ಮಂಗಳವಾರ, ಜನವರಿ 31, 2023
18 °C

ಚಾಮರಾಜನಗರ: ಆನೆಗೆ ಕಬ್ಬು ನೀಡಿದ್ದಕ್ಕೆ ಲಾರಿ ಚಾಲಕನಿಗೆ ₹75 ಸಾವಿರ ದಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ನೆರೆಯ ತಮಿಳುನಾಡಿನ ಸತ್ಯಮಂಗಲ ಹುಲಿ ಸಂರಕ್ಷಿತ ಪ್ರದೇಶದ ಹಾಸನೂರು ಬಳಿ ಕಾಡಾನೆಗೆ ಕಬ್ಬು ನೀಡಿದ ಲಾರಿಯ ಚಾಲಕನಿಗೆ ಅಲ್ಲಿನ ಅರಣ್ಯ ಇಲಾಖೆ ₹75 ಸಾವಿರ ದಂಡ ಹಾಕಿದೆ.   

ಇದೇ 3ರಂದು ಈ ಪ್ರಕರಣ ನಡೆದಿದೆ. ಚಾಲಕನನ್ನು ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಸಿದ್ದರಾಜು ಎಂದು ಗುರುತಿಸಲಾಗಿದೆ. 

‘ಕರೆಪಳ್ಳಂ ಚೆಕ್‌ಪೋಸ್ಟ್‌ನಿಂದ ಮೂರು ಕಿ.ಮೀ ದೂರದಲ್ಲಿ ಕಬ್ಬು ತುಂಬಿದ್ದ ಲಾರಿ ನಿಂತಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಲಾರಿಯ ಚಾಲಕನು ರಾಷ್ಟ್ರೀಯ ಹೆದ್ದಾರಿ ಬಳಿ ಇದ್ದ ಕಾಡಾನೆಗೆ ನೀಡುವುದಕ್ಕಾಗಿ ಕಬ್ಬಿನ ಕಂತೆ ತೆಗೆದುಕೊಂಡು ಹೋಗುತ್ತಿದ್ದುದು ಕಂಡು ಬಂತು. ವಿಚಾರಣೆ ಮಾಡಿದಾಗ ಆನೆಗೆ ಕಬ್ಬು ನೀಡಿದ್ದನ್ನು ಚಾಲಕ ಒಪ್ಪಿಕೊಂಡರು. ಹಾನಸೂರು ವನಕೊಟ್ಟಂ ಉಪ ನಿರ್ದೇಶಕ ಅವರ ಆದೇಶದಂತೆ ಸಿದ್ದರಾಜು ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ ಅವರಿಂದ ₹75 ಸಾವಿರ ಅನುಪಾಲನಾ ಶುಲ್ಕ ಕಟ್ಟಿಸಿಕೊಂಡು ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದೆ’ ಎಂದು ತಮಿಳುನಾಡಿನ ಅರಣ್ಯ ಇಲಾಖೆಯ ಪತ್ರಿಕಾ ಪ್ರಕಟಣೆ ತಿಳಿಸಿದೆ.

ರಕ್ಷಿತಾರಾಣ್ಯಗಳಲ್ಲಿ ವಾಹನಗಳನ್ನು ನಿಲ್ಲಿಸುವುದು ಹಾಗೂ ವನ್ಯಪ್ರಾಣಿಗಳಿಗೆ ಆಹಾರ ನೀಡುವುದಕ್ಕೆ ಅವಕಾಶ ಇಲ್ಲ. 

ಜಿಲ್ಲೆಯ ಗಡಿಭಾಗದ ಸತ್ಯಮಂಗಲ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗಿರುವ ಹೆದ್ದಾರಿಯಲ್ಲಿ ಆನೆಗಳು ಕಬ್ಬಿನ ಲಾರಿಗಳನ್ನು ತಡೆದು, ಕಬ್ಬು ತಿನ್ನುವುದು ಸಾಮಾನ್ಯ. ಆನೆಗಳ ಕಾರಣದಿಂದ ಆಗಾಗ ವಾಹನಗಳ ಓಡಾಟಕ್ಕೆ ತಡೆಯಾಗಿ ಸಂಚಾರ ಅಸ್ತವ್ಯಸ್ತವೂ ಆಗುತ್ತಿರುತ್ತದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು