ಸೋಮವಾರ, ಮೇ 23, 2022
27 °C
ಸ್ತ್ರೀಪ್ರಾಧಾನ್ಯತೆಯ ವಿಶಿಷ್ಟವಾದ ಆಚರಣೆ

ಚಿಕ್ಕಬಳ್ಳಾಪುರ: ನಾಯನಹಳ್ಳಿಯಲ್ಲಿ ಹೊಸದ್ಯಾವರ ಹಬ್ಬ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಸುಮಾರು ಏಳು ನೂರು ವರ್ಷಗಳಿಗೂ ಹಿಂದಿನಿಂದ ಆಚರಿಸಿಕೊಂಡು ಬರುತ್ತಿರುವ ಸ್ತ್ರೀಪ್ರಾಧಾನ್ಯತೆಯ ವಿಶಿಷ್ಟವಾದ ‘ಹೊಸದ್ಯಾವರ’ ಆಚರಣೆಯನ್ನು ತಾಲ್ಲೂಕಿನ ನಾಯನಹಳ್ಳಿಯ ರೈತಮುಖಂಡ ಬಿ.ಎನ್.ಮುನಿಕೃಷ್ಣಪ್ಪ ಅವರ ಮನೆಯಲ್ಲಿ ನಡೆಸಲಾಯಿತು.

ಮೊರಸು ಒಕ್ಕಲಿಗರು ತಮ್ಮ ಕುಲದೇವತೆಯಾದ ಕೆಂಪಾಂಬೆ(ದೊಡ್ಡಾಂಬೆ)ಯನ್ನು ವರ್ಷಕ್ಕೊಮ್ಮೆ ಆರಾಧಿಸುವ ಆಚರಣೆಯೇ ಹೊಸದ್ಯಾವರ. ಇದನ್ನು ದೊಡ್ಡಮ್ಮ(ಪೆದ್ದಮ್ಮ) ಆರಾಧನೆ ಅಥವಾ ಕೊತ್ತದ್ಯಾವರ ಎಂದು ಕೂಡ ಕರೆಯುವರು.

ಹೊಸದ್ಯಾವರ ಹಬ್ಬದಲ್ಲಿ ಭಾಗವಹಿಸಿದ ಮಹಿಳೆಯರೆಲ್ಲ ಬಿಳಿಯ ಬಣ್ಣದ ಸೀರೆಯನ್ನು ತೊಟ್ಟು ಬೆರಳಿಗೆ ಬೆಳ್ಳಿಯ ಉಂಗುರ ಹಾಕಿಕೊಂಡಿದ್ದರು. ತಲೆಯ ಮೇಲೆ ಮಡಿಕೆ ಮತ್ತು ತಂಬಿಟ್ಟಿನ ದೀಪ ಹೊರುವ ಮೂಲಕ ದೇವರಲ್ಲಿ ತಮ್ಮದೇ ಆದ ರೀತಿಯ ಪ್ರಾರ್ಥನೆ ಸಲ್ಲಿಸಿದರು. ದೀಪಾವಳಿ ಹಬ್ಬದ ನಂತರ ಎರಡು ವಾರ­ದೊಳಗೆ ಆಚರಿಸುವ ಹಬ್ಬದಲ್ಲಿ ಪಾಲ್ಗೊಳ್ಳಲೆಂದೇ ಮಹಿಳೆಯರು ಒಂದು ದಿನದ ಮುಂಚೆಯೇ ಸಕಲ ಸಿದ್ಧತೆ ಮಾಡಿಕೊಂಡಿರುತ್ತಾರೆ. ಈ ಎಲ್ಲ ವಿಶಿಷ್ಟ ಆಚರಣೆ ಹಿಂದೆ ಒಂದು ಆಸಕ್ತಿಮಯ ಕತೆಯೂ ಇದೆ.
98 ವರ್ಷದ ಅಜ್ಜಿಯಿಂದ ಮೊದಲುಗೊಂಡು, ಕುಟುಂಬಕ್ಕೆ ಹೊಸದಾಗಿ ಸೇರ್ಪಡೆಯಾದ ನವ ವಿವಾಹಿತೆವರೆಗೆ ಎಲ್ಲರೂ ಪಾಲ್ಗೊಳ್ಳಲು ಅವಕಾಶವಿರುವ ಈ ಹಬ್ಬದಲ್ಲಿ ಕೆಲವಾರು ನಿಯಮಗಳನ್ನು ತಪ್ಪದೇ ಪಾಲಿಸಬೇಕು. ಪೂರ್ವಜರ ಕಾಲದಿಂದಲೂ ನಡೆದುಕೊಂಡು ಬಂದಿರುವ ಪದ್ಧತಿಯಲ್ಲಿ ಅಲ್ಪಸ್ವಲ್ಪವೂ ಬದಲಾವಣೆಗಳು ಆಗಬಾರದು. ಏನಾದರೂ ಸ್ವಲ್ಪ ಎಡವಟ್ಟು ಘಟಿಸಿದರೂ ಅದನ್ನು ಅಪಶಕುನವೆಂದೇ ಭಾವಿಸಲಾಗುತ್ತದೆ. ಈ ಕಾರಣದಿಂದಲೇ ಈ ಹಬ್ಬದ ಆಚರಣೆಯಲ್ಲಿ ಪಾಲ್ಗೊಳ್ಳುವ ಮಹಿಳೆಯರು ತಮ್ಮ ಕುಟುಂಬದ ಹಿರಿಯರಿಂದ ಮೊದಲೇ ತರಬೇತಿ ಪಡೆಯುತ್ತಾರೆ.

ವರ್ಷಕ್ಕೊಮ್ಮೆ ಮಾತ್ರ ನಡೆಯುವ ಈ ರೀತಿಯ ವಿಶಿಷ್ಟ ಪದ್ಧತಿಯಲ್ಲಿ ಭಾಗಿದಾರರಾಗಲು ಮನೆ­ತನದ ಕುಟುಂಬ ಸದಸ್ಯರೆಲ್ಲ ಒಂದೆಡೆ ಸೇರುತ್ತಾರೆ. ತಾಲ್ಲೂಕಿನ ನಾಯನಹಳ್ಳಿಯಲ್ಲಿ ಭಾನುವಾರ ಮಹಿಳೆಯರೆಲ್ಲ ಸೇರಿ ಸಂಭ್ರಮಪಟ್ಟರು.

‘ಹೊಸದ್ಯಾವರ ಹಬ್ಬ ಎಂಬುದು ಇತ್ತೀಚಿನ ವರ್ಷದ್ದಲ್ಲ, ನಮ್ಮ ಪೂರ್ವಜರ ಕಾಲದಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ. ಇದರ ಆಚರಣೆಗೆಂದೇ ಹೊಚ್ಚಹೊಸ ಮಡಕೆಯೊಂದನ್ನು ತರುತ್ತೇವೆ. ಅದರೊಳಗೆ ತುಪ್ಪದ ದೀಪ ಇಡುತ್ತೇವೆ. ಅದು ಆರದಂತೆ ಎಚ್ಚರವಹಿಸುತ್ತೇವೆ. ಅದನ್ನು ಪೂಜೆ ಮಾಡುತ್ತೇವೆ.
ಮನೆತನದ 20ಕ್ಕೂ ಹೆಚ್ಚು ಮಹಿಳೆ­ಯರು ಮನೆಯ ಹೊರ ಆವರಣದಲ್ಲಿ ನಿಂತು ಒಬ್ಬೊಬ್ಬರಾಗಿ ತಲೆಯ ಮೇಲೆ ಮಡಕೆ ಹೊತ್ತು­ಕೊಳ್ಳುತ್ತೇವೆ. ಕೈಯಲ್ಲಿ ವೀಳ್ಯದ ಎಲೆ ಹಿಡಿದು ಅದರ ಮೇಲೆ ಸ್ವಲ್ಪ ಸ್ವಲ್ಪ ನೀರು ಸುರಿದುಕೊಂಡು ಮನೆಯಂಗಳಕ್ಕೆ ಹಾಕುತ್ತೇವೆ. ತಂಬಿಟ್ಟಿನ ದೀಪ­ವನ್ನು ತಲೆಯ ಮೇಲೆ ಇಟ್ಟು ಅದೇ ರೀತಿಯಲ್ಲಿ ನೀರು ಹಾಕುತ್ತೇವೆ. ಯಾವುದೇ ಕಾರಣಕ್ಕೂ ದೀಪ ಆರಬಾರದು’ ಎಂದು ಬಿ.ಎನ್.ನಾರಾಯಣಮ್ಮ ‘ಪ್ರಜಾವಾಣಿ’ಗೆ ತಿಳಿಸಿದರು.

‘ಒಂದೊಂದು ಮನೆತನದಲ್ಲಿ ಒಂದೊಂದು ರೀತಿಯ ಪದ್ಧತಿ ಇರುತ್ತದೆ. ಕೆಲ ಮನೆತನಗಳಲ್ಲಿ ಎಲ್ಲ ಮಹಿಳೆಯರು ಹೊಚ್ಚಹೊಸ ಸೀರೆಯನ್ನೇ ತೊಡಬೇಕು. ಇನ್ನೂ ಕೆಲ ಕಡೆ ಬಣ್ಣಬಣ್ಣದ ಅಥವಾ ಶ್ವೇತ ಬಣ್ಣದ ಸೀರೆಯನ್ನೇ ತೊಡಬೇಕು. ಹಬ್ಬದ ಆಚರಣೆಯ ಹಿಂದಿನ ರಾತ್ರಿಯಿಂದಲೇ ಉಪವಾಸ ಮಾಡಬೇಕು. ನೀರು ಬಿಟ್ಟರೆ ಮತ್ತೇನನ್ನೂ ಸೇವಿಸಬಾರದು. ಪೂಜೆ ಪೂರ್ಣ­ಗೊಂಡ ನಂತರ ಕುಂಬಳಕಾಯಿಯಿಂದ ಸಿದ್ಧಪಡಿಸ­ಲಾದ ಅಡುಗೆಯನ್ನೇ ಪ್ರಸಾದದ ರೂಪದಲ್ಲಿ ಸೇವಿಸ­ಬೇಕು. ಹೀಗೆಲ್ಲ ಮಾಡಿದರೆ, ಆಯಾ ಮನೆತನಗಳಿಗೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ನಮ್ಮಲ್ಲಿದೆ’ ಎಂದು ರತ್ನಮ್ಮ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು