ಅಕ್ಷರ ದಾಸೋಹ ನೌಕರರ ಪ್ರತಿಭಟನೆ

ಚಾಮರಾಜನಗರ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಿಂದ ಮೆರವಣಿಗೆ ಆರಂಭಿಸಿದ ಪ್ರತಿಭಟನಕಾರರು, ಭುವನೇಶ್ವರಿ ವೃತ್ತ, ಡೀವಿಯೇಷನ್ ರಸ್ತೆ, ಸತ್ಯಮಂಗಲ ರಸ್ತೆಯಲ್ಲಿ ಸಾಗಿ, ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿದ್ದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಮನವಿ ಸಲ್ಲಿಸಿದರು. ದಾರಿಯುದ್ದಕ್ಕೂ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
‘60 ವರ್ಷ ವಯಸ್ಸು ಆಗಿದೆ ಎಂದು ಬಿಸಿಯೂಟ ನೌಕರರನ್ನು ಕೆಲಸದಿಂದ ಬಿಡುಗಡೆ ಮಾಡಲಾಗಿದೆ. ಅವರಿಗೆ ನಿವೃತ್ತಿ ವೇತನ ಅಥವಾ ಇಡಿಗಂಟು ಬಿಡುಗಡೆ ಮಾಡಬೇಕು. ಬಜೆಟ್‌ನಲ್ಲಿ ಬಿಸಿಯೂಟ ನೌಕರರಿಗೆ ಹೆಚ್ಚಳ ಮಾಡಿದ ₹ 1000 ವೇತನವನ್ನು ಈ ವರ್ಷದ ಜನವರಿಯಿಂದ ಅನ್ವಯಿಸಿ ಜಾರಿ ಮಾಡಬೇಕು. ಬಿಸಿಯೂಟ ಯೋಜನೆಯನ್ನು ಕಾಯಂ ಮಾಡಬೇಕು’ ಎಂದು ಒತ್ತಾಯಿಸಿದರು.
‘ಕೇಂದ್ರೀಕೃತ ಅಡುಗೆ ಕೇಂದ್ರ ಮಾದರಿ ಬೇಡ. ಖಾಸಗಿ ಸಂಸ್ಥೆಗಳಿಗೆ ಯಾವುದೇ ಜವಾಬ್ದಾರಿ ಕೊಡಬಾರದು. ರಾಜ್ಯದಲ್ಲಿ ಶಿಕ್ಷಣ ಇಲಾಖೆಯ ಶಿಫಾರಸ್ಸಿನಂತೆ ₹ 6 ಸಾವಿರ ಹಾಗೂ ₹ 5 ಸಾವಿರ ವೇತನ ಹೆಚ್ಚಳ ಮಾಡಬೇಕು. ಬೇಸಿಗೆ ಮತ್ತು ದಸರಾ ರಜೆಗಳ ವೇತನವನ್ನು ಕಟ್ಟಿಕೊಡಬೇಕು. ಶಾಲಾ ಅವಧಿ ನಂತರ ನರೇಗಾ ಯೋಜನೆಯಡಿ ಶಾಲಾ ಕೈ ತೋಟದ ಕೆಲಸ ನೀಡಿ ನರೇಗಾ ಯೋಜನೆಯಿಂದ ವೇತನ ನೀಡುವಂತಾಗಬೇಕು’ ಎಂದು ತಿಳಿಸಿದರು.
‘ಬಿಸಿಯೂಟ ನೌಕರರನ್ನು ಕಾಯಂ ಮಾಡಿ ಶಾಸನಾತ್ಮಕ ಸವಲತ್ತುಗಳನ್ನು ಜಾರಿ ಮಾಡಬೇಕು. ಪ್ರತಿ ತಿಂಗಳು 5ನೇ ತಾರೀಖಿನ ಒಳಗೆ ವೇತನ ಪಾವತಿಯಾಗಬೇಕು. ಶಿಕ್ಷಣ ಇಲಾಖೆಯಡಿಯಲ್ಲಿಯೇ ಮೇಲ್ವಿಚಾರಣೆ ನಡೆಸಬೇಕು. ಪ್ರತಿ ಶಾಲೆಯಲ್ಲಿ ಕನಿಷ್ಠ ಇಬ್ಬರು ಅಡುಗೆಯವರು ಇರಬೇಕು. ಮಕ್ಕಳ ಅಪೌಷ್ಟಿಕತೆ ತಡೆ ಹಿಡಿಯಲು ಅನುಕೂಲವಾಗುವ ಮೊಟ್ಟೆ, ಬಾಳೆಹಣ್ಣುಗಳನ್ನು ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಬೇಕು’ ಎಂದು ಆಗ್ರಹಿಸಿದರು.
ಸಂಘದ ಜಿಲ್ಲಾ ಅಧ್ಯಕ್ಷೆ ಶಿವಮ್ಮ, ಪ್ರಧಾನ ಕಾರ್ಯದರ್ಶಿ ಪದ್ಮ, ಖಜಾಂಚಿ ತಾರಾ ಕುಮಾರಿ, ಪದಾಧಿಕಾರಿಗಳಾದ ರಾಜಮ್ಮ, ಶಾಂತಮ್ಮ, ಮಹದೇವಮ್ಮ, ಮಂಜುಳಾ, ಲೀಲಾವತಿ, ಗೀತಾ, ರತ್ನಮ್ಮ, ಅನಿತಾ ಪ್ರತಿಭಟನೆಯಲ್ಲಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.