ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರು ಆದ್ಯತೆ ಆಗಲಿ: ಎಂ.ಬಿ.ಚಿಕ್ಕನರಸಿಂಹಯ್ಯ

ಜಿಲ್ಲಾ ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ ಸೂಚನೆ
Last Updated 15 ಫೆಬ್ರುವರಿ 2021, 16:20 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಜಿಲ್ಲೆಯಲ್ಲಿ ಬೇಸಿಗೆ ಆರಂಭಕ್ಕೂ ಮುನ್ನವೇ ನೀರಿನ ಅಭಾವ ಕಂಡು ಬರುತ್ತಿದ್ದು, ಮುಂಬರುವ ದಿನಗಳಲ್ಲಿ ಇದು ಹೆಚ್ಚಾಗುವ ಸಾಧ್ಯತೆ ಇದೆ. ಈ ದಿಸೆಯಲ್ಲಿ ಗ್ರಾಮೀಣ ಭಾಗದಲ್ಲಿ ಎಲ್ಲೂ ಕುಡಿಯುವ ನೀರು ಸಮಸ್ಯೆ ಆಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಪಂಚಾಯಿತಿ ಮಾಸಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ ಮುಂಬರುವ ದಿನಗಳಲ್ಲಿ ಬೇಸಿಗೆ ಹೆಚ್ಚಾಗಲಿದೆ. ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇದ್ದು, ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಈಗಿನಿಂದಲೇ ಸಮಸ್ಯೆ ನೀಗಿಸಲು ಕ್ರಮ ಕೈಗೊಳ್ಳಬೇಕು. ಗ್ರಾಮಗಳಲ್ಲಿ ನೀರಿನ ಸಮಸ್ಯೆ ಗಮನಕ್ಕೆ ಬಂದ ಕೂಡಲೇ ಅಲ್ಲಿನ ತಾತ್ಕಾಲಿಕವಾಗಿ ನೀರು ಕಲ್ಪಿಸಿ ನಂತರ ಶಾಶ್ವತವಾಗಿ ನೀರು ಕಲ್ಪಿಸಿಕೊಡುವತ್ತ ಕ್ರಮ ಕೈಗೊಳ್ಳಬೇಕು. ಅಗತ್ಯ ಇರುವ ಕಡೆ ಖಾಸಗಿ ಕೊಳವೆಬಾವಿ ಅಥವಾ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕು’ ಎಂದು ಹೇಳಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಶಿವಕುಮಾರ್ ಲೋಕೂರ್ ಮಾತನಾಡಿ, ‘ಜಿಲ್ಲೆಯಲ್ಲಿ ಪ್ರಸ್ತುತ 40 ಗ್ರಾಮಗಳನ್ನು ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳು ಎಂದು ಗುರುತಿಸಲಾಗಿದೆ. ಈ ಪೈಕಿ 3 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಹಾಗೂ 37 ಗ್ರಾಮಗಳಿಗೆ ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ’ ಎಂದು ತಿಳಿಸಿದರು.

ಕೃಷಿ ಇಲಾಖೆಯಿಂದ ಸಹಾಯಧನದ ಅಡಿ ರೈತರಿಗೆ ವಿತರಣೆ ಮಾಡುವ ಮಿನಿ ಟ್ರ್ಯಾಕ್ಟರ್‌ಗಳನ್ನು ಇನ್ನೂ ರೈತರಿಗೆ ನೀಡಿಲ್ಲ ಎಂಬ ದೂರು ಬಂದಿದೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅಧ್ಯಕ್ಷರು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಎಲ್.ರೂಪಾ, ‘ಜಿಲ್ಲೆಯಲ್ಲಿ ಎಸ್‌ಟಿಪಿ, ಟಿಎಸ್ಪಿ ಯೋಜನೆ ಅಡಿ ಮಿನಿ ಟ್ರ್ಯಾಕ್ಟರ್‌ಗೆ ಹೆಚ್ಚಿನ ಬೇಡಿಕೆ ಇದೆ. ಈ ಯೋಜನೆಯಡಿ ಫಲಾನುಭವಿಗಳಿಗೆ ₹3 ಲಕ್ಷದ ವರೆಗೆ ಸಹಾಯಧನ ನೀಡಲಾಗುತ್ತಿದೆ. ಹಾಗಾಗಿ ಇದಕ್ಕೆ ಹೆಚ್ಚಿನ ಬೇಡಿಕೆ ಇದೆ. ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಕಡಿಮೆ ಸಹಾಯಧನ ಇರುವುದರಿಂದ ಇದಕ್ಕೆ ಬೇಡಿಕೆ ಕಡಿಮೆ ಇದೆ. ಇನ್ನು ವಿತರಣೆಗೆ ಬಾಕಿ ಇರುವ ಫಲಾನುಭವಿಗಳಿಗೆ ಟ್ರ್ಯಾಕ್ಟರ್‌ ವಿತರಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ಆರೋಗ್ಯ ಇಲಾಖೆಯಲ್ಲಿ ಕಳೆದ ವರ್ಷದಲ್ಲಿ ಅನುದಾನ ವಾಪಸ್ ಹೋಗಿದೆ. ಆದರೆ ಈ ವರ್ಷ ಹಾಗಾಗಬಾರದು. ಸರ್ಕಾರದಿಂದ ಬಿಡುಗಡೆಯಾದ ಸಂಪೂರ್ಣ ಅನುದಾನ ಖರ್ಚು ಮಾಡಬೇಕು. ಜಿಲ್ಲೆಯ ಆಸ್ಪತ್ರೆಗಳಿಗೆ ಏನೇನು ಅಗತ್ಯವಿದೆ ಎಂಬುದನ್ನು ಪಟ್ಟಿ ಮಾಡಿ, ಅದನ್ನು ಸಚಿವರ ಗಮನಕ್ಕೆ ತರುವ ಕೆಲಸ ಮಾಡಬೇಕು’ ಎಂದು ಅಧ್ಯಕ್ಷರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಇಂದಿರಾ ಕಬಾಡೆ ಮಾತನಾಡಿ, ‘ಜಿಲ್ಲೆಯ ವಿವಿಧ ಕಡೆ ಈಗಾಗಲೇ ಪ್ರತಿಷ್ಠಿತ ಆಸ್ಪತ್ರೆಗಳ ಮೂಲಕ ಆರೋಗ್ಯ ಶಿಬಿರಗಳನ್ನು ಅಯೋಜಿಸಲಾಗುತ್ತಿದೆ. ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್ಲು, ಪೆರೇಸಂದ್ರ ಹಾಗೂ ದಿಬ್ಬೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮಾದರಿ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಲು ಆಯ್ಕೆಯಾಗಿದ್ದು, ರಾಜೀವ್ ಗಾಂಧಿ ಆರೋಗ್ಯ ವಿಶ್ವ ವಿದ್ಯಾಲಯದಿಂದ ಅಭಿವೃದ್ಧಿ ಮಾಡಲಾಗುತ್ತಿದೆ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಬೀಡಿ, ಸಿಗರೇಟ್ ಮತ್ತು ತಂಬಾಕು ಸೇವನೆ ಹಾಗೂ ಮಾರಾಟವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಸರ್ಕಾರದಿಂದ ಪರಿಷ್ಕೃತ ಸುತ್ತೋಲೆ ಬಂದಿದ್ದು, ಅದರಂತೆ ಆರೋಗ್ಯ ಇಲಾಖೆ ಜತೆಗೆ ಇತರೆ ಇಲಾಖೆಗಳಿಗೂ ಕೂಡ ತಂಬಾಕು ಸೇವನೆ, ಮಾರಾಟ ಮಾಡುವವರ ವಿರುದ್ಧ ದಾಳಿ ಮಾಡಿ ಕ್ರಮ ಹಾಗೂ ದಂಡ ವಿಧಿಸಲು ಅನುಮತಿ ನೀಡಲಾಗಿದೆ’ ಎಂದು ಸಭೆಗೆ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ. ಶಿವಶಂಕರ್ ಮಾತನಾಡಿ, ‘ಪ್ರಸಕ್ತ ಸಾಲಿನ ಆರ್ಥಿಕ ವರ್ಷ ಮುಗಿಯಲು ಇನ್ನು ಒಂದು ತಿಂಗಳು ಬಾಕಿ ಉಳಿದಿದೆ. ಕೆಲವು ಇಲಾಖೆಗಳಲ್ಲಿ ಫೆಬ್ರುವರಿ 15ಕ್ಕೆ ಅನುದಾನ ಸ್ಥಗಿತಗೊಂಡಿದ್ದು, ಉಳಿದ ಇಲಾಖೆಗಳ ಅನುದಾನ ಯಾವ ಬೇಕಾದರೂ ಕಡಿತವಾಗಬಹುದು. ಹಾಗಾಗಿ ಎಲ್ಲಾ ಇಲಾಖೆಗಳು ಈ ತಿಂಗಳ ಅಂತ್ಯದೊಳಗೆ ಸಂಪೂರ್ಣವಾಗಿ ಅನುದಾನ ಬಳಕೆ ಮಾಡಲು ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಸರಸ್ವತಮ್ಮ,ಉಪ ಕಾರ್ಯದರ್ಶಿ ನೋಮೇಶ್,ಮುಖ್ಯ ಲೆಕ್ಕಾಧಿಕಾರಿ ಧನುರೇಣುಕಾ, ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಕೆ.ಸಿ.ರಾಜಾಕಾಂತ್ ಮತ್ತು ಮುನಿಯಪ್ಪ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT