ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೌಕರರು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿ

ರಾಜಸ್ವ ನಿರೀಕ್ಷಕರು, ಗ್ರಾಮ ಲೆಕ್ಕಿಗರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳಿಗೆ ಕಾನೂನು ಅರಿವು ಕಾರ್ಯಾಗಾರ
Last Updated 29 ಆಗಸ್ಟ್ 2019, 15:26 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಕಾನೂನು ಅರಿವು ನೆರವಿನ ಕಾರ್ಯಾಗಾರಗಳು ಸಾಂಕೇತಿಕ ಕಾರ್ಯಕ್ರಮವಾಗಬಾರದು. ಸರ್ಕಾರಿ ಅಧಿಕಾರಿಗಳು ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಿ ನಿಮ್ಮನ್ನು ನೀವು ರಕ್ಷಣೆ ಮಾಡಿಕೊಳ್ಳಬೇಕು’ ಎಂದು ಜಿಲ್ಲಾ ಪ್ರಧಾನ ನ್ಯಾಯಾಧೀಶ ಎಸ್.ಎಚ್.ಕೋರಡ್ಡಿ ತಿಳಿಸಿದರು.

ತಾಲ್ಲೂಕಿನ ರಾಜಸ್ವ ನಿರೀಕ್ಷಕರು, ಗ್ರಾಮ ಲೆಕ್ಕಿಗರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳಿಗಾಗಿ ನಗರದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ತಾಲ್ಲೂಕು ಕಂದಾಯ ಕಚೇರಿ ಹಾಗೂ ತಾಲ್ಲೂಕು ಪಂಚಾಯಿತಿ ಸಹಯೋಗದಲ್ಲಿ ಗುರುವಾರ ನಡೆದ ಕಂದಾಯ ಮತ್ತು ಪಂಚಾಯತ್ ರಾಜ್ ಕಾಯ್ದೆಗಳ ಅವಶ್ಯಕ ಕಾನೂನುಗಳ ಬಗ್ಗೆ ಒಂದು ದಿನದ ಕಾರ್ಯಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಇತ್ತೀಚೆಗೆ ಉಪ ವಿಭಾಗ ಕಚೇರಿಯಿಂದ ಒಂದು ಕಡತ ನನ್ನ ಬಳಿ ಬಂದಾಗ ಅದರಲ್ಲಿ ಸುಮಾರು ಲೋಪದೋಷಗಳು ಇತ್ತು. ಅದರಲ್ಲಿ ಉಚ್ಚ ನ್ಯಾಯಾಲಯ ಬದಲಿಗೆ ಹುಚ್ಚ ನ್ಯಾಯಾಲಯ ಬರೆಯಲಾಗಿತ್ತು. ಇದು ನ್ಯಾಯಾಲಯಕ್ಕೆ ಅವಮಾನ, ನಿಂದನೆ ಮಾಡಿದ ಹಾಗೆ. ಇದನ್ನು ನೋಡಿದಾಗ ನಾವು ಎಷ್ಟು ಜಾಗರೂಕತೆಯಿಂದ ಕಾರ್ಯನಿರ್ವಹಿಸುತ್ತಿದ್ದೇವೆ ಎಂಬುದು ತಿಳಿಯುತ್ತದೆ’ ಎಂದು ಹೇಳಿದರು.

‘ನಾವು ಸಮಾಜದ ಜವಾಬ್ದಾರಿಯುತ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ. ಸಮಾಜ ನಮ್ಮನ್ನು ದಿನ ನೋಡುತ್ತಿರುತ್ತದೆ. ನಾವು ನಮ್ಮ ಕೆಲಸವನ್ನು ನಕಾರಾತ್ಮಕವಾಗಿ ತೆಗೆದುಕೊಂಡರೆ ಒಳ್ಳೆಯದಲ್ಲ. ನಿಮಗೆ ಗೊತ್ತಿಲ್ಲದ ಯಾವುದೇ ಕೆಲಸವನ್ನು ಮಾಡಬೇಡಿ ಗೊತ್ತಿಲ್ಲದಿದ್ದರೆ ಕೇಳಿ ತಿಳಿದುಕೊಳ್ಳಿ’ ಎಂದರು.

‘ಮರಳು ಸಾಗಾಣಿಕೆ ಪ್ರಕರಣಗಳನ್ನು ನೋಡಿದಾಗ ಸಾಕ್ಷಿಗಳು ಯಾವ ವಿಷಯವಾಗಿ ಬಂದಿದ್ದಾರೆ ಎಂಬುದು ನಮಗೆ ಗೊತ್ತಿಲ್ಲ ಎಂದು ಸಾಕ್ಷಿಗಳು ಹೇಳುತ್ತಾರೆ. ಇಂತಹ ಪ್ರಕರಣಗಳು ಇತ್ತೀಚೆಗೆ ನ್ಯಾಯಾಲಯದ ಹೆಚ್ಚುತ್ತಿವೆ. ಈ ರೀತಿಯ ಸಾಕ್ಷಿಗಳನ್ನು ಇನ್ನು ಮುಂದೆ ಪ್ರತಿಕೂಲ ಸಾಕ್ಷಿ ಎಂದು ಪರಿಗಣಿಸಿ ನಿಮ್ಮ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ತಹಶೀಲ್ದಾರ್ ಕೆ.ನರಸಿಂಹಮೂರ್ತಿ ಮಾತನಾಡಿ, ‘ಮೊದಲು ನಾವು ಕಾನೂನು ತಿಳಿದುಕೊಂಡು ನಂತರ ಕಾನೂನಿನ ಅಡಿಯಲ್ಲಿ ಕಾರ್ಯನಿರ್ವಹಿಸಬೇಕು. ಇಲ್ಲದಿದ್ದರೆ ನಮ್ಮ ವೃತ್ತಿಗೆ ತೊಂದರೆಯಾಗುತ್ತದೆ. ಯಾರೇ ತಪ್ಪು ಮಾಡಿದರೂ ಕಾನೂನು ಶಿಕ್ಷೆಯಿಂದ ಪಾರಾಗಲು ಸಾಧ್ಯವಿಲ್ಲ. ಆದ್ದರಿಂದ ಕಾನೂನು ಚೌಕಟ್ಟಿನಲ್ಲಿ ಪ್ರತಿಯೊಬ್ಬರು ಕೆಲಸ ಮಾಡಬೇಕು’ ಎಂದು ಹೇಳಿದರು.

ಹಿರಿಯ ವಕೀಲರಾದ ಎಸ್.ವಿ.ರಾಮಮೂರ್ತಿ, ಸೂರ್ಯನಾರಾಯಣರಾವ್, ಕೆ.ಎನ್.ನಾರಾಯಣ ಮೂರ್ತಿ ಅವರು ವಿವಿಧ ಕಾನೂನುಗಳ ಬಗ್ಗೆ ಉಪನ್ಯಾಸ ನೀಡಿದರು.

ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಚ್.ತಮ್ಮೇಗೌಡ, ಹಿರಿಯ ಸಿವಿಲ್ ನ್ಯಾಯಾಧೀಶ ಎಚ್.ದೇವರಾಜ್, ಸರ್ಕಾರಿ ಅಭಿಯೋಜಕ ಬಿ.ರಂಗಸ್ವಾಮಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಣಾಧಿಕಾರಿ ಹರ್ಷವರ್ಧನ್, ವಕೀಲ ಸಂಘದ ಉಪಾಧ್ಯಕ್ಷ ಕೆ.ವಿ ಬಾಲಾಜಿ, ಜಂಟಿ ಕಾರ್ಯದರ್ಶಿ ಸುರೇಶ್ ಬಾಬು, ಖಜಾಂಚಿ ಹರಿಕೃಷ್ಣ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT