ಭಾನುವಾರ, ಸೆಪ್ಟೆಂಬರ್ 19, 2021
30 °C
ಅವೈಜ್ಞಾನಿಕವಾಗಿ ರಸ್ತೆ ವಿಸ್ತರಣೆ: ರೈತ ಸಂಘ ಖಂಡನೆ

ಚೇಳೂರು: ಬಲಾಢ್ಯರ ಆಸ್ತಿ ರಕ್ಷಣೆ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚೇಳೂರು: ಇಲ್ಲಿನ ಮುಖ್ಯರಸ್ತೆಯ ವಿಸ್ತರಣೆ ಅವೈಜ್ಞಾನಿಕವಾಗಿದೆ. ನಿಗದಿತ ಅಳತೆಯಲ್ಲಿ ವಿಸ್ತರಣೆ ಮಾಡುತ್ತಿಲ್ಲ. ಕೂಡಲೇ, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ ಅವರು ನಿಗಾವಹಿಸಿ ಅಗತ್ಯ ಕ್ರಮವಹಿಸಬೇಕು ಎಂದು ಚೇಳೂರಿನ ರೈತ ಸಂಘ ಮತ್ತು ಹಸಿರು ಸೇನೆಯ ಕಾರ್ಯಾಧ್ಯಕ್ಷ ಕೆ.ಎನ್. ಸೋಮಶೇಖರ್‌ ಆಗ್ರಹಿಸಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ರಸ್ತೆ ವಿಸ್ತರಣೆ ಸಂಬಂಧ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ರಸ್ತೆ ವಿಸ್ತರಣೆ ಕಾಮಗಾರಿಯಲ್ಲಿ ಅಧಿಕಾರಿಗಳು ತಾರತಮ್ಯ ತೋರುತ್ತಿದ್ದಾರೆ. ಅಳತೆಯಲ್ಲಿ ಉಳ್ಳವರಿಗೆ ಒಂದು ರೀತಿ, ಬಡವರಿಗೆ ಮತ್ತೊಂದು ರೀತಿ ಮಾಡುತ್ತಿರುವುದು ಖಂಡನೀಯ ಎಂದರು.

ಪದ್ಮನಾಭ ಬಡಾವಣೆಯ ಮುಖ್ಯರಸ್ತೆಯಿಂದ ಕೃಷಿ ಮಾರುಕಟ್ಟೆವರೆಗೂ ಮಾಡುತ್ತಿರುವ ರಸ್ತೆ ವಿಸ್ತರಣೆಯ ಅಳತೆಯಲ್ಲಿ ಸಾಕಷ್ಟು ಲೋಪದೋಷವಿದೆ. ಚೇಳೂರನ್ನು ನೂತನ ತಾಲ್ಲೂಕು ಕೇಂದ್ರವೆಂದು ಘೋಷಿಸಿ ಎರಡು ವರ್ಷ ಕಳೆಯುತ್ತಿವೆ. ಅಂದಿನಿಂದಲೂ ಯಾವುದೇ ಅಭಿವೃದ್ಧಿ ಕಾಮಗಾರಿ ಆರಂಭಿಸಿಲ್ಲ ಎಂದು ಹೇಳಿದರು.

ಈಗ ರಸ್ತೆ ಕಾಮಗಾರಿ ನಡೆಯುತ್ತಿದೆ. ಆದರೆ, ನಿಗದಿತ ಯೋಜನೆಯ ನಕ್ಷೆ ಉಲ್ಲಂಘಿಸಿ ರಸ್ತೆ ವಿಸ್ತರಣೆ ಮಾಡಲಾಗುತ್ತಿದೆ. ಪ್ರಭಾವಿ ವ್ಯಕ್ತಿಗಳ ಸೂಚನೆಯಂತೆ ತಮಗೆ ಇಷ್ಟ ಬಂದಂತೆ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಕಾಮಗಾರಿ ಪ್ರಾರಂಭಿಸಿದ್ದಾರೆ. ಪ್ರಭಾವಿ ವ್ಯಕ್ತಿಗಳ ಆಸ್ತಿ ಉಳಿಸಲು ಬಡವರ ಆಸ್ತಿಯನ್ನು ಒಡೆಯುವುಕ್ಕೆ ಕೈಹಾಕಿದ್ದಾರೆ ಎಂದು ದೂರಿದರು.

ಪ್ರಭಾವಿ ವ್ಯಕ್ತಿಗಳು ಸರ್ಕಾರಿ ಖರಾಬು ಜಮೀನು ಕಬಳಿಸಿದ್ದಾರೆ. ಈ ಬಗ್ಗೆ ಸಚಿವ ಡಾ.ಕೆ. ಸುಧಾಕರ್ ಹಾಗೂ ಜಿಲ್ಲಾಧಿಕಾರಿಯ ಗಮನಕ್ಕೆ ತರಲಾಗಿದೆ. ಆದರೆ, ಒತ್ತುವರಿ ತೆರವುಗೊಳಿಸಲು ನಿರ್ಲಕ್ಷಿಸಲಾಗಿದೆ ಎಂದರು.

ರಸ್ತೆಯ ಮಧ್ಯಭಾಗದಿಂದ ಎರಡು ಕಡೆಯಲ್ಲಿ 42 ಅಡಿಗಳಷ್ಟು ವಿಸ್ತರಣೆ ಮಾಡಬೇಕು. ಆದರೆ, ಪ್ರಭಾವಿಗಳ ಆಸ್ತಿ ಉಳಿಸಲು ತಾರತಮ್ಯ ಎಸಗಲಾಗುತ್ತಿದೆ. ಸಂಬಂಧಪಟ್ಟ ಮೇಲಧಿಕಾರಿಗಳು ಈ ಬಗ್ಗೆ ಕ್ರಮವಹಿಸಬೇಕು. ತಾರತಮ್ಯ ಸರಿಪಡಿಸಲು ಜಿಲ್ಲಾ ಉಸ್ತುವಾರಿ ಸಚಿವರು ಮುಂದಾಗದಿದ್ದರೆ ರಾಜ್ಯಪಾಲರ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಚೇಳೂರು ತಾಲ್ಲೂಕು ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಶಿವರೆಡ್ಡಿ, ಗೌರವಾಧ್ಯಕ್ಷ  ವೆಂಕಟರವಣಪ್ಪ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ, ಸದಸ್ಯ ಕೋಟಪಲ್ಲಿ ಸೀನಪ್ಪ ಸೇರಿದಂತೆ ಅಂಗಡಿ ಮಾಲೀಕರು ಸಭೆಯಲ್ಲಿ ಹಾಜರಿದ್ದರು.

ತಾರತಮ್ಯ ಮಾಡಿಲ್ಲ: ‘ರಸ್ತೆ ವಿಸ್ತರಣೆಯಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ. ಎಲ್ಲಾ ಕಡೆಯೂ ರಸ್ತೆಯ ಮಧ್ಯಭಾಗದಿಂದ 41 ಅಡಿ ಅಗಲ ವಿಸ್ತರಿಸಿದ್ದೇವೆ. ಕೆಲವು ಕಡೆಯಲ್ಲಿ 41 ಅಡಿಗಿಂತಲೂ ಹೆಚ್ಚು ಅಗಲದ ರಸ್ತೆ ಮಾಡಿದ್ದೇವೆ. ಆದರೆ, ಕೆಲವು ಅಂಗಡಿಗಳ ಮುಂಭಾಗ ಅರ್ಧ ಅಡಿಯಿಂದ ಒಂದು ಅಡಿಯಷ್ಟು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಅಂಗಡಿಗಳನ್ನು ನಿರ್ಮಿಸಿದ್ದಾರೆ’ ಎಂದು ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.