ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ರೈತರಿಗೆ ಸಹಾಯಧನ ಶೀಘ್ರ ವರ್ಗಾಯಿಸಿ; ಸಚಿವ ಡಾ.ಕೆ.ಸುಧಾಕರ್

ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ
Last Updated 5 ಸೆಪ್ಟೆಂಬರ್ 2020, 7:16 IST
ಅಕ್ಷರ ಗಾತ್ರ

ಗೌರಿಬಿದನೂರು: ರೈತರಿಗೆ ಸರ್ಕಾರದಿಂದ ಬೆಳೆವಾರು ಒದಗಿಸಿರುವ ಸಹಾಯ ಧನವನ್ನು ಕೂಡಲೇ ರೈತರ ಖಾತೆಗಳಿಗೆ ವರ್ಗಾಯಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅಧಿಕಾರಿಗಳಿಗೆ ಸೂಚಿಸಿದರು.

ತಾಲ್ಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಶುಕ್ರವಾರ ತಾಲ್ಲೂಕಿನ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳು ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಶೀಘ್ರ ಬಗೆಹರಿಸಬೇಕು. ಗ್ರಾಮೀಣ ಭಾಗದ ಎಲ್ಲಾ ಶಾಲೆಗಳಲ್ಲಿ ಮೂಲ ಸೌಕರ್ಯಗಳನ್ನು ಕಡ್ಡಾಯವಾಗಿ ಒದಗಿಸಬೇಕು. ಇದಕ್ಕಾಗಿ ನರೇಗಾ ಯೋಜನೆಯಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಆದೇಶಿಸಿದರು.

ಪಿಎಂಜಿಎಸ್‌ವೈ, ಲೋಕೋಪಯೋಗಿ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಗಳಿಂದ ನಿರ್ಮಿಸುತ್ತಿರುವ ರಸ್ತೆಗಳ ಗುಣಮಟ್ಟ ಕಾಪಾಡಲು ಅಧಿಕಾರಿಗಳಿಗೆ ಸೂಚಿಸಿದರು. ಲೋಕೋಪಯೋಗಿ ಇಲಾಖೆಯಿಂದ ಇನ್ನೂ ತಾಲ್ಲೂಕಿನಾದ್ಯಂತ 113 ಕಿ.ಮೀ ಉದ್ದದ ರಸ್ತೆಗಳನ್ನುಅಭಿವೃದ್ಧಿ ಪಡಿಸಬೇಕಾಗಿದೆ ಎಂದು ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ‘ಮುಂದಿನ ದಿನಗಳಲ್ಲಿ ಸರ್ಕಾರದಿಂದ ಅನುದಾನ ಬಿಡುಗಡೆಗಾಗಿ ಕ್ರಮ ವಹಿಸಲಾಗುವುದು’ ಎಂದರು.

ಗ್ರಾಮ ವಿಕಾಸ ಯೋಜನೆಯಡಿ 47 ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಇದುವರೆಗೆ 33 ಕಾಮಗಾರಿಗಳನ್ನು ಮಾತ್ರ ಪೂರ್ಣಗೊಳಿಸಲಾಗಿದೆ. ಇನ್ನೂ 14 ಕಾಮಗಾರಿಗಳನ್ನು ಕಳೆದ 4 ವರ್ಷಗಳಿಂದಅನುಷ್ಠಾನಗೊಳಿಸದೆ ಇರುವುದಕ್ಕೆ ಸಚಿವರು ಬೇಸರ ವ್ಯಕ್ತಪಡಿಸಿದರು. ಪಡಿತರ ವಿತರಣೆಯಲ್ಲಿ ಅಕ್ರಮಗಳೇನಾದರೂ ನಡೆದರೆ ಪಡಿತರ ವಿತರಣೆ ಕೇಂದ್ರಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಜಿ.ಪಂಅಧ್ಯಕ್ಷ ಎಂ.ಬಿ‌.ಚಿಕ್ಕನರಸಿಂಹಯ್ಯ, ಜಿಲ್ಲಾಧಿಕಾರಿ ಆರ್.ಲತಾ, ಸಿಇಒ ಬಿ.ಫೌಜಿಯಾ ತರನಮ್, ಎಸ್ಪಿ ಮಿಥುನ್ ಕುಮಾರ್, ಡಿಎಫ್‌ಒ ಅರ್ಸೆಲಿನ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಆರ್.ಲೋಕೇಶ್, ಉಪಾಧ್ಯಕ್ಷೆ ರತ್ನಮ್ಮ, ಇಒ ಎನ್.ಮುನಿರಾಜು, ಎಡಿ ಪಿ.ಚಿನ್ನಪ್ಪ, ಡಿಡಿಪಿಐ ಎಸ್.ಜಿ.ನಾಗೇಶ್ ಮತ್ತಿತರರು ಇದ್ದರು.

ಅಧಿಕಾರಿಗಳ ಅಮಾನತು ಮಾಡಿ

ಕೆಲಸ ಮಾಡಲು ಆಸಕ್ತಿಯಿಲ್ಲದ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ಜಿಲ್ಲಾ ಪಂಚಾಯಿತಿ ಸಿಇಒಗೆ ಸಚಿವರು ಸೂಚಿಸಿದರು. ಗ್ರಾಮ ವಿಕಾಸ ಯೋಜನೆಯಡಿ ಅನುದಾನ ಬಿಡುಗಡೆಯಾಗಿ 4 ವರ್ಷಗಳು ಕಳೆದರೂ ಕಾಮಗಾರಿಗಳು ಇದುವರೆಗೂ ಪೂರ್ಣವಾಗಿ ಅನುಷ್ಠಾನಗೊಳಿಸಿಲ್ಲ. ಮೂರು ತಿಂಗಳಲ್ಲಿ ಉಳಿಕೆ 14 ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಿದರು. ನಿರ್ಮಿತಿ ಕೇಂದ್ರ ಹಾಗೂ ಕ್ರೆಡಿಲ್ ಸಂಸ್ಥೆಗಳಿಗೆ ಜಿಲ್ಲೆಯಲ್ಲಿ ಇನ್ನು ಮುಂದೆ ಯಾವುದೇ ಕಾಮಗಾರಿಗಳನ್ನು ನೀಡದಂತೆ ಅಧಿಕಾರಿಗಳಿಗೆ ಸೂಚಿಸಿದರು.

200 ಎಕರೆ ಗುರುತಿಸಿ

ಗೌರಿಬಿದನೂರು ತಾಲ್ಲೂಕಿನಲ್ಲಿ ವಸತಿ ರಹಿತರ ಸಮೀಕ್ಷೆ ನಡೆಸಿ ವರದಿ ನೀಡಬೇಕು. ಡಿಸೆಂಬರ್ ಅಂತ್ಯದೊಳಗೆ ಅಗತ್ಯ ಇರುವ 200 ಎಕರೆ ಗುರುತಿಸಿ ಮೀಸಲು ಇಡಬೇಕು.ನಂತರ ಹಂಚಿಕೆ ಮತ್ತು ವಿತರಣೆಗೆ ಕ್ರಮ ವಹಿಸಲಾಗುವುದು. ಕೊಳಚೆ ಪ್ರದೇಶಗಳಲ್ಲಿ ಮನೆ ನಿರ್ಮಾಣ ಮಾಡಲು ಸಾಧ್ಯತೆಗಳನ್ನು ಪರಿಶೀಲಿಸಿ ನಗರ ಮತ್ತು ಗ್ರಾಮೀಣ ಎಂದು ಪ್ರತ್ಯೇಕ ಕ್ರಿಯಾ ಯೋಜನೆ ರೂಪಿಸಲು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಡಾ.ಕೆ.ಸುಧಾಕರ್ ಸೂಚಿಸಿದರು.

‘ಆಯುಕ್ತರ ತಾರತಮ್ಯ ಸರಿಯಲ್ಲ’

‘ನಗರಸಭೆ ಆಯುಕ್ತರು ನಗರದಲ್ಲಿನ ಎಲ್ಲ ವಾರ್ಡ್‌ಗಳ ಬಗ್ಗೆ ಸಮಾನತೆಯಿಂದ ಕಾಣಬೇಕು. ಅಭಿವೃದ್ಧಿ ಹಾಗೂ ಕಾಮಗಾರಿಗಳನ್ನು ಹಂಚಿಕೆ ಮಾಡುವಾಗ ಕೇವಲ ಸೀಮಿತ ವಾರ್ಡ್‌ಗಳಿಗೆ ಮಾತ್ರ ಆಧ್ಯತೆ ನೀಡುವುದು ಸರಿಯಲ್ಲ. ಇತ್ತೀಚೆಗೆ ನಗರೋತ್ಥಾನ ಯೋಜನೆಯಡಿ ವಿವಿಧ ಕಾಮಗಾರಿಗಳಿಗೆ ಭೂಮಿ‌ಪೂಜೆ ಮಾಡುವ ವೇಳೆ ಕಾಂಗ್ರೆಸ್ ಸದಸ್ಯರನ್ನು ನಿರ್ಲಕ್ಷ್ಯಿಸಿರುವುದು ಸರಿಯಲ್ಲ ಎಂದು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಆಯುಕ್ತರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT