ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಡಕೆಹಳ್ಳ: ಬಿಸಿಯೂಟದಲ್ಲಿ ಹಲ್ಲಿ; ಅಡುಗೆ ಸಿಬ್ಬಂದಿ ವಜಾ

ವಡಕೆಹಳ್ಳ: ಡಿಡಿಪಿಐ ಮಂಜುನಾಥ್‌ ನೇತೃತ್ವದಲ್ಲಿ ಸಭೆ
Last Updated 12 ಜನವರಿ 2022, 6:44 IST
ಅಕ್ಷರ ಗಾತ್ರ

ಹನೂರು: ತಾಲ್ಲೂಕಿನ ವಡಕೆ ಹಳ್ಳ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಶಾಲೆಯಲ್ಲಿ ಸೋಮವಾರ ಹಲ್ಲಿ ಬಿದ್ದಿದ್ದ ಆಹಾರವನ್ನು ಸೇವಿಸಿ 70 ಮಕ್ಕಳು ಅಸ್ವಸ್ಥಗೊಂಡ ಪ್ರಕರಣ ಸಂಬಂಧ ಮೂವರು ಅಡುಗೆ ಸಿಬ್ಬಂದಿಯನ್ನು ವಜಾ ಮಾಡಲಾಗಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಂಜುನಾಥ್‌ ನೇತೃತ್ವದಲ್ಲಿ ಮಂಗಳವಾರ ಶಾಲಾಭಿವೃದ್ಧಿ ಸಮಿತಿ ಹಾಗೂ ಪೋಷಕರ ಸಭೆ ನಡೆಯಿತು.

ಸಭೆಯಲ್ಲಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಟಿ.ಆರ್.ಸ್ವಾಮಿ, ‘ಮುಂದೆ ಇಂತಹ ಘಟನೆಗಳು ಮರುಕಳಿಸಬಾರದು. ಆ ನಿಟ್ಟಿನಲ್ಲಿ ಮೂವರು ಅಡುಗೆ ಸಿಬ್ಬಂದಿ ವಜಾಗೊಳಿಸಲಾಗಿದೆ. ಅಡುಗೆ ಮೇಲ್ವಿಚಾರಕರಾದ ಇಬ್ಬರು ಶಿಕ್ಷಕರನ್ನು ಬೇರೆಡೆ ವರ್ಗಾವಣೆ ಮಾಡಲಾಗುವುದು’ ಎಂದರು.

ಪೋಷಕರು ಮಾತನಾಡಿ, ‘ಮುಂದಿನ ಒಂದು ತಿಂಗಳು ನಮ್ಮ ಮಕ್ಕಳಿಗೆ ಶಾಲೆಯಲ್ಲಿ ಬಿಸಿಯೂಟ ನೀಡಬೇಡಿ. ಆ ಬಳಿಕ ನೋಡೋಣ. ಒಂದು ತಿಂಗಳ ಬಿಸಿಯೂಟದ ವೆಚ್ಚವನ್ನು ಮಕ್ಕಳ ಖಾತೆಗೆ ಜಮೆ ಮಾಡಿ’ ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಬಿಇಒ, ‘ಒಂದು ತಿಂಗಳು ಮಕ್ಕಳ ಖಾತೆಗಳಿಗೆ ಹಣ ಹಾಕಲಾಗುವುದು. ಆ ಬಳಿಕ ಗ್ರಾಮ ಪಂಚಾಯಿತಿ ವತಿಯಿಂದ ಅಡುಗೆ ಸಿಬ್ಬಂದಿ ನೇಮಕಾತಿಗೆ ಪ್ರಕಟಣೆ ಹೊರಡಿಸಿ ನೇಮಕಾತಿ ಬಳಿಕ ಬಿಸಿಯೂಟ ನೀಡಲು ಕ್ರಮ ವಹಿಸಲಾಗುವುದು’ ಎಂದರು.

ಸಭೆಯ ಬಳಿಕ ಮಾತನಾಡಿದ ಡಿಡಿಪಿಐ ಮಂಜುನಾಥ್ ‘ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ತಕ್ಷಣದಲ್ಲೇ ಎಲ್ಲ ಶಿಕ್ಷಕರ ವರ್ಗಾವಣೆ ಮಾಡುವುದು ಸಮಂಜಸವಲ್ಲ. ಮಧ್ಯಾಹ್ನದ ಬಿಸಿಯೂಟವನ್ನು ನಿಲ್ಲಿಸುವ ಬಗ್ಗೆ ಆಯಾ ವಿಭಾಗದ ಮುಖ್ಯಸ್ಥರ ಗಮನಕ್ಕೆ ತಂದು ಕ್ರಮ ವಹಿಸಲಾಗುವುದು. ಇಂತಹ ಘಟನೆ ಮತ್ತೆ ಮರುಕಳಿಸಬಾರದು ಎಂದು ಎಚ್ಚರಿಕೆ ನೀಡಲಾಗಿದೆ’ ಎಂದು ತಿಳಿಸಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಗುರುಸ್ವಾಮಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗಿರೀಶ್, ಕಾರ್ಯದರ್ಶಿ ಮುನಿನಾಯಕ, ಪದಾಧಿಕಾರಿಗಳಾದ ಕಮಲ್ ನಾಥನ್, ಶಿವರಾಜಮ್ಮ, ನಾಗಸುಂದರ್, ಕೃಷ್ಣೇಗೌಡ, ದೈಹಿಕ ಶಿಕ್ಷಣ ಪರಿವೀಕ್ಷಕ ಮಹದೇವು, ಬಿಸಿಯೂಟ ತಾಲ್ಲೂಕು ನೋಡೆಲ್ ಅಧಿಕಾರಿ ರಂಗಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಮಾರ್, ಎಸ್‌ಡಿಎಂಸಿ ಅಧ್ಯಕ್ಷ ಮಹದೇವಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT