ಮಂಗಳವಾರ, ಜೂನ್ 15, 2021
25 °C
ಕೋವಿಡ್‌–19 ನಿರ್ವಹಣೆಯಲ್ಲಿ ಭ್ರಷ್ಟಾಚಾರದ ಆರೋಪ, ನ್ಯಾಯಾಂಗ ತನಿಖೆಗೆ ಕಾಂಗ್ರೆಸ್‌ ಆಗ್ರಹ

ಶ್ವೇತಪತ್ರ ಹೊರಡಿಸುವಂತೆ ಸರ್ಕಾರಕ್ಕೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ‘ಕೋವಿಡ್‌–19 ಚಿಕಿತ್ಸೆಗೆ ಸಂಬಂಧಿಸಿದ ಖರೀದಿಯಲ್ಲಿ ರಾಜ್ಯದಲ್ಲಿ ₹2,000 ಕೋಟಿ ಭ್ರಷ್ಟಾಚಾರ ನಡೆದಿದೆ. ರಾಜ್ಯ ಸರ್ಕಾರ ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಸುವ ಜತೆಗೆ ತಾನು ಸಂಗ್ರಹಿಸಿದ ದೇಣಿಗೆ ಮತ್ತು ಖರ್ಚಿನ ಬಗ್ಗೆ ಶ್ವೇತಪತ್ರ ಹೊರಡಿಸಬೇಕು’ ಎಂದು ‘ಸ್ಪೀಕ್ ಆಫ್ ಕರ್ನಾಟಕ’ ಕಾರ್ಯಕ್ರಮದ ಜಿಲ್ಲೆಯ ಉಸ್ತುವಾರಿ, ಮಾಜಿ ಸಚಿವ ಟಿ.ಬಿ.ಜಯಚಂದ್ರ ಆಗ್ರಹಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೋವಿಡ್‌ ನಿರ್ವಹಣೆಯ ಹೆಸರಿನಲ್ಲಿ ರಾಜ್ಯ ಸರ್ಕಾರ ನಾಲ್ಕು ತಿಂಗಳಲ್ಲಿ ₹4,200 ಕೋಟಿ ಖರ್ಚು ಮಾಡಿದೆ. ಅದರಲ್ಲಿ ₹2 ಸಾವಿರ ಕೋಟಿ ಸಚಿವರು ಹಾಗೂ ಅಧಿಕಾರಿಗಳ ಜೇಬಿಗೆ ಹೋಗಿದೆ‘‍ ಎಂದು ಆರೋಪಿಸಿದರು.

‘ಕೋವಿಡ್‌ ಅವಧಿಯಲ್ಲಿ ಮಾಡಿರುವ ವೆಚ್ಚದ ಬಗ್ಗೆ ಮಾಹಿತಿ ನೀಡುವಂತೆ ಈವರೆಗೆ ಕಾಂಗ್ರೆಸ್‌ ಮುಖಂಡರು ಸಾಕಷ್ಟು ಬಾರಿ ಸರ್ಕಾರಕ್ಕೆ ಪತ್ರಗಳನ್ನು ಬರೆದಿದ್ಧಾರೆ. ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಮಾಹಿತಿ ನೀಡುವಂತೆ ಒತ್ತಾಯಿಸಿದ್ದಾರೆ. ಈವರೆಗೆ ವೆಚ್ಚದ ಬಗ್ಗೆ ಸರ್ಕಾರ ಮಾಹಿತಿ ನೀಡಿದಿರುವುದು ಸಂಶಯಕ್ಕೆ ಎಡೆ ಮಾಡಿದೆ’ ಎಂದು ಹೇಳಿದರು.

‘ತಮಿಳುನಾಡು ಸರ್ಕಾರವು ಪ್ರತಿ ವೆಂಟಿಲೇಟರ್‌ಗೆ ₹4.78 ಲಕ್ಷ ವೆಚ್ಚ ಮಾಡಿದೆ. ಆದರೆ, ರಾಜ್ಯ ಸರ್ಕಾರ ₹18.20 ಲಕ್ಷ ಕೊಟ್ಟು ವೆಂಟಿಲೇಟರ್‌ ಖರೀದಿಸಿದೆ. ಸಂಕಷ್ಟದಲ್ಲಿರುವ ಜನರ ಜೀವನ ರಕ್ಷಿಸಬೇಕಾದ ಸಮಯದಲ್ಲಿ ಜವಾಬ್ದಾರಿ ಮರೆತು ಹಣ ಲೂಟಿಗೆ ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ’ ಎಂದು ಬೇಸರ ವ್ಯಕ್ತಪಡಿಸಿದರು.

‘ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಭ್ರಷ್ಟಾಚಾರ ಕುರಿತಂತೆ ತನಿಖೆಗೆ ಮುಂದಾದಾಗ ಅದನ್ನು ತಡೆಯುವ ಪ್ರಯತ್ನ ನಡೆದಿರುವುದು ಅನುಮಾನ ಹುಟ್ಟಿಸಿದೆ. ಮುಖ್ಯಮಂತ್ರಿ ಯಡಿಯೂರಪ್ಪ, ವೈದ್ಯಕೀಯ ಸಚಿವರು, ಆರೋಗ್ಯ ಸಚಿವರು ಸೇರಿದಂತೆ ಸಂಪೂರ್ಣ ಸರ್ಕಾರ ಕೋವಿಡ್‌ ಪರಿಸ್ಥಿತಿ ನಿಭಾಯಿಸುವಲ್ಲಿ ವಿಫಲವಾಗಿದೆ’ ಎಂದು ಹೇಳಿದರು. 

‘ಕೇಂದ್ರ ಸರ್ಕಾರ ಸಂಕಷ್ಟ ಪರಿಹಾರವಾಗಿ ₹20 ಲಕ್ಷ ಕೋಟಿ ಘೋಷಣೆ ಮಾಡಿದೆ. ಅದರಲ್ಲಿ ನಮ್ಮ ರಾಜ್ಯಕ್ಕೆ ಯಾವೆಲ್ಲ ವಲಯಕ್ಕೆ ಎಷ್ಟು ಬಂದಿದೆ ಎಂಬ ಲೆಕ್ಕವನ್ನು ರಾಜ್ಯದಿಂದಲೇ ಆಯ್ಕೆಯಾಗಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನೀಡಲಿ’ ಎಂದು ಆಗ್ರಹಿಸಿದರು.

ಸ್ಪೀಕ್ ಆಫ್ ಕರ್ನಾಟಕ ಕಾರ್ಯಕ್ರಮದ ಜಿಲ್ಲೆಯ ಉಸ್ತುವಾರಿ, ರಾಜ್ಯಸಭೆ ಸದಸ್ಯ ಸೈಯದ್ ನಾಸೀರ್ ಹುಸೇನ್ ಮಾತನಾಡಿ, ‘ಆಪರೇಷನ್‌ ಕಮಲದ ದುಡ್ಡು ಸಾಕಾಗದೆ ಕೋವಿಡ್‌ ಉಸ್ತುವಾರಿಗಾಗಿ ಸಚಿವರು ಜಗಳ ಮಾಡಿದರು. ಸಮುದಾಯಕ್ಕೆ ಸೋಂಕು ಹರಡಿ ಜನ ಸಾಯುತ್ತಿರುವ ಹೊತ್ತಿನಲ್ಲಿ ದುಡ್ಡಿಗಾಗಿ ಬಡಿದಾಡುವವರು ನಾಯಕರಾಗಲು ನಾಲಾಯಕ್’ ಎಂದು ಹೇಳಿದರು.

‘ಪಿಎಂ ಕೇರ್‌ಗೆ ಈವರೆಗೆ 30 ಸಾವಿರ ಕೋಟಿ ಸಂಗ್ರಹವಾಗಿದೆ. ಅದು ಯಾವುದಕ್ಕೆಲ್ಲ ಖರ್ಚಾಗಿದೆ ಎಂಬ ಲೆಕ್ಕ ನೀಡಿಲ್ಲ. ಆ ಹಣವನ್ನು ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಶಾಸಕರ ಖರೀದಿಗೆ ಬಳಕೆ ಮಾಡುತ್ತಿದ್ದೀರಾ? ಕೇಂದ್ರ ಸಚಿವರು ಕೋವಿಡ್‌ ಸ್ಥಿತಿ ಅವಲೋಕಿಸುವುದು ಬಿಟ್ಟು ಕುದುರೆ ವ್ಯಾಪಾರ ಮಾಡಲು ಓಡಾಡುತ್ತಿದ್ದಾರೆ’ ಎಂದು ಆರೋಪಿಸಿದರು. 

‘ಚೀನಾ ಉತ್ಪನ್ನಗಳನ್ನು ನಿಷೇಧಿಸಿ ಎಂದು ಬಿಜೆಪಿಯವರು ಅಭಿಯಾನ ಮಾಡುತ್ತಿದ್ದಾರೆ. ಆದರೆ, ಬಿಜೆಪಿ ಸರ್ಕಾರ 3 ಲಕ್ಷ ಕಿಟ್‌ಗಳನ್ನು ಚೀನಾದಿಂದಲೇ ತರಿಸಿದೆ. ಪಿಎಂ ಕೇರ್‌ ನಿಧಿಗೆ ಸಾಕಷ್ಟು ಚೀನಾ ಕಂಪೆನಿಗಳಿಂದ ದೇಣಿಗೆ ಪಡೆಯಲಾಗಿದೆ. ಬಿಜೆಪಿಯವರ ದ್ವಂದ್ವ ನಿಲುವಿಗೆ ಇದು ಸಾಕ್ಷಿ‘ ಎಂದರು. 

‘ಸಾಕಷ್ಟು ಸಂಖ್ಯೆಯಲ್ಲಿ ದಾನಿಗಳು ಜನರಿಗೆ ಮಾಸ್ಕ್‌, ಸ್ಯಾನಿಟೈಸರ್‌ ವಿತರಣೆ ಮಾಡಿದ್ದಾರೆ. ಆ ಲೆಕ್ಕ ತೋರಿಸಿ ಅಧಿಕಾರಿಗಳು ದುಡ್ಡು ಹೊಡೆದಿದ್ದಾರೆ. ಜನ ಸಮುದಾಯಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಭ್ರಷ್ಟಾಚಾರ ತಿಳಿದಿದೆ. ಕೊರೊನಾ ಸಂಕಷ್ಟದಲ್ಲೂ ಬಿಜೆಪಿ ತನ್ನ ಜೇಬು ತುಂಬಿಸಿಕೊಳ್ಳುವ ಕೆಲಸ ಮಾಡುತ್ತಿರುವುದು ನಾಚಿಕೆಗೇಡು’ ಎಂದರು. 

ಶಾಸಕರಾದ ಎನ್‌.ಎಚ್‌.ಶಿವಶಂಕರರೆಡ್ಡಿ, ವಿ.ಮುನಿಯಪ್ಪ, ಎಸ್‌.ಎನ್.ಸುಬ್ಬಾರೆಡ್ಡಿ, ಮಾಜಿ ಶಾಸಕರಾದ ಎನ್.ಸಂಪಂಗಿ, ಎಸ್‌.ಎಂ.ಮುನಿಯಪ್ಪ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಮುಖಂಡರಾದ ನಂದಿ ಆಂಜನಪ್ಪ, ಯಲುವಹಳ್ಳಿ ರಮೇಶ್‌, ಕೆ.ವಿ.ನವೀನ್‌ ಕಿರಣ್, ಎಸ್‌.ಪಿ.ಶ್ರೀನಿವಾಸ್‌, ಶ್ಯಾಮ್ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು