ಶುಕ್ರವಾರ, ಆಗಸ್ಟ್ 12, 2022
21 °C

ಕೊಳ್ಳೇಗಾಲ: ಕಾಡಿನಿಂದ ಗಂಧದ ಮರ ಕಡಿದು ಮಾರಾಟ ಮಾಡುತ್ತಿದ್ದ ವ್ಯಕ್ತಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹನೂರು: ಕೊಳ್ಳೇಗಾಲ ಹಾಗೂ ಹನೂರು ತಾಲ್ಲೂಕಿನ‌ ಅರಣ್ಯದಲ್ಲಿ ಶ್ರೀಗಂಧದ ಮರಗಳನ್ನು ಕಡಿದು, ತುಂಡು ಮಾಡಿ ಮಾರಾಟ ಮಾಡುತ್ತಿದ್ದ ತಾಲ್ಲೂಕಿನ ಕೆ.ಕೆ.ಡ್ಯಾಂನ ನಿವಾಸಿ ಮಾದೇವ (30) ಎಂಬುವವರನ್ನು ಮಲೆ ಮಹದೇಶ್ವರ ವನ್ಯಧಾಮದ ಅಧಿಕಾರಿಗಳು ಬಂಧಿಸಿದ್ದಾರೆ. ಆರೋಪಿ ಬಳಿಯಿಂದ 16 ಕೆಜಿಗಳಷ್ಟು ಗಂಧದ ತುಂಡು ಹಾಗೂ ಚೆಕ್ಕೆಗಳನ್ನು ವಶಪಡಿಸಿಕೊಳ್ಳಲಾಗಿದೆ. 

ನಾಲ್ವರು ಆರೋಪಿಗಳು ಈ ಪ್ರಕರಣದಲ್ಲಿ ಭಾಗಿಯಾಗಿದ್ದು, ಮೂವರು ಪರಾರಿಯಾಗಿದ್ದಾರೆ. ಅವರ ಪತ್ತೆಗಾಗಿ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ. 

ಮಲೆ ಮಹದೇಶ್ವರ ವನ್ಯಧಾಮದ ಪಿ.ಜಿ.ಪಾಳ್ಯ ವಲಯದ ಮಾರ್ಗವಾಗಿ ಶ್ರೀಗಂಧ ತುಂಡುಗಳನ್ನು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕುಂಡಲು ಅವರ ಮಾರ್ಗದರ್ಶನದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವನಿತಾ ಆರ್‌. ಹಾಗೂ ವಲಯ ಅರಣ್ಯ ಅಧಿಕಾರಿ ಸೈಯದ್‌ಸಾಬ್‌ ನದಾಫ್‌ ನೇತೃತ್ವದ ತಂಡ ದಿಢೀರ್‌ ಕಾರ್ಯಾಚರಣೆ ‌ನಡೆಸಿದೆ. ಈ ವೇಳೆ ಮಾದೇವ ಸಿಕ್ಕಿ ಬಿದ್ದರು. ಇನ್ನುಳಿದ ಮೂವರು ಆರೋಪಿಗಳಾದ ಕೆ.ಕೆ.ಡ್ಯಾಂನ ಕುಂಬೇಗೌಡ (60), ತಾಲ್ಲೂಕಿನ ಕಂಚಗಳ್ಳಿ ಗ್ರಾಮದ ರಂಗ (30), ಹಾಗೂ ದೊಡ್ಡಿಂದುವಾಡಿಯ ಅಬ್ದುಲ್ ಜಾಬೀರ್‌ ಅಲಿಯಾಸ್‌‌ (25) ತಪ್ಪಿಸಿಕೊಂಡರು. 

ಐದಾರು ವರ್ಷಗಳಿಂದ ಕೃತ್ಯ: ಈ ನಾಲ್ವರ ತಂಡ ಐದಾರು ವರ್ಷಗಳಿಂದ ಅರಣ್ಯ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಂಡಿದೆ ಎಂಬ ಸಂಗತಿ ತನಿಖೆಯಿಂದ ಗೊತ್ತಾಗಿದೆ.  

ಕೊಳ್ಳೇಗಾಲ, ಹನೂರಿನ ಅರಣ್ಯಗಳಿಗೆ ನುಗ್ಗಿ ಗಂಧದ ಮರಗಳನ್ನು ಪತ್ತೆ ಹಚ್ಚಿ, ಅವುಗಳನ್ನು ಕಡಿದು, ಅಲ್ಲಿಯೇ ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿ ಕಾಲು ನಡಿಗೆಯಲ್ಲೇ ಸಂಚರಿಸಿ ಮಾರಾಟ ಮಾಡುವುದನ್ನು ಇವರು ಅಭ್ಯಾಸ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಆರೋಪಿಗಳ ವಿರುದ್ಧ ಕೆಲವು ಸಮಯದಿಂದೀಚೆಗೆ ಶ್ರೀಗಂಧದ ಮರಗಳ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದವು. ಕೆಲವು ತಿಂಗಳ ಹಿಂದೆ ತಾಳಬೆಟ್ಟದಿಂದ ಮಹದೇಶ್ವರ ಬೆಟ್ಟಕ್ಕೆ ಹೋಗುವ ರಸ್ತೆಯ ಬದಿಯಲ್ಲೇ ಎಂಟಕ್ಕೂ ಹೆಚ್ಚು ಗಂಧದ ಮರಗಳನ್ನು ಕಡಿಯಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು