ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಭರಾಟೆಯಲ್ಲಿ ಮರೆತು ಹೋದ ವಾರ್ಡ್‌ ಸಮಿತಿ ಸಭೆ

Last Updated 8 ಏಪ್ರಿಲ್ 2019, 19:53 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಸಭಾ ಚುನಾವಣೆಯ ಪ್ರಚಾರ ಭರಾಟೆಯಲ್ಲಿ ಪಾಲಿಕೆ ಸದಸ್ಯರು ತಲ್ಲೀನರಾಗಿರುವುದರಿಂದ ಹಾಗೂ ಏಪ್ರಿಲ್‌ ತಿಂಗಳ ಮೊದಲ ಶನಿವಾರವೇ ಯುಗಾದಿ ಹಬ್ಬವೂ ಇದ್ದುದರಿಂದ ಪಾಲಿಕೆ ಹೆಚ್ಚಿನ ವಾರ್ಡ್‌ಗಳಲ್ಲಿ ಅಂದು ವಾರ್ಡ್‌ ಸಮಿತಿ ಸಭೆ ನಡೆದೇ ಇಲ್ಲ.

ತಿಂಗಳ ಮೊದಲ ಶನಿವಾರವೇ ವಾರ್ಡ್‌ ಸಮಿತಿ ಸಭೆ ನಡೆಸುವಂತೆ ಪಾಲಿಕೆ ನಿರ್ಣಯ ಕೈಗೊಂಡಿದೆ. ಡಿಸೆಂಬರ್‌ ತಿಂಗಳಿನಿಂದ ಅನೇಕ ವಾರ್ಡ್‌ಗಳು ತಿಂಗಳ ಮೊದಲ ಶನಿವಾರವೇ ಸಭೆ ಏರ್ಪಡಿಸಲು ಆರಂಭಿಸಿದ್ದವು. ಅನಿವಾರ್ಯ ಕಾರಣಗಳಿಂದ ಸಭೆ ನಡೆಸಲು ಸಾಧ್ಯವಾಗದ ವಾರ್ಡ್‌ಗಳಲ್ಲಿ ಬೇರೆ ದಿನ ಸಭೆ ನಡೆಸಲಾಗುತ್ತಿತ್ತು.

‘ಈ ತಿಂಗಳು ಯುಗಾದಿ ಹಬ್ಬ ಇತ್ತು. ಸಮಿತಿಯ ಕಾರ್ಯದರ್ಶಿಗಳು ಚುನಾವಣೆಯ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ. ಸಮಿತಿ ಅಧ್ಯಕ್ಷರಾಗಿರುವ ಪಾಲಿಕೆ ಸದಸ್ಯರು ತಮ್ಮ ಪಕ್ಷದ ಪರ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ. ಹಾಗಾಗಿ ಯಾವ ವಾರ್ಡ್‌ನಲ್ಲೂ ಸಭೆ ನಡೆದಿಲ್ಲ’ ಎಂದು ವಾರ್ಡ್‌ ಸಮಿತಿ ಬಲಪಡಿಸುವ ಹೋರಾಟದಲ್ಲಿ ತೊಡಗಿರುವ ಸಿಟಿಜನ್ಸ್‌ ಫಾರ್‌ ಬೆಂಗಳೂರು ಸಂಘಟನೆಯ ಶ್ರೀನಿವಾಸ ಅಲವಿಲ್ಲಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾವು ಸುಮಾರು 145 ವಾರ್ಡ್‌ಗಳಲ್ಲಿ ಸಮಿತಿ ಸಭೆ ನಡೆದಿದೆಯೇ ಇಲ್ಲವೇ ಎಂಬ ಬಗ್ಗೆ ವಿಚಾರಿಸಿದ್ದೇವೆ. ಈ ಪೈಕಿ 100ಕ್ಕೂ ಅಧಿಕ ಸಮಿತಿಗಳ ಸದಸ್ಯರು ಸಭೆ ನಡೆಸುವುದಕ್ಕೆ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ನಮಗೆ ತಿಳಿದ ಪ್ರಕಾರ ನೀತಿ ಸಂಹಿತೆಗೂ ಸಮಿತಿ ಸಭೆ ನಡೆಸುವುದಕ್ಕೂ ಯಾವುದೇ ಸಂಬಂಧ ಇಲ್ಲ. ಈ ಕುರಿು ಉಂಟಾಗಿರುವ ಗೊಂದಲವನ್ನು ಪಾಲಿಕೆ ಆಯುಕ್ತರು ನಿವಾರಿಸಬೇಕು’ ಎಂದು ವಾರ್ಡ್‌ ಸಮಿತಿ ಬಲಪಡಿಸಲು ಕಾನೂನು ಹೋರಾಟ ನಡೆಸುತ್ತಿರುವ ಎನ್‌ವಿರಾನ್‌ಮೆಂಟಲ್‌ ಸಪೋರ್ಟ್‌ ಗ್ರೂಪ್‌ನ ಲಿಯೊ ಸಲ್ಡಾನ ಆಗ್ರಹಿಸಿದ್ದಾರೆ.

‘ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ ವಾರ್ಡ್‌ ಸಮಿತಿ ಸಭೆ ನಡೆಸುವುದಕ್ಕೆ ಯಾವುದೇ ಅಡ್ಡಿ ಇಲ್ಲ. ಈ ವಿಚಾರದಲ್ಲಿ ಗೊಂದಲಕ್ಕೆ ಆಸ್ಪದವೇ ಇಲ್ಲ. ಅಗತ್ಯಬಿದ್ದರೆ ಈ ಬಗ್ಗೆ ಸುತ್ತೋಲೆ ಹೊರಡಿಸಿ ಗೊಂದಲ ನಿವಾರಣೆ ಮಾಡಲಾಗುವುದು’ ಎಂದು ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT