ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನಪದ ಕರ್ಮಭೂಮಿ ಚಾಮರಾಜನಗರ

ಜಾನಪದ ವಿದ್ವಾಂಸ ಡಾ.ನಂಜಯ್ಯ ಹೊಂಗನೂರು ಅಭಿಮತ, ಯುವಜನ ಮೇಳದ ಸಮಾರೋಪ
Last Updated 10 ಫೆಬ್ರುವರಿ 2020, 11:01 IST
ಅಕ್ಷರ ಗಾತ್ರ

ಚಾಮರಾಜನಗರ: ‘ಕಲಾ ಪ್ರಕಾರಗಳಿಗೆ ತವರು ಮನೆಯಾಗಿರುವ ಚಾಮರಾಜನಗರ ಜಾನಪದದ ಕರ್ಮಭೂಮಿ’ ಎಂದುಜಾನಪದ ವಿದ್ವಾಂಸ ಡಾ.ನಂಜಯ್ಯ ಹೊಂಗನೂರು ಅಭಿಪ್ರಾಯಪಟ್ಟರು.

ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜು ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಭಾನುವಾರ ನಡೆದ ಮೈಸೂರು ವಿಭಾಗಮಟ್ಟದ ಯುವಜನ ಮೇಳದ ಸಮಾರೋಪದಲ್ಲಿ ಅವರು ಮಾತನಾಡಿದರು.

‘ಮಂಡ್ಯಕ್ಕೆ ಸಕ್ಕರೆ ನಾಡು, ಚನ್ನಪಟ್ಟಣ ಗೊಂಬೆಗಳ ನಾಡು, ತುಮಕೂರಿಗೆ ಕಲ್ಪವೃಕ್ಷದ ನಾಡು ಎನ್ನುವಂತೆ ಚಾಮರಾಜನಗರ ಜಿಲ್ಲೆಗೆ ಜಾನಪದ ಕರ್ಮಭೂಮಿ, ಜಾನಪದ ನಗರ ಎಂದು ಕರೆಯುವುದಾದರೆ ಸಂಭ್ರಮಿಸುವುದು ನಾವೇ. ಇಲ್ಲಿನ ಗೊರವರ ಕುಣಿತ ಮೈಲಾರಲಿಂಗನ ಪರಂಪರೆ, ಸಂಪ್ರದಾಯವನ್ನು ಆರಾಧನೆ ಮಾಡುವ ಕಲೆಯಾಗಿದೆ. ಇಡೀ ರಾಜ್ಯಕ್ಕೆ ಇದು ಮೊದಲ ಕಲಾಪರಂಪರೆ ಆಗಿದೆ’ ಎಂದರು.

‘ಮಲೆಮಹದೇಶ್ವರ, ಮಂಟೇಸ್ವಾಮಿ, ಬಿಳಿಗಿರಿರಂಗರಂತಹ ಸಾಂಸ್ಕೃತಿಕ ನಾಯಕರನ್ನು ಕೊಟ್ಟಂತಹ ಜಿಲ್ಲೆ ಚಾಮರಾಜನಗರ. ಅನೇಕ ಕಲಾ ಪ್ರಕಾರಗಳ ತವರು ಮನೆಯಾಗಿದೆ. ಬುಡಕಟ್ಟು ಜನರು ಹೆಚ್ಚು ವಾಸ ಮಾಡುವ ತಳವರ್ಗದವರು ಹೆಚ್ಚು ವಾಸಿಸುವ ವಿಶಿಷ್ಟ ಜಿಲ್ಲೆಯಾಗಿದೆ’ ಎಂದು ಹೇಳಿದರು.

‘ಎಲ್ಲ ಯುವಜನ ಮೇಳಗಳು ಸಾಮರಸ್ಯದ ಸಮ್ಮೇಳನ ಆಗಬೇಕು. ಜಗಳದ ಗೂಡಾಗಬಾರದು. ಹೀಗಾಗಿ, ಸ್ಪರ್ಧಿಗಳು ಸ್ಪರ್ಧಾತ್ಮಕ ಮನೋಭಾವದಿಂದ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು’ ಎಂದು ಸಲಹೆ ನೀಡಿದರು.

‘ಆಯಾ ಜಿಲ್ಲೆಯ ಸಂಸ್ಕೃತಿ, ಪರಂಪರೆ ಬಿಂಬಿಸುವ ವೇಷಭೂಷಣ ಎಲ್ಲವೂ ತೀರ್ಪುಗಾರರ ಪರಿಗಣನೆಗೆ ಬರಲಿದೆ. ಆಯಾ ಕಲೆಗಳ ಬಗ್ಗೆ ಅರಿವು ಪಡೆದಿರುತ್ತಾರೆ. ಎಲ್ಲ ಆಯಾಮಗಳಲ್ಲಿ ಗಮನಿಸಿ ತೀರ್ಪನ್ನು ನೀಡುತ್ತಾರೆ. ಅವರ ತೀರ್ಪನ್ನು ಸ್ವಾಗತಿಸಬೇಕು. ಸೋತವರು ಬೇಸರ ವ್ಯಕ್ತಪಡಿಸದೇ ಹೆಚ್ಚಿನ ಅಭ್ಯಾಸಕ್ಕೆ ಮುಂದಾಗಬೇಕು’ ಎಂದು ತಿಳಿಸಿದರು.

ತರಬೇತಿ ಆಯೋಜಿಸಬೇಕು

ರಾಜ್ಯದ ಎಲ್ಲ ಯುವಜನ ತಂಡಗಳಿಗೆ ತರಬೇತಿ ಕೊಡುವ ಕೆಲಸ ಆಗಬೇಕು. ಕಲೆ ಪರಿಕರ, ವೇಷಭೂಷಣದ ಬಗ್ಗೆ ತಿಳಿಸುವಂತಹ ಕಾರ್ಯಾಗಾರ, ತರಬೇತಿ ನೀಡಲು ಯುವಜನ ಮತ್ತು ಕ್ರೀಡಾ ಇಲಾಖೆ ಮುಂದಾಗಬೇಕು. ಆಗಮಾತ್ರ ಯುವಜನರು ಕನ್ನಡ ಸಾರ್ವಭೌಮತ್ವ ಎತ್ತಿಹಿಡಿಯಲು ಸಾಧ್ಯವಾಗಲಿದೆ’ ಎಂದರು.

ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಚ್‌.ಎಸ್‌. ಪ್ರೇಮಲತಾ, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಎ. ರಮೇಶ್‌, ತೀರ್ಪುಗಾರರಾದ ಸಿ.ಎಂ.ನರಸಿಂಹಮೂರ್ತಿ, ಬಸವರಾಜು, ಎಸ್‌.ಬಿ.ನಾಗರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT