ಸೋಮವಾರ, ಮಾರ್ಚ್ 1, 2021
31 °C
ಪೆಂಡ್ಲಿವಾರಹಳ್ಳಿಯ ಸರ್ಕಾರಿ ಕಿರಿಯ ಶಾಲೆಯಲ್ಲಿ ಹೊರ ಸಂಚಾರ

ಶಿಡ್ಲಘಟ್ಟ: ಪ್ರಕೃತಿಯ ಮಡಿಲಲ್ಲಿ ಪ್ರಾಯೋಗಿಕ ಪಾಠ

ಡಿ.ಜಿ.ಮಲ್ಲಿಕಾರ್ಜುನ Updated:

ಅಕ್ಷರ ಗಾತ್ರ : | |

Prajavani

ಶಿಡ್ಲಘಟ್ಟ: ತಾಲ್ಲೂಕಿನ ಪೆಂಡ್ಲಿವಾರಹಳ್ಳಿಯ ಸರ್ಕಾರಿ ಕಿರಿಯ ಶಾಲೆಯ ವಿದ್ಯಾರ್ಥಿಗಳಿಗೆ ಗುರುವಾರ ಪ್ರಕೃತಿಯೇ ಪಾಠಶಾಲೆಯಾಗಿತ್ತು. ನಿಸರ್ಗದ ಮಡಿಲಲ್ಲಿ ಸಸ್ಯ, ಮರ, ಹಣ್ಣು, ಹೂಗಳ ನಡುವೆ ಪಾಠ ಕಲಿತರು. ಇಲ್ಲಿರುವ ಮಕ್ಕಳ ಸಂಖ್ಯೆ ಕೇವಲ ಹದಿಮೂರಾದರೂ ಇಬ್ಬರು ಶಿಕ್ಷಕರಿಗೂ ಪ್ರಶ್ನೆಗಳ ಸುರಿಮಳೆಗೈದರು.

ನಾಲ್ಕು ಗೋಡೆಗಳ ನಡುವಿನ ತರಗತಿಗಳಿಂದ ಬೇಸತ್ತಿದ್ದ ವಿದ್ಯಾರ್ಥಿಗಳಿಗೆ ಗುರುವಾರ ನಡೆದ ಹೊರಸಂಚಾರ ಹೊಸ ಉತ್ಸಾಹ ತುಂಬಿತ್ತು.

ನಿಸರ್ಗ ಸಂಚಾರಕ್ಕೆ ಹೊರಟ ಚಿಣ್ಣರನ್ನು ಮೊದಲು ಸ್ವಾಗತಿಸಿದ್ದು ಕೆಂಪುಹಣ್ಣುಗಳಿಂದ ಒಡಲು ತುಂಬಿಕೊಂಡಿದ್ದ ಪಾಪಸ್ ಕಳ್ಳಿ. ಅಷ್ಟು ಹಣ್ಣುಗಳನ್ನು ಒಮ್ಮೆಲೇ ನೋಡಿದ ಮಕ್ಕಳು ಕುಣಿದಾಡಿದರು. ತಿನ್ನಲು ಮುಂದಾದ ಅವರನ್ನು ತಡೆದ ಶಿಕ್ಷಕ ಚನ್ನಕೃಷ್ಣಪ್ಪ ಈ ಹಣ್ಣು ತಿನ್ನುವಾಗ ತೆಗೆದುಕೊಳ್ಳಬೇಕಾದ ಎಚ್ಚರಿಕಾ ಕ್ರಮಗಳನ್ನು ತೋರಿಸಿಕೊಟ್ಟರು.

ವಿಧವಿಧ ಮರಗಳ ಪರಿಚಯಿಸಿಕೊಳ್ಳುತ್ತಾ, ಸೀತಾಫಲ, ಕಾರೆಹಣ್ಣು, ಕಾಶಿಹಣ್ಣುಗಳ ಕಣ್ತುಂಬಿಕೊಂಡರು. ಹುತ್ತವನ್ನು ಕಂಡು ಮಕ್ಕಳು, ‘ಇದನ್ನು ಹಾವು ಹೇಗೆ ಕಟ್ಟುತ್ತದೆ ಸರ್?’ ಎಂಬ ಪ್ರಶ್ನೆಗೆ ಶಿಕ್ಷಕ ಚನ್ನಕೃಷ್ಣಪ್ಪ ಅವರಿಂದ ಉತ್ತರ ಪಡೆದರು.

ಕೊಳದಲ್ಲಿನ ಕಮಲ ರಾಶಿ ‌ಕಂಡ ವಿದ್ಯಾರ್ಥಿಗಳು ಹಿರಿ– ಹಿರಿ ಹಿಗ್ಗಿದರು. ಕಮಲದ ಸಸ್ಯ ತೇಲುವುದೇಕೆಂದು ನಾಲ್ಕನೇ ತರಗತಿ ತ್ರಿಷಾ ಕೇಳಿದಾಗ ಶಿಕ್ಷಕರು ಅದರೊಳಗಿನ ಗಾಳಿ ತುಂಬಿದ ರಂಧ್ರ ತೋರಿಸಿ ಗಾಳಿಗಿರುವ ಮೇಲ್ಮುಖ ಒತ್ತಡದಿಂದ ತೇಲುತ್ತದೆಂದು ವಿವರಿಸಿದರು.

ಪ್ರಕೃತಿ ಮಡಿಲಲ್ಲಿ ಒಂದಕ್ಕೊಂದು ತಬ್ಬಿಕೊಂಡು ಬೆಳೆದುನಿಂತಿದ್ದ ಆಲ ಹಾಗೂ ನೇರಳೆ ಮರದ ಜೋಡಿ ಚಿಣ್ಣರನ್ನು ಮೋಡಿ ಮಾಡಿತ್ತು. ಏಡಿಯನ್ನು ಕಂಡ ವಿದ್ಯಾರ್ಥಿಗಳಿಗೆ ಅದರ ಶರೀರ ರಚನೆಯನ್ನು ಕುರಿತು ಶಿಕ್ಷಕರು ವಿವರಿಸಿದರು. ಬಳ್ಳಿಯಲ್ಲಿ ಬಿಟ್ಟ ಕಲ್ಲಂಗಡಿ ಹಣ್ಣು ಸಹ ಅವರ ಕಲಿಕೆಯ ವಸ್ತುವಾಯಿತು.

ಒಗರು ರುಚಿಯ ನೇರಳೆ ಹಣ್ಣನ್ನು ತಿನ್ನುತ್ತಾ, ಪದ್ಯ, ಹಾಡುಗಳನ್ನು ಹಾಡುತ್ತಾ ವಿದ್ಯಾರ್ಥಿಗಳ ನಲಿದರು.

ನಾಲ್ಕುಗೋಡೆಯ ಮಧ್ಯದ ಕಲಿಕೆಗಿಂತ ಪ್ರಕೃತಿಯ ನಡುವಿನ ಪ್ರಾಯೋಗಿಕ ಕಲಿಕೆಯೇ ಹೆಚ್ಚು ಪರಿಣಾಮಕಾರಿ ಎನ್ನುವುದು ಈ ಹೊರಸಂಚಾರದಿಂದ ತಿಳಿಯಿತು ಎಂದು ಶಿಕ್ಷಕಿ ವಿ.ಉಷಾ ಹೇಳಿದರು.

ಆಕಾಶ ಮೇಲೆ ಇಟ್ಟನೋ ನಮ್ಮ ಶಿವ..
ಬಂಡೆಯನ್ನೇ ಸೀಳಿ ಬೆಳೆದ ಮರದ ನೆರಳಿನಲ್ಲಿ ಕುಳಿತು, ‘ಆಕಾಶ ಮೇಲೆ ಇಟ್ಟನೋ ನಮ್ಮ ಶಿವ ಪಾತಾಳ ಕೆಳಗೆ ಬಿಟ್ಟನೋ... ಮಣ್ಣ ಮೇಲೆ ಬಂಡೆ ಇಟ್ಟನೋ ನಮ್ಮ ಶಿವ, ಬಂಡೆ ಮೇಲೆ ಗಿಡ ನೆಟ್ಟನೋ... ಕಲ್ಲಂಗಡಿ ಬಳ್ಳಿಯಲ್ಲಿಟ್ಟನೋ ನಮ್ಮ ಶಿವ ನೇರಳೆ ಹಣ್ಣು ಮರದಲಿಟ್ಟನೋ...’ ಎಂದು ಮಕ್ಕಳು ತಾವು ಕಂಡ ಸಂಗತಿಗಳನ್ನೇ ರಾಗವಾಗಿ ಹಾಡಿ ಕುಣಿದರು.

ಪಾಠದಲ್ಲಿ ಓದಿದ್ದನ್ನು ಪಕೃತಿಯಲ್ಲಿ ಕಂಡೆವು
ಪುಸ್ತಕದಲ್ಲಿ ಓದಿದ ಬಳ್ಳಿಸಸ್ಯ, ಅಪ್ಪುಸಸ್ಯ, ಜಲಸಸ್ಯ, ಕಳ್ಳಿಗಿಡಗಳನ್ನು ನೋಡಿದೆವು. ಬಂಡೆ ಮೇಲೆ ಮರ ನಿಲ್ಲಲು ಕಾರಣ ಬೇರು ಎಂದು ‘ಸಸ್ಯಾಧಾರ ಬೇರು’ ಪಾಠದಲ್ಲಿ ಓದಿದ್ದು ನೆನಪಾಯಿತು. ತಿನ್ನಲು ಕಳ್ಳಿ ಹಣ್ಣು, ನೇರಳೆ ಹಣ್ಣು ಸಿಕ್ಕಿದ್ದು ಖುಷಿಯಾಯಿತು.
-ತ್ರಿಷಾ, ನಾಲ್ಕನೇ ತರಗತಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು