ಭಾನುವಾರ, ಜೂನ್ 26, 2022
22 °C
ಕಾಶ್ಮೀರ ಫೈಲ್ಸ್‌ ಸಿನಿಮಾ ಬಗ್ಗೆ ವಸತಿ ಸಚಿವರ ಪ್ರತಿಕ್ರಿಯೆ

ಎಲ್ಲ ಮುಸ್ಲಿಮರು ಕೆಟ್ಟವರಲ್ಲ, ಹಿಂದೂಗಳೆಲ್ಲರೂ ಒಳ್ಳೆಯವರಲ್ಲ: ವಿ.ಸೋಮಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ''ಎಲ್ಲ ಮುಸ್ಲಿಮರು‌ ಕೆಟ್ಟವರಲ್ಲ, ಹಿಂದೂಗಳೆಲ್ಲರೂ ಒಳ್ಳೆಯವರಲ್ಲ. ಕಾಶ್ಮೀರ‌ ಫೈಲ್ಸ್ ಚಿತ್ರವನ್ನು ಮುಸ್ಲಿಮರೂ ನೋಡ್ತಾರೆ. ಇತಿಹಾಸದಲ್ಲಿ ನಡೆದ ಘಟನೆ ಮುಂದೆ ಪುನರಾವರ್ತನೆಯಾಗಬಾರದು ಎಂಬ ಉದ್ದೇಶದಿಂದ ಸಿನಿಮಾ ಬಂದಿದೆ'' ಎಂದು ವಸತಿ, ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಹೇಳಿದರು.

ಕೊಳ್ಳೇಗಾಲದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ''ಕಾಶ್ಮೀರಕ್ಕೆ ನಾನೂ ಹಲವು ಬಾರಿ ಹೋಗಿದ್ದೇನೆ. ಅದು ಹೇಗಿದೆ ಎಂಬುದು ಗೊತ್ತಿದೆ. ಹಿಂದೆ ನಡೆದ ವಾಸ್ತವವನ್ನು ಜನರ ಮುಂದೆ ಸಿನಿಮಾ ಇಟ್ಟಿದೆ. ಮುಂದೆ ಇಂತಹದ್ದು ನಡೆಯಬಾರದು ಎಂಬುದು ಉದ್ದೇಶ. ಇದರಲ್ಲಿ ಯಾರದೇ ಪ್ರಾಯೋಜಕತ್ವ ಇಲ್ಲ'' ಎಂದರು.

ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆಗೊಳಿಸುವ ಸರ್ಕಾರದ ಚಿಂತನೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸೋಮಣ್ಣ ಅವರು, ''ನನಗೆ ಈ ವಿಷಯ ಗೊತ್ತಿಲ್ಲ. ಚಾಮರಾಜನಗರದ ಉಸ್ತುವಾರಿ ಕೊಟ್ಟಿದ್ದಾರೆ. ಜಿಲ್ಲೆಯ ಅಭಿವೃದ್ಧಿಗೆ ಮಾತ್ರ ಗಮನ ಹರಿಸುತ್ತಿದ್ದೇನೆ. ಪಠ್ಯ ಸಿದ್ಧಪಡಿಸುವುದಕ್ಕಾಗಿ ಸಮಿತಿ ಇದೆ. ಸಾಧಕ ಬಾಧಕಗಳನ್ನು ಚರ್ಚೆ ಮಾಡಿ ನಿರ್ಧರಿಸುತ್ತದೆ. ದೇಶದ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಲುಪಿಸಲು ಬೇಕಾದ ಕ್ರಮಗಳನ್ನು ಸಮಿತಿ ಕೈಗೊಳ್ಳಲಿದೆ'' ಎಂದರು.

ವಂಶರಾಜಕಾರಣದ ಬಗ್ಗೆ ಪ್ರಧಾನಿ ಮೋದಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ''ಕೆಲವರಿಗೆ ಸೀಮಿತವಾದ ರಾಜಕಾರಣದಲ್ಲಿ ಸಾಮಾನ್ಯ ಜನರಿಗೂ ಅವಕಾಶ ಇದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಚಿಂತನೆ ಒಪ್ಪಬೇಕಾಗಿದ್ದೇ'' ಎಂದರು.

''ನನ್ನ ಮಗನಿಗೆ ಅದೃಷ್ಟ ಇದ್ದರೆ ಶಾಸಕ ಆಗುತ್ತಾನೆ. 6.5 ಕೋಟಿ ಜನರಲ್ಲಿ 224 ಜನರು ಮಾತ್ರ ಶಾಸಕರಾಗುವುದು. ನನ್ನ ‌ಮಗ ಶಾಸಕ ಆಗದೇ ಇದ್ದರೆ ಬೇಜಾರೇನಿಲ್ಲ'' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಆರೋಗ್ಯ ವಿಚಾರಣೆ: ಹನೂರು ತಾಲ್ಲೂಕಿನ ಪಿ.ಜಿ.ಪಾಳ್ಯದಲ್ಲಿ ಇತ್ತೀಚೆಗೆ ಸಂಭವಿಸಿದ ಬಸ್ ಅಪಘಾತದಲ್ಲಿ ಗಾಯಗೊಂಡು ಕೊಳ್ಳೇಗಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯವನ್ನು ಸೋಮಣ್ಣ ವಿಚಾರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು