ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈವಾರದಲ್ಲಿ ಹುಣ್ಣಿಮೆ ರಥೋತ್ಸವ

Published 23 ಮೇ 2024, 13:17 IST
Last Updated 23 ಮೇ 2024, 13:17 IST
ಅಕ್ಷರ ಗಾತ್ರ

ಚಿಂತಾಮಣಿ: ಯೋಗಿನಾರೇಯಣ ಮಠದಲ್ಲಿ ಗುರುವಾರ ಹುಣ್ಣಿಮೆ ಅಂಗವಾಗಿ ವಿಶೇಷ ಪೂಜೆ ಮತ್ತು ರಥೋತ್ಸವ ಶ್ರದ್ಧಾ, ಭಕ್ತಿಯಿಂದ ನಡೆಸಲಾಯಿತು.

ಗರ್ಭಗುಡಿಯಲ್ಲಿರುವ ಸದ್ಗುರು ಯೋಗಿ ನಾರೇಯಣ ತಾತಯ್ಯ ಅವರ ಮೂಲ ಬೃಂದಾವನವನ್ನು ವಿವಿಧ ಬಗೆಯ ಹೂಗಳಿಂದ ಅಲಂಕರಿಸಲಾಗಿತ್ತು. ಹುಣ್ಣಿಮೆ ಪೂಜೆಗಾಗಿ ಪೀಠವನ್ನು ಅಲಂಕರಿಸಿ ಶ್ರೀದೇವಿ ಭೂದೇವಿ ಸಮೇತ ಅಮರನಾರೇಯಣಸ್ವಾಮಿ ಹಾಗೂ ತಾತಯ್ಯನವರ ಉತ್ಸವ ಮೂರ್ತಿಯನ್ನು ಕುಳ್ಳರಿಸಲಾಗಿತ್ತು.

ಉತ್ಸವಮೂರ್ತಿಗಳಿಗೆ ಪಂಚಾಮೃತ ಮತ್ತು ಮಂಗಳ ದ್ರವ್ಯಗಳಿಂದ ಅಭಿಷೇಕ ನೆರವೇರಿಸಲಾಯಿತು. ನಂತರ ಶಾಸ್ತ್ರೋಕ್ತವಾಗಿ ಅಷ್ಟಾವಧಾನ ಸೇವೆ ಸಮರ್ಪಿಸಿ ಮಹಾಮಂಗಳಾರತಿ ಬೆಳಗಲಾಯಿತು. ತಾತಯ್ಯವರವರ ಉತ್ಸವಮೂರ್ತಿಯನ್ನು ಮಂಗಳವಾದ್ಯಗಳೊಂದಿಗೆ ಕರೆತಂದು ಅಲಂಕೃತ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ದೇವಾಲಯದ ಸುತ್ತಲೂ ರಥೋತ್ಸವ ನಡೆಸಲಾಯಿತು. ನೂರಾರು ಜನ ಭಕ್ತರು ರಥದೊಂದಿಗೆ ಸುತ್ತು ಹಾಕಿ ಭಕ್ತಿಭಾವ ಮೆರೆದರು.

ಹುಣ್ಣಿಮೆ ಪ್ರಯುಕ್ತ ನಾದಸುಧಾರಸ ವೇದಿಕೆಯಲ್ಲಿ ಅಖಂಡ ಸಂಕೀರ್ತನೆಯನ್ನು ಏರ್ಪಡಿಸಲಾಗಿತ್ತು.
ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ನೂರಾರು ಭಕ್ತರು ಶ್ರದ್ಧಾ,ಭಕ್ತಿಯಿಂದ ಹುಣ್ಣಿಮೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಾದಸುಧಾರಸ ವೇದಿಕೆಯಲ್ಲಿ ವಿಶೇಷ ಸಂಗೀತ, ಪ್ರವಚನ ಕಾರ್ಯಕ್ರಮಗಳು ನಡೆದವು.

ಪ್ರವಚನಕಾರ ತಳಗವಾರ ಆನಂದ್ ಮಾತನಾಡಿ, ಅಂತಃಕರಣ ಶುದ್ಧಿಯ ಸಾಧನೆ ಫಲ ನೀಡುತ್ತದೆ. ಮಾನವನ ದೇಹ ಅಶಾಶ್ವತವಾದುದು, ಮುಕ್ತಿಗೆ ಮೀಸಲಾಗಿರುವುದರಿಂದ ಶ್ರೇಷ್ಠತೆ ಲಭಿಸಿದೆ ಎಂಬ ಸಂತರ ನುಡಿಗಳಲ್ಲಿ ಸತ್ಯವಿದೆ ಎಂದರು.

ಮಾನವ ಜನ್ಮದಲ್ಲಿ ಕಷ್ಟ-ಸುಖಗಳು ಬಂದೇ ಬರುತ್ತವೆ. ಜೀವನದಲ್ಲಿ ತಾಳ್ಮೆ, ಶಾಂತಿ ಅಗತ್ಯ. ಸತ್ಯವನ್ನು ಅರ್ಥ ಮಾಡಿಕೊಂಡು ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು. ಬಡತನಕ್ಕೆ ಕುಗ್ಗದೆ, ಸಿರಿತನಕ್ಕೆ ಬೀಗದೆ ಸಮಭಾವದ ಸದ್ಗುಣಿಯಾಗಬೇಕು. ಪಾರಮಾರ್ಥವನ್ನು ಆಶ್ರಯಿಸಿ ಚಿತ್ತದ ನೆಮ್ಮದಿಯನ್ನು ಕಂಡುಕೊಳ್ಳಬೇಕು ಎಂದು ಸೂಚಿಸಿದರು.

ಸುತ್ತಮುತ್ತಲ ಗ್ರಾಮಗಳಿಂದ ಹಾಗೂ ದೂರ ದೂರದಿಂದಲೂ ಭಕ್ತರು ಆಗಮಿಸಿ ಹುಣ್ಣಿಮೆ ರಥೋತ್ಸವದಲ್ಲಿ ಭಾಗವಹಿಸಿದ್ದರು. ಮಠದಿಂದ ಆಗಮಿಸಿದ್ದ ಭಕ್ತರಿಗೆ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT