ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ: ಗಿಡ ನೆಟ್ಟ ನ್ಯಾಯಾಧೀಶರು

Published 5 ಜೂನ್ 2024, 16:28 IST
Last Updated 5 ಜೂನ್ 2024, 16:28 IST
ಅಕ್ಷರ ಗಾತ್ರ

ಚಾಮರಾಜನಗರ: ‘ಪರಿಸರವನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಪ್ರತಿ ತಾಲ್ಲೂಕಿನಲ್ಲೂ 10 ಸಾವಿರ ಗಿಡಗಳನ್ನು ನೆಡುವ ಗುರಿ ಹೊಂದಲಾಗಿದೆ’ ಎಂದು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮತ್ತು ಸಿವಿಲ್‌ ನ್ಯಾಯಾಧೀಶರಾದ ಈಶ್ವರ್ ಬುಧವಾರ ಹೇಳಿದರು. 

ನಗರದ ಡಾ. ಬಿ. ಆರ್ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಅರಣ್ಯ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ನಗರ ಸಭೆ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಗಿಡ ನೆಟ್ಟು ಅವರು ಮಾತನಾಡಿದರು. 

‘ಪ್ರತಿಯೊಬ್ಬರೂ ಪರಿಸರ ಸಂರಕ್ಷಿಸಬೇಕು. ಗಿಡಮರಗಳನ್ನು ಹೆಚ್ಚು ಬೆಳೆಸುವುದರಿಂದ ಬಿಸಿಲ ಬೇಗೆ ಕಡಿಮೆಯಾಗಿ ಜನರಿಗೆ ಉತ್ತಮ ಆಮ್ಲಜನಕ ದೊರೆಯಲಿದೆ. ಪರಿಸರದ ಸೌಂದರ್ಯವೂ ಹೆಚ್ಚಾಗಲಿದೆ. ಮುಂದಿನ ಪೀಳಿಗೆಗೆ ಪರಿಸರ ಸಂರಕ್ಷಣೆ ಮಾಡುವುದು ಎಲ್ಲರ ಕರ್ತವ್ಯವಾಗಿದೆ. ಮನೆಯ ಸುತ್ತಲೂ ಗಿಡಗಳನ್ನು ಬೆಳೆಸುವುದಲ್ಲದೇ ಮನೆಯಲ್ಲಿ ಬಳಸಿದ ನೀರನ್ನು ಮರು ಬಳಕೆ ಮಾಡಬೇಕು’ ಎಂದು ಸಲಹೆ ನೀಡಿದರು.

‘ವಿದ್ಯಾರ್ಥಿಗಳು ಗಿಡಗಳನ್ನು ನೆಟ್ಟು ಇತರರಿಗೂ ಗಿಡ ನೆಡುವಂತೆ ಪ್ರೋತ್ಸಾಹಿಸಬೇಕು. ಇದು ಪರಿಸರವನ್ನು ಉಳಿಸುವ ಮಾರ್ಗ. ಪ್ರತಿಯೊಬ್ಬರೂ ಪ್ಲಾಸ್ಟಿಕ್ ತ್ಯಜಿಸಿ ಬಟ್ಟೆ ಚೀಲಗಳನ್ನು ಬಳಸಬೇಕು. ಮರುಬಳಕೆ ವಸ್ತುಗಳನ್ನು ಉಪಯೋಗಿಸುವುದರೊಂದಿಗೆ ಪರಿಸರ ಮಾಲಿನ್ಯವನ್ನು ತಡೆಗಟ್ಟಬಹುದು’ ಎಂದು ಈಶ್ವರ್ ಅವರು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಮಾತನಾಡಿ, ‘ಪ್ರಸ್ತುತ ದಿನಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಗಿಡ-ಮರಗಳ ಮಾರಣಹೋಮ ನಡೆಯುತ್ತಿದೆ. ಪ್ರತಿಯೊಬ್ಬರೂ ಹುಟ್ಟಿದ ದಿನದಂದು ಗಿಡ ನೆಟ್ಟು ಪೋಷಿಸಬೇಕು. ಸಮಾರಂಭಗಳಲ್ಲಿ ಉಡುಗೊರೆಗಳ ಬದಲಾಗಿ ಗಿಡಗಳನ್ನು ನೀಡುವುದರಿಂದ ಪರಿಸರವನ್ನು ಉಳಿಸಬಹುದು. ಸುತ್ತಮುತ್ತಲಿನ ಪರಿಸರವನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಮರ-ಗಿಡಗಳನ್ನು ಪೋಷಿಸಿದರೆ, ನಮ್ಮ ವೈಯಕ್ತಿಕ ಆರೋಗ್ಯದ ಜೊತೆಗೆ ಪರಿಸರವೂ ಸಂರಕ್ಷಣೆ ಆಗುತ್ತದೆ’ ಎಂದರು.

ಇಸ್ರೊ ನಿವೃತ್ತ ಪರಿಸರ ವಿಜ್ಞಾನಿ ಜಗನಾಥ್ ವೆಂಕಟರಾಮಯ್ಯ ಅವರು ಮಾತನಾಡಿ, ‘ಪರಿಸರದ ಬಗ್ಗೆ ಅರಿವಿದ್ದರೆ ಸಾಲದು. ಪ್ರಜ್ಞೆಯೂ ಬೇಕು, ಪ್ಲಾಸ್ಟಿಕ್ ಬಳಕೆ ಬೇಕು. ಆದರೆ ದುರ್ಬಳಕೆ ಬೇಡ. ನಾವು ಬದುಕುವ ಪರಿಸರವನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ’ ಎಂದರು.

ಇದೇ ವೇಳೆ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಚಿತ್ರಕಲಾ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮಕ್ಕೂ ಮೊದಲು ಡಾ.ಬಿ.ಆರ್ ಅಂಬೇಡ್ಕರ್ ಭವನದ ಆವರಣದಲ್ಲಿ ಗಣ್ಯರು ಗಿಡ ನೆಟ್ಟು ನೀರೆರೆದರು. ಪರಿಸರ ಅಧಿಕಾರಿ ಪಿ.ಕೆ ಉಮಾಶಂಕರ್, ನಗರಸಭೆ ಆಯುಕ್ತ ಎಸ್.ವಿ. ರಾಮ್ ದಾಸ್, ಸಾಮಾಜಿಕ ಅರಣ್ಯ ವಿಭಾಗದ ಪ್ರಭಾರ ಉಪ ಸಂರಕ್ಷಣಾಧಿಕಾರಿ ಸಭ್ಯಶ್ರೀ,  ಪರಿಸರ ಪ್ರೇಮಿ ಹಾಗೂ ಈಶ್ವರಿ ಸೋಶಿಯಲ್ ಟ್ರಸ್ಟ್‌ನ ಅಧ್ಯಕ್ಷ ಸಿ.ಎಂ.ವೆಂಕಟೇಶ್ ಇತರರು ಭಾಗವಹಿಸಿದ್ದರು.

ಮಣ್ಣಿನ ಸಂರಕ್ಷಣೆ ಎಲ್ಲ ಕರ್ತವ್ಯ: ಸುರೇಶ್

ಚಾಮರಾಜನಗರ: ಮಣ್ಣಿನ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಸುರೇಶ್‌ ಹೇಳಿದರು.  ನಗರದ ಕರಿವರದರಾಜ ಬೆಟ್ಟದಲ್ಲಿ ಅರಣ್ಯ ಇಲಾಖೆ ಮತ್ತು ಸ್ಕೌಟ್ ಮತ್ತು ಗೈಡ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  ‘ಪಟ್ಟಣಗಳಲ್ಲಿ ಪ್ಲಾಸ್ಟಿಕ್ ಸೇರಿದಂತೆ ನಿರುಪಯುಕ್ತ ವಸ್ತುಗಳು ಹೆಚ್ಚು ಸಂಗ್ರಹಣೆಯಾಗಿ ಭೂಮಿಯಲ್ಲಿ ಸೇರಿಕೊಂಡು ಮಣ್ಣು ಮಲಿನಗೊಳ್ಳುತ್ತಿದೆ. ಇದರಿಂದ ಹೊರಬರುವ ವಿಷಕಾರಿ ವಸ್ತುಗಳಿಂದ ಪಾದರಸ ಸೀಸ ಕ್ಯಾಡ್ಮಿಯಂ ಕ್ರೋಮಿಯಂ ಮುಂತಾದವುಗಳು ಜೀವ ಸಂಕುಲ ಮತ್ತು ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ’ ಎಂದರು.  ‘ಸಾರ್ವಜನಿಕರಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಜೂನ್‌ 5ರಂದು  ವಿಶ್ವ ಪರಿಸರ ದಿನಾಚರಣೆ ಆಚರಿಸಲಾಗುತ್ತಿದೆ. ‘ನಮ್ಮ ಭೂಮಿ : ನಮ್ಮ ಭವಿಷ್ಯ’ ಎಂಬ ಧ್ಯೇಯ ವಾಕ್ಯದೊಂದಿಗೆ ಈ ಬಾರಿ ಆಚರಿಸಲಾಗುತ್ತಿದೆ’ ಎಂದರು. ‘ವಾತಾವರಣದಲ್ಲಿ ಹೆಚ್ಚುತ್ತಿರುವ ಬಿಸಿ ನಿರಂತರ ವಾಯು ಮಾಲಿನ್ಯ ಜಲಮಾಲಿನ್ಯ ಭೂ ಮಾಲಿನ್ಯ ಎಲ್ಲದಕ್ಕೂ ಬೆಲೆ ಕಟ್ಟುವ ಕಾಲ ಬಹಳ ದೂರವಿಲ್ಲ. ಇರುವ ಒಂದೇ ಒಂದು ಭೂ ಗ್ರಹವನ್ನು ಉಳಿಸಿಕೊಳ್ಳಬೇಕಾಗಿದೆ’ ಎಂದರು. ವಲಯ ಅರಣ್ಯಾಧಿಕಾರಿ ಉಮೇಶ್ ಮಾತನಾಡಿ ‘ಸಾಧ್ಯವಾದಾಗಲೆಲ್ಲ ರಾಸಾಯನಿಕ ಮುಕ್ತ ಸಾವಯವ ಹಾಗೂ ಸಸ್ಯ ಮೂಲದ ಆಹಾರ ಪದಾರ್ಥಗಳನ್ನೇ ಬಳಸಬೇಕು. ಇದರಿಂದ ಪರಿಸರಕ್ಕೂ ನಿರಾಳ ನಮ್ಮ ಆರೋಗ್ಯಕ್ಕೂ ಒಳ್ಳೆಯದು’ ಎಂದರು. ಬಾಲ ನ್ಯಾಯ ಮಂಡಳಿ ಸದಸ್ಯ ಟಿ.ಜೆ. ಸುರೇಶ್ ಮಾತನಾಡಿದರು. ಸ್ಕೌಟ್ಸ್‌ ಅಂಡ್ ಗೈಡ್ಸ್‌ ಜಿಲ್ಲಾ ಸಂಘಟಕರಾದ ಕೆ.ಪಿ.ಅಶೋಕ್ ಕುಮಾರ್. ಜೆ.ಶ್ರೀನಿಧಿ ಅರಣ್ಯ ಸಿಬ್ಬಂದಿ ಭಾಗವಹಿಸಿದ್ಜರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT