ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲ್ಲೇಟು: ಎಡಗಣ್ಣು ಕಳೆದುಕೊಂಡ ವಿದ್ಯಾರ್ಥಿ

ಮಸ್ತೇನಹಳ್ಳಿ ಮೊರಾರ್ಜಿ ಅಲ್ಪಸಂಖ್ಯಾತರ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ನಡುವೆ ಕಲಹ
Published 28 ಆಗಸ್ಟ್ 2024, 3:10 IST
Last Updated 28 ಆಗಸ್ಟ್ 2024, 3:10 IST
ಅಕ್ಷರ ಗಾತ್ರ

ಚಿಂತಾಮಣಿ: ಇಬ್ಬರು ವಿದ್ಯಾರ್ಥಿಗಳ ನಡುವಿನ ‍ಕಲಹದಲ್ಲಿ ವಿದ್ಯಾರ್ಥಿಯೊಬ್ಬನಿಗೆ ಮತ್ತೊಬ್ಬ ವಿದ್ಯಾರ್ಥಿ ಕಲ್ಲಿನಿಂದ ಹೊಡೆದು ಕಣ್ಣು ಗಾಯಗೊಳಿಸಿದ್ದಾನೆ. ಪರಿಣಾಮ ವಿದ್ಯಾರ್ಥಿ ತನ್ನ ಒಂದು ಕಣ್ಣು ಕಳೆದುಕೊಂಡಿದ್ದಾನೆ.

ಕೈವಾರ ಹೋಬಳಿ ಮಸ್ತೇನಹಳ್ಳಿ ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತರ ವಸತಿ ಶಾಲೆಯಲ್ಲಿ ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಗ್ರಾಮದ ಅಜ್ವರ್ ಪಾಷಾ ಎಂಬುವರ ಮಗ ಸಯ್ಯದ್ ಅರ್ಫಾನ್ (13) ಕಣ್ಣು ಕಳೆದುಕೊಂಡ ವಿದ್ಯಾರ್ಥಿ. ವಿದ್ಯಾರ್ಥಿ ದೊಡ್ಡಪ್ಪ ಜಮೀರ್ ಪಾಷಾ ಮಂಗಳವಾರ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ.

ಆ.25ರಂದು ಮಧ್ಯಾಹ್ನ ವಸತಿ ಶಾಲಾ ಶಿಕ್ಷಕರೊಬ್ಬರು ಕರೆ ಮಾಡಿ, ‘ನಿಮ್ಮ ಮಗನಿಗೆ ಎಡಕಣ್ಣಿನ ಬಳಿ ರಕ್ತದ ಗಾಯವಾಗಿದೆ. ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಆಂಬುಲೆನ್ಸ್‌ನಲ್ಲಿ ಕರೆದೊಯ್ಯುತ್ತಿದ್ದೇವೆ. ನೀವು ಬರಬೇಕು ಎಂದು ತಿಳಿಸಿದರು. ಹೋಗಿ ನೋಡಿದಾಗ, ಗಾಯಗೊಂಡು ‌ರಕ್ತ ಬರುತ್ತಿತ್ತು’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

‘ವಿಚಾರಣೆ ಮಾಡಿದಾಗ ಶಾಲೆ 8ನೇ ತರಗತಿ ವಿದ್ಯಾರ್ಥಿ ತಮೀಮ್ 2-3 ದಿನಗಳಿಂದ ಸೈಯ್ಯದ್ ಅರ್ಫಾನ್ ಮೇಲೆ ವಿನಾಕಾರಣ ಹಲ್ಲೆ ನಡೆಸಿದ್ದಾನೆ. ಆಗಸ್ಟ್ 25ರಂದು ಭಾನುವಾರ ಬೆಳಗ್ಗೆ ತಮೀಮ್ ಕಲ್ಲಿನಿಂದ ಸೈಯ್ಯದ್ ಅರ್ಫಾನ್ ಕಣ್ಣಿಗೆ ಹೊಡೆದಿದ್ದಾನೆ. ಕಣ್ಣಿಗೆ ತೀವ್ರವಾಗಿ ಪೆಟ್ಟು ಬಿದ್ದಿದೆ. ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಎಡ ಕಣ್ಣು ತೆಗೆದು ಹಾಕಿದ್ದಾರೆ. ಮಗನ ಕಣ್ಣಿಗೆ ಊನ ಉಂಟು ಮಾಡಿರುವ ವಿದ್ಯಾರ್ಥಿ ಮೇಲೆ ಕ್ರಮಕೈಗೊಳ್ಳಬೇಕು. ಶಾಲೆ ಮತ್ತು ವಿದ್ಯಾರ್ಥಿನಿಲಯದ ಸಿಬ್ಬಂದಿ ಮೇಲೂ ತನಿಖೆ ನಡೆಸಬೇಕು. ಮಗನಿಗೆ ನ್ಯಾಯ ದೊರಕಿಸಿಕೊಡಬೇಕು’ ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT