ಶನಿವಾರ, ಅಕ್ಟೋಬರ್ 23, 2021
25 °C

ಕಡಿಮೆ ಬೆಲೆಗೆ ಚಾಣಕ್ಯ ವಿ.ವಿ.ಗೆ ಭೂಮಿ: ಕಾನೂನು ಹೋರಾಟ- ಆರ್‌.ಧ್ರುವನಾರಾಯಣ ಕಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘₹ 300 ಕೋಟಿಗೂ ಹೆಚ್ಚು‌ ಬೆಲೆ ಬಾಳುವ 112 ಎಕರೆ ಜಮೀನನ್ನು ಆರ್‌ಎಸ್‌ಎಸ್‌ಗೆ ಒಳಪಟ್ಟ ಚಾಣಕ್ಯ ಖಾಸಗಿ ವಿಶ್ವವಿದ್ಯಾಲಯಕ್ಕೆ ಕೇವಲ ₹ 50 ಕೋಟಿಗೆ ನೀಡಿರುವ ರಾಜ್ಯ ಸರ್ಕಾರದ ಕ್ರಮದ ವಿರುದ್ಧ ಕಾನೂನು ಹೋರಾಟ ಮಾಡಲಾಗುವುದು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ಶುಕ್ರವಾರ ಇಲ್ಲಿ ಹೇಳಿದರು.   

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯ ಸರ್ಕಾರವು ಅಧಿವೇಶನದಲ್ಲಿ ಚಾಣಕ್ಯ ಖಾಸಗಿ ವಿ.ವಿ. ಮಸೂದೆಯನ್ನು ಮಂಡಿಸಿ ಅನುಮೋದನೆ ಪಡೆದಿದೆ. ರಾಜ್ಯದಲ್ಲಿ ಅನೇಕ ಸರ್ಕಾರಿ ವಿಶ್ವವಿದ್ಯಾಲಯಗಳಿದ್ದರೂ ಅವುಗಳ ಅಭಿವೃದ್ಧಿಗೆ ಯೋಜನೆ ರೂಪಿಸದೆ ಖಾಸಗಿ ವಿ.ವಿ.ಗೆ ಭೂಮಿ ನೀಡಿ ನಿಯಮ ಉಲ್ಲಂಘನೆ ಮಾಡಲಾಗಿದೆ’ ಎಂದು ದೂರಿದರು. 

‘ಕೈಗಾರಿಕಾ ಉದ್ದೇಶಕ್ಕಾಗಿ ರೈತರಿಗೆ ₹ 175 ಕೋಟಿ ಪರಿಹಾರ ನೀಡಿ ಸರ್ಕಾರ ಈ ಜಮೀನನ್ನು ಖರೀದಿಸಿದೆ. ಈಗ ಅದರ ಮೌಲ್ಯ ₹ 300 ಕೋಟಿಗೂ ಹೆಚ್ಚಿದೆ. ಆದರೆ, ರಾಜ್ಯ ಸರ್ಕಾರ ಕೇವಲ ₹ 50 ಕೋಟಿಗೆ ಮಾರಾಟ ಮಾಡಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಈಗಾಗಲೇ ಹದಗೆಟ್ಟಿದ್ದು, ಈ ನಿರ್ಧಾರ ಆರ್ಥಿಕ ಸಂಕಷ್ಟವನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ’ ಎಂದರು. 

‘ನಮ್ಮ ಜಿಲ್ಲೆಗೆ ಪ್ರತ್ಯೇಕ ವಿ.ವಿ. ಅಗತ್ಯವಿದೆ. ಡಾ.ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರವನ್ನು ವಿಶ್ವವಿದ್ಯಾಲಯವನ್ನಾಗಿ ಪರಿವರ್ತಿಸಿ. ಅದರ ಅಭಿವೃದ್ಧಿಗೆ ₹ 100 ಕೋಟಿ ಅನುದಾನ ಬಿಡುಗಡೆ ಮಾಡಿ. ಜಿಲ್ಲೆಯನ್ನು ಶೈಕ್ಷಣಿಕವಾಗಿ ಪ್ರಗತಿಯಾಗುವಂತೆ ಯೋಜನೆ ಜಾರಿಗೊಳಿಸಬೇಕು. ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ಈ ಕೆಲಸ ಮಾಡಬೇಕು’ ಎಂದು ಧ್ರುವನಾರಾಯಣ ಒತ್ತಾಯಿಸಿದರು. 

ಸಮಗ್ರ ಚರ್ಚೆಯಾಗಲಿ: ‘ರಾಜ್ಯದಲ್ಲಿ ತರಾತುರಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿದೆ. ಇದರ ಬಗ್ಗೆ ಸಮಗ್ರವಾಗಿ ಚರ್ಚೆಯಾಗಬೇಕು. ಶಿಕ್ಷಣ ನೀತಿ ರೂಪಿಸಿರುವ ಸಮಿತಿಯಲ್ಲಿರುವ ಕಸ್ತೂರಿ ರಂಗನ್‌ ಬಗ್ಗೆ ಗೌರವವಿದೆ. ಆದರೆ, ಸಮಿತಿಯಲ್ಲಿ ಇರುವ ಉಳಿದವರು ಆರ್‌ಎಸ್‌ಎಸ್‌ನವರು. ವೈಜ್ಞಾನಿಕ ಶಿಕ್ಷಣಕ್ಕೆ ಒತ್ತು ನೀಡುವ ಬದಲು, ಕಾದಂಬರಿ, ಪುರಾಣಗಳಿಗೆ ಆದ್ಯತೆ ನೀಡುವುದು ಸರಿಯಲ್ಲ’ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ಸಿ.ಎಂ ಜಿಲ್ಲೆಗೆ ಬರಲಿ, ಕೊಡುಗೆಗಳನ್ನು ನೀಡಲಿ...

‘ವೈದ್ಯಕೀಯ ಕಾಲೇಜಿನ ಬೋಧನಾ ಆಸ್ಪತ್ರೆ ಉದ್ಘಾಟನೆಗೆ ರಾಷ್ಟ್ರಪತಿ ಬರುತ್ತಿರುವುದು ಸಂತೋಷ. ‌ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಯವರೂ ಬರಲಿ. ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆ ನಡೆಸಲಿ. ಜಿಲ್ಲೆಯ ಅಭಿವೃದ್ಧಿಗೆ ಹೊಸ ಕೊಡುಗೆ ಘೋಷಿಸಬೇಕು’ ಎಂದು ಧ್ರುವನಾರಾಯಣ ಒತ್ತಾಯಿಸಿದರು. 

‘ಹೊಸ ಆಸ್ಪತ್ರೆ ನಿರ್ಮಾಣದಲ್ಲಿ ನಮ್ಮ ಸರ್ಕಾರದ ಕೊಡುಗೆ ಇದೆ. ಉಸ್ತುವಾರಿ ಸಚಿವರಾಗಿದ್ದ ಮಹದೇವ ಪ್ರಸಾದ್‌ ಪ್ರಯತ್ನದಿಂದ ಆಸ್ಪತ್ರೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಸಿದ್ದರಾಮಯ್ಯ ಅನುದಾನ ಬಿಡುಗಡೆ ಮಾಡಿದ್ದರು. ಕೊನೆ ಗಳಿಗೆಯಲ್ಲಿ ಅನುದಾನ ಲಭ್ಯವಿಲ್ಲದೇ ಹೋದಾಗ ಕೊಡಗು ವೈದ್ಯಕೀಯ ಕಾಲೇಜಿಗೆ ನೀಡಲಾಗಿದ್ದ ₹ 100 ಕೋಟಿ ಅನುದಾನವನ್ನು ನಮ್ಮ ವೈದ್ಯಕೀಯ ಕಾಲೇಜಿಗೆ ವರ್ಗಾಯಿಸಲಾಗಿತ್ತು. ಬಿಜೆಪಿಯವರು ಇದನ್ನು ನೆನಪಿಟ್ಟುಕೊಳ್ಳಬೇಕು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು