ಶುಕ್ರವಾರ, ಏಪ್ರಿಲ್ 23, 2021
31 °C

ಕುಡಿದ ಮತ್ತಿನಲ್ಲಿ ಸ್ಫೋಟಕ ಬೆಂಕಿಗೆ ಎಸೆದರು!

ದೀಪಕ್ ಎನ್. Updated:

ಅಕ್ಷರ ಗಾತ್ರ : | |

DH photo

ಚಿಕ್ಕಬಳ್ಳಾಪುರ: ಗುಡಿಬಂಡೆ ತಾಲ್ಲೂಕಿನ ಹಿರೇನಾಗವಲ್ಲಿ ಸ್ಫೋಟ ದುರಂತಕ್ಕೆ ಸಂಬಂಧಿಸಿದಂತೆ ಕುತೂಹಲಕಾರಿ ಮಾಹಿತಿ ಹೊರಬೀಳುತ್ತಿವೆ.

ಕ್ರಷರ್‌ನಲ್ಲಿದ್ದ ಜಿಲೆಟಿನ್‌ ಮತ್ತು ಇತರ ಸ್ಫೋಟಕಗಳನ್ನು ಎಸೆಯಲು ಸಮೀಪದ ಕುರುಚಲು ಅರಣ್ಯ ಪ್ರದೇಶಕ್ಕೆ ತೆರಳಿದ್ದ ಕೆಲಸಗಾರರು ಮಧ್ಯರಾತ್ರಿ ಬೆಂಕಿ (ಫೈರ್‌ ಕ್ಯಾಂಪ್‌) ಹಾಕಿ ಪಾರ್ಟಿ ಮಾಡಿದ್ದರು.ಪಾರ್ಟಿ ಬಳಿಕ ಕುಡಿದ ಮತ್ತಿನಲ್ಲಿ ಸ್ಫೋಟಕಗಳನ್ನು ಬೆಂಕಿಗೆ ಎಸೆದಿದ್ದಾರೆ. ಅದರಿಂದ ಈ ಅನಾಹುತ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 

ಸ್ಫೋಟಕಗಳನ್ನು ಕ್ರಷರ್‌ನಿಂದ ಒಂದೂವರೆಯಿಂದ ಎರಡು ಕಿಲೊಮೀಟರ್‌ ದೂರದಲ್ಲಿರುವ ಕೊಠಡಿಯೊಂದರಲ್ಲಿ ಸಂಗ್ರಹಿಸಲಾಗಿತ್ತು. ಸೋಮವಾರ ಅಧಿಕಾರಿಗಳ ದಾಳಿ ನಂತರ ಹೆದರಿದ ಕ್ರಷರ್‌ ಮಾಲೀಕರು ಸ್ಫೋಟಕಗಳನ್ನು ಸಮೀಪದ ಅರಣ್ಯದಲ್ಲಿ ಬಿಸಾಡುವಂತೆ ಕೆಲಸಗಾರರಿಗೆ ಸೂಚಿಸಿದ್ದರು ಎನ್ನಲಾಗಿದೆ.

ಮಾಲೀಕರ ಸೂಚನೆಯಂತೆ ಕ್ರಷರ್‌ ಅವರು ಸ್ಫೋಟಕಗಳನ್ನು ಅದೇ ದಿನ ರಾತ್ರಿ ವಾಹನದಲ್ಲಿ ಅರಣ್ಯಕ್ಕೆ ಕೊಂಡೊಯ್ದಿದ್ದರು ಎಂಬ ಮಾಹಿತಿಯನ್ನು ದುರಂತದಲ್ಲಿ ಬದುಕುಳಿದ ವಾಹನ ಚಾಲಕ ರಿಯಾಜ್‌ ಪೊಲೀಸರ ಎದುರು ಬಾಯ್ಬಿಟ್ಟಿದ್ದಾರೆ. 

ಸ್ಫೋಟಕಗಳನ್ನು ಕಾಡಿನಲ್ಲಿ ಬಿಸಾಡಿ ಬರುವ ಯೋಚನೆ ಇತ್ತೇ ಹೊರತು ಬೆಂಕಿಗೆ ಎಸೆಯುವ ಯೋಚನೆ ಇರಲಿಲ್ಲ. ಪಾರ್ಟಿ ಬಳಿಕ ಮದ್ಯದ ಅಮಲಿನಲ್ಲಿ ಅನಿರೀಕ್ಷಿತವಾಗಿ ಸ್ಫೋಟಕಗಳನ್ನು ಬೆಂಕಿಗೆ ಎಸೆದಿದ್ದಾರೆ. 

ರಿಯಾಜ್‌ ಅವರ ವಾಹನದಲ್ಲಿಯೇ ಸ್ಫೋಟಕಗಳನ್ನು ಅರಣ್ಯ ಪ್ರದೇಶಕ್ಕೆ ಸಾಗಿಸಲಾಗಿತ್ತು. ವಾಹನದಲ್ಲಿ ಸ್ಫೋಟಕಗಳಿದ್ದ ಸಂಗತಿಯನ್ನು ತಮಗೆ ತಿಳಿಸಿರಲಿಲ್ಲ ಎಂದು ಪೊಲೀಸರಿಗೆ‌ ತಿಳಿಸಿದ್ದಾರೆ. ರಿಯಾಜ್‌ ನೀಡಿರುವ ಹೇಳಿಕೆ ಮತ್ತು ಸ್ಥಳ ಪರಿಶೀಲನೆ ನಡೆಸಿದ ತಜ್ಞರು ನೀಡಿದ ವರದಿಯಲ್ಲೂ ಬಹುತೇಕ ಸಾಮ್ಯತೆಗಳಿವೆ.

ಘಟನೆ ನಡೆದ ಸ್ಥಳದಲ್ಲಿ ಮದ್ಯದ ಬಾಟಲಿ, ಸಿಗರೇಟ್‌ ತುಂಡುಗಳು ಪತ್ತೆಯಾಗಿದ್ದು, ಅಂದು ರಾತ್ರಿ ಪಾರ್ಟಿ ನಡೆದಿರುವುದನ್ನು ಖಚಿತಪಡಿಸಿವೆ. ದುರಂತದಲ್ಲಿ ಬದುಕುಳಿದಿರುವ ರಿಯಾಜ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಹುಣಸೋಡು ಪರಿಣಾಮ:

ಶಿವಮೊಗ್ಗ ಸಮೀಪದ ಹುಣಸೋಡು ಸ್ಫೋಟ ಘಟನೆಯ ನಂತರ ಜಿಲ್ಲಾಡಳಿತ ಮೂರು ಸಭೆ ನಡೆಸಿತ್ತು. ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ, ಸ್ಫೋಟಕಗಳ ಸರಬರಾಜು, ದಾಸ್ತಾನು ಮತ್ತು ಬಳಕೆ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಹಾಗೂ ನಿಯಮಿತವಾಗಿ ಗಣಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರು‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಅದಾದ ನಂತರ ಫೆಬ್ರುವರಿ ಮೊದಲ ವಾರದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ, ಗಣಿ ಇಲಾಖೆ ಮತ್ತು ಪೊಲೀಸ್‌ ಅಧಿಕಾರಿಗಳ ತಂಡ ಜಿಲ್ಲೆಯ ಎಲ್ಲ ಗಣಿಗಳಿಗೂ ಭೇಟಿ ನೀಡಿ ತಪಾಸಣೆ ನಡೆಸಿತ್ತು. ಭ್ರಮರವಾಸಿನಿ ಕ್ರಷರ್‌ಗೆ ಫೆಬ್ರುವರಿ 7ರಂದು ಎಸ್‌.ಪಿ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದರು.

ಲೈಸನ್ಸ್‌ ಇದೆ:

ಭ್ರಮರವಾಸಿನಿ ಕ್ರಷರ್‌ಗೆ ಲೈಸನ್ಸ್‌ ಇದೆ. ಆದರೆ, ಸ್ಫೋಟಕಗಳ ದಾಸ್ತಾನು ಮತ್ತು ಬಳಕೆಯಲ್ಲಿ ಕಾನೂನು ಪಾಲನೆ ಮಾಡುತ್ತಿರಲಿಲ್ಲ. ದೂರು ದಾಖಲಿಸಿಕೊಂಡು, ಫೆ.7 ರಂದೇ ಕ್ರಷರ್‌ ಸ್ಥಗಿತಗೊಳಿಸಲು ಆದೇಶಿಸಲಾಗಿತ್ತು. ಸೋಮವಾರ ಪರಿಶೀಲನೆಗಾಗಿ ಪೊಲೀಸರು ಮತ್ತೆ ಸ್ಥಳಕ್ಕೆ ಭೇಟಿ ನೀಡಿದ್ದರು. ಇದರಿಂದ ಆತಂಕಕ್ಕೆ ಒಳಗಾದ ಮಾಲೀಕರು ಅಕ್ರಮವಾಗಿ ದಾಸ್ತಾನು ಮಾಡಿದ್ದ ಸ್ಫೋಟಕಗಳನ್ನು ಸಮೀಪದ ಅರಣ್ಯದಲ್ಲಿ ವಿಲೇವಾರಿ ಮಾಡಲು ಕೆಲಸಗಾರರಿಗೆ ಸೂಚನೆ ನೀಡಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು