ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಗೋಳ ಕೌತುಕಕ್ಕೆ ಸಾವಿರಾರು ಮಂದಿ ಸಾಕ್ಷಿ

ಮೋಡಗಳ ಆಟದ ನಡುವೆ ಶೇ 93ರಷ್ಟು ಗ್ರಹಣ ಗೋಚರ, ಮಂಗಲದ ಬಾನಿನಲ್ಲಿ ಮೂಡಿದ ಕಂಕಣ ಸೂರ್ಯ
Last Updated 27 ಡಿಸೆಂಬರ್ 2019, 10:23 IST
ಅಕ್ಷರ ಗಾತ್ರ

ಚಾಮರಾಜನಗರ: ಖಗೋಳದ ಕೌತುಕಗಳಲ್ಲಿ ಒಂದಾದ ಕಂಕಣ ಸೂರ್ಯಗ್ರಹಣವನ್ನು ಜಿಲ್ಲೆಯಾದ್ಯಂತ ಮಕ್ಕಳು ಹಾಗೂ ಗಗನ ಕುತೂಹಲಿಗಳು ಕಣ್ತುಂಬಿಕೊಂಡರು.

ಸಾಂಪ್ರದಾಯಿಕವಾಗಿ ಗ್ರಹಣ ಸಂದರ್ಭದಲ್ಲಿ ಮನೆಗಳಲ್ಲಿ ಹಲವು ಆಚರಣೆಗಳನ್ನು ಮಾಡಿದ ಜನರು ಕೂಡ, ಸುರಕ್ಷಿತ ಸಾಧನಗಳನ್ನು ಬಳಸಿ ಸೂರ್ಯಗ್ರಹಣವನ್ನು ಕಣ್ತುಂಬಿಕೊಂಡರು.

ಜಿಲ್ಲೆಯಲ್ಲಿ ಶೇ 93ರಷ್ಟು ಪ್ರಮಾಣದಲ್ಲಿ ಗ್ರಹಣ ಗೋಚರಿಸಿತು. ಗುಂಡ್ಲುಪೇಟೆಯ ಮಂಗಲ ಗ್ರಾಮದಲ್ಲಿ ಹೆಚ್ಚು ಪ್ರಮಾಣದ ಗ್ರಹಣ (ಶೇ 98ರಷ್ಟು) ಗೋಚರಿಸಿತು. ಬೆಳಿಗ್ಗೆ 9.25ರ ಹೊತ್ತಿಗೆ ಕಪ್ಪು ಬಣ್ಣದ ವೃತ್ತದ ಪರಿಧಿಯಲ್ಲಿ ಬಳೆಯ ಮಾದರಿಯಲ್ಲಿ ಸೂರ್ಯ ಪ್ರಜ್ವಲಿಸುವುದು ಸ್ಪಷ್ಟವಾಗಿ ಕಂಡಿತು. ನೂರಾರು ಜನರು ಇದಕ್ಕೆ ಸಾಕ್ಷಿಯಾದರು. ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದವರು ಕೂಡ ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿ ಅಪರೂ‍ಪದ ಖಗೋಳದ ವಿಸ್ಮಯವನ್ನು ವೀಕ್ಷಿಸಿದರು.

ನಿಗದಿಯಂತೆ ಬೆಳಿಗ್ಗೆ 8.05ಕ್ಕೆ ಆರಂಭವಾದ ಗ್ರಹಣ 9.25ಕ್ಕೆ ಗರಿಷ್ಠ ಮಟ್ಟ ತಲುಪಿ 11.04ಕ್ಕೆ ಮುಕ್ತಾಯ ಕಂಡಿತು. ಆಗಸದಲ್ಲಿ ಓಡಾಡುತ್ತಿದ್ದ ಮೋಡಗಳು ಆಗಾಗ ವೀಕ್ಷಣೆಗೆ ಅಡ್ಡಿ ಪಡಿಸಿದವು. ಹಾಗಾಗಿದ್ದರೂ, ವೀಕ್ಷಣೆಗೆ ದೊಡ್ಡ ಮಟ್ಟದಲ್ಲಿ ಅಡಚಣೆಯಾಗಲಿಲ್ಲ.

ವೀಕ್ಷಣೆಗೆ ವ್ಯವಸ್ಥೆ: ಜಿಲ್ಲೆಯ ವಿವಿಧ ಕಡೆಗಳಲ್ಲಿ ಹಾಗೂ ಸರ್ಕಾರಿ ಶಾಲೆಗಳಲ್ಲಿ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ಸೌರ ಕನ್ನಡಕ ಧರಿಸಿ ಗ್ರಹಣ ವೀಕ್ಷಿಸಿದರು.

ಮಕ್ಕಳ ಜಾತ್ರೆ: ಜಿಲ್ಲಾ ಕೇಂದ್ರ ಚಾಮರಾಜನಗರದಲ್ಲಿ ಎರಡು ಕಡೆಗಳಲ್ಲಿ ಕಂಕಣ ಗ್ರಹಣ ವೀಕ್ಷಣೆಗೆ ಸಿದ್ಧತೆ ಮಾಡಲಾಗಿತ್ತು. ದೀನಬಂಧು ಶಾಲೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ವತಿಯಿಂದ ಗ್ರ್ಯಾವಿಟಿ ಸೈನ್ಸ್‌ ಫೌಂಡೇಷನ್‌ ಸಹಭಾಗಿತ್ವದಲ್ಲಿ ಜೆಎಸ್‌ಎಸ್‌ ಬಾಲಕಿಯರ ಪ್ರೌಢಶಾಲೆಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಎರಡೂ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ಕೊಟ್ಟ ನೂರಾರು ಮಕ್ಕಳು ಹಾಗೂ ಸಾರ್ವಜನಿಕರು ಖಗೋಳ ಕೌತುಕವನ್ನು ಕಂಡು ಸಂಭ್ರಮಿಸಿದರು.

ಜೆಎಸ್‌ಎಸ್‌ ಶಾಲೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಕೂಡ ಸೌರ ಕನ್ನಡಕ ಧರಿಸಿ ಗ್ರಹಣ ವೀಕ್ಷಿಸಿದರು.

ಪ್ರೊ.ಜಿ.ಎಸ್‌.ಜ‌ಯದೇವ ನೇತೃತ್ವದ ದೀನಬಂಧು ಶಾಲೆಯಲ್ಲಿ ಅಕ್ಷರಶಃ ಜಾತ್ರೆಯ ವಾತಾವರಣ ಇತ್ತು. ಶಾಲೆಯ ಮಕ್ಕಳು, ಬೇರೆ ಶಾಲೆಗಳ ಮಕ್ಕಳು, ಪೋಷಕರು ಹಾಗೂ ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಬಂದು ಗ್ರಹಣವನ್ನು ಕಣ್ತುಂಬಿಕೊಂಡರು.

ದೂರದರ್ಶಕದ ಮೂಲಕ ಸೂರ್ಯನ ಪ್ರತಿಬಿಂಬವನ್ನು ಪರದೆಯಲ್ಲಿ ಮೂಡಿಸುವ ಮೂಲಕ ಗ್ರಹಣವನ್ನು ಪ್ರದರ್ಶಿಸಲಾಯಿತು. ಸೌರ ಕನ್ನಡಕಗಳನ್ನು ಕೂಡ ಜನರಿಗೆ ವಿತರಿಸಲಾಯಿತು. ಸೂರ್ಯಗ್ರಹಣ ಹೇಗೆ ಉಂಟಾಗುತ್ತದೆ, ಅದರ ಪರಿಣಾಮಗಳು ಏನು ಎಂಬುದನ್ನು ಚಿತ್ರ ಸಮೇತ ವಿವರಿಸಿದ್ದ ಭಿತ್ತಿಪತ್ರಗಳನ್ನು ಕಾಂಪೌಂಡ್‌ಗೆ ಅಂಟಿಸಲಾಗಿತ್ತು. ಮಕ್ಕಳು ಕುತೂಹಲದಿಂದ ಅವುಗಳನ್ನು ನೋಡುತ್ತಿದ್ದರು.

ಸಾಮೂಹಿಕ ಉಪಾಹಾರ: ಗ್ರಹಣದ ಸಂದರ್ಭದಲ್ಲಿ ಮಕ್ಕಳು, ಪೋಷಕರು ಹಾಗೂ ಬೋಧಕರು ಬಯಲಲ್ಲೇ ಸಾಮೂಹಿಕವಾಗಿ ಉಪಾಹಾರ ಸೇವಿಸುವ ಮೂಲಕ ಜನರಲ್ಲಿರುವ ಮೌಢ್ಯವನ್ನು ದೂರ ಸರಿಸಲು ಪ್ರಯತ್ನಿಸಿದರು.

ಕೆಲವು ಶಾಲೆಗಳಿಗೆ ರಜೆ: ಗ್ರಹಣದ ನಿಮಿತ್ತವಾಗಿ ಕೆಲವು ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಸಣ್ಣ ಮಕ್ಕಳು ಬರಿಗಣ್ಣಿನಲ್ಲಿ ಗ್ರಹಣ ವೀಕ್ಷಿಸುವ ಸಾಧ್ಯತೆ ಇರುವುದರಿಂದ ಅವರನ್ನು ಶಾಲೆಗೆ ಕಳುಹಿಸದಂತೆ ಸೂಚಿಸಲಾಗಿತ್ತು.

ಸರ್ಕಾರಿ ಶಾಲೆಗಳಲ್ಲಿ ಎಂದಿನಂತೆ ತರಗತಿಗಳು ನಡೆದವು. ಕಂಕಣ ಸೂರ್ಯಗ್ರಹಣದ ಬಗ್ಗೆ ಮಕ್ಕಳಿಗೆ ವಿವರಿಸುವ ಪ್ರಯತ್ನವನ್ನು ವಿಜ್ಞಾನ ಶಿಕ್ಷಕರು ಮಾಡಿದರು. ಸೌರ ಕನ್ನಡಕಗಳ ಮೂಲಕ ಮಕ್ಕಳಿಗೆ ಗ್ರಹಣ ವೀಕ್ಷಿಸಲು ಅವಕಾಶವನ್ನೂ ನೀಡಲಾಗಿತ್ತು.

ಅಘೋಷಿತ ಬಂದ್‌ ಪರಿಸ್ಥಿತಿ

ಗ್ರಹಣ ಆರಂಭಗೊಂಡು, ಮುಕ್ತಾಯದವರೆಗೂ ಜಿಲ್ಲೆಯಾದ್ಯಂತ ಅಘೋಷಿತ ಬಂದ್‌ ಪರಿಸ್ಥಿತಿ ಇತ್ತು.

ಜನರು ಮನೆಯಿಂದ ಹೊರಗಡೆ ಬರಲಿಲ್ಲ. ನಗರ, ಪಟ್ಟಣ ಪ್ರದೇಶಗಳಲ್ಲಿ ಜನ, ವಾಹನಗಳ ಸಂಚಾರ ವಿರಳವಾಗಿತ್ತು. ರಸ್ತೆಗಳೆಲ್ಲ ಬಿಕೋ ಎನ್ನುತ್ತಿತ್ತು. ಜಿಲ್ಲಾ ಕೇಂದ್ರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚು ಜನರು ಇರಲಿಲ್ಲ. ಬಸ್‌ಗಳೆಲ್ಲ ಖಾಲಿ ಖಾಲಿಯಾಗಿಯೇ ಸಂಚರಿಸಿದವು. ಸರ್ಕಾರಿ ಕಚೇರಿ, ಸಾರ್ವಜನಿಕ ಆಸ್ಪತ್ರೆ, ಬ್ಯಾಂಕ್‌ಗಳಲ್ಲಿಜನಸಂದಣಿ ಕಡಿಮೆ ಇತ್ತು.

ಬಹುತೇಕ ಅಂಗಡಿಗಳು ಬಂದ್‌ ಆಗಿದ್ದವು.ಮಧ್ಯಾಹ್ನದ ನಂತರವಷ್ಟೇ ಕೆಲವರು ಅಂಗಡಿಗಳನ್ನು ತೆರೆದರು. ದಿನಸಿ ಅಂಗಡಿಗಳು, ಹೋಟೆಲ್‌ಗಳು ಎಂದಿನಂತೆ ತೆರೆದಿದ್ದವು. ಬೆಳಿಗ್ಗೆ 8ರಿಂದ 11.15ರವರೆಗೆ ಹೋಟೆಲ್‌ಗಳು ಖಾಲಿ ಹೊಡೆದವು.

8 ಗಂಟೆಗೂ ಮೊದಲು ಎಂದಿನಂತೆ ವ್ಯಾಪಾರ ನಡೆಯಿತು. ಆ ಬಳಿಕ ತುಂಬಾ ಕಡಿಮೆಯಾಯಿತು. 11.10ರ ನಂತರ ಒಬ್ಬೊಬ್ಬರೇ ಗ್ರಾಹಕರು ಬರಲು ಆರಂಭಿಸಿದರು ಎಂದು ಹೋಟೆಲ್‌ ಮಾಲೀಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT