ಬುಧವಾರ, ಜುಲೈ 28, 2021
25 °C
ಟಿಕೆಟ್‌ ಗಿಟ್ಟಿಸಿದ ಸ್ವಪಕ್ಷದ ವಿರೋಧಿ ಪಾಳೆಯ

ಪರಿಷತ್‌ ಚುನಾವಣೆ: ವೈರಿಗೆ ಟಿಕೆಟ್‌, ಮುನಿದ ಮುನಿಯಪ್ಪ

ಎಂ.ರಾಮಕೃಷ್ಣಪ್ಪ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಇದೇ 29ರಂದು ನಡೆಯಲಿರುವ ಚುನಾವಣೆಯಲ್ಲಿ  ಕಾಂಗ್ರೆಸ್‌ ಮತ್ತೊಂದು ಅವಧಿಗೆ ಪರಿಷತ್‌ ಸದಸ್ಯ ನಜೀರ್‌ ಅಹಮ್ಮದ್ ಅವರನ್ನು ಕಣಕ್ಕಿಳಿಸಿದ್ದು, ಆ ಪಕ್ಷದ ಹಿರಿಯ ಮುಖಂಡ ಕೆ.ಎಚ್‌.ಮುನಿಯಪ್ಪ ಅವರ ಕಣ್ಣು ಕೆಂಪಗಾಗಿಸಿದೆ.

ಇದೇ 30ರಂದು ಖಾಲಿ ಆಗಲಿರುವ ವಿಧಾನ ಪರಿಷತ್‌ನ 7 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಅದಕ್ಕಾಗಿ ಕಾಂಗ್ರೆಸ್‌ ಹೈಕಮಾಂಡ್‌ ಪಕ್ಷದ ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ್ ಮತ್ತು ನಜೀರ್ ಅಹಮ್ಮದ್ ಅವರ ಹೆಸರನ್ನು ಅಂತಿಮಗೊಳಿಸಿದ್ದೇ ಟಿಕೆಟ್‌ ಆಕಾಂಕ್ಷಿಯಾಗಿದ್ದ ಮುನಿಯಪ್ಪ ಅವರಲ್ಲಿ ಆಕ್ರೋಶ ಹುಟ್ಟಿಸಿದೆ ಎನ್ನಲಾಗಿದೆ.

ಇತ್ತೀಚೆಗಷ್ಟೇ ಚಿಂತಾಮಣಿಯಲ್ಲಿ ಮುನಿಯಪ್ಪ ಅವರು, ‘ಪಕ್ಷ ದ್ರೋಹಿಗಳಿಗೆ ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್ ನೀಡಬಾರದು’ ಎಂದು ಹೇಳುವ ಮೂಲಕ ತಮ್ಮೊಳಗಿನ ಜ್ವಾಲಾಮುಖಿಯನ್ನು ಆಸ್ಫೋಟಿಸಿದ್ದರು. ಅದೀಗ ಕ್ಷೇತ್ರದಲ್ಲಿ ನಾನಾ ರೀತಿಯ ಚರ್ಚೆ, ವ್ಯಾಖ್ಯಾನಗಳಿಗೆ ನಾಂದಿ ಹಾಡಿದೆ.

ಕಳೆದ ನಾಲ್ಕು ದಶಕಗಳ ರಾಜಕಾರಣದಲ್ಲಿ ಲೋಕಸಭೆ ಚುನಾವಣೆಯಲ್ಲಿ 7 ಬಾರಿ ಜಯಗಳಿಸಿ ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದ ಮುನಿಯಪ್ಪ ಅವರು ಕಳೆದ ಬಾರಿ ಸೋಲುಂಡ ಬಳಿಕ ವ್ಯಗ್ರರಾಗಿದ್ದಾರೆ ಎನ್ನುತ್ತಾರೆ ಅವರನ್ನು ಬಲ್ಲವರು. ಹಿಂದಿನಂತೆ ಹೈಕಮಾಂಡ್ ಮಟ್ಟದಲ್ಲಿ ತನ್ನ ಪ್ರಭಾವ ನಡೆಯುತ್ತಿಲ್ಲ ಎನ್ನುವುದೇ ಅವರ ಅಸಹನೆಗೆ ಕಾರಣ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.

ಕೆಲ ದಶಕಗಳ ಕಾಲ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಕೈ ಪಾಳೆಯದ ಅನಭಿಷಿಕ್ತ ದೊರೆಯಂತಿದ್ದ ಮುನಿಯಪ್ಪ ಅವರು ತಮಗೆ ಬೇಡವಾದ ಎದುರಾಳಿಗಳನ್ನೆಲ್ಲ ತರಗೆಲೆಗಳಂತೆ ಗುಡಿಸಿ ಹಾಕುವಷ್ಟೇ ವರ್ಚಸ್ಸು ಕಾಯ್ದುಕೊಂಡು ಬಂದಿದ್ದರು.

ಆದರೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿಗೆ ಸಹಾಯ ಮಾಡಿ ತನ್ನ ಸೋಲಿಗೆ ಕಾರಣರಾದ ಸ್ವಪಕ್ಷೀಯರ ವಿರುದ್ಧ ಹೈಕಮಾಂಡ್‌ ಶಿಸ್ತುಕ್ರಮ ಜರುಗಿಸುವ ಬದಲು ಶ್ರೀರಕ್ಷೆ ಒದಗಿಸುತ್ತಿದೆ ಎಂಬ ನೋವು ಮುನಿಯಪ್ಪ ಅವರನ್ನು ಕಂಗಾಲಾಗಿಸಿದೆ ಎನ್ನಲಾಗಿದೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಲ್ಲಿ ಬಹಿರಂಗವಾಗಿ ಬಿಜೆಪಿಗೆ ಬೆಂಬಲಿಸಿದವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಮುನಿಯಪ್ಪ ಅವರು ಸಾಕಷ್ಟು ಬಾರಿ ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಅದಕ್ಕೆ ಕೆಪಿಸಿಸಿ ಮತ್ತು ಹೈಕಮಾಂಡ್ ಮಟ್ಟದಲ್ಲಿ ಯಾರೂ ಸೊಪ್ಪು ಹಾಕದೆ ಹೋದದ್ದು ಸಹಜವಾಗಿಯೇ ಹಿರಿಯ ಮುಖಂಡನಲ್ಲಿ ಕಳವಳ ಹುಟ್ಟಿಸಿದೆ ಎನ್ನುತ್ತಾರೆ ಅವರ ಆಪ್ತರು.

ಬದಲಾದ ಕಾಲಘಟ್ಟದಲ್ಲಿ ರಾಜಕೀಯ ವೈರಿಯಂತಾಗಿರುವ ಶಾಸಕ ಕೆ.ಆರ್. ರಮೇಶಕುಮಾರ್ ಜತೆ ಗುರುತಿಸಿಕೊಂಡು, ಪಕ್ಷದೊಳಗೆ ಪ್ರಬಲ ಗುಂಪು ಕಟ್ಟಿ ತಮ್ಮ ಸೋಲಿಗೆ ಕಾರಣರಾದ ನಜೀರ್ ಅಹ್ಮದ್ ಅವರಿಗೆ ಪುನಃ ಹೈಕಮಾಂಡ್ ಟಿಕೆಟ್‌ ನೀಡಿರುವುದು ಕೆ.ಎಚ್ ಅವರ ಪಿತ್ತ ನೆತ್ತಿಗೇರುವಂತೆ ಮಾಡಿದೆ ಎನ್ನಲಾಗಿದೆ.

ನಜೀರ್‌ ಅಹ್ಮದ್ ಅವರು ಟಿಕೆಟ್‌ಗೆ ಪ್ರಯತ್ನ ಮಾಡುವುದು ಅರಿತು ಮುನಿಯಪ್ಪ ಅವರು ಈ ಹಿಂದೆಲ ಕೆಲ ಬಾರಿ ಅವರನ್ನೇ ಗುರಿಯಾಗಿಸಿಕೊಂಡು ಪಕ್ಷದ ವರಿಷ್ಠರಿಗೆ ಪರೋಕ್ಷವಾಗಿ, ‘ಪಕ್ಷ ದ್ರೋಹಿಗಳಿಗೆ ಟಿಕೆಟ್ ನೀಡಿದರೆ ಪಕ್ಷ ತ್ಯಜಿಸಬೇಕಾಗುತ್ತದೆ’ ಎಂದು ಬೆದರಿಕೆ ಹಾಕಿದ್ದರು ಎಂದು ತಿಳಿದು ಬಂದಿದೆ.

ಕಳೆದ ಚುನಾವಣೆಯಲ್ಲಿ ಸೋತ ಬಳಿಕ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರೊಂದಿಗೆ ಕೂಡ ಸಂಬಂಧ ಕೆಡಿಸಿಕೊಂಡಿದ್ದ ಮುನಿಯಪ್ಪ ಅವರಿಗೆ ಇದೀಗ ವಿರೋಧಿ ಪಾಳೆಯವು ಸದ್ದುಗದ್ದಲವಿಲ್ಲದೆ ನಜೀರ್ ಅಹ್ಮದ್ ಅವರಿಗೆ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿರುವುದು ನುಂಗಲಾರದ ತುತ್ತಾಗಿದೆ ಎನ್ನುತ್ತಾರೆ ಕಾಂಗ್ರೆಸ್‌ ಕಾರ್ಯಕರ್ತರು.

ಗೂಳಿ ಬಿದ್ದರೆ ಆಳಿಗೊಂದು ಕಲ್ಲು
ಕಳೆದ ಚುನಾವಣೆವರೆಗೂ ಪ್ರಭಾವಿ ರಾಜಕಾರಣಿಯಾಗಿ ವರ್ಚಸ್ಸು ಕಾಯ್ದುಕೊಂಡಿದ್ದ ಮುನಿಯಪ್ಪ ಅವರು ತಮ್ಮ ವಿರೋಧಿಗಳ ಪಾಲಿಗೆ ರಾಜಕೀಯ ಚಾಣಕ್ಯನಂತೆ ಕಂಡಿದ್ದರು. ತಮ್ಮ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಚಿಂತಾಮಣಿ, ಶಿಢ್ಲಘಟ್ಟ, ಶ್ರೀನಿವಾಸಪುರ, ಕೋಲಾರ ಸೇರಿದಂತೆ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲೂ ತಮ್ಮ ರಾಜಕೀಯ ತಂತ್ರಗಾರಿಕೆಯಿಂದ ವಿರೋಧಿಗಳನ್ನು ಸುಲಭವಾಗಿ ಬಗ್ಗುಬಡಿಯುತ್ತಿದ್ದರು. ಒಂದೇ ಒಂದು ಚುನಾವಣೆಯಲ್ಲಿ ಪರಾಭವಗೊಂಡ ಬೆನ್ನಲ್ಲೇ ಅವರ ವಿರೋಧಿಗಳೆಲ್ಲ ಇದೀಗ ಅವರಿಗೆ ದಾಳಗಳನ್ನೇ ಪ್ರತಿದಾಳವನ್ನಾಗಿಸಿಕೊಂಡು ಗೆಲುವಿನ ನಗೆ ಬೀರುತ್ತಿದ್ದಾರೆ. ಮುನಿಯಪ್ಪ ಅವರಿಂದ ಬರುತ್ತಿರುವ ಸ್ವಪಕ್ಷದವರ ಪಕ್ಷದ್ರೋಹದ ಆರೋಪಗಳು ರಾಜಕೀಯ ಎದುರಾಳಿಗಳಿಗೆ ಸದ್ಯ ವ್ಯಂಗ್ಯದ ಸರಕಾಗುತ್ತಿವೆ.

ತಿರುಮಂತ್ರವಾಯಿತೆ ತಂತ್ರಗಾರಿಕೆ?
ಮುನಿಯಪ್ಪ ಅವರಿಗೆ ರಾಜಕೀಯವಾಗಿ ಬಂದೊದಗಿದ ಸ್ಥಿತಿ ಸ್ವಪಕ್ಷೀಯರ ಬಾಯಿಗೆ ಆಹಾರವಾಗಿದೆ. ‘ಬಾಯಿಮಾತಿಗೆ ಪಕ್ಷನಿಷ್ಠೆ ತೋರಿ, ತೆರೆಮರೆಯಲ್ಲಿ ಸ್ವಪಕ್ಷದಲ್ಲಿನ ವಿರೋಧಿಗಳನ್ನು ನಿರ್ನಾಮ ಮಾಡಲು ಪಕ್ಷದ್ರೋಹ ಚಟುವಟಿಕೆ ನಡೆಸುತ್ತ, ಪಕ್ಷಕ್ಕೆ ದುಡಿಯದೆ ಬರೀ ಗೆಲುವಿಗಾಗಿ ವಿರೋಧ ಪಕ್ಷದವರ ಜತೆ ಒಳಒಪ್ಪಂದ ಮಾಡಿಕೊಳ್ಳುತ್ತ ವಾಮಮಾರ್ಗದಲ್ಲಿ ಬಂದವರಿಗೆ ಪಕ್ಷದ್ರೋಹದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ’ ಎಂದು ಹೆಸರು ಹೇಳಲು ಇಚ್ಛಿಸದ ಹಿರಿಯ ಮುಖಂಡರೊಬ್ಬರು ತಿಳಿಸಿದರು.

‘ವಿಧಾನಸಭೆ ಚುನಾವಣೆಗಳಲ್ಲಿ ಚಿಂತಾಮಣಿಯಲ್ಲಿ ಜೆಡಿಎಸ್ ಶಾಸಕ ಕೃಷ್ಣಾರೆಡ್ಡಿ, ಕೋಲಾರದಲ್ಲಿ ವರ್ತೂರ್ ಪ್ರಕಾಶ್ ಜತೆಗೆ ಒಳಒಪ್ಪಂದ ಮಾಡಿಕೊಂಡು ಕಾಂಗ್ರೆಸ್‌ ಸೋಲಿಸಿದ್ದು ಯಾರು? 2013 ವಿಧಾನಸಭೆ ಚುನಾವಣೆಯಲ್ಲಿ ಶಿಡ್ಲಘಟ್ಟದಲ್ಲಿ, ಅದಕ್ಕೂ ಹಿಂದಿನ ಚುನಾವಣೆಯಲ್ಲಿ ಶ್ರೀನಿವಾಸಪುರದಲ್ಲಿ ಕಾಂಗ್ರೆಸ್ ಸೋಲಿಗೆ ಯಾರು ಕಾರಣ ಎಂಬುದು ಎಲ್ಲರಿಗೂ ಗೊತ್ತಿದೆ. ಮಾಜಿಯಾದ ಮೇಲೆ ಅವರಿಗೆ ಜ್ಞಾನೋದಯವಾದಂತಿದೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು