ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ | ಹರಿದು ಹಂಚಲಿದೆಯೇ ‘ತೋಟಗಾರಿಕೆ’ ಜಮೀನು

ಹೂ ಮಾರುಕಟ್ಟೆ ಮತ್ತು ಮೆಗಾ ಡೇರಿಗೆ ತಲಾ 15 ಎಕರೆ ಜಮೀನು ನೀಡುವಂತೆ ಮನವಿ
Published 24 ಫೆಬ್ರುವರಿ 2024, 7:01 IST
Last Updated 24 ಫೆಬ್ರುವರಿ 2024, 7:01 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನಗರ ಹೊರವಲಯದ ತೋಟಗಾರಿಕಾ ಸಸ್ಯಕ್ಷೇತ್ರಕ್ಕೆ ಸೇರಿದ ಜಮೀನು ಭವಿಷ್ಯದಲ್ಲಿ ಹರಿದು ಹಂಚಿ ಹೋಗುವ ಸಾಧ್ಯತೆ ಹೆಚ್ಚಿದೆ. ಸದ್ಯ ಜಿಲ್ಲಾ ತೋಟಗಾರಿಕಾ ಇಲಾಖೆ ಉಪನಿರ್ದೇಶಕರ ಕಚೇರಿಯನ್ನು ಒಳಗೊಂಡ ಸಸ್ಯ ಕ್ಷೇತ್ರವು 48 ಎಕರೆ ವಿಸ್ತೀರ್ಣ ಹೊಂದಿದೆ. 

ತೋಟಗಾರಿಕೆ ಇಲಾಖೆಗೆ ಸೇರಿದ ಈ ಜಮೀನಿನಲ್ಲಿ 15 ಎಕರೆಯನ್ನು ಹೂ ಮಾರುಕಟ್ಟೆಗೆ ನೀಡುವಂತೆ ರೈತರು, ಹೂ ವ್ಯಾಪಾರಿಗಳು ಕೋರುತ್ತಿದ್ದಾರೆ. ಹೂ ಮಾರುಕಟ್ಟೆಯ ವಿಚಾರ ಆಗಾಗ್ಗೆ ವಿವಾದದ ರೂಪು ತಾಳಿದ ವೇಳೆ ತೋಟಗಾರಿಕೆ ಇಲಾಖೆಗೆ ಸೇರಿದ 15 ಎಕರೆ ಜಮೀನು ಪಡೆದು ಅಲ್ಲಿ ಹೂ ಮಾರುಕಟ್ಟೆ ನಿರ್ಮಿಸಬೇಕು ಎನ್ನುವ ಮಾತುಗಳು ಕೇಳಿ ಬರುತ್ತವೆ. ಈ ಬಗ್ಗೆ ಜಿಲ್ಲಾಡಳಿತಕ್ಕೂ ಮನವಿ ಸಲ್ಲಿಸಲಾಗಿದೆ. 

ಮತ್ತೊಂದು ಕಡೆ ತೋಟಗಾರಿಕಾ ಸಸ್ಯ ಕ್ಷೇತ್ರಕ್ಕೆ ಹೊಂದಿಕೊಂಡಿರುವ ಮೆಗಾ ಡೇರಿಯ ಕಾರ್ಯಚಟುವಟಿಕೆಗಳ ವಿಸ್ತರಣೆಗೆ ಮತ್ತೆ 15 ಎಕರೆ ತೋಟಗಾರಿಕೆ ಜಮೀನು ನೀಡುವಂತೆ ಜಿಲ್ಲೆಯ ಸಹಕಾರಿ ಧುರೀಣರು ಹಾಗೂ ಕೋಚಿಮುಲ್ ನಿರ್ದೇಶಕರು ಮುಖ್ಯಮಂತ್ರಿಗೆ ಮನವಿ ಸಹ ಸಲ್ಲಿಸಿದ್ದಾರೆ. ಸರ್ಕಾರ ಜಮೀನು ನೀಡಿದರೆ ತೋಟಗಾರಿಕಾ ಸಸ್ಯ ಕ್ಷೇತ್ರ ಮತ್ತಷ್ಟು ಕುಗ್ಗಲಿದೆ. 

ಮೆಗಾ ಡೇರಿ ನಿರ್ಮಾಣಕ್ಕೆ 2013ರಲ್ಲಿ ಸಸ್ಯ ಕ್ಷೇತ್ರದ 15 ಎಕರೆ ಜಮೀನು ನೀಡಲಾಗಿದೆ. ಬಿ.ಎಸ್.ಯಡಿಯೂರಪ್ಪ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ವೇಳೆ ಮೆಗಾ ಡೇರಿ ನಿರ್ಮಾಣಕ್ಕಾಗಿ ತೋಟಗಾರಿಕಾ ಸಸ್ಯ ಕ್ಷೇತ್ರದ 15 ಎಕರೆ ಹಾಗೂ ₹10 ಕೋಟಿಯನ್ನು ಮಂಜೂರು ಮಾಡಿದ್ದರು. 

ಈಗ ಮೆಗಾ ಡೇರಿಯಲ್ಲಿ ಹಾಲಿನ ಪ್ಯಾಕೆಟ್ ಘಟಕ ನಿರ್ಮಾಣಕ್ಕೆ ಕೋಲಾರ–ಚಿಕ್ಕಬಳ್ಳಾಪುರ ಹಾಲು ಒಕ್ಕೂಟವು (ಕೋಚಿಮುಲ್) ₹40 ಕೋಟಿ ವೆಚ್ಚದ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಗೊಳಿಸಿದೆ. ಈಗ ಮತ್ತೆ ಹಾಲಿನ ಪ್ಯಾಕೆಟ್ ಘಟಕ ನಿರ್ಮಾಣ ಹಾಗೂ ಕಾರ್ಯಚಟುವಟಿಕೆಗಳ ವಿಸ್ತರಣೆಗೆ ಹೆಚ್ಚುವರಿಯಾಗಿ 15 ಎಕರೆ ತೋಟಗಾರಿಕೆ ಇಲಾಖೆಯ ಜಮೀನು ನೀಡುವಂತೆ ಕಾಂಗ್ರೆಸ್ ಸರ್ಕಾರಕ್ಕೆ ಕೋಚಿಮುಲ್ ನಿರ್ದೇಶಕರು ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ. ಕೋಚಿಮುಲ್ ಆಡಳಿತ ಕಾಂಗ್ರೆಸ್ ಹಿಡಿತದಲ್ಲಿ ಇದೆ.

ಬಸವರಾಜ ಬೊಮ್ಮಾಯಿ ಮತ್ತು ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೇ ತೋಟಗಾರಿಕಾ ಇಲಾಖೆಯ 15 ಎಕರೆ ಜಮೀನನ್ನು ಮೆಗಾ ಡೇರಿಗೆ ದೊರೆಕಿಸಿಕೊಡುವಂತೆ ನಿರ್ದೇಶಕರು ಮನವಿ ಸಲ್ಲಿಸಿದ್ದರು. ಒಂದು ವೇಳೆ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಪ್ರತ್ಯೇಕವಾದರೆ ಕಾರ್ಯಚಟುವಟಿಕೆ ಕೈಗೊಳ್ಳಲು ಮತ್ತಷ್ಟು ಜಮೀನು ಅಗತ್ಯ ಎನ್ನುವುದು ಜಿಲ್ಲೆಯ ಕೋಚಿಮುಲ್ ನಿರ್ದೇಶಕರ ಪ್ರತಿಪಾದನೆ. 

ನಿತ್ಯ ಐದು ಲಕ್ಷ ಲೀಟರ್ ಹಾಲಿನ ಪ್ಯಾಕೆಟ್‌ಗಳನ್ನು ಸಿದ್ಧಗೊಳಿಸುವ ಸಾಮರ್ಥ್ಯದ ಘಟಕ ನಿರ್ಮಾಣಕ್ಕೆ ಯೋಜಿಸಲಾಗಿದೆ. ಆಧುನಿಕ ತಂತ್ರಜ್ಞಾನದ ಉಪಕರಣಗಳು, ಕಟ್ಟಡಗಳನ್ನು ನಿರ್ಮಿಸಲು ಮುಂದಾಗಿದೆ. ಘಟಕದ ಕಟ್ಟಡಗಳು, ಯಂತ್ರೋಪಕರಣಗಳು ಇತ್ಯಾದಿ ವಿಚಾರಗಳು ಡಿಪಿಆರ್‌ನಲ್ಲಿ ಇವೆ. ಆದರೆ ಕಟ್ಟಡ ನಿರ್ಮಾಣಕ್ಕೆ ಜಾಗದ ವಿಚಾರವೇ ಜಿಜ್ಞಾಸೆಯಲ್ಲಿ ಇದೆ.

ಹೂ ಮಾರುಕಟ್ಟೆಗೂ ಜಮೀನು: ಹೂವು ಮಾರುಕಟ್ಟೆ ನಿರ್ಮಾಣಕ್ಕೆ ಅಗಲಗುರ್ಕಿ ಗ್ರಾಮದ ಸರ್ವೆ ನಂ 122ರಲ್ಲಿ 9.05 ಎಕರೆ ಜಮೀನನ್ನು ಜಿಲ್ಲಾಡಳಿತ ಮಂಜೂರು ಸಹ ಮಾಡಿದೆ. ಆದರೆ ಮಾರುಕಟ್ಟೆ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ದೊರೆತಿಲ್ಲ. ಬಹುತೇಕ ವರ್ತಕರು ತಾತ್ಕಾಲಿಕ ಹೂವಿನ ಮಾರುಕಟ್ಟೆಯಲ್ಲಿ ವಹಿವಾಟು ನಡೆಸುತ್ತಿದ್ದರೆ ಕೆಲವರು ಎಪಿಎಂಸಿಯಲ್ಲಿ ವಹಿವಾಟು ನಡೆಸುತ್ತಿದ್ದಾರೆ.

ಅಗಲಗುರ್ಕಿ ಬಳಿಯ ಜಮೀನು ತಗ್ಗು, ದಿನ್ನೆ ಮತ್ತು ಬೆಟ್ಟಗಳಿಂದ ಆವೃತವಾಗಿದೆ. ಸಮತಟ್ಟಾಗಿಲ್ಲ. ಈ ಕಾರಣದಿಂದ ಇದು ಹೂ ಮಾರುಕಟ್ಟೆಗೆ ಸೂಕ್ತವಲ್ಲ ಎನ್ನುವ ಮಾತುಗಳಿವೆ. ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಸುಧಾಕರ್ ಸಹ ಜಾಗವನ್ನು ಪರಿಶೀಲಿಸಿದ್ದರು.

ರೈತರಿಗೆ ಮತ್ತು ವ್ಯಾಪಾರಿಗಳ ವಹಿವಾಟಿಗೆ ಅನುಕೂಲವಾಗುವ, ನಗರಕ್ಕೆ ಹತ್ತಿರವಿರುವ ಸ್ಥಳವನ್ನೇ ಹೂ ಮಾರುಕಟ್ಟೆಗೆ ಆಯ್ಕೆ ಮಾಡಿಕೊಳ್ಳಬೇಕಾಗಿದೆ. ಈ ವಿಚಾರವಾಗಿಯೇ ಹಲವು ಬಾರಿ ಹಗ್ಗಜಗ್ಗಾಟ ಸಹ ನಡೆದಿದೆ. ತೋಟಗಾರಿಕಾ ಸಸ್ಯ ಕ್ಷೇತ್ರದಲ್ಲಿನ 15 ಎಕರೆಯಲ್ಲಿ ಹೂ ಮಾರುಕಟ್ಟೆ ನಿರ್ಮಿಸಬೇಕು ಎನ್ನುವ ವಿಚಾರಗಳು ಸಹ ಚರ್ಚೆಯಾಗಿವೆ. ಜಮೀನು ಕೋರಿ ಜಿಲ್ಲಾಡಳಿತಕ್ಕೆ ಪ್ರಸ್ತಾವಗಳೂ ಹೋಗಿವೆ ಎನ್ನಲಾಗುತ್ತಿದೆ. 

ಹೀಗೆ ಮೆಗಾ ಡೇರಿಗೆ ಮತ್ತು ಹೂ ಮಾರುಕಟ್ಟೆ ನಿರ್ಮಾಣಕ್ಕೆ ತೋಟಗಾರಿಕಾ ಸಸ್ಯ ಕ್ಷೇತ್ರದ ಜಮೀನು ನೀಡಿದರೆ ಸಸ್ಯ ಕ್ಷೇತ್ರದ ಜಮೀನು ಹರಿದು ಹಂಚಿಹೋಗಲಿದೆ. ‘ಸರ್ಕಾರದ ಏನು ಹೇಳುತ್ತದೆಯೊ ಅದನ್ನು ಪಾಲಿಸುವುದಾಗಿ’ ತೋಟಗಾರಿಕಾ ಇಲಾಖೆ ಅಧಿಕಾರಿಗಳು ಸಹ ನುಡಿಯುವರು.

‘ಸರ್ಕಾರದ ನಿರ್ಧಾರ’

ಹೂವು ಮಾರುಕಟ್ಟೆ ನಿರ್ಮಾಣಕ್ಕೆ ತೋಟಗಾರಿಕಾ ಇಲಾಖೆ ಸಸ್ಯ ಕ್ಷೇತ್ರದ 15 ಎಕರೆ ಜಮೀನು ಕೇಳಿದ್ದಾರೆ ಎನ್ನುವ ಮಾತು ಇದೆ. ಆದರೆ ನಮಗೆ ಯಾವುದೇ ಪ್ರಸ್ತಾವ ಬಂದಿಲ್ಲ. ಬಹುಶಃ ಜಿಲ್ಲಾಡಳಿತಕ್ಕೆ ಪ್ರಸ್ತಾವ ಸಲ್ಲಿಸಿರಬಹುದು’ ಎಂದು ತೋಟಗಾರಿಕೆ ಇಲಾಖೆ ಜಿಲ್ಲಾ ಉಪನಿರ್ದೇಶಕಿ ಗಾಯತ್ರಿ ‘ಪ್ರಜಾವಾಣಿ’ಗೆ ತಿಳಿಸಿದರು. ‘ಮೆಗಾ ಡೇರಿಗೆ ಸಸ್ಯ ಕ್ಷೇತ್ರದ ಜಮೀನು ಕೇಳಿದ್ದಾರೆ ಎನ್ನುವ ಬಗ್ಗೆ ನನಗೆ ಮಾಹಿತಿ ಇಲ್ಲ. ಜಮೀನು ನೀಡುವ ವಿಚಾರವಾಗಿ ಸರ್ಕಾರ ನಿರ್ಧಾರ ಕೈಗೊಳ್ಳುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT