿಂದ ಇನ್ನೊಂದು ಕಾಡಿಗೆ ಆಹಾರ, ಸಂತಾನೋತ್ಪತ್ತಿಮತ್ತಿತರಕಾರಣಗಳಿಗೆವಲಸೆಹೋಗುವ ವನ್ಯಜೀವಿಗಳಿಗೆಇವುಅತ್ಯಗತ್ಯ. ಹಾಗೆಯೇಹುಲಿಯಂತಹ ಜೀವಿಗಳುತಮ್ಮದೇವ್ಯಾಪ್ತಿಯನ್ನು ಸ್ಥಾಪಿಸಲುಹೊಸಪ್ರದೇಶಗಳಿಗೆ ಹೋಗಬೇಕಾದರೆವನ್ಯಜೀವಿಪಥಗಳು ನಿರ್ಣಾಯಕ ಪಾತ್ರ ವಹಿಸುತ್ತವೆ’ ಎಂದರು.

ವ್ಯಾಘ್ರಗಳ ಹಾದಿ...
ಮಲೆ ಮಹದೇಶ್ವರ ವನ್ಯಧಾಮದಲ್ಲಿ ಈಗ ಹುಲಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಆ ಕಾರಣಕ್ಕೆ ಹುಲಿ ಸಂರಕ್ಷಿತ ಪ್ರದೇಶವಾಗಲು ಅದು ತುದಿಗಾಲಲ್ಲಿ ನಿಂತಿದೆ. ಪಕ್ಕದ ಬಿಆರ್‌ಟಿ ಅರಣ್ಯದಿಂದ ಬರುವ ಹುಲಿಗಳು ಎಡೆಯಾರಳ್ಳಿ ಕಾರಿಡಾರ್‌ ಮೂಲಕವೇ ಮಹದೇಶ್ವರ ವನ್ಯಧಾಮವನ್ನು ಪ್ರವೇಶಿಸುತ್ತಿವೆ. ಈಗ ಮಲೆ ಮಹದೇಶ್ವರ ವನ್ಯಧಾಮಕ್ಕೆ ಹೊಂದಿಕೊಂಡಿರುವ ಕಾವೇರಿ ವನ್ಯಧಾಮಕ್ಕೂ ಹುಲಿಗಳ ಆವಾಸ ವಿಸ್ತರಿಸಿದೆ ಎಂದು ಹೇಳುತ್ತಾರೆ ಅರಣ್ಯಾಧಿಕಾರಿಗಳು.

ಕಾವೇರಿ ವನ್ಯಧಾಮದೊಳಗೆ ಬೆಂಡಗೋಡು ಕಾರಿಡಾರ್ ಇದೆ. ವನ್ಯಪ್ರಾಣಿಗಳ ಸಂಚಾರಕ್ಕೆ ಇದು ಕೂಡ ಉತ್ತಮ ವೇದಿಕೆಯಾಗಿದೆ. ಬನ್ನೇರುಘಟ್ಟ ಉದ್ಯಾನದಿಂದಲೂ ಹುಲಿಗಳು ಇಲ್ಲಿಗೆ ಬಂದಿರಬಹುದು ಎಂಬುದು ಅಧಿಕಾರಿಗಳ ಊಹೆ.

ಕಾವೇರಿ ವನ್ಯಧಾಮದಲ್ಲಿ 2018ರಲ್ಲಿ ಕೇವಲ 2 ಹುಲಿಗಳು ಕಾಣಿಸಿಕೊಂಡಿತ್ತು. ಕಳೆದ ವರ್ಷ ನಡೆದ ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಹೆಚ್ಚು ಹುಲಿಗಳು ಸೆರೆಯಾಗಿವೆ. ಇದಕ್ಕೆ ಕಾರಿಡಾರ್‌ನ ಉಪಸ್ಥಿತಿ ಕಾರಣ ಎಂದು ಹೇಳುತ್ತಾರೆ ಅವರು.

––

ಅರಣ್ಯದೊಳಗಿರುವ ಕಾರಿಡಾರ್ ಸಂರಕ್ಷಣೆಯೂ ಅರಣ್ಯ ಇಲಾಖೆಯ ಮುಖ್ಯ ಜವಬ್ದಾರಿಯಾಗಿದೆ. ಹುಲಿಗಳ ಸಂಖ್ಯೆ ಹೆಚ್ಚದಲ್ಲಿ ಇವುಗಳ ಪಾತ್ರವೂ ಇದೆ.
–ವಿ. ಏಡುಕುಂಡಲು, ಡಿಸಿಎಫ್, ಮಲೆಮಹದೇಶ್ವರ ವನ್ಯಧಾಮ

––

ಕಾರಿಡಾರ್ಎಂದೊಡನೆಕೇವಲಕಾಡುಗಳುಎಂದರ್ಥವಲ್ಲ,ನದಿಗಳು,ಹುಲ್ಲುಗಾವಲುಗಳು,ಮತ್ತಿತರವನ್ಯಜೀವಿಆವಾಸಗಳಲ್ಲೂ ಈ ಪಥಗಳಅಗತ್ಯವಿದೆ.
–ಸಂಜಯ್ ಗುಬ್ಬಿ, ವನ್ಯಜೀವಿ ತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT