ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ವನ್ಯಧಾಮದಲ್ಲಿ ಬೆಂಕಿ: ನೂರಾರು ಎಕರೆ ಅರಣ್ಯ ಭಸ್ಮ?

Last Updated 5 ಮಾರ್ಚ್ 2021, 14:58 IST
ಅಕ್ಷರ ಗಾತ್ರ

ಹನೂರು: ತಾಲ್ಲೂಕಿನ ಕಾವೇರಿ ವನ್ಯಧಾಮದ ಹನೂರು ವನ್ಯಜೀವಿ ವಲಯದಲ್ಲಿ ಶುಕ್ರವಾರ ಬೆಂಕಿ ಬಿದ್ದಿದ್ದು, ನೂರಾರು ಎಕರೆ ಅರಣ್ಯ ಪ್ರದೇಶ ಸುಟ್ಟಿದೆ ಎಂದು ಹೇಳಲಾಗಿದೆ.ಕಿಡಿಗೇಡಿಗಳು ಬೆಂಕಿ ಹಾಕಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹನೂರು ವನ್ಯಜೀವಿ ವಲಯದ ಬಂಡಳ್ಳಿ ಬೀಟ್‌ನ ಬಾವಿಗುಡ್ಡ ಬಳಿ ಶುಕ್ರವಾರ ಮಧ್ಯಾಹ್ನದ ವೇಳೆ ಬೆಂಕಿ ಕಾಣಿಸಿಕೊಂಡಿದೆ. ರಾತ್ರಿ ಎಂಟು ಗಂಟೆಯವರೆಗೂ ನಿರಂತರವಾಗಿ ಉರಿದಿದೆ. ವಲಯ ಅರಣ್ಯಾಧಿಕಾರಿ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಕಾವೇರಿ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್‌) ಡಾ.ಎಸ್‌.ರಮೇಶ್‌ ಅವರು, ‘ಬಂಡಳ್ಳಿ ಬೆಟ್ಟದಲ್ಲಿ ಅರಣ್ಯದ ಮಧ್ಯದೊಳಗೆ ಬೆಂಕಿ ಇಟ್ಟಿದ್ದಾರೆ. ಗಾಳಿಯೂ ಜೋರಾಗಿ ಬೀಸುತ್ತಿರುವುದರಿಂದ ಬೆಂಕಿಯನ್ನು ನಿಯಂತ್ರಣಕ್ಕೆ ತರುವುದು ಕಷ್ಟವಾಗುತ್ತಿದೆ. ಕಿಚ್ಚು ನಂದಿಸಲುಸಿಬ್ಬಂದಿ ಶ್ರಮಿಸುತ್ತಿದ್ದಾರೆ’ ಎಂದರು.

ಅಲ್ಲಲ್ಲಿ ಬೆಂಕಿ: ಕೆಲವು ದಿನಗಳಿಂದೀಚೆಗೆ ವನ್ಯಧಾಮದ ವಿವಿಧ ಕಡೆಗಳಲ್ಲಿ ಸಣ್ಣ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿವೆ. ಬೆಂಕಿ ನಂದಿಸುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದರು.ಮೂರು ದಿನಗಳ ಹಿಂದೆ ಕೊತ್ತನೂರು ವನ್ಯಜೀವಿ ವಲಯದ ವಿವಿಧ ಕಡೆಗಳಲ್ಲಿ ಬೆಂಕಿ ಬಿದ್ದು ಹತ್ತಾರು ಎಕರೆ ಕಾಡು ಭಸ್ಮವಾಗಿದೆ.

ಕಡಿಮೆ ಬೆಂಕಿ ಕಾವಲುಗಾರರು: ಅರಣ್ಯ ಇಲಾಖೆಯು ಈ ಬಾರಿ ಹೆಚ್ಚು ಬೆಂಕಿ ಕಾವಲುಗರನ್ನು ನಿಯೋಜನೆ ಮಾಡಿಲ್ಲ. ಇದರಿಂದ ಕಾಳ್ಗಿಚ್ಚಿನ ಮೇಲೆ ನಿಗಾ ಇಡಲು ಕಷ್ಟವಾಗುತ್ತಿದೆ ಎಂದು ಹೇಳಲಾಗಿದೆ.ಹನೂರು ಮತ್ತು ಕೊತ್ತನೂರು ವನ್ಯಜೀವಿ ವಲಯಗಳಲ್ಲಿ ಬೆಂಕಿ ಕಾವಲುಗಾರರನ್ನು ನಿಯೋಜನೆ ಮಾಡಿಕೊಂಡು ಬಳಿಕ ಅವರನ್ನು ವಜಾ ಮಾಡಲಾಗಿದೆ ಆರೋಪವೂ ಇದೆ.

ಈ ಆರೋಪಗಳನ್ನು ಅಲ್ಲಗಳೆದಿರುವ ರಮೇಶ್‌ ಅವರು, ‘ಈ ಬಾರಿಯೂ ಬೆಂಕಿ ಕಾವಲುಗಾರರನ್ನು ನಿಯೋಜಿಸಿದ್ದೇವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕಡಿಮೆ ಸಂಖ್ಯೆಯಲ್ಲಿ ನೇಮಕ ಮಾಡಿಕೊಳ್ಳಲಾಗಿದೆ’ ಎಂದು ಹೇಳಿದರು.

ಒಣ ಪ್ರದೇಶ: ಕಾವೇರಿ ವನ್ಯಧಾಮದಲ್ಲಿ ಕುರುಚಲು ಗಿಡಗಳು ಹಾಗೂ ಒಣಹುಲ್ಲು ಹೆಚ್ಚಾಗಿದ್ದು, ಬೇಸಿಗೆ ಸಂದರ್ಭದಲ್ಲಿ ಪೂರ್ಣವಾಗಿ ಒಣಗಿರುತ್ತವೆ. ಸಣ್ಣ ಬೆಂಕಿ ಕಿಡಿ ಬಿದ್ದರೂ ಎಕರೆಗಟ್ಟಲೆ ಪ್ರದೇಶದಲ್ಲಿ ಬೆಂಕಿ ಹರಡುತ್ತದೆ.

ವನ್ಯಧಾಮವು ಬೆಟ್ಟಗುಡ್ಡಗಳಿಂದ ಕೂಡಿದ ಕಡಿದಾದ ಪ್ರದೇಶ ಆಗಿರುವುದರಿಂದಬೆಂಕಿ ಬಿದ್ದ ತಕ್ಷಣ ಸಿಬ್ಬಂದಿ ಸ್ಥಳಕ್ಕೆ ತಲುಪಿ ಕಾರ್ಯಾಚರಣೆ ಮಾಡುವುದು ಕಷ್ಟವಾಗುತ್ತದೆ. ಗಾಳಿಯೂ ಇದ್ದರೆ ಬೆಂಕಿ ಇನ್ನಷ್ಟು ವೇಗದಲ್ಲಿ ಹರಡಿ ನಿಯಂತ್ರಣಕ್ಕೆ ತರುವುದು ಸುಲಭವಿಲ್ಲ ಎಂದು ಹೇಳುತ್ತಾರೆ ಸಿಬ್ಬಂದಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT