ಶುಕ್ರವಾರ, ಆಗಸ್ಟ್ 12, 2022
23 °C

ಕಾಫಿನಾಡಿನ ಬಯಲುಸೀಮೆ ಪ್ರತಿಭೆ ಸಂಚಾರಿ ವಿಜಯ್‌

ಬಿ.ಜೆ. ಧನ್ಯಪ್ರಸಾದ್‌ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ರಂಗಭೂಮಿ, ಸಿನಿಮಾ, ಕಲಾ ಕ್ಷೇತ್ರದಲ್ಲಿ ಛಾಪು ಮೂಡಿಸಿ ಜನಮನ ಗೆದ್ದಿರುವ ಸಂಚಾರಿ ವಿಜಯ್‌ (ಬಿ.ವಿಜಯಕುಮಾರ್‌) ಅವರು ಕಾಫಿನಾಡಿನ ಬಯಲು ಸೀಮೆಯ ಪ್ರತಿಭೆ. ‘ಬೆಳೆಯುವ ಸಿರಿ ಮೊಳಕೆಯಲ್ಲಿ’ ಎಂಬಂತೆ ಬಾಲ್ಯದಿಂದಲೇ ಚೂಟಿಯಾಗಿದ್ದರು.

ವಿಜಯ್‌ ಅವರು ಕಡೂರು ತಾಲ್ಲೂಕಿನ ಪಂಚನಹಳ್ಳಿಯ ಬಸವರಾಜಯ್ಯ ಮತ್ತು ಗೌರಮ್ಮ ದಂಪತಿಯ ಪುತ್ರ. ವಿಜಯ್‌ ಅವರಿಗೆ ವಿರೂಪಾಕ್ಷ, ಸಿದ್ದೇಶ್‌ ಎಂಬ ಇಬ್ಬರು ಸಹೋದರರು ಇದ್ದಾರೆ.

ಗ್ರಾಮ ಲೆಕ್ಕಿಗರಾಗಿದ್ದ ಬಸವರಾಜಯ್ಯ ಅವರು ತಬಲ ವಾದನ, ಚಿತ್ರಕಲೆಯಲ್ಲಿ ನೈಪುಣ್ಯ ಇತ್ತು. ಶುಶ್ರೂಷಕಿಯಾಗಿದ್ದ ಗೌರಮ್ಮ ಅವರಿಗೆ ಗಾಯನ ಕಲೆ ಒಲಿದಿತ್ತು. ಅಪ್ಪ–ಅಮ್ಮನಿಂದ ಈ ಕಲೆಗಳನ್ನು ವಿಜಯ್‌ ಕರಗತ ಮಾಡಿಕೊಂಡಿದ್ದರು.

ವಿಜಯ್‌ ಅವರು ಪಂಚನಹಳ್ಳಿಯಲ್ಲಿ ಪ್ರಾಥಮಿಕ ಶಾಲೆ, ಆಣೆಗೆರೆಯಲ್ಲಿ ಪ್ರೌಢಶಾಲೆ, ತಿಪಟೂರಿನಲ್ಲಿ ಪಿಯು ಹಾಗೂ ಬೆಂಗಳೂರಿನ ಬಿಎಂಎಸ್‌ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ವಿದ್ಯಾಭ್ಯಾಸ ಮಾಡಿದ್ದಾರೆ.

‘ಶಾಲಾ ದಿನಗಳಿಂದಲೂ ವಿಜಯ್‌ ಆಟೋಟ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಯಾವಗಾಲೂ ಮುಂದೆ ಇದ್ದರು. ಚಿತ್ರಕಲೆ, ಅಭಿನಯ, ಗಾಯನ, ಜಿಮ್ನಾಸ್ಟಿಕ್ಸ್‌ ಎಲ್ಲದರಲ್ಲೂ ಬಹುಮಾನ ಕಟ್ಟಿಟ್ಟ ಬುತ್ತಿಯಾಗಿರುತ್ತಿತ್ತು’ ಎಂದು ವಿಜಯ್‌ ಅವರ ಬಾಲ್ಯ ಸ್ನೇಹಿತ ಪಂಚನಹಳ್ಳಿಯ ಪಿ.ಎಂ.ನಂದೀಶ್‌ ತಿಳಿಸಿದರು.

‘ಸ್ವಾತಂತ್ರ್ಯ ದಿನಾಚರಣೆ, ಶಾಲಾ ವಾರ್ಷಿಕೋತ್ಸವ ಮೊದಲಾದವುಗಳಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದೆವು. ಗೌರಮ್ಮ ಅವರ ಗರಡಿಯಲ್ಲಿ ಗಾಯನ ಕಲಿತೆವು. ಭದ್ರಾವತಿ ಆಕಾಶವಾಣಿ ಕೇಂದ್ರದಲ್ಲಿ ‘ಜೋಗದ ಸಿರಿ ಬೆಳಕಿನಲ್ಲಿ...’ ಮೊದಲಾದ ಗೀತೆಗಳನ್ನು ಹಾಡಿದ್ದೆವು’ ಎಂದು ಅವರು ನೆನಪಿಸಿಕೊಂಡರು.

‘ಸಿನಿಮಾದಲ್ಲಿ ಅಭಿನಯಿಸಬೇಕು ಎಂಬ ಕನಸು ಚಿಕ್ಕಂದಿನಿಂದಲೂ ವಿಜಯ್‌ಗೆ ಇತ್ತು. ‘ಸಂಚಾರಿ’ ರಂಗ ತಂಡದ ಮೂಲಕ ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಕೊಂಡು ಸಂಚಾರಿ ವಿಜಯ್‌ ಎಂದೇ ಖ್ಯಾತರಾದರು. ಸಿನಿಮಾ ಕ್ಷೇತ್ರದಲ್ಲಿ ಸಾಧನೆ ಮೆರೆದು ಕನಸನ್ನು ನನಸಾಗಿಸಿದರು’ ಎಂದು ಹೇಳಿದರು.

ವಿಜಯ್‌ ಅವರಿಗೆ ಚಿಕ್ಕಂದಿನಿಂದಲೂ ಸಿನಿಮಾ ಹುಚ್ಚು ಬಹಳ ಇತ್ತು. ಪಂಚನಹಳ್ಳಿ ಪಕ್ಕದ ಅರಸೀಕೆರೆ ತಾಲ್ಲೂಕಿನ ಗಡಿ ಗ್ರಾಮ ಮೇಟಿಕುರ್ಕೆಯ ಟೆಂಟ್‌ಗೆ ಸಿನಿಮಾ ನೋಡಲು ಸೈಕಲ್‌ನಲ್ಲಿ ಹಲವು ಬಾರಿ ಹೋಗಿದ್ದೆವು ಎಂದು ಅವರ ಬಾಲ್ಯದ ಗೆಳೆಯರು ತಿಳಿಸಿದರು.

ವಿಜಯ್‌ ಅವರು ಸಿನಿಮಾ ಕ್ಷೇತ್ರದಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಪಂಚನಹಳ್ಳಿಗೂ ಗ್ರಾಮಕ್ಕೂ ಅವರಿಗೂ ಅವಿನಾಭಾವ ನಂಟು. ಗ್ರಾಮದ ಹಳೆಯ ಸ್ನೇಹಿತರ ಜತೆ ಸಂಪರ್ಕ ಇಟ್ಟುಕೊಂಡಿದ್ದಾರೆ.

ಪಂಚನಹಳ್ಳಿಯ ಸರ್ಕಾರಿ ಶಾಲೆಯಲ್ಲಿ 2017ನೇ ಇಸವಿಯಲ್ಲಿ ಜರುಗಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಗ್ರಾಮದಲ್ಲಿನ ಬಾಲ್ಯದ ನೆನಪುಗಳನ್ನು ಕಾರ್ಯಕ್ರಮದಲ್ಲಿ ಸ್ಮರಿಸಿದ್ದರು. ತಾನೊಬ್ಬ ಖ್ಯಾತ ನಟ ಎಂಬ ಹಮ್ಮಬಿಮ್ಮು ಇಲ್ಲದೆ ಮುಕ್ತವಾಗಿ ಬೆರೆತಿದ್ದರು ಎಂದು ಗ್ರಾಮಸ್ಥರು ಹೇಳುತ್ತಾರೆ.

ವಿಜಯ್‌ ಅವರು ಅಪಘಾತದಲ್ಲಿ ಗಾಯಗೊಂಡು ಬೆಂಗಳೂರಿನ ಅಪೊಲೊ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು