ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಡಿ ರೈತರಿಗೆ ಸಿಕ್ಕಿದ್ದು ₹14ಕೋಟಿ ಪರಿಹಾರ!

Published 9 ಫೆಬ್ರುವರಿ 2024, 6:23 IST
Last Updated 9 ಫೆಬ್ರುವರಿ 2024, 6:23 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ತೀವ್ರ ಮಳೆ ಕೊರತೆಯಿಂದ ಜಿಲ್ಲೆಯ ಆರೂ ತಾಲ್ಲೂಕುಗಳನ್ನು ಸಹ ಸರ್ಕಾರ ತೀವ್ರ ಬರಪೀಡಿತ ಎಂದು ಘೋಷಿಸಿದೆ. 

ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್) ಮಾರ್ಗಸೂಚಿ ಅನ್ವಯ ಜಿಲ್ಲೆಯ ರೈತರಿಗೆ ಬರ ಪರಿಹಾರಕ್ಕಾಗಿ ₹ 64 ಕೋಟಿ ಬಿಡುಗಡೆ ಆಗಬೇಕಿದೆ. ಆದರೆ ಜಿಲ್ಲೆಯ ರೈತರಿಗೆ ಸದ್ಯ ಸಿಕ್ಕಿರುವುದು ಬರೀ ₹ 14 ಕೋಟಿ ಮಾತ್ರ.

ರಾಜ್ಯದಲ್ಲಿ ₹ 37 ಸಾವಿರ ಕೋಟಿಯಷ್ಟು ಬೆಳೆ ಹಾನಿಯಾಗಿದೆ. ₹ 15 ಸಾವಿರ ಕೋಟಿ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಮನವಿ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ಹಾಗೂ ಕೇಂದ್ರ ಸಚಿವರನ್ನು ಭೇಟಿ ಮಾಡಿ ಈ ಬಗ್ಗೆ ಮನವಿ ಸಹ ಸಲ್ಲಿಸಿದ್ದಾರೆ. 

ಈ ನಡುವೆ ರಾಜ್ಯ ಸರ್ಕಾರವು ರೈತರಿಗೆ ಬರ ಪರಿಹಾರದ ರೂಪದಲ್ಲಿ ₹ 2 ಸಾವಿರ ನೀಡುವುದಾಗಿ ಪ್ರಕಟಿಸಿದೆ. ಇದು ಮೊದಲನೇ ಕಂತು ಎಂದೂ ಹೇಳಿದೆ. ಆ ಪ್ರಕಾರ ಜಿಲ್ಲೆಯ ರೈತರಿಗೆ ಇಲ್ಲಿಯವರೆಗೆ ₹ 14.31 ಕೋಟಿ ಬರ ಪರಿಹಾರ ಬಿಡುಗಡೆ ಆಗಿದೆ. 

ಜಿಲ್ಲೆಯಲ್ಲಿ ಒಟ್ಟು 75,208 ಹೆಕ್ಟೇರ್ ಬೆಳೆ ಹಾನಿಯಾಗಿದೆ. ರಾಜ್ಯದಲ್ಲಿ ಬರ ಘೋಷಣೆಯಾಗಿ ನಾಲ್ಕೈದು ತಿಂಗಳು ಕಳೆದರೂ ರೈತರಿಗೆ ಮಾತ್ರ ಬರ ಪರಿಹಾರ ಪೂರ್ಣ ಪ್ರಮಾಣದಲ್ಲಿ ದೊರೆತಿಲ್ಲ. ಇದರಿಂದ ರೈತರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ರೈತ ಸಂಘಟನೆಗಳು ಬರ ಪರಿಹಾರ ಬಿಡುಗಡೆ ಮಾಡುವಂತೆ ಆಗಾಗ್ಗೆ ಜಿಲ್ಲಾಧಿಕಾರಿ ಅವರ ಮೂಲಕ ಸರ್ಕಾರಕ್ಕೂ ಮನವಿ ಸಲ್ಲಿಸುತ್ತಿವೆ.

₹ 14.31 ಕೋಟಿ ಜಮೆ: ಮೊದಲ ಹಂತದಲ್ಲಿ ಜಿಲ್ಲೆಯ 59,911 ಮಂದಿ ರೈತರಿಗೆ 55,592 ಎಕರೆ ವಿಸ್ತೀರ್ಣಕ್ಕೆ ಕನಿಷ್ಠ ₹ 1000 ಮತ್ತು ಗರಿಷ್ಠ ₹ 2000 ಮೀರದಂತೆ ಒಟ್ಟು ₹ 10.85 ಕೋಟಿ ಬಿಡುಗಡೆ ಆಗಿದೆ. ಎರಡನೇ ಹಂತದಲ್ಲಿ 18,993 ರೈತರಿಗೆ 21,094 ಎಕರೆ ವಿಸ್ತೀರ್ಣಕ್ಕೆ
₹ 3.46 ಕೋಟಿ ಬಿಡುಗಡೆಯಾಗಿದೆ.

ಹೀಗೆ ಒಟ್ಟು ಇಲ್ಲಿವರೆಗೂ 78,104 ರೈತರಿಗೆ 76,686 ಎಕರೆ ವಿಸ್ತೀರ್ಣಕ್ಕೆ ಒಟ್ಟು ₹ 14.31 ಕೋಟಿ ಪರಿಹಾರಧನವನ್ನು ರೈತರ ಖಾತೆಗೆ ಜಮೆ ಮಾಡಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ಅಲ್ಲದೇ ಉಳಿಕೆ ಬರ ಪರಿಹಾರವನ್ನು ಸರ್ಕಾರದ ನಿರ್ದೇಶನದಂತೆ ಹಂತ ಹಂತವಾಗಿ ಬಿಡುಗಡೆ ಮಾಡಲಾಗುತ್ತದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಕೇಂದ್ರ ತಂಡಕ್ಕೆ ₹ 463.49 ಕೋಟಿ ನಷ್ಟದ ಅಂದಾಜು: ಕಳೆದ ಅಕ್ಟೋಬರ್‌ನಲ್ಲಿ ಕೇಂದ್ರ ಜಲ ಆಯೋಗದ ನಿರ್ದೇಶಕ ವಿ.ಅಶೋಕ್ ಕುಮಾರ್ ನೇತೃತ್ವದ ಕೇಂದ್ರ ಬರ
ಅಧ್ಯಯನ ತಂಡವು ಜಿಲ್ಲೆಯ ಗೌರಿಬಿದನೂರು ಮತ್ತು ಚಿಕ್ಕಬಳ್ಳಾಪುರ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ
ಬರ ಪರಿಸ್ಥಿತಿಯ ಅಧ್ಯಯನ
ನಡೆಸಿತು. 

ಜಿಲ್ಲೆಯಲ್ಲಿ  ಅಂದಾಜು ₹ 463.49 ಕೋಟಿ ನಷ್ಟವಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಅಂಕಿ ಅಂಶಗಳ ಸಮೇತ ಮಾಹಿತಿ ನೀಡಿದ್ದರು. 

ಜಿಲ್ಲೆಯ 2.26 ಲಕ್ಷ ಹೆಕ್ಟೇರ್ ಕೃಷಿ ಪ್ರದೇಶದಲ್ಲಿ 1.39 ಹೆಕ್ಟೇರ್ ಅಂದರೆ ಶೇ 62 ರಷ್ಟು ಪ್ರದೇಶ ಮಳೆ ಆಶ್ರಿತವಾಗಿದೆ. ಈ ಪ್ರದೇಶದ ರೈತರ ಹೆಚ್ಚಿನ ಬೆಳೆ ನಷ್ಟಕ್ಕೆ ಒಳಗಾಗಿದೆ. ಒಟ್ಟಾರೆ ಬಿತ್ತನೆಯಾದ 1,09,025 ಹೆಕ್ಟೇರ್ ಕೃಷಿ ಪ್ರದೇಶದಲ್ಲಿ 75,208.20 ಹೆಕ್ಟೇರ್ ಪ್ರದೇಶದ ಕೃಷಿ ಬೆಳೆಗಳು ಹಾನಿಯಾಗಿವೆ ಎಂದು ಅಧಿಕಾರಿಗಳು ಕೇಂದ್ರ ತಂಡಕ್ಕೆ ವಿವರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT