ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯ್ದೆ ತಿದ್ದುಪಡಿ ವಿರುದ್ಧ ಪತ್ರ ಚಳವಳಿ

ಭೂಸುಧಾರಣಾ ತಿದ್ದುಪಡಿ ಕಾಯ್ದೆ ವಿರೋಧಿ ಆಂದೋಲನ ಒಕ್ಕೂಟದ ವತಿಯಿಂದ ‘ನಮ್ಮೂರ ಭೂಮಿ ನಮಗಿರಲಿ;ಅನ್ಯರಿಗಲ್ಲ’ ಆಂದೋಲನ
Last Updated 8 ಆಗಸ್ಟ್ 2020, 8:38 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಭೂಸುಧಾರಣಾ ತಿದ್ದುಪಡಿ ಕಾಯ್ದೆ ವಿರೋಧಿ ಆಂದೋಲನ ಒಕ್ಕೂಟದ ವತಿಯಿಂದ ನಗರದಲ್ಲಿ ಶನಿವಾರ ‘ನಮ್ಮೂರ ಭೂಮಿ ನಮಗಿರಲಿ;ಅನ್ಯರಿಗಲ್ಲ’ ಆಂದೋಲನದ ಭಾಗವಾಗಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಕಾಯ್ದೆ ತಿದ್ದುಪಡಿ ವಿರೋಧಿಸಿ ಮುಖ್ಯಮಂತ್ರಿ ಅವರಿಗೆ ಪತ್ರ ಬರೆಯುವ ಚಳುವಳಿಗೆ ಚಾಲನೆ ನೀಡಿದರು.

ರೈತ ಸಂಘ, ಶಾಶ್ವತ ನೀರಾವರಿ ಹೋರಾಟ ಸಮಿತಿ, ದಲಿತ ಸಂಘರ್ಷ ಸಮಿತಿ, ಕನ್ನಡಪರ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ಉಸಿರಿಗಾಗಿ ಹಸಿರು ಟ್ರಸ್ಟ್‌ ಪದಾಧಿಕಾರಿಗಳು ತಾಲ್ಲೂಕು ಕಚೇರಿ ಎದುರು ಪತ್ರ ಬರೆಯುವ ಚಳುವಳಿಗೆ ಚಾಲನೆ ನೀಡಿ, ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಹಿರಿಯ ಹೋರಾಟಗಾರ ಲಕ್ಷ್ಮಯ್ಯ, ‘ರೈತರಲ್ಲದವರೂ ಭೂಮಿ ಖರೀದಿ ಮಾಡಲು ಅನುವು ಮಾಡುವ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ರೈತರ ಪಾಲಿನ ಮರಣ ಶಾಸನವಾಗಿದೆ. ಇದರಿಂದ ಕಾರ್ಪೋರೆಟ್‌ ಕಂಪೆನಿಗಳಿಗೆ, ಬಂಡವಾಳಶಾಹಿಗಳಿಗೆ ಅನುಕೂಲವಾದರೆ, ದೇಶದಲಲಿ ಆಹಾರ ಸಮಸ್ಯೆ ಎದುರಾಗಲಿದೆ’ ಎಂದು ಹೇಳಿದರು.

‘ಈಗಾಗಲೇ ಎಪಿಎಂಸಿ, ವಿದ್ಯುತ್ ಕ್ಷೇತ್ರಗಳನ್ನು ಖಾಸಗೀಕರಣ ಮಾಡಲಾಗಿದ್ದು, ಇದೀಗ ಸುಗ್ರೀವಾಜ್ಞೆಯ ಮೂಲಕ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿಗಳನ್ನು ತಂದು ರೈತರ ಹೆಮ್ಮೆಯ ಕಾಯ್ದೆಯ ಆತ್ಮವನ್ನೇ ಸರ್ಕಾರ ಕಿತ್ತೊಗೆದಿದೆ. ಈಗಾಗಲೇ ಸಾಕಷ್ಟು ಹೊಡೆತಗಳನ್ನು ಅನುಭವಿಸುತ್ತಿರುವ ಕೃಷಿ ಕ್ಷೇತ್ರ ನುಚ್ಚುನೂರು ಆಗುವುದರಲ್ಲಿ ಸಂಶಯವೇ ಇಲ್ಲ’ ಎಂದು ತಿಳಿಸಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಸುಷ್ಮಾ ಶ್ರೀನಿವಾಸ್ ಮಾತನಾಡಿ, ‘ರಾಜ್ಯ ಸರ್ಕಾರ ಹಿಟ್ಲರ್‌ ರೀತಿ ವರ್ತಿಸುತ್ತಿದ್ದು ಇದನ್ನು ಪ್ರತಿಯೊಬ್ಬರೂ ಖಂಡಿಸಬೇಕಿದೆ. ಸರ್ಕಾರ ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ರೈತ ಸಂಕುಲ ನಾಶಕ್ಕೆ ಮುಂದಾಗಿದೆ. ತಿದ್ದುಪಡಿ ಕುರಿತು ಎಲ್ಲಿಯೂ ಚರ್ಚೆ ಮಾಡದೆ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡು ರೈತರ ನಾಶ ಮಾಡುವ ಕೆಲಸ ನಡೆದಿದೆ‘ ಎಂದು ಆರೋಪಿಸಿದರು.

‘ಸಾಕಷ್ಟು ಸಮಸ್ಯೆಗಳಿಂದ ರೈತರು ಈಗಾಗಲೇ ಸೋತು ಸುಣ್ಣವಾಗಿದ್ದಾರೆ. ಆದ್ದರಿಂದ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಹಿಂಪಡೆಯಬೇಕು. ಅದಕ್ಕಾಗಿ ಕಾಯ್ದೆ ತಿದ್ದುಪಡಿ ವಿರುದ್ಧ ರಾಜ್ಯದಾದ್ಯಂತ ಹೋರಾಟ ನಡೆದಿದೆ. ಭೂಸುಧಾರಣಾ ಕಾಯಿದೆ ತಿದ್ದುಪಡಿ ಆಂದೋಲನವನ್ನು ಹಿಂಪಡೆಯುವವರೆಗೂ ಹೋರಾಟ ಮುಂದುವರಿಯಲಿದೆ’ ಎಂದು ತಿಳಿಸಿದರು.

ಉಸಿರಿಗಾಗಿ ಹಸಿರು ಟ್ರಸ್ಟ್‌ನ ಟ್ರಸ್ಟಿ ಎನ್.ಗಂಗಾಧರರೆಡ್ಡಿ ಮಾತನಾಡಿ, ‘1942 ರಲ್ಲಿ ಕ್ವಿಟ್ ಇಂಡಿಯಾ ಚಳವಳಿ ಇದೇ ಸಂದರ್ಭದಲ್ಲಿ ನಡೆದಿತ್ತು. ಹೀಗಾಗಿ, ಇವತ್ತು ರೈತರನ್ನು ಉಳಿಸಲು ಅದೇ ಮಾದರಿಯ ಮತ್ತೊಂದು ಚಳವಳಿಗೆ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮದಲ್ಲಿ ಈ ಪತ್ರ ಚಳವಳಿ ನಡೆಯಲಿದೆ’ ಎಂದರು.

‘ಕಾಯ್ದೆ ವಿರುದ್ಧ ಗ್ರಾಮಗಳಲ್ಲಿ ಚರ್ಚೆಗಳು, ಫಲಕ ಹಾಕುವುದು, ಗೋಡೆ ಬರಹ, ಸ್ಟಿಕ್ಕರ್ ಹಚ್ಚುವುದು, ಹಾಡು, ಪೋಸ್ಟರ್, ವಿಡಿಯೊ ತುಣುಕುಗಳ ಮೂಲಕ ಜನರಲ್ಲಿ ಅರಿವು ಮತ್ತು ಒಮ್ಮತ ಮೂಡಿಸುವ ಪ್ರಯತ್ನ ಇದಾಗಿದೆ. ಮನೆ ಮನೆಗಳಿಂದ ಪತ್ರ ಚಳವಳಿ ಪ್ರಾರಂಭವಾಗಿದೆ. ಸಾಮಾಜಿಕ ಜಾಲತಾಣದ ಮೂಲಕ ಪ್ರಚಾರ ವ್ಯಾಪಕಗೊಳಿಸಲಾಗುತ್ತಿದೆ’ ಎಂದು ತಿಳಿಸಿದರು.

ಮುಖಂಡರಾದ ತಿಪ್ಪೇನಹಳ್ಳಿ ನಾರಾಯಣ, ಪ್ರವೀಣ್, ಸುಧಾಕರ್, ರಮೇಶ್‌, ಮನೋಹರ್, ಅರುಣ್‌ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT