ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೇಮರಹಳ್ಳಿ | ಶೌಚಾಲಯ ಇಲ್ಲದೇ ಮಹಿಳಾ ಸಿಬ್ಬಂದಿಗೆ ಕಷ್ಟ

ಪ್ರಮುಖವಾದ ಬಾಣಹಳ್ಳಿ ಚೆಕ್‌ಪೋಸ್ಟ್‌ನಲ್ಲಿ ಮೂಲಸೌಕರ್ಯ ಕೊರತೆ
Last Updated 22 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಸಂತೇಮರಹಳ್ಳಿ: ಕೋವಿಡ್-19 ತಡೆಗಟ್ಟಲು ಜಿಲ್ಲೆಯಾದ್ಯಂತ ಆರು ಅಂತರರಾಜ್ಯ ಹಾಗೂ ನಾಲ್ಕು ಅಂತರ್‌ಜಿಲ್ಲೆ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗಿದೆ. ಕಂದಾಯ ಇಲಾಖೆ, ಪಂಚಾಯತ್‌ ರಾಜ್‌ ಇಲಾಖೆ, ಆರೋಗ್ಯ ಇಲಾಖೆ ಮತ್ತು ಪೊಲೀಸ್‌ ಇಲಾಖೆಯ ಸಿಬ್ಬಂದಿ ಇಲ್ಲಿ ಪಾಳಿ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಎಲ್ಲ ಚೆಕ್‌ಪೋಸ್ಟ್‌ಗಳಲ್ಲಿ ಸಿಬ್ಬಂದಿ ಕಟ್ಟುನಿಟ್ಟಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಊರುಗಳಿಂದ ದೂರ ಇರುವ ಚೆಕ್‌ಪೋಸ್ಟ್‌ಗಳಲ್ಲಿ ಮೂಲಸೌಕರ್ಯ ಕೊರತೆ ತೀವ್ರವಾಗಿ ಇದೆ. ಬಹುತೇಕ ಅಂತರರಾಜ್ಯ ಚೆಕ್‌ಪೋಸ್ಟ್‌ಗಳು ಕಾಯಂ ಚೆಕ್‌ಪೋಸ್ಟ್‌ ಇರುವ ಸ್ಥಳದಲ್ಲೇ ಇರುವುದರಿಂದ ಅಲ್ಲಿ ಸಿಬ್ಬಂದಿಗೆ ವ್ಯವಸ್ಥೆ ಇದೆ.

ಆದರೆ, ಕೋವಿಡ್‌–19 ಕಾರಣಕ್ಕಾಗಿಯೇ ನಿರ್ಮಿಸಲಾಗಿರುವ ತಾಲ್ಲೂಕಿನ ಬಾಣಹಳ್ಳಿ ಹಾಗೂ ಕೊಳ್ಳೇಗಾಲ ತಾಲ್ಲೂಕಿನ ಟಗರುಪುರ ಚೆಕ್‌ಪೋಸ್ಟ್‌ಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಸರಿಯಾದ ಸೌಕರ್ಯ ಇಲ್ಲದೆ ಪರದಾಡುತ್ತಿದ್ದಾರೆ. ಪುರುಷ ಸಿಬ್ಬಂದಿ ಹೇಗಾದರೂ ಹೊಂದಿಕೊಂಡು ಹೋಗಬಹುದು. ಆದರೆ, ಮಹಿಳಾ ಸಿಬ್ಬಂದಿಗೆ ತೀವ್ರ ತೊಂದರೆಯಾಗುತ್ತಿದೆ.

ಸದ್ಯದ ಮಟ್ಟಿಗೆ ಜಿಲ್ಲೆಯಲ್ಲಿ ಅತಿ ಹೆಚ್ಚು ವಾಹನ ಸಂಚಾರವಿರುವ ಚೆಕ್‌ಪೋಸ್ಟ್‌, ಸಂತೇಮರಹಳ್ಳಿಯ ಬಾಣಹಳ್ಳಿ ಗೇಟ್‌. ನಂಜನಗೂಡು-ಮೈಸೂರು ನಡುವಿನ ಸಂಪರ್ಕ ಸಂಪೂರ್ಣ ಕಡಿತಗೊಂಡಿರುವುದರಿಂದ ಬಹುತೇಕಎಲ್ಲ ವಾಹನಗಳು ವಾಹನಗಳು ಇಲ್ಲಿಂದಲೇ ಜಿಲ್ಲೆಯನ್ನು ಪ್ರವೇಶಿಸುತ್ತವೆ. ಮತ್ತು ಹೊರ ಹೋಗುತ್ತವೆ.

ಹೊರ ಜಿಲ್ಲೆಗಳು ಹಾಗೂ ಅಂತರ ರಾಜ್ಯದಿಂದ ಬಂದ ಅವಶ್ಯಕ ವಸ್ತುಗಳನ್ನು ಸಾಗಿಸುವ ವಾಹನಗಳು ಜಿಲ್ಲೆಯ ಮೂಲಕ ತಮಿಳುನಾಡು ಹಾಗೂ ಕೇರಳ ರಾಜ್ಯಕ್ಕೆ ಹೋಗುತ್ತವೆ. ಚೆಕ್‌ಪೋಸ್ಟ್‌ನಲ್ಲಿರುವ ಸಿಬ್ಬಂದಿ ಪ್ರಕಾರ ಪ್ರತಿದಿನ 800ರಿಂದ 900 ವಾಹನಗಳು ಸಂಚರಿಸುತ್ತವೆ.

ಈ ಚೆಕ್‌ಪೋಸ್ಟ್‌ನಲ್ಲಿ ಕಂದಾಯ ಇಲಾಖೆ, ಪೊಲೀಸ್ ಹಾಗೂ ಆರೋಗ್ಯ ಇಲಾಖೆ ನೌಕರರು ಸೇರಿದಂತೆ ಪ್ರತಿದಿನ 30 ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರಲ್ಲಿ ಮಹಿಳಾ ಸಿಬ್ಬಂದಿಯೂ ಇದ್ದಾರೆ.ಸಂತೇಮರಹಳ್ಳಿಯಿಂದ ಐದು ಕಿ.ಮೀ, ಮೂಗೂರು ಕ್ರಾಸ್‌ನಿಂದ ಮೂರು ಕಿ.ಮೀ ದೂರದಲ್ಲಿ ಈ ಚೆಕ್‌ಪೋಸ್ಟ್‌ ಇದೆ. ಪಕ್ಕದ ಹಳ್ಳಿಗಳಾದ ತೆಳ್ಳನೂರು ಮತ್ತು ಬಾಣಹಳ್ಳಿಗೆ 1 ಕಿ.ಮೀ ದೂರ ಇದೆ.

ಇಲ್ಲಿ ಕನಿಷ್ಠ ಮೂಲಸೌಕರ್ಯಗಳಿಲ್ಲ. ಶೌಚಾಲಯ ಇಲ್ಲದಿರುವುದರಿಂದ ಮಹಿಳಾ ಸಿಬ್ಬಂದಿಗೆ ಭಾರಿ ಕಷ್ಟವಾಗುತ್ತಿದೆ. ಉಳಿದ ಕೆಲವು ಚೆಕ್‌ಪೋಸ್ಟ್‌ಗಳಲ್ಲಿ ಸಮೀಪದಲ್ಲಿ ಮನೆ, ಊರುಗಳಿವೆ. ಇನ್ನೂ ಕೆಲವು ಚೆಕ್‌ಪೋಸ್ಟ್‌ಗಳಲ್ಲಿ ಅರಣ್ಯ ಇಲಾಖೆಯ ವಸತಿನಿಲಯಗಳು ಇವೆ. ಅಲ್ಲಿನ ಶೌಚಾಲಯಗಳನ್ನು ಬಳಸುವುದಕ್ಕೆ ಅವಕಾಶ ಇದೆ. ಆದರೆ, ಇಲ್ಲಿ ಅಂತಹ ವ್ಯವಸ್ಥೆ ಇಲ್ಲ. ಟಗರುಪುರದಲ್ಲೂ ಇದೇ ರೀತಿ ಇದೆ. ಮಹಿಳಾ ಸಿಬ್ಬಂದಿ ಬಹಿರ್ದೆಸೆಗೆ ಬಯಲನ್ನೇ ಆಶ್ರಯಿಸಬೇಕಾಗಿದೆ.

ಚೆಕ್‌ಪೋಸ್ಟ್‌ ಸ್ಥಾಪಿಸಿ ಒಂದು ತಿಂಗಳು ಆಗುತ್ತಾ ಬಂತು. ಇನ್ನೂ ಒಂದಷ್ಟು ಸಮಯ ಇದೇ ಪರಿಸ್ಥಿತಿ ಇರುವುದಂತು ಖಚಿತ. ಕನಿಷ್ಠ ಪಕ್ಷ ತಾತ್ಕಾಲಿಕ ಶೌಚಾಲಯ ನಿರ್ಮಿಸಿಕೊಟ್ಟರೆ ಅನುಕೂಲವಾಗುತ್ತದೆ ಎಂದು ಹೆಸರು ಹೇಳಲು ಇಚ್ಛಿಸದ ಸಿಬ್ಬಂದಿ ಹೇಳಿದರು.

ಸದ್ಯ ಒಂದು ನೆರಳಿಗೆ ಶಾಮಿಯಾನ ಹಾಕಲಾಗಿದೆ. ಮಳೆ ಗಾಳಿಗೆ ದೊಡ್ಡ ರಕ್ಷಣೆ ಏನಿಲ್ಲ. ಪ್ರತಿ ದಿನ ಮೋಡ ಕವಿದ ವಾತಾವರಣ ಇದ್ದು, ಮಳೆ ಬಂದರೆ, ಸಿಬ್ಬಂದಿ ಕೆಲಸ ಮಾಡಲು ಪ್ರಯಾಸ ಪಡಬೇಕಾಗುತ್ತದೆ.

ಊಟದ ವ್ಯವಸ್ಥೆಯೂ ಸರಿಯಾಗಿಲ್ಲ. ಸಿಬ್ಬಂದಿಯೇ ಮನೆಯಿಂದ ತರುತ್ತಾರೆ. ಇಲ್ಲದಿದ್ದರೆ ಸಂತೇಮರಹಳ್ಳಿಯ ಹೋಟೆಲ್‌ ಒಂದರಲ್ಲಿ ಮಾಡಿಸಿ ತರುತ್ತಾರೆ. ಕೆಲವು ದಿನ ಗ್ರಾಮ ಪಂಚಾಯಿತಿ ವತಿಯಿಂದ ಪೂರೈಕೆಯಾಗುತ್ತಿತ್ತು. ಈಗ ಅದು ನಿಂತಿದೆ. ತಂದ ಊಟವನ್ನು ಶಾಮಿಯಾನ ಹಾಕಿದಲ್ಲೇ ಮಾಡಬೇಕಿದೆ. ಪಕ್ಕದಲ್ಲೇ ಬಸ್‌ ನಿಲ್ದಾಣವಿದ್ದು, ಅದನ್ನು ಊಟ ಮಾಡಲು ಬಳಸುತ್ತಿದ್ದಾರೆ. ರಾತ್ರಿ ಹೊತ್ತು ಇಲ್ಲಿ ಬೆಳಕಿನ ಸಮಸ್ಯೆಯೂ ಇದೆ.

ಈ ಸಂಬಂಧ ಪ್ರತಿಕ್ರಿಯೆ‍ಪಡೆಯಲು ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಲು ಯತ್ನಿಸಿದರೂ ಅವರು ಸಂಪರ್ಕಕ್ಕೆ ಸಿಗಲಿಲ್ಲ.

ಅಗತ್ಯವಿದೆ ಸುರಕ್ಷಾ ದಿರಿಸು
ಚೆಕ್‌ಪೋಸ್ಟ್‌ಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ಮುಖಗವಸು, ಕೈಗವಸು, ಸ್ಯಾನಿಟೈಸರ್‌ಗಳನ್ನು ಪೂರೈಸಲಾಗಿದೆ. ಆರೋಗ್ಯ ಸಿಬ್ಬಂದಿಗೆ ಥರ್ಮಲ್‌ ಸ್ಕ್ರೀನಿಂಗ್‌ ಸಾಧನವನ್ನೂ ಕೊಡಲಾಗಿದೆ.

ಸಾಮಾನ್ಯವಾಗಿ ಎಲ್ಲ ಚೆಕ್‌ಪೋಸ್ಟ್‌ಗಳಲ್ಲಿ ಜಿಲ್ಲೆ ಅಲ್ಲದೇ, ಅಂತರರಾಜ್ಯ ಹಾಗೂ ವಿವಿಧ ಜಿಲ್ಲೆಗಳಿಂದ ಅಗತ್ಯ ವಸ್ತುಗಳನ್ನು ಸಾಗಿಸುವ ನೂರಾರು ವಾಹನಗಳು ಸಂಚರಿಸುವುದರಿಂದ, ವಾಹನಗಳ ಸಿಬ್ಬಂದಿಯೊಂದಿಗೆ ಕನಿಷ್ಠ ಅಂತರ ಕಾಪಾಡಿಕೊಂಡು ಮಾತನಾಡಬೇಕಾಗುತ್ತದೆ. ಅವರು ಸಲ್ಲಿಸುವ ದಾಖಲೆಗಳನ್ನು ಹಿಡಿದು ಪರಿಶೀಲಿಸಬೇಕಾಗುತ್ತದೆ.

ಇಂತಹ ಸಂದರ್ಭದಲ್ಲಿ ವೈಯಕ್ತಿಕ ಸುರಕ್ಷಾ ದಿರಿಸು (ಪಿಪಿಇ) ಇದ್ದರೆ ಅನುಕೂಲ. ಹಾಗಾಗಿ ಪಿಪಿಇ ಕಿಟ್‌ಗಳನ್ನು ಪೂರೈಸಿದರೆ ಎಲ್ಲರ ಆರೋಗ್ಯ ದೃಷ್ಟಿಯಿಂದ ಒಳ್ಳೆಯದು ಎಂಬ ಅಭಿಪ್ರಾಯ ಸಿಬ್ಬಂದಿ ವಲಯದಲ್ಲಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT