ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದ್ದೂರಿ ಒನಕೆ ಓಬವ್ವ ಜಯಂತಿ

ಓಬವ್ವ ಸಮಯಪ್ರಜ್ಞೆ, ಧೈರ್ಯದ ಮನೋಭಾವ ರೂಢಿಸಿಕೊಳ್ಳಿ; ಜಿಲ್ಲಾಧಿಕಾರಿ
Last Updated 15 ನವೆಂಬರ್ 2022, 4:41 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನಗರದಲ್ಲಿ ಸೋಮವಾರಒನಕೆ ಓಬವ್ವ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಕಾರ್ಯಕ್ರಮ ಜರುಗಿತು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಒನಕೆ ಓಬವ್ವ ಅವರ ಪಲ್ಲಕ್ಕಿ ಮತ್ತು ಸ್ತಬ್ಧ ಚಿತ್ರವನ್ನು ಜಾನಪದ ಕಲಾ ತಂಡಗಳೊಂದಿಗೆ ನಗರದ ಜೈಭೀಮ್ ವಿದ್ಯಾರ್ಥಿನಿಲಯ ಮುಂಭಾಗದಿಂದ ಬಿ.ಆರ್. ಅಂಬೇಡ್ಕರ್ ಭವನದವರೆಗೆ ಮೆರವಣಿಗೆ ಮಾಡಲಾಯಿತು.

ಪರಿಶಿಷ್ಟ ಸಮುದಾಯದ ಮುಖಂಡರು ಹಾಗೂ ದಲಿತ ಸಂಘರ್ಘ ಸಮಿತಿ ಕಾರ್ಯಕರ್ತರು, ಮುಖಂಡರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.ವೇದಿಕೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹಿಳೆಯರು, ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಇಂದಿನ ಪೀಳಿಗೆಗೆ ಪ್ರೇರಣೆ:ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಓಬವ್ವ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್, ‘ಓಬವ್ವ ಅವರ ಸಮಯಪ್ರಜ್ಞೆ, ಧೈರ್ಯದ ಮನೋಭಾವ ಮತ್ತು ಆದರ್ಶಗಳನ್ನು ಪ್ರತಿಯೊಬ್ಬರು ರೂಢಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಸಮಯ ಪ್ರಜ್ಞೆ ಮತ್ತು ಪರಾಕ್ರಮದಿಂದ ವೈರಿ ಸೈನಿಕರನ್ನು ಸದೆಬಡಿದ ಒನಕೆ ಓಬವ್ವ ಇಂದಿನ ಪೀಳಿಗೆಗೆ ಪ್ರೇರಣೆ ಆಗಿದ್ದಾರೆ.ಸರ್ಕಾರದಿಂದ ಮೊದಲ ಬಾರಿಗೆ ವೀರ ಮಹಿಳೆ ಓಬವ್ವ ಜಯಂತಿಯನ್ನು ಸಂಭ್ರಮದಿಂದ ಅರ್ಥಪೂರ್ಣವಾಗಿ ಆಚರಿಸಲಾಗಿದೆ ಎಂದರು.

ಸರ್ಕಾರವು ಯಾವುದೇ ಜಾತಿ, ಧರ್ಮಕ್ಕೆ ಸೀಮಿತಗೊಳಿಸಿ ಜಯಂತಿ ಹಾಗೂ ದಿನಾಚರಣೆ ಆಚರಿಸುವುದಿಲ್ಲ. ರಾಷ್ಟ್ರಕ್ಕೆ ಹಾಗೂ ಸಮಾಜಕ್ಕೆ ಮಹನೀಯರು ನೀಡಿರುವ ಕೊಡುಗೆ, ತ್ಯಾಗ, ಬಲಿದಾನ, ಸಾಧನೆಗಳು ಹಾಗೂ ನಿಸ್ವಾರ್ಥ ಸೇವೆ ಗುರುತಿಸಿ ಸರ್ಕಾರದ ನಿಯಮಗಳಡಿ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್, ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಲಕ್ಷ್ಮಣ್ ರೆಡ್ಡಿ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪಿ.ಎಸ್.ರಾಜೇಶ್ವರಿ, ದಲಿತ ಸಂಘರ್ಷ ಸಮಿತಿ ಮುಖಂಡ ಸು.ಧಾ ವೆಂಕಟೇಶ್, ಜಿಲ್ಲಾ ಸಂಚಾಲಕ ಬಿ.ವಿ.ಆನಂದ್, ಛಲವಾದಿ ಮಹಾಸಭಾ ರಾಜ್ಯ ಸಮಿತಿಯ ನಿರ್ದೇಶಕ ಎಚ್.ವಿ.ಕೃಷ್ಣಪ್ಪ, ಜಿಲ್ಲಾ ಸಮಿತಿಯ ಅಧ್ಯಕ್ಷ ರಾಮಕೃಷ್ಣ, ಕೃಷ್ಣಪ್ಪ, ವೆಂಕಟಕೃಷ್ಣ, ಎಚ್.ಎಂ.ಮುನಿಕೃಷ್ಣ, ನರಸಿಂಹಮೂರ್ತಿ ಇತರರು ಇದ್ದರು.

‘ಅಜ್ಞಾನ ನಿವಾರಣೆಗೆ ಶಿಕ್ಷಣ ಪ್ರಮುಖ ಅಸ್ತ್ರ’

‘ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು. ವಸ್ತುನಿಷ್ಠ ಚರಿತ್ರೆಯನ್ನು ಅರಿಯಬೇಕು. ಅದೇ ರೀತಿ ಉತ್ತಮ ಹಾಗೂ ಸದೃಢ ಸಮಾಜ ನಿರ್ಮಾಣ ಮಾಡುವಲ್ಲಿ ಒನಕೆ ಓಬವ್ವ ಅವರ ಸಾಧನೆ ಮಹತ್ವದ್ದು’ ಎಂದು ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಎನ್. ಚಿನ್ನಸ್ವಾಮಿ ಸೋಸಲೆ ಹೇಳಿದರು.

ಯುದ್ಧದ ಬಗ್ಗೆ ಯಾವುದೇ ಪರಿವೇ ಇಲ್ಲದಿದ್ದರೂ ಸಮಯಪ್ರಜ್ಞೆ ಹಾಗೂ ಧೈರ್ಯದಿಂದ ಸೈನಿಕರ ವಿರುದ್ಧ
ಹೋರಾಡಿದ ಓಬವ್ವ ಅವರ
ಆದರ್ಶಗಳು ನಮ್ಮೆಲ್ಲರಿಗೂ ಬೆಳಕಾಗಬೇಕು ಎಂದರು.

ಭಾವನಾತ್ಮಕ ಚರಿತ್ರೆ ಬೇಡ. ಅಜ್ಞಾನ ಹೋಗಲಾಡಿಸಲು ಉನ್ನತ ಶಿಕ್ಷಣದಿಂದ ಸಾಧ್ಯವಾಗಿದ್ದು, ಪ್ರತಿಯೊಬ್ಬರೂ ಉನ್ನತ ಶಿಕ್ಷಣ ಪಡೆಯಬೇಕು. ಸಂವಿಧಾನದ ಆಶಯಗಳನ್ನು ಪಾಲಿಸಬೇಕು. ಬಿ.ಆರ್.ಅಂಬೇಡ್ಕರ್, ಮಹಾತ್ಮ ಗಾಂಧೀಜಿ ಸೇರಿದಂತೆ ಮಹನೀಯರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT