ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ ಕ್ಷೇತ್ರ ಸ್ಥಿತಿ–ಗತಿ| ಬಿಜೆಪಿ ಆಂತರಿಕ ಬೇಗುದಿ ಉಲ್ಬಣ

ಚಿಕ್ಕಬಳ್ಳಾಪುರ ಕ್ಷೇತ್ರ: ಕಮಲ ಪಾಳಯ ಮುಖಂಡರಲ್ಲಿ ಮಡುಗಟ್ಟಿದ ಅಸಮಾಧಾನ
Last Updated 14 ಜನವರಿ 2023, 5:56 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಎಷ್ಟೇ ಒಗ್ಗಟ್ಟಿನ ಮಾತುಗಳು ಬಂದರೂ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಪಾಳಯದಲ್ಲಿ ಮೂಲ ಮತ್ತು ವಲಸಿಗರು ಎನ್ನುವ ತಿಕ್ಕಾಟ ಇದ್ದೇ ಇದೆ. ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಈ ಆಂತರಿಕ ಬೇಗುದಿ ಮತ್ತಷ್ಟು ಹೆಚ್ಚುತ್ತಿದೆ. ‘ನಮ್ಮನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ’ ಎಂದು ಮೂಲ ಬಿಜೆಪಿಗರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಕೆಲವು ಮೂಲ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಅಸಮಾಧಾನವನ್ನು ಬಹಿರಂಗವಾಗಿ ತೋಡಿಕೊಂಡರೆ ಬಹಳಷ್ಟು ಮಂದಿ ಪಕ್ಷದ ಆಂತರಿಕ ವಲಯದಲ್ಲಿ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಪಕ್ಷ ಅಧಿಕಾರಕ್ಕೆ ಬಂದಿದ್ದರೂ ಅಧಿಕಾರದ ಸಣ್ಣ ಹುದ್ದೆಗಳನ್ನು ಪಡೆಯವ ಭಾ‌ಗ್ಯವಿಲ್ಲ. ಕನಿಷ್ಠ ನಮ್ಮನ್ನು ವಿಶ್ವಾಸಕ್ಕೂ ತೆಗೆದುಕೊಳ್ಳುತ್ತಿಲ್ಲ ಎನ್ನುವ ಬೇಗುದಿ ಮೂಲ ಬಿಜೆಪಿಗರಲ್ಲಿ ಇದೆ.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಹೆಜ್ಜೆಗುರುತುಗಳನ್ನು ನೋಡಿದರೆ ಈ ಕ್ಷೇತ್ರದಲ್ಲಿ ಕಮಲಕ್ಕೆ ಹೇಳಿಕೊಳ್ಳುವಂತಹ ಬಲ ಇರಲಿಲ್ಲ. 2013ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಎ.ವಿ.ಬೈರೇಗೌಡ ಅವರು 3,910 ಹಾಗೂ 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಡಾ.ಜಿ.ವಿ.ಮಂಜುನಾಥ್ 5,576 ಮತಗಳನ್ನು ಪಡೆದಿದ್ದರು.

ಆದರೆ 2018ರಲ್ಲಿ ಡಾ.ಕೆ.ಸುಧಾಕರ್, ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. ಉಪಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದರು. ಸಚಿವರಾಗಿ ಮುಂದುವರಿದರು. ಸುಧಾಕರ್ ಬಿಜೆಪಿ ಪ್ರವೇಶದ ಮೂಲಕ ಅವರ ಬೆಂಬಲಿಗರು ಬಿಜೆಪಿ ತೆಕ್ಕೆಗೆ ವಾಲಿದರು. ಅಲ್ಲಿಂದ ಕ್ಷೇತ್ರದಲ್ಲಿ ಮೂಲ ಮತ್ತು ವಲಸಿಗ ಬಿಜೆಪಿ ಎನ್ನುವ ಬಣಗಳು ಸೃಷ್ಟಿಯಾದವು.

ನಂತರದ ದಿನಗಳಲ್ಲಿ ರಾಜ್ಯ ಮಟ್ಟದ ಮುಖಂಡರು ಚಿಕ್ಕಬಳ್ಳಾಪುರಕ್ಕೆ ಬಂದಾಗ ‘ಎಲ್ಲರೂ ಬಿಜೆಪಿ ಕಾರ್ಯಕರ್ತರೇ. ಮೂಲ, ವಲಸಿಗ ಎನ್ನುವ ತಾರತಮ್ಯವಿಲ್ಲ’ ಎಂದು ಪ್ರತಿಪಾದಿಸುತ್ತಲೇ ಬಂದರು. ಮತ್ತೊಂದು ಕಡೆ ಸರ್ಕಾರದಲ್ಲಿ ಸಚಿವ ಸುಧಾಕರ್ ಪ್ರಬಲರಾದರು. ಮೂಲ ಬಿಜೆಪಿಯವರ ಕೂಗು ಅರಣ್ಯ ರೋದನ ಎನ್ನುವಂತೆ ಆಯಿತು. ಆದರೆ ಈಗ ವಿಧಾನಸಭಾ ಚುನಾವಣೆಯ ಹೊಸ್ತಿಲಿನಲ್ಲಿ ಅಸಮಾಧಾನದ ಕಿಡಿ ಪ್ರಜ್ವಲಿಸುತ್ತಿದೆ.

ಅಂದಹಾಗೆ ಈ ಮೂಲ ಮತ್ತು ವಲಸಿಗರ ತಿಕ್ಕಾಟ ಇಂದಿನದ್ದೇನೂ ಅಲ್ಲ. ಸುಧಾಕರ್ ಬಿಜೆಪಿಗೆ ಹೆಜ್ಜೆ ಇಟ್ಟ ಆರಂಭದಲ್ಲಿ ತಮ್ಮ ಬೆಂಬಲಿಗರನ್ನು ಕೋಲಾರ–ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಕೋಚಿಮುಲ್‌), ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸಹಕಾರ (ಡಿಸಿಸಿ) ಬ್ಯಾಂಕ್‌ ಮತ್ತು ವಕ್ಫ್ ಮಂಡಳಿಗೆ ನಾಮನಿರ್ದೇಶನ ಮಾಡಿಸಿದ್ದರು. ಇದು ಕೇಸರಿ ಪಾಳೆಯದಲ್ಲಿ ಮೊದಲ ಬಾರಿಗೆ ಅಪಸ್ವರ ಕೇಳುವಂತೆ ಮಾಡಿತ್ತು.

ಈ ಒಳ ಬೇಗುದಿ ವಿಚಾರವಾಗಿ ಅಂದಿನ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಜಿ.ವಿ.ಮಂಜುನಾಥ್ ನೇತೃತ್ವದಲ್ಲಿ ಮುಖಂಡರು ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದರು. ಬೇಸರವನ್ನು ಸೂಚ್ಯವಾಗಿ ವ್ಯಕ್ತಪಡಿಸಿದ್ದರು. ಆ ನಂತರ ವರಿಷ್ಠರು ಈ ಬೇಗುದಿಯನ್ನು ತಣಿಸುವ ಕೆಲಸವನ್ನೂ ಮಾಡಿದ್ದರು.

ಆದರೆ ನಾಮನಿರ್ದೇಶನದ ಹುದ್ದೆಗಳು, ನಿಗಮ ಮಂಡಳಿಗಳಿಗೆ ನೇಮಕ ಹೀಗೆ ಅಧಿಕಾರ ಪಡೆಯುವ ಅವಕಾಶಗಳು ಇದ್ದ ಕಡೆಗಳಲ್ಲೆಲ್ಲಾ ಮೂಲ ಬಿಜೆಪಿ ಕಾರ್ಯಕರ್ತರಿಗಿಂತ ಸಚಿವ ಸುಧಾಕರ್ ತಮ್ಮ ಬೆಂಬಲಿಗರನ್ನು ಕೂರಿಸಿದರು. ಒಂದೆಡೆ ಬೆಂಬಲಿಗರಿಗೆ ಹುದ್ದೆಗಳನ್ನು ಕೊಡಿಸುತ್ತ ಬಿಜೆಪಿಯಲ್ಲಿ ಪ್ರಾಬಲ್ಯವನ್ನು ಸುಧಾಕರ್ ಹೆಚ್ಚಿಸುತ್ತಿದ್ದರೆ ಮತ್ತೊಂದು ಕಡೆ ಮೂಲ ಬಿಜೆಪಿ ಕಾರ್ಯಕರ್ತರು, ಮುಖಂಡರು ಗೌಣವಾಗುತ್ತ ಹೋದರು.

ಅನೇಕ ವರ್ಷಗಳಿಂದ ಪಕ್ಷಕ್ಕೆ ದುಡಿದ ತಮ್ಮ ‘ನಿಷ್ಠೆ’ಯನ್ನು ವರಿಷ್ಠರು ಗುರುತಿಸಲಿಲ್ಲ ಎನ್ನುವ ಬೇಸರ ಮೂಲ ಬಿಜೆಪಿಗರಲ್ಲಿ ಇದೆ. ಬಹಳಷ್ಟು ಮುಖಂಡರು ಮತ್ತು ಕಾರ್ಯಕರ್ತರಿಗೆ ಈ ಅಸಮಾಧಾನವನ್ನು ಬಹಿರಂಗವಾಗಿ ಹೊರಹಾಕಲು ಸಾಧ್ಯವಾಗುತ್ತಿಲ್ಲ. ‘ನಮಗೆ ಆಗುತ್ತಿರುವ ಈ ಅನ್ಯಾಯದ ಬಗ್ಗೆ ಆರ್‌ಎಸ್‌ಎಸ್‌ ಮುಖಂಡರಿಗೂ ತಿಳಿಸಿದ್ದೇವೆ’ ಎನ್ನುತ್ತಿದ್ದಾರೆ. ಆರ್‌ಎಸ್‌ಎಸ್ ಬೆಂಬಲ ಮತ್ತು ಬಲವನ್ನೇ ಮೂಲ ಬಿಜೆಪಿಗರು ಇಂದಿಗೂ ನೆಚ್ಚಿಕೊಂಡಿದ್ದಾರೆ.

‘ತಟಸ್ಥವಾಗಿ ಇದ್ದೇವೆ’

ಬಿಜೆಪಿ ಜಿಲ್ಲಾ ಯುವ ಘಟಕ ಹಾಗೂ ನಗರ ಘಟಕದ ಅಧ್ಯಕ್ಷನಾಗಿ ಸುದೀರ್ಘವಾಗಿ ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ. ಆದರೆ ಮೂಲ ಬಿಜೆಪಿಗರಿಗೆ ಯಾವುದೇ ಅಧಿಕಾರದ ಹುದ್ದೆಗಳು ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಬಿಜೆಪಿ ಮುಖಂಡ ಜಿ.ಆರ್.ಹರಿಕುಮಾರ್.

ಸರ್ಕಾರಿ ವಕೀಲರ ಹುದ್ದೆಯನ್ನು ಕಾಂಗ್ರೆಸ್‌ನವರಿಗೆ ನೀಡಿದ್ದಾರೆ. ಇದು ಯಾವ ನ್ಯಾಯ. ಇಂದಿಗೂ ನನ್ನ ಅರ್ಜಿ ಕಾನೂನು ಸಚಿವರ ಮುಂದೆ ಇದೆ. ಸಚಿವ ಸುಧಾಕರ್ ಪತ್ರ ಕೊಟ್ಟರೆ ಮಾತ್ರ ಕೆಲಸ ಆಗುತ್ತದೆ ಎಂದು ಹೇಳುತ್ತಾರೆ. ಇವರು ಯಾರೊ ಬಂದರು ಎಂದು ನಾವು ನಮ್ಮ ಆತ್ಮಸಾಕ್ಷಿ ಮಾರಿಕೊಳ್ಳಲು ಸಾಧ್ಯವಿಲ್ಲ. ಆದ ಕಾರಣ ತಟಸ್ಥವಾಗಿ ಇದ್ದೇವೆ. ನಮ್ಮ ಹಿರಿಯ ನಾಯಕರು ಈಗ ಬಂದಿರುವ ಮಹಾನ್ ವ್ಯಕ್ತಿಗಳಿಂದ ಸರ್ಕಾರ ಉಳಿದಿದೆ. ಅವರನ್ನು ಅನುಸರಿಸಿಕೊಂಡು ಹೋಗಿ ಎಂದು ಹೇಳುತ್ತಾರೆ ಎಂದರು.

‘ನಾನು’ ಎನ್ನುವುದೇ ಮುಖ್ಯವಾಗಿದೆ

ಇಲ್ಲಿಯವರೆಗೆ ಬಿಜೆಪಿಗೆ ಮತ ಹಾಕದಿದ್ದವರೆಲ್ಲ ಅಧಿಕಾರ ಪಡೆದಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಪಕ್ಷ ಮುಖ್ಯವಾಗಿಲ್ಲ. ‘ನಾನು’ ಎನ್ನುವುದಷ್ಟೇ ಮುಖ್ಯವಾಗಿದೆ. ಬಿಜೆಪಿ ಮೌಲ್ಯಾಧಾರಿತ ಮತ್ತು ಸೈದ್ಧಾಂತಿಕವಾದ ಪಕ್ಷ. ಆದರೆ ಚಿಕ್ಕಬಳ್ಳಾಪುರದಲ್ಲಿ ವ್ಯಕ್ತಿ ಆರಾಧನೆ ಮುಖ್ಯವಾಗಿದೆ ಎಂದು ಎಂದು ‌ಜಿಲ್ಲಾ ಬಿಜೆಪಿ ಮಾಜಿ ಉಪಾಧ್ಯಕ್ಷ ರಘು ತಿಳಿಸಿದರು.

ಇತ್ತೀಚೆಗೆ ನರೇಂದ್ರ ಮೋದಿ ಅವರು ಹುಬ್ಬಳ್ಳಿಯಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮಕ್ಕೆ ಬಂದಿದ್ದಾಗ ವೇದಿಕೆಯಲ್ಲಿ ಸರ್ಕಾರಿ ಕಾರ್ಯಕ್ರಮ ನಡೆದವು. ಹೊರಭಾಗದಲ್ಲಿ ಬಿಜೆಪಿ ಬಾವುಟಗಳನ್ನು ಹಾಕಲಾಗಿತ್ತು. ಆದರೆ ಚಿಕ್ಕಬಳ್ಳಾಪುರ ಉತ್ಸವದಲ್ಲಿ ಒಂದೇ ಒಂದು ಬಿಜೆಪಿ ಬಾವುಟವಿಲ್ಲ ಎಂದು ಹೇಳಿದರು.

ನಮಗೆ ಏನೇ ಬೇಸರ ಇದ್ದರೂ ನಮ್ಮ ಚಿಹ್ನೆ ಕಮಲಕ್ಕೆ ಮತ ಹಾಕಿಕೊಳ್ಳುತ್ತೇವೆ. ಆದರೆ ಸುಧಾಕರ್ ಪರವಾಗಿ ಮತ ಕೇಳುವುದಿಲ್ಲ. ಈ ಹಿಂದೆ ನಗರದಲ್ಲಿಯೇ ಐದಾರು ಆರ್‌ಎಸ್‌ಎಸ್ ಶಾಖೆಗಳು ಇದ್ದವು. ಆದರೆ ಈಗ ಒಂದೇ ಒಂದು ಶಾಖೆ ನಡೆಯುತ್ತಿಲ್ಲ ಎಂದರು.

ಬಹುತೇಕ ಬಲಿಜಿಗರು ಸುಧಾಕರ್ ವಿರುದ್ಧ

ಉಪಚುನಾವಣೆಯಲ್ಲಿ ನಮ್ಮ ಸಮಾಜದ ಮುಖಂಡ ಪಿ.ಸಿ.ಮೋಹನ್ ಮತ್ತು ನಾವೆಲ್ಲರೂ ಬಿಜೆಪಿ ಗೆಲುವಿಗೆ ಕೆಲಸ ಮಾಡಿದೆವು. ಮನೆ ಮನೆಗಳಲ್ಲಿ ಸಭೆ ನಡೆಸಿದೆವು. ಸುಧಾಕರ್ ರಾಜೀನಾಮೆಗೂ ಮುನ್ನ ಬಲಿಜ ಸಮುದಾಯಕ್ಕೆ ಪೂರ್ಣ ಪ್ರಮಾಣದಲ್ಲಿ ‘2ಎ’ ಮೀಸಲಾತಿ ನೀಡುವುದಾಗಿ ಯಡಿಯೂರಪ್ಪ ಭರವಸೆ ನೀಡಿದ್ದರು. ಆದ್ದರಿಂದ ಇಡೀ ಸಮುದಾಯವನ್ನು ಕೇಂದ್ರೀಕರಿಸಿ ಕೆಲಸ ಮಾಡಿದೆವು ಎಂದು ಜಿಲ್ಲಾ ಬಿಜೆಪಿ ಮಾಜಿ ಉಪಾಧ್ಯಕ್ಷ ರಘು ತಿಳಿಸಿದರು.

‘ಸುಧಾಕರ್ ಪಡೆದ 80 ಸಾವಿರ ಮತಗಳಲ್ಲಿ 25ರಿಂದ 30 ಸಾವಿರ ಬಲಿಜಿಗರ ಮತಗಳಿವೆ. ಆದರೆ ಈಗ ಇಡೀ ಕ್ಷೇತ್ರದಲ್ಲಿ ಶೇ 95ರಷ್ಟು ಬಲಿಜಿಗರು ವಿರುದ್ಧ ಇದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT