ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದು ಖಚಿತ: ನಿಖಿಲ್‌

ಕೊಳ್ಳೇಗಾಲ: ಜೆಡಿಎಸ್‌ ಕಚೇರಿ ಉದ್ಘಾಟನೆ, ಹನೂರಿನಲ್ಲಿ ರೋಡ್‌ ಶೋ
Last Updated 16 ಫೆಬ್ರುವರಿ 2023, 13:48 IST
ಅಕ್ಷರ ಗಾತ್ರ

ಕೊಳ್ಳೇಗಾಲ: ರಾಜ್ಯದಲ್ಲಿ ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ ಎಂದು ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಗುರುವಾರ ಹೇಳಿದರು.

ನಗರದ ವೆಂಕಟೇಶ್ವರ ಮಹಲ್ ಸಮೀಪದಲ್ಲಿ ಜೆಡಿಎಸ್ ಪಕ್ಷದ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬರುವುದು ಎಷ್ಟು ಖಚಿತವೋ ಮುಂದಿನ ಮುಖ್ಯಮಂತ್ರಿ ಕುಮಾರಣ್ಣ ಆಗುವುದೂ ಅಷ್ಟೇ ಖಚಿತ. ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬಂದರೆ ರೈತರಿಗೆ ಉತ್ತಮವಾದ ಉಡುಗೊರೆ ನೀಡಲಿದ್ದಾರೆ. ಅವರು 123 ಗುರಿಗಳನ್ನು ಇಟ್ಟುಕೊಂಡಿದ್ದಾರೆ. ಅವು ಶೀಘ್ರದಲ್ಲಿ ಈಡೇರಲಿವೆ’ ಎಂದರು.

ಕುಮಾರಣ್ಣ ಅವರು ಈಗಾಗಲೇ ಪಂಚರತ್ನ ರಥಯಾತ್ರೆಯನ್ನು ಕೈಗೊಂಡಿದ್ದಾರೆ. ರಥವು ಕೊಳ್ಳೇಗಾಲಕ್ಕೂ ಬರಲಿದೆ. ಕುಮಾರಸ್ವಾಮಿ ಅವರು ದಿನಕ್ಕೆ 20 ಗಂಟೆ ಕೆಲಸ ಮಾಡುತ್ತಿದ್ದು, 80 ರಿಂದ 100 ಹಳ್ಳಿಗಳನ್ನು ಭೇಟಿ ಮಾಡುತ್ತಿದ್ದಾರೆ. ಈಗಾಗಲೇ 70 ವಿಧಾನಸಭಾ ಕ್ಷೇತ್ರಕ್ಷೇತ್ರಗಳಲ್ಲಿ ಪಂಚರತ್ನ ರಥಯಾತ್ರೆ ನಡೆದಿದೆ. ಅಲ್ಲಿ ತಂದೆ ತಾಯಿಯಂದಿರು, ಅಣ್ಣತಮ್ಮಂದಿರು, ಅಕ್ಕತಂಗಿಯರು, ಯುವಕ ಯುವತಿಯರು ಕುಮಾರಣ್ಣನಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ’ ಎಂದರು.

‘ಪಕ್ಷ ನನಗೆ ದೊಡ್ಡ ಜವಾಬ್ದಾರಿ ನೀಡಿದೆ. ಹಳೆ ಮೈಸೂರು ಭಾಗದಲ್ಲಿ ಪಕ್ಷವನ್ನು ಬಲಪಡಿಸುತ್ತಿದ್ದೇನೆ. ಇಲ್ಲಿ ಯುವಕರ ಯುವತಿಯರ ಭವಿಷ್ಯ ನನಗೆ ಎದ್ದು ಕಾಣುತ್ತಿದೆ. ನಾವು ಅಧಿಕಾರಕ್ಕೆ ಬಂದರೆ ನಿರುದ್ಯೋಗ ನಶಿಸಿ ಹೋಗಲಿದೆ. ಕುಮಾರಣ್ಣ ಅಧಿಕಾರಕ್ಕೆ ಆಸೆ ಪಡುವುದಿಲ್ಲ, ಆರೂವರೆ ಕೋಟಿ ಜನರ ಅಭಿವೃದ್ಧಿಗೆ ಆಸೆ ಪಡುತ್ತಾರೆ. ಅಧಿಕಾರಕ್ಕೆ ಬಂದರೆ ಮೊದಲು ನಿರುದ್ಯೋಗ ಸಮಸ್ಯೆ ಬಗೆಹರಿಸಲಿದ್ದಾರೆ’ ಎಂದರು.

ಟಿಕೆಟ್ ಘೋಷಿಸುವ ಅಧಿಕಾರ ನನಗಿಲ್ಲ: ‘ಪಕ್ಷ ನನಗೆ ಪಕ್ಷ ಸಂಘಟನೆ ಮಾಡುವ ಜವಾಬ್ದಾರಿ ನೀಡಿದೆ. ಟಿಕೆಟ್ ನೀಡುವ ಅಧಿಕಾರ ನನಗಿಲ್ಲ. ಅದು ಪಕ್ಷದ ರಾಜ್ಯಾಧ್ಯಕ್ಷರು, ಪಕ್ಷದ ವರಿಷ್ಠರಾದ ದೇವೇಗೌಡರು ಮತ್ತು ಕುಮಾರಣ್ಣನಿಗೆ ಮಾತ್ರ. ಇಲ್ಲಿ ಓಲೆ ಮಹದೇವು ಅವರು ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಅವರು ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ ಎಲ್ಲಕ್ಕಿಂತ ಹೆಚ್ಚಾಗಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಜೆಡಿಎಸ್ ಯಾವುದೇ ಕಾರಣಕ್ಕೂ ಮೋಸ ಮಾಡುವುದಿಲ್ಲ’ ಎಂದರು.

ಅದ್ದೂರಿ ಸ್ವಾಗತ: ಇದಕ್ಕೂ ಮೊದಲು ತಾಲ್ಲೂಕಿನ ಸತ್ತೇಗಾಲ ಗ್ರಾಮದ ಹ್ಯಾಂಡ್ ಪೋಸ್ಟ್ ಬಳಿ ನಿಖಿಲ್ ಅವರಿಗೆ ಅಭಿಮಾನಿಗಳು, ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿದರು.

ಬೈಕ್ ರ‍್ಯಾಲಿಯು ಸತ್ತೇಗಾಲ, ಧನಗೆರೆ, ಸರಗೂರು, ನರಿಪುರ, ಮೂಲಕ ಸಾಗಿ ಕೊಳ್ಳೇಗಾಲ ತಲುಪಿತು. ನಗರದಲ್ಲಿರುವ ಡಾ. ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಮೆರವಣಿಗೆಯು ಡಾ.ಬಿ.ಆರ್ ಅಂಬೇಡ್ಕರ್ ರಸ್ತೆ, ಡಾ.ರಾಜ್ ಕುಮಾರ್ ರಸ್ತೆ, ಎಂ.ಜಿ.ಎಸ್ ರಸ್ತೆಯ ಮೂಲಕ ಸಾಗಿ ಬಂದು ಜೆಡಿಎಸ್ ಕಚೇರಿ ತಲುಪಿತು.

ಹನೂರು ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಂಜುನಾಥ್, ಕೊಳ್ಳೇಗಾಲ ಟಿಕೆಟ್‌ ಆಕಾಂಕ್ಷಿ ಓಲೆ ಮಹದೇವ, ಮುಖಂಡ ಶಿವಮಲ್ಲು ಇತರರು ಇದ್ದರು.

‘ಹಾಸನ: ಗೊಂದಲಕ್ಕೆ ಶೀಘ್ರ ತೆರೆ’

ಹಾಸನದಲ್ಲಿ ಪಕ್ಷದ ಟಿಕೆಟ್‌ ಹಂಚಿಕೆಗೆ ಸಂಬಂಧಿಸಿದಂತೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ನಿಖಿಲ್‌, ‘ಎಲ್ಲಿ ಪಕ್ಷ ಬಲಿಷ್ಠವಿರುತ್ತೋ ಅಲ್ಲಿ ಆಕಾಂಕ್ಷಿಗಳು ಹೆಚ್ಚಿರುತ್ತಾರೆ. ಪಕ್ಷದ ರಾಜ್ಯಾಧ್ಯಕ್ಷರು, ರಾಷ್ಟ್ರಾಧ್ಯಕ್ಷರು ಶೀಘ್ರದಲ್ಲೇ ಗೊಂದಲಕ್ಕೆ ತೆರೆ ಎಳೆಯುತ್ತಾರೆ’ ಎಂದರು.

‘ಎಚ್‌.ಡಿ.ರೇವಣ್ಣ ಹಾಸನದಲ್ಲಿ ಸ್ಪರ್ಧೆ ಮಾಡಿದರೆ 50 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತೇನೆ’ ಎಂದು ಹಾಸನ ಶಾಸಕ ಪ್ರೀತಂ ಗೌಡ ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ರಾಜಕಾರಣದಲ್ಲಿ ನಾವು ಎಷ್ಟು ತಲೆ ತಗ್ಗುತ್ತೇವೆಯೋ ಅಷ್ಟು ಜನ ನಮ್ಮನ್ನು ರಾಜಕೀಯವಾಗಿ ಬೆಳೆಸುತ್ತಾರೆ. ಅಹಂಕಾರ, ದರ್ಪ ಯಾವುದು ಕೆಲಸಕ್ಕೆ ಬರುವುದಿಲ್ಲ. ಸಮಯ ಹತ್ತಿರ ಬಂದಿದೆ. ಜನರು ತೀರ್ಮಾನ ಮಾಡುತ್ತಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT