ಹನೂರು: ವಿಜ್ಙಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಬೆಳವಣಿಗೆಗಳಾಗುತ್ತಿವೆ. ಮಕ್ಕಳು ಬೌದ್ಧಿಕವಾಗಿ ವಿಕಸನವಾಗಬೇಕಾದರೆ ವಿಜ್ಞಾನ ಕಲಿಕೆ ಅತ್ಯಗತ್ಯ. ಶಾಲೆಗಳಲ್ಲೂ ಮಕ್ಕಳಿಗೆ ವಿಜ್ಞಾನ ಪಠ್ಯದ ಶಿಕ್ಷಣ ಮಾತ್ರವಲ್ಲದೆ, ವಿಜ್ಞಾನದ ಬಗ್ಗೆ ಅವರಲ್ಲಿ ಆಸಕ್ತಿ ಮೂಡಿಸಲು ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ಸರ್ಕಾರಿ ಶಾಲೆಗಳಲ್ಲಿ ಹಮ್ಮಿಕೊಳ್ಳಲಾಗುತ್ತಿರುವ ವಾರದ ವಿಜ್ಞಾನ ಪ್ರಯೋಗವೂ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ದೃಷ್ಟಿಕೋನದಿಂದ ಗಮನ ಸೆಳೆಯುತ್ತದೆ.
ಹನೂರು ಶೈಕ್ಷಣಿಕ ವಲಯದ ಚೆನ್ನಾಲಿಂಗನಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲೂ ವಾರದ ವಿಜ್ಞಾನ ಪ್ರಯೋಗ ವಿದ್ಯಾರ್ಥಿಗಳಿಗೆ ವಿಜ್ಞಾನದ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತಿದೆ.
ಪಠ್ಯ ಚಟುವಟಿಕೆಯ ಭಾಗವಾಗಿ ಪ್ರತಿ ವಾರ ಪಠ್ಯಕ್ಕೆ ಸಂಬಂಧಿಸಿದ ಪ್ರಯೋಗ ಕೈಗೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳೇ ಸ್ವತಃ ಪ್ರಾಯೋಗಿಕ ಕೌಶಲ ಬೆಳೆಸಿಕೊಳ್ಳಲು ಇಲ್ಲಿ ಅವಕಾಶ ಕಲ್ಪಿಸಲಾಗಿದೆ.
‘ಕುತೂಹಲಕಾರಿ ಅಂಶದ ಬಗ್ಗೆ ತಿಳಿಸುವ ಜ್ಞಾನದ ಕಣಜವೇ ವಿಜ್ಙಾನ. ವಿಜ್ಞಾನವು ಮಕ್ಕಳಲ್ಲಿ ಕುತೂಹಲ ಮೂಡಿಸುತ್ತದೆ. ಈ ನಿಟ್ಟಿನಲ್ಲಿ ಕಲಿಕಾಸಕ್ತಿ ಹೆಚ್ಚಿಸಲು ಹಾಗೂ ಕಲಿಕೆಯನ್ನು ಬಲವರ್ಧನೆಗೊಳಿಸುವ ವಿನೂತನ ಪ್ರಯೋಗಗಳಿಗೆ ಶಾಲೆಯಲ್ಲಿ ಚಾಲನೆ ನೀಡಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ವಿನೂತನ ಚಟುವಟಿಕೆ ಮೂಲಕ ವಿಜ್ಞಾನದ ಕಲಿಕೆ ಪ್ರಕ್ರಿಯೆ ಸುಧಾರಿಸಲು ವಾರದ ವಿಜ್ಞಾನ ಪ್ರಯೋಗ ರೂಪಿಸಲಾಗಿದೆ. ಸೂಕ್ತ ಸಾಧನ ಮತ್ತು ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಬೋಧಿಸಲಾಗುತ್ತಿದೆ. ಜತೆಗೆ ವಿಜ್ಞಾನ ಬೋಧನಾ ಸಾಮಗ್ರಿಗಳನ್ನು ಬಳಸಲಾಗುತ್ತಿದೆ’ ಎಂದು ಹೇಳುತ್ತಾರೆ ಶಿಕ್ಷಕರು.
ಶಿಕ್ಷಕರ ಮಾರ್ಗದರ್ಶನದಡಿ ವಿದ್ಯುಚ್ಛಕ್ತಿ, ಮಂಡಲ ಬಗ್ಗೆ ಸರಳ ಮಂಡಲ ಹೊಂದಿರುವ ವಿದ್ಯುತ್ ಕೋಶ ಮತ್ತು ವಿದ್ಯುತ್ ಬಲ್ಬ್ ಬಳಸಿ ಮಕ್ಕಳ ಮುಂದೆ ಪ್ರಯೋಗ ಮಾಡುವುದು. ಬಳಿಕ ಮಕ್ಕಳೇ ನೇರವಾಗಿ ಪ್ರಯೋಗದಲ್ಲಿ ತೊಡಗಿಸಿಕೊಳ್ಳುವಂತೆ ಉತ್ತೇಜನ ಮಾಡುವುದು. ಶಾಲೆಯಲ್ಲಿ ವಿಜ್ಞಾನ ಸಂಘ ರಚಿಸಿ ಮಕ್ಕಳು ಸಕ್ರಿಯವಾಗಿ ಪಾಲ್ಗೊಂಡು ವಿಜ್ಞಾನ ಪ್ರಯೋಗದಲ್ಲಿ ಭಾಗವಹಿಸುವಂತೆ ಪ್ರೇರೇಪಿಸಲಾಗುತ್ತದೆ.
‘ಮಕ್ಕಳಿಗೆ ವಿಜ್ಞಾನ ವಿಷಯ ಕಷ್ಟವೆನಿಸುವ ಸಂದರ್ಭದಲ್ಲಿ ಅವರಲ್ಲಿರುವ ಪ್ರತಿಭೆ ಹೊರತೆಗೆಯಲು ವಿಜ್ಞಾನ ಪ್ರಯೋಗ ಸೂಕ್ತ ವೇದಿಕೆಯಾಗಿದೆ. ಇದು ಪ್ರತಿ ಮಗುವಿನಲ್ಲಿರುವ ಕೌಶಲ ವೃದ್ಧಿಸಿ ಕಲಿಕಾ ಸಾಮಾರ್ಥ್ಯವನ್ನು ಹೆಚ್ಚಿಸಲು ಸಹಕಾರಿಯಾಗಿದೆ’ ಎಂದು ಬೋಧಕರು ಮಾಹಿತಿ ನೀಡಿದರು.
Highlights - ವಾರಕ್ಕೊಮ್ಮೆ ಪ್ರಯೋಗ ಸಹಿತ ಪಾಠ ಉತ್ಸಾಹದಿಂದ ಪಾಲ್ಗೊಳ್ಳುವ ಮಕ್ಕಳು ವಿಜ್ಞಾನ ವಿಷಯದ ಮಾಹಿತಿ ವಿನಿಮಯ
Quote - ತಮ್ಮ ಸುತ್ತಲಿನ ವಿದ್ಯಮಾನಗಳನ್ನು ಅರ್ಥ ಮಾಡಿಕೊಳ್ಳಲು ವೈಜ್ಞಾನಿಕ ಚಿಂತನೆ ಬೆಳೆಸಿಕೊಳ್ಳು ವಿಜ್ಞಾನ ಪ್ರಯೋಗ ಸಹಕಾರಿಯಾಗಿದೆ ಎಸ್.ಮಾದೇಶ್ ವಿಜ್ಞಾನ ಶಿಕ್ಷಕ
Quote - ಮಕ್ಕಳಿಗೆ ಮೇಘ ಶಾಲಾ ಎಂಬ ಸಂಸ್ಥೆ ಟ್ಯಾಬ್‌ಗಳನ್ನು ನೀಡಿದ್ದು ಪಠ್ಯ ಸಂಬಂಧಿಸಿದ ವಿಡಿಯೊಗಳನ್ನು ಇದರ ಮೂಲಕ ಮಕ್ಕಳಿಗೆ ತಿಳಿಸಿಕೊಡಲಾಗುತ್ತಿದೆ ತೆರೆಸಾ ಮುಖ್ಯಶಿಕ್ಷಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.