ಸೋಮವಾರ, ಜನವರಿ 18, 2021
21 °C
ಗೇಟ್, ಕಾಂಪೌಂಡ್‌, ಕಾವಲುಗಾರರು ಇಲ್ಲ, ರಾತ್ರಿ ಹೊತ್ತು ಅನೈಟಿಕ ಚಟುವಟಿಕೆಗಳ ತಾಣ

ಕೊಳ್ಳೇಗಾಲದಲ್ಲಿರುವ ಸರ್ಕಾರಿ ಕಚೇರಿಗಳಿಗೆ ಭದ್ರತೆಯೇ ಇಲ್ಲ

ಅವಿನ್‌ ಪ್ರಕಾಶ್‌ ವಿ. Updated:

ಅಕ್ಷರ ಗಾತ್ರ : | |

Prajavani

ಕೊಳ್ಳೇಗಾಲ: ತಾಲ್ಲೂಕು ಕೇಂದ್ರದಲ್ಲಿರುವ ಬಹುತೇಕ ಸರ್ಕಾರಿ ಕಚೇರಿಗಳಿಗೆ ಭದ್ರತಾ ವ್ಯವಸ್ಥೆಯೇ ಇಲ್ಲ. ರಾತ್ರಿ ಹೊತ್ತು ಕಾವಲುಗಾರರೂ ಇರುವುದಿಲ್ಲ. 

ನಗರದಲ್ಲಿ 35ಕ್ಕೂ ಹೆಚ್ಚು ಸರ್ಕಾರಿ ಕಚೇರಿ, ಕಟ್ಟಡ, ಆವರಣ, ಶಾಲಾ ಕಾಲೇಜುಗಳು ಇವೆ. ಸೂಕ್ತ ಭದ್ರತಾ ವ್ಯವಸ್ಥೆ ಇಲ್ಲದಿರುವುದರಿಂದ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ.

ನಗರಸಭೆ ಸೇರಿದಂತೆ ಕೆಲವೇ ಕೆಲವು ಕಚೇರಿಗಳಲ್ಲಿ ರಾತ್ರಿ ಕಾವಲುಗಾರರನ್ನು ನಿಯೋಜಿಸಲಾಗಿದೆ. ಸಿಸಿಟಿವಿ ಕ್ಯಾಮೆರಾಗಳು ಕೂಡ ಕೆಲವು ಕಡೆಗಳಲ್ಲಿ ಮಾತ್ರ ಇದೆ. ಎಲ್ಲ ಕಡೆಗಳಲ್ಲೂ ಭದ್ರತೆಗೆ ತಾಲ್ಲೂಕು ಆಡಳಿತ ಕ್ರಮ ಕೈಗೊಳ್ಳಬೇಕು ಎಂಬುದು ನಾಗರಿಕರ ಒತ್ತಾಯ. 

‘ಪೊಲೀಸರು ಪ್ರತಿನಿತ್ಯ ನಗರವನ್ನು ಮತ್ತು ಸರ್ಕಾರಿ ಕಾಲೇಜುಗಳ ಮೈದಾನ ಹಾಗೂ ಕಚೇರಿ ವ್ಯಾಪ್ತಿಯಲ್ಲಿ ಗಸ್ತು ತಿರುಗುವುದು ಬಿಟ್ಟರೆ, ಬೇರೆ ಯಾರು ಕಾವಲು ಸಿಬ್ಬಂದಿ ಇರುವುದಿಲ್ಲ. ಇದರಿಂದಾಗಿ ಸರ್ಕಾರದ ಆಸ್ತಿಗಳಿಗೆ ಹಾನಿಯಾಗುತ್ತಿದೆ’ ಎಂಬುದು ನಿವಾಸಿಗಳ ಅನಿಸಿಕೆ. 

ಗೇಟ್ ಮತ್ತು ಕಾಂಪೌಂಡ್ ಇಲ್ಲ: ನಗರದ ತಾಲ್ಲೂಕು ಕಚೇರಿ (ತಹಶೀಲ್ದಾರ್‌, ಎಸಿ ಕಚೇರಿ), ತಾಲ್ಲೂಕು ಪಂಚಾಯಿತಿ, ಕಾವೇರಿ ನೀರಾವರಿ ನಿಗಮ, ಎಂ.ಜಿ.ಎಸ್.ವಿ ಪದವಿ ಪೂರ್ವ ಕಾಲೇಜು, ಎಸ್.ವಿ.ಕೆ ಪದವಿ ಪೂರ್ವ ಕಾಲೇಜು, ಮಹದೇಶ್ವರ ಪ್ರಥಮ ದರ್ಜೆ ಕಾಲೇಜು, ಆರ್.ಎಂ.ಸಿ. ತರಕಾರಿ ಮಾರುಕಟ್ಟೆ, ಎಪಿಎಂಸಿ ಮಾರುಕಟ್ಟೆ ಸೇರಿದಂತೆ ಬಹುತೇಕ ಸರ್ಕಾರಿ ಕಚೇರಿಗಳ ಆವರಣಗಳಲ್ಲಿ ಸರಿಯಾದ ಗೇಟ್ ಮತ್ತು ಕಾಂಪೌಂಡ್ ಇಲ್ಲ. ಇದರಿಂದ ಬೀದಿ ದನಗಳು, ನಾಯಿಗಳು, ಹಂದಿಗಳು, ಕುದುರೆಗಳು ರಾತ್ರಿ ಹೊತ್ತಿನಲ್ಲಿ ಆಶ್ರಯ ಪಡೆಯುತ್ತವೆ.

ಈ ಸ್ಥಗಳಲ್ಲಿ ಪಾನಗೋಷ್ಠಿ ನಡೆಸುವ ಕೆಲ ಪುಂಡರು ಕಿಟಕಿ ಗಾಜು, ಬಾಗಿಲು ಸೇರಿದಂತೆ ಇನ್ನಿತರ ವಸ್ತುಗಳಿಗೆ ಹಾನಿ ಮಾಡುತ್ತಾರೆ. ಸರ್ಕಾರಿ ಕಚೇರಿಯಲ್ಲಿ ಕೆಟ್ಟು ನಿಂತ ವಾಹನಗಳ ಸಾಮಗ್ರಿಗಳನ್ನೂ ಕಳವು ಮಾಡುತ್ತಾರೆ‌.

‘ನಾವು ಪ್ರತಿನಿತ್ಯ ಕಾಲೇಜಿನ ಆವರಣದಲ್ಲಿ ವಾಯು ವಿಹಾರ ಮಾಡುತ್ತೇವೆ. ಕಾಂಪೌಂಡ್ ಇಲ್ಲದ ಕಾರಣ ಕೆಲವು ಯುವಕರು ಬೈಕ್ ಅನ್ನು ಮೈದಾನದ ಒಳಗೆ ತಂದು ವೀಲಿಂಗ್ ಮಾಡುತ್ತಾರೆ’ ಎಂದು ಹಿರಿಯ ನಾಗರಿಕಕ ದೊಡ್ಡ ಮಲ್ಲಯ್ಯ ಆರೋಪಿಸಿದರು.

ಅನೈತಿಕ ಚಟುವಟಿಕೆ: ‘ಸರ್ಕಾರಿ ಕಚೇರಿಗಳಿಗೆ ಭದ್ರತಾ ವ್ಯವಸ್ಥೆ ಇಲ್ಲದಿರುವುದರಿಂದ ರಾತ್ರಿ ಹೊತ್ತು ಕಚೇರಿ, ಶಾಲಾ ಕಾಲೇಜುಗಳ ಆವರಣ ಅನೈತಿಕ ಚಟುವಟಿಕೆಗಳ ತಾಣವಾಗಿ ಬದಲಾಗುತ್ತದೆ. ಸ್ನೇಹಿತರ ಜೊತೆ ಸೇರಿ ಮದ್ಯ ಸೇವಿಸುತ್ತಾರೆ. ಕೆಲವರು ಕುಡಿದ ಅಮಲಿನಲ್ಲಿ ಬಾಯಿಗೆ ಬಂದ ಹಾಗೆ ಅಸಭ್ಯವಾಗಿ ವರ್ತಿಸಿ ಕೆಟ್ಟಪದಗಳನ್ನು ಬಳಸುತ್ತಾರೆ. ಇದರಿಂದ ಸಮೀಪದಲ್ಲಿ ವಾಸವಿರುವ ನಿವಾಸಿಗಳಿಗೆ ಬಾರಿ ತೊಂದರೆ ಆಗುತ್ತದೆ’ ಎಂದು ನಿವೃತ್ತ ಅಧಿಕಾರಿ ರಂಗರಾಜು ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಸರ್ಕಾರಿ ಕಚೇರಿಗಳಲ್ಲಿ ರಾತ್ರಿ ಕಾವಲುಗಾರರನ್ನು ನೇಮಕ ಮಾಡಲು ತಾಲ್ಲೂಕು ಆಡಳಿತ ಕ್ರಮಕೈಗೊಳ್ಳಬೇಕು. ಹೀಗೆ ಮಾಡುವುದರಿಂದ ಸರ್ಕಾರಿ ಕಚೇರಿಗಳ ಆಸ್ತಿಯನ್ನು ರಕ್ಷಿಸಬಹುದು ಎಂದು ಜಯಕರ್ನಾಟಕ ಸಂಘಟನೆಯ ತಾಲ್ಲೂಕು ಅಧ್ಯಕ್ಷ ಪ್ರಭುಸ್ವಾಮಿ ಅವರು ಹೇಳಿದರು. 

ಭದ್ರತೆಗೆ ಕ್ರಮ:  ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ತಹಶೀಲ್ದಾರ್‌ ಕೆ.ಕುನಾಲ್‌ ಅವರು, ‘ಕೆಲವು ಕಚೇರಿಗಳಿಗೆ ಕಾವಲುಗಾರರನ್ನು ನಿಯೋಜಿಸಲಾಗಿದೆ. ಕೆಲವು ಕಡೆ ಇಲ್ಲ. ಭದ್ರತೆ ಒದಗಿಸಲು ಕ್ರಮವಹಿಸಲಾಗುವುದು. ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ಸರ್ಕಾರಿ ಕಚೇರಿಗಳ ಮೈದಾನದಲ್ಲಿ ರಾತ್ರಿ ಹೊತ್ತು ಅನೈತಿಕ ಚಟುವಟಿಕೆ ನಡೆಸಿದರೆ, ಅಂತಹವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಹೇಳಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು