ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಸುಗೆಯ ಕೇಂದ್ರ ಮುರುಗಮಲೆ: ಹಬ್ಬಗಳು ಒಟ್ಟಾಗಿ ಆಚರಿಸುವ ಹಿಂದೂ–ಮುಸ್ಲಿಂ ಬಾಂಧವರು

Last Updated 7 ಏಪ್ರಿಲ್ 2022, 3:49 IST
ಅಕ್ಷರ ಗಾತ್ರ

ಚಿಂತಾಮಣಿ: ಚಿಂತಾಮಣಿಯಿಂದ 12 ಕಿ.ಮೀ ದೂರದಲ್ಲಿರುವ ಮುರುಗಮಲೆ ಗ್ರಾಮವು ಅನೇಕ ದಶಕಗಳಿಂದಲೂ ಹಿಂದೂ-ಮುಸ್ಲಿಂ ಭಾವೈಕ್ಯದ ಕೇಂದ್ರವಾಗಿದೆ.

ಮುಸ್ಲಿಂ ಬಾಂಧವರ ಪ್ರಮುಖ ಯಾತ್ರಾಸ್ಥಳವಾದ ಈ ಗ್ರಾಮ ದೇಶ ವಿದೇಶಗಳಲ್ಲಿ ಪ್ರಸಿದ್ಧಿಯಾಗಿದೆ. ಗ್ರಾಮದಲ್ಲಿರುವ ಹಜರತ್ ಫಕೀರ್‌ ಷಾ ದರ್ಗಾದ ಉರುಸ್‌ನಲ್ಲಿ ದೇಶದ ವಿವಿಧ ಭಾಗಗಳ ಲಕ್ಷಾಂತರ ಭಕ್ತರು ಪಾಲ್ಗೊಳ್ಳುತ್ತಾರೆ. ಇಲ್ಲಿನ ದರ್ಗಾಗೆ ನೂರಾರು ವರ್ಷಗಳ ಇತಿಹಾಸ ಇದೆ. ಧರ್ಮಗುರು ಅಮ್ಮಾಜಾನ್ ಮತ್ತು ಬಾವಾಜಾನ್ ಅವರ ಸಮಾಧಿ ಸ್ಥಳವೇ ಇಂದು ಲಕ್ಷಾಂತರ ಮಂದಿಯ ನಮನ ಕ್ಷೇತ್ರವಾಗಿದೆ.

ಗ್ರಾಮದಲ್ಲಿ ಪ್ರಸಿದ್ಧ ಮುಕ್ತೀಶ್ವರ ದೇವಾಲಯವಿದೆ. ಪ್ರಶಾಂತವಾದ ಪ್ರಕೃತಿಯ ಮಡಿಲಲ್ಲಿ ಇರುವ ಮುಕ್ತೀಶ್ವರಸ್ವಾಮಿ ದೇವಾಲಯಕ್ಕೂ ಸಾವಿರಾರು ಭಕ್ತರು ವರ್ಷದದುದ್ದಕ್ಕೂ ಆಗಮಿಸುತ್ತಾರೆ. ಈ ದೇವಾಲಯದಲ್ಲೂ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಸಾವಿರಾರು ಜನರು ಭಾಗವಹಿಸುತ್ತಾರೆ.

ಕೋಮು ಸಾಮರಸ್ಯ: ಎರಡು ಕೋಮಿನ ಸಾವಿರಾರು ಜನರು ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೂ ಗ್ರಾಮದಲ್ಲಿ ಎಂದೂ ಕೋಮು ಸಾಮರಸ್ಯಕ್ಕೆ ಧಕ್ಕೆಯಾಗಿಲ್ಲ.

ಹಿಂದೂಗಳು ದರ್ಗಾಗೂ ಭೇಟಿ ನೀಡುತ್ತಾರೆ. ಮುಸ್ಲಿಮರು ಮುಕ್ತೀಶ್ವರಸ್ವಾಮಿಯ ದರ್ಶನವನ್ನು ಪಡೆಯುತ್ತಾರೆ. ದರ್ಗಾ ಮತ್ತು ಮುಕ್ತೀಶ್ವರಸ್ವಾಮಿ ದೇವಾಲಯದ ಕಾರ್ಯಕ್ರಮಗಳಿಗೆ ಎರಡೂ ಕೋಮಿನ ಮುಖಂಡರ ಮೇಲ್ವಿಚಾರಣೆಯಲ್ಲಿ ನಡೆಯುತ್ತವೆ.

ಗಂಧ ಸ್ವೀಕಾರ: ಹಿಂದೂ-ಮುಸ್ಲಿಮರು ಸೋದರ ಭಾವನೆಯಿಂದ ಪವಿತ್ರ ಗಂಧವನ್ನು ಸ್ವೀಕರಿಸುವರು. ಗ್ರಾಮದಲ್ಲಿ ಸಣ್ಣ ಪ್ರಮಾಣದಲ್ಲಿ ಗಂಧೋತ್ಸವ ನಡೆಯುತ್ತಿತ್ತು. ಸುಮಾರು 50 ವರ್ಷಗಳ ಹಿಂದೆ ಗ್ರಾಮದ ಮುಖಂಡರಾದ ಪಟೇಲ್ ಅಶ್ವತ್ಥನಾರಾಯಣರೆಡ್ಡಿ, ವಹಾಬ್, ಮುಜಾವರ್, ಸಾಬ್ಜಾನ್ ಸೇರಿ ಗ್ರಾಮಸ್ಥರ ಸಹಕಾರದಿಂದ ವಿಜೃಂಭಣೆಯಯಿಂದ ಉರುಸ್ ಆಚರಿಸಲು ಪ್ರಾರಂಭಿಸಿದರು ಎಂದು ಗ್ರಾಮದ ಮುಖಂಡರು ತಿಳಿಸುತ್ತಾರೆ.

ಕಾಯಿಲೆ ಉಳ್ಳವರು ಇಲ್ಲಿಗೆ ಬಂದು ಹಲವಾರು ದಿನ ಇಲ್ಲೇ ನೆಲೆಸುವ ಪರಿಪಾಟವೂ ಇದೆ. ‌

ಪ್ರತಿ ಅಮಾವಾಸ್ಯೆಯ ದಿನ ನೂರಾರು ಮಾನಸಿಕ ಅಸ್ವಸ್ಥರು, ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರು ಇಲ್ಲಿ ವಿಶೇಷ ಪ್ರಾರ್ಥನೆ
ಸಲ್ಲಿಸುತ್ತಾರೆ. ಸಾಕಷ್ಟು ಜನ ಹಿಂದೂಗಳು ಬರುತ್ತಾರೆ ಎಂದು ದರ್ಗಾದ ಮೌಲ್ವಿ ವಿವರಿಸುತ್ತಾರೆ.

ಮುರುಗಮಲೆಯ ಸಮೀಪ ನಿಮ್ಮಕಾಯಲಹಳ್ಳಿಯಲ್ಲೂ ಮುಸ್ಲಿಂ ಬಾಂಧವರು ವಾಸವಾಗಿದ್ದಾರೆ. ಅಲ್ಲೂ ದರ್ಗಾ ಇದ್ದು ಉರುಸ್ ನಡೆಯುತ್ತದೆ. ಎರಡು ಕೋಮಿನ ಜನರು ಭಾಗವಹಿಸುತ್ತಾರೆ.

ಇನ್ನೂ ವಿಶೇಷ ಎಂದರೆ, ಪೆದ್ದೂರು ಗ್ರಾಮದ ಮೊಹರಂ ಹಬ್ಬ. ಗ್ರಾಮದಲ್ಲಿ ಒಂದೇ ಒಂದು ಮುಸ್ಲಿಂ ಕುಟುಂಬವಿದ್ದರೂ
ಮೊಹರಂ ಹಬ್ಬವನ್ನು ಪ್ರತಿವರ್ಷ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಮುಸ್ಲಿಂ ಕುಟುಂಬದ ಮಾರ್ಗದರ್ಶನದಲ್ಲಿ ಹಿಂದೂಗಳೂ ಮೊಹರಂ ಆಚರಿಸುವುದು ಪದ್ಧತಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT