ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲುಪೇಟೆ ಪಟ್ಟಣದ ಸಂಚಾರ ಸಂಕಷ್ಟಕ್ಕೆ ಮುಕ್ತಿ ಎಂದು?

ಹೆಚ್ಚಿದ ವಾಹನ ದಟ್ಟಣೆ, ನಿಯಮ ಉಲ್ಲಂಘಿಸುವ ವಾಹನ ಸವಾರರು, ಅಪಘಾತದ ಅಪಾಯ
Last Updated 17 ಜನವರಿ 2021, 19:30 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಎರಡು ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಹಾದುಹೋಗಿರುವ ಗುಂಡ್ಲುಪೇಟೆ ಪಟ್ಟಣದಲ್ಲಿ ಈಗ ಸಂಚಾರ ಸಮಸ್ಯೆ ಎದ್ದು ಕಾಣಿಸುತ್ತಿದೆ.

ರಸ್ತೆಯಲ್ಲಿ ಎಲ್ಲೆಂದರಲ್ಲಿ ದ್ವಿಚಕ್ರ ಹಾಗೂ ಇತರ ವಾಹನಗಳ ನಿಲುಗಡೆ, ಅಡ್ಡಾದಿಡ್ಡಿ ಚಾಲನೆ ಮಾಡುವ ಆಟೊಗಳು, ರಸ್ತೆ ಮಧ್ಯೆಯೇ ನಿಲ್ಲುವ ಸರಕು ವಾಹನಗಳು, ಬಿಡಾಡಿ ಜಾನುವಾರುಗಳು... ಇದ್ಯಾವುದಕ್ಕೂ ಪಟ್ಟಣದಲ್ಲಿ ಕಡಿವಾಣ ಇಲ್ಲದಂತಾಗಿದೆ.

ಶಾಲಾ ಕಾಲೇಜುಗಳು ಆರಂಭವಾಗಿರುವುದರಿಂದ ಪಟ್ಟಣದಲ್ಲಿ ಈಗ ಬೆಳಿಗ್ಗೆ ಮತ್ತು ಸಂಜೆ ವಾಹನಗಳ ಸಂಖ್ಯೆ ದುಪ್ಪಟ್ಟು ಆಗುತ್ತದೆ. ಪಟ್ಟಣದ ಬಸ್ ನಿಲ್ದಾಣದ ಮುಂಭಾಗ, ಎಂಡಿಸಿಸಿ ಬ್ಯಾಂಕ್ ವೃತ್ತ, ಮಡಹಳ್ಳಿ ವೃತ್ತ ಮತ್ತು ದೇವರಾಜು ಅರಸು ಕ್ರೀಡಾಂಗಣದ ಎದುರು ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸುವ ಪ್ರವೃತ್ತಿ ಬೆಳೆಯುತ್ತಿದೆ.

ಬ್ಯಾಂಕ್ ಮತ್ತು ಎಟಿಎಂಗಳು ಇರುವ ರಸ್ತೆಗಳಲ್ಲಂತೂ ಸಂಚಾರಿ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ. ಪೊಲೀಸರು ಕೂಡ ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂಬುದು ಪಟ್ಟಣ ವಾಸಿಗಳ ಆರೋಪ.

ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಇರುವ ಅಂಗಡಿಗಳಿಗೆ ತೆರಳುವ ಸಲುವಾಗಿ ಕಾರು, ಬೈಕ್‌ಗಳನ್ನು ನಿಲ್ಲಿಸಿ ಹೋಗುತ್ತಾರೆ. ಹೀಗೆ ನಿಲ್ಲುವುದರಿಂದ ಈ ರಸ್ತೆಯಲ್ಲಿ ಸಂಚಾರ ಮಾಡುವ ಭಾರಿ ವಾಹನಗಳಿಗೆ ತೊಂದರೆಯಾಗುತ್ತದೆ. ಹೆದ್ದಾರಿಯ ರಸ್ತೆಯಲ್ಲಿ ಏಕಮುಖ ಸಂಚಾರ ಮಾಡುವುದು ಹೆಚ್ಚಾಗಿದೆ. ಇದೇ ಕಾರಣಕ್ಕಾಗಿ ಆಗಾಗ ಅಪಘಾತಗಳೂ ಸಂಭವಿಸುತ್ತವೆ.

ಬಿಡಾಡಿ ದನಗಳ ಹಾವಳಿಯಿಂದಲೂ ರಸ್ತೆಯಲ್ಲಿ ಸಂಚಾರಕ್ಕೆ ತೊಂದರೆಯಾಗಿದೆ.

‘ಕಳೆದ ವರ್ಷ ಪೊಲೀಸರು ಹಾಗೂ ಪುರಸಭೆಯವರು ಜಂಟಿ ಕಾರ್ಯಾಚರಣೆ ಮಾಡಿ ಹಸುಗಳ ಮಾಲೀಕರಿಗೆ ದಂಡ ವಿಧಿಸುವ ಎಚ್ಚರಿಕೆ ನೀಡಿ, ಬಿಡಾಡಿ ದನಗಳನ್ನು ವಶಕ್ಕೆ ಪಡೆದಿದ್ದರು. ಹಾಗಿದ್ದರೂ ಈಗ ಸಮಸ್ಯೆ ಪರಿಹಾರವಾಗಿಲ್ಲ. ಜಾನುವಾರುಗಳು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಓಡಾಡುವುದರಿಂದ ವಾಹನ ಸಂಚಾರಕ್ಕೆ ಅಡಚಣೆಯುಂಟಾಗುತ್ತಿದೆ’ ಎಂದು ಹಿರಿಯ ನಾಗರಿಕ ರಾಜೇಶ್ ಭಟ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಹೆದ್ದಾರಿ ಅಲ್ಲದೇ, ಪಟ್ಟಣದ ಪ್ರಮುಖ ರಸ್ತೆ ಹಾಗೂ ಇತರ ರಸ್ತೆಗಳಲ್ಲೂ ವಾಹನ ದಟ್ಟಣೆ ದಿನೇ ದಿನೇ ಹೆಚ್ಚಾಗುತ್ತಿದೆ. ಸಂಜೆಯ ಸಮಯದಲ್ಲಿ ದಟ್ಟಣೆ ತುಂಬಾ ಜಾಸ್ತಿ ಇರುತ್ತದೆ.ನೋ ಪಾರ್ಕಿಂಗ್ ನಾಮಫಲಕಗಳು ಇದ್ದರೂ ವಾಹನ ನಿಲ್ಲಿಸುತ್ತಾರೆ.

ಸಿಗ್ನಲ್ ಅಳವಡಿಸಲು ಒತ್ತಾಯ

‘ಪಟ್ಟಣದ ಪ್ರಮುಖ ವೃತ್ತ ಸೇರಿದಂತೆ ಎಲ್ಲೂ ಸಂಚಾರ ಸಿಗ್ನಲ್ ಇಲ್ಲ. ಚೆಕ್‌ಪೋಸ್ಟ್‌ ಬಳಿ ಹಾಕಲಾಗಿರುವ ಸಿಗ್ನಲ್‌ ದೀಪಗಳು ಕೆಟ್ಟು ನಿಂತಿದೆ. ಇದರಿಂದಾಗಿ ಸಂಚಾರಕ್ಕೆ ತೊಂದರೆಯಾಗುತ್ತದೆ. ಬಸ್ ನಿಲ್ದಾಣದ ಮುಂಭಾಗ, ತಾಲ್ಲೂಕು ಕಚೇರಿ ಮುಂಭಾಗ, ಚೆಕ್‌ಪೋಸ್ಟ್‌ ವೃತ್ತದ ಬಳಿ ಸಿಗ್ನಲ್ ಅಳವಡಿಸಬೇಕು’ ಎಂದು ಕರ್ನಾಟಕ ಕಾವಲು ಪಡೆ ತಾಲ್ಲೂಕು ಅಧ್ಯಕ್ಷ ಅಬ್ದುಲ್ ಮಲಿಕ್ ಒತ್ತಾಯಿಸಿದರು.

ನಿಯಮ ಉಲ್ಲಂಘಿಸಿದವರಿಗೆ ದಂಡ

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸಬ್‌ ಇನ್‌ಸ್ಪೆಕ್ಟರ್‌ ರಾಜೇಂದ್ರ ಅವರು, ‘ಪಟ್ಟಣದಲ್ಲಿ ಕೆಲ ಕಡೆ ಕಾಮಗಾರಿ ನಡೆಯುತ್ತಿರುವುದರಿಂದ ತೊಂದರೆಯಾಗುತ್ತಿದೆ. ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜನರಲ್ಲಿ ಸದಾ ಜಾಗೃತಿ ಮೂಡಿಸಲಾಗುತ್ತಿದೆ. ನಿಯಮಗಳನ್ನು ಉಲ್ಲಂಘಿಸಿದವರಿಗೆ ದಂಡ ಪ್ರಯೋಗ ಮಾಡಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ’ ಎಂದು ಹೇಳಿದರು.

ಸಂಚಾರ ಠಾಣೆ ಸ್ಥಾಪಿಸಲು ಒತ್ತಾಯ

ಗುಂಡ್ಲುಪೇಟೆ ಪಟ್ಟಣ ವೇಗವಾಗಿ ಬೆಳೆಯುತ್ತಿದ್ದು, ತಮಿಳುನಾಡಿನ ಊಟಿ ಹಾಗೂ ಕೇರಳದ ವಯನಾಡಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಪಟ್ಟಣದಲ್ಲೇ ಹಾದುಹೋಗುವುದರಿಂದ ಅಂತರರಾಜ್ಯ ವಾಹನಗಳು ಹಾಗೂ ಪ್ರವಾಸಿಗರ ಸಂಚಾರ ಹೆಚ್ಚಾಗಿರುವ ಕಾರಣಕ್ಕೂ ವಾಹನಗಳ ದಟ್ಟಣೆ ಹೆಚ್ಚಿರುತ್ತದೆ. ಹಾಗಾಗಿ, ಪಟ್ಟಣದಲ್ಲಿ ಸಂಚಾರ ಪೊಲೀಸ್‌ ಠಾಣೆಯ ಅಗತ್ಯವಿದೆ ಎಂಬುದು ಸಾರ್ವಜನಿಕರ ಒತ್ತಾಯ.

ಪಟ್ಟಣದಲ್ಲಿ ಸಂಚಾರ ನಿಯಂತ್ರಣಕ್ಕೆ ಪ್ರತ್ಯೇಕ ಪೊಲೀಸರು ಇಲ್ಲ. ಇರುವ ಪೊಲೀಸ್‌ ಸಿಬ್ಬಂದಿ ಕೆಲವು ಕಡೆಗಳಲ್ಲಿ ಕಾರ್ಯನಿರ್ವಹಿಸುತ್ತಾರೆ.

‘ಬೆಳಿಗ್ಗೆ ಮತ್ತು ಸಂಜೆಯ ಹೊತ್ತು ವಾಹನಗಳ ಸಂಚಾರ ಅಧಿಕವಾಗಿದ್ದ ಸಂದರ್ಭದಲ್ಲಿ ಪೊಲೀಸರು ಇಲ್ಲದಿದ್ದರೆ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಹಿರಿಯ ನಾಗರಿಕರಿಗೆ ತೊಂದರೆಯಾಗುತ್ತದೆ. ಸಂಚಾರ ನಿರ್ವಹಿಸುವುದಕ್ಕಾಗಿ ಪ್ರತ್ಯೇಕ ಠಾಣೆ ಇದ್ದರೆ ಅನುಕೂಲವಾಗುತ್ತದೆ’ ಎಂಬುದು ಜನರ ಒತ್ತಾಯ.

ಜನರು ಏನು ಹೇಳುತ್ತಾರೆ?

ಬೆಳಿಗ್ಗೆ ಹಾಗೂ ಸಂಜೆ ಸಮಯದಲ್ಲಿ ವಾಹನಗಳು ಹೆಚ್ಚಿರುವುದರಿಂದ ವಿದ್ಯಾರ್ಥಿಗಳಿಗೆ ಮತ್ತು ವಯಸ್ಸಾದವರು ಸಂಚಾರ ಮಾಡುವುದಕ್ಕೆ ತೊಂದರೆಯಾಗುತ್ತದೆ. ಪೊಲೀಸರು ವಾಹನ ದಟ್ಟಣೆ ಇರುವ ಕಡೆಗಳಲ್ಲಿ ಇದ್ದು ನಿಗಾ ವಹಿಸಬೇಕು.

– ಜಿ.ಆರ್ ರವಿ, ಗುಂಡ್ಲುಪೇಟೆ

ಕಾಲೇಜು ಆರಂಭವಾಗಿರುವುದರಿಂದ ವಿದ್ಯಾರ್ಥಿನಿಯರಿಗೆ ಕೀಟಲೆ ಮಾಡುವ ಸಲುವಾಗಿ ಪಡ್ಡೆ ಹುಡುಗರು ದ್ವಿಚಕ್ರ ವಾಹನಗಳನ್ನು ವೇಗವಾಗಿ ಓಡಿಸುವುದು, ವೀಲಿಂಗ್‌ ಮತ್ತಿತರ ದುಸ್ಸಾಹಸಕ್ಕೆ ಕೈಹಾಕುತ್ತಿದ್ದಾರೆ. ಇವುಗಳಿಗೆ ಕಡಿವಾಣ ಹಾಕಬೇಕು.

–ಆನಂದ, ಬೆಂಡರವಾಡಿ

ಶಾಲಾ ಕಾಲೇಜುಗಳಲ್ಲಿ ಸಮಯದಲ್ಲಿ ಪೊಲೀಸರು ಗಸ್ತು ತಿರುಗಬೇಕು. ವೇಗವಾಗಿ ವಾಹನಗಳನ್ನು ಚಾಲನೆ ಮಾಡುವವರ ಮೇಲೆ ಪೊಲೀಸರು ಕಣ್ಣಿಡಬೇಕು

– ಅರ್ಜುನ್, ಗುಂಡ್ಲುಪೇಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT