ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಷ್ಟದ ಸುಳಿಯಲ್ಲಿ ಅಡಿಕೆ ಬೆಳೆಗಾರ: ಎಲೆ ಚುಕ್ಕಿ, ಹಳದಿ ಎಲೆ ರೋಗ ಬಾಧೆ

Last Updated 7 ನವೆಂಬರ್ 2022, 7:36 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಕಾಫಿನಾಡಿನ ಹಲವೆಡೆ ಅಡಿಕೆ ತೋಟಗಳಲ್ಲಿ ಎಲೆ ಚುಕ್ಕಿ, ಹಳದಿ ಎಲೆ ರೋಗಗಳು ಕಾಡುತ್ತಿವೆ. ಮಲೆನಾಡು ಭಾಗದಲ್ಲಿ ರೋಗ ಹೆಚ್ಚು ಆವರಿಸಿದ್ದು, ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 77,457 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಅಡಿಕೆ ತೋಟಗಳು ಇವೆ. ತೋಟಗಾರಿಕೆ ಇಲಾಖೆ ಅಂಕಿ ಅಂಶ ಪ್ರಕಾರ ಜಿಲ್ಲೆಯಲ್ಲಿ ಎಲೆಚುಕ್ಕಿ ರೋಗ15 ಸಾವಿರ ಹೆಕ್ಟೇರ್‌ ಹಾಗೂ ಹಳದಿ ಎಲೆ ರೋಗ 6 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಹರಡಿದೆ.

ಶೃಂಗೇರಿ, ಕೊಪ್ಪ, ಕಳಸ, ಎನ್‌.ಆರ್‌.ಪುರ, ಮೂಡಿಗೆರೆ ತಾಲ್ಲೂಕುಗಳ ತೋಟದಲ್ಲಿ ರೋಗ ಹೆಚ್ಚು ವ್ಯಾಪಿಸಿದೆ. ರೋಗಗಳ ಹತೋಟಿ ಸವಾಲಾಗಿ ಪರಿಣಮಿಸಿದೆ.

ಔಷಧ ಸಿಂಪಡಣೆ

ಕೊಪ್ಪ: ಅಡಿಕೆ ತೋಟಗಳಲ್ಲಿ ಎಲೆಚುಕ್ಕಿ, ಹಳದಿ ಎಲೆ, ಸುಳಿ ರೋಗಗಳು ಆವರಿಸಿದ್ದು, ಬೆಳೆಗಾರರ ಬದುಕು ಅತಂತ್ರವಾಗಿದೆ. ರೋಗ ನಿಯಂತ್ರಣಕ್ಕೆ ತೋಟಗಾರಿಕೆ ಇಲಾಖೆಯವರು ಸೂಚಿಸಿದ ಔಷಧ ಸಿಂಪಡಣೆಯಲ್ಲಿ ರೈತರು ತೊಡಗಿದ್ದಾರೆ.

ಅಡಿಕೆ ಬೆಳೆಗಾರರ ಸಮಸ್ಯೆ ನಿವಾರಣೆಗಾಗಿ ಸರ್ಕಾರವನ್ನು ಒತ್ತಾಯಿಸಲು ಈಚೆಗೆ ಕೊಪ್ಪದಲ್ಲಿ ಸಭೆ ನಡೆಸಿ ಶೃಂಗೇರಿ ಕ್ಷೇತ್ರಮಟ್ಟದಲ್ಲಿ ‘ಮಲೆನಾಡು ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘ’ ಸ್ಥಾಪಿಸಿಲಾಗಿದೆ.

‘ಸೆಪ್ಟೆಂಬರ್ ನಲ್ಲಿ ಸಮೀಕ್ಷೆ ನಡೆಸಲಾಗಿತ್ತು. ಎಲೆಚುಕ್ಕಿ ರೋಗ ತಾಲ್ಲೂಕಿನ ಶೇ 50 ತೋಟಗಳಿಗೆ ವ್ಯಾಪಿಸಿತ್ತು. ರೋಗ ನಿಯಂತ್ರಣಕ್ಕೆ ಹೆಕ್ಸಾಕೊನಝೋಲ್ ಔಷಧ ರೈತರಿಗೆ ವಿತರಿಸಲಾಗುತ್ತಿದೆ’ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಅಶೋಕ್ ತಿಳಿಸಿದರು.

ಎಲೆ ಚುಕ್ಕಿರೋಗ ಉಲ್ಬಣ
ಮೂಡಿಗೆರೆ: ತಾಲ್ಲೂಕಿನಲ್ಲಿ ಹೊಸ ತೋಟಗಳಿಂದ ಹಿಡಿದು ಎಲ್ಲ ಹಂತದ ಅಡಕೆ ತೋಟಗಳಲ್ಲೂ ಎಲೆ ಚುಕ್ಕಿ ರೋಗ ಬಾಧಿಸುತ್ತಿದೆ. ಗಿಡದ ಸೋಗೆಗಳಲ್ಲಿ ಹಳದಿ, ಕಪ್ಪು ಚುಕ್ಕೆ ಕಾಣಿಸಿಕೊಂಡು, ಕೆಲ ದಿನಗಳಲ್ಲಿ ಪೂರ್ತಿ ಆವರಿಸಿ ಗಿಡವನ್ನೇ ನಾಶ ಮಾಡುತ್ತದೆ.

ಆರು ತಿಂಗಳಿನಲ್ಲಿ ರೋಗ ಆವರಿಸಿರುವ ವಿಸ್ತೀರ್ಣ ದುಪ್ಪಟ್ಟಾಗಿದೆ. ಗೊನೆ ಬಿಟ್ಟ ಗಿಡಗಳು ಕೂಡ ಒಣಗಿ ಸೊರಗುತ್ತಿವೆ. ಅಡಿಕೆಯ ಬೆಲೆ ಏರುಗತಿ ಕಂಡ ಬೆನ್ನಲ್ಲೇ ಬೆಳೆಗೆ ಎಲೆ ಚುಕ್ಕಿ ರೋಗ ಕಾಣಿಸಿಕೊಂಡಿದೆ. ಬೆಳೆಗಾರರ ನಿರೀಕ್ಷೆಗೆ ತಣ್ಣೀರು ಎರಚಿದಂತಾಗಿದೆ.

ದಿಕ್ಕುತೋಚದಂತಾದ ಬೆಳೆಗಾರರು

ಕಳಸ: ಎರಡು ವರ್ಷದ ಹಿಂದೆ ಮೈದಾಡಿ, ಸಂಸೆ, ಎಳನೀರು ಪ್ರದೇಶದಲ್ಲಿ ಕಾಣಿಸಿಕೊಂಡ ಎಲೆಚುಕ್ಕಿ ರೋಗವು ಈಗ ಇಡೀ ತಾಲ್ಲೂಕಿನ ಅಡಿಕೆ ತೋಟಗಳಿಗೆ ವ್ಯಾಪಿಸುತ್ತಿದೆ.

ವಿಜ್ಞಾನಿಗಳು ಕೊಲೆಟೋಟ್ರೈಕಮ್ ಶಿಲೀಂಧ್ರ ನಾಶಪಡಿಸಲು ನಾಲ್ಕಾರು ಬಗೆಯ ಔಷಧಿ ಪಟ್ಟಿ ನೀಡಿದ್ದಾರೆ. ಯಾವ ಔಷಧಿ ಸಿಂಪಡಿಸಿದರೂ ಹತೋಟಿಗೆ ಬರುತ್ತಿಲ್ಲ ಎಂಬುದು ಬೆಳೆಗಾರರ ಅಳಲು.

ನವೆಂಬರ್‌ನಲ್ಲಿ ಚಳಿ, ಬಿಸಿಲು ಹೆಚ್ಚಾದರೆ ರೋಗ ಹತೋಟಿಗೆ ಬರಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಈಗಲೂ ಮೋಡ, ಮಳೆ ಮುಂದುವರೆದಿರುವುದು ಅಡಿಕೆ ಬೆಳೆಗಾರರನ್ನು ಚಿಂತೆಗೀಡು ಮಾಡಿದೆ.

ಬೆಳೆಗಾರರು ಅಡಿಕೆ ತೋಟ ಕಾಪಾಡಿಕೊಳ್ಳಲು ಔಷಧಿ ಸಿಂಪಡಣೆಯ ಜೊತೆಗೆ ಹೊರನಾಡಿನ ಚಂಡಿಕಾ ಹೋಮದಲ್ಲೂ ಭಾಗವಹಿಸಿದ್ದಾರೆ. ತೋಟಗಾರಿಕೆ ಇಲಾಖೆಯು ಬೆಳೆಗಾರರಿಗೆ ವಿತರಣೆ ಮಾಡುತ್ತಿರುವ ಔಷಧಿ ಬಗ್ಗೆಯೂ ಬೆಳೆಗಾರರು ಆಕ್ಷೇಪ ಹೊರಹಾಕಿದ್ದಾರೆ.

ಆರ್ಥಿಕತೆಯ ಬೆನ್ನೆಲುಬಾದ ಅಡಿಕೆ ತೋಟ ಉಳಿಸಿಕೊಳ್ಳುವುದು ಬೆಳೆಗಾರರಿಗೆ ಸವಾಲಾಗಿದೆ.

ರೋಗ ಹತೋಟಿ ಸವಾಲು

ಶೃಂಗೇರಿ: ತಾಲ್ಲೂಕಿನಲ್ಲಿ ಹಲವು ವರ್ಷಗಳಿಂದ ಅಡಿಕೆಗೆ ಹಳದಿ ಎಲೆ ರೋಗ ಕಾಡುತ್ತಿದೆ. ಎರಡು ವರ್ಷಗಳಿಂದ ಎಲೆ ಚುಕ್ಕಿ ರೋಗ ಕಾಣಿಸಿಕೊಂಡಿದೆ.

ಹಿಂದಿನ ಬಾರಿ ಕಳಸ ತಾಲ್ಲೂಕಿನ ಸುತ್ತಲಿನ ಭಾಗದಲ್ಲಿ ಕಾಣಿಸಿಕೊಂಡಿತ್ತು. ಈ ಬಾರಿ ಈ ಬಾರಿ ಆಗುಂಬೆ, ತೀರ್ಥಹಳ್ಳಿ ನಂತರ ಶೃಂಗೇರಿ ತಾಲ್ಲೂಕಿಗೂ ವಿಸ್ತರಿಸಿದೆ. ಬೇಗಾರ್, ತೆಕ್ಕೂರು, ಹೊಳೆಕೊಪ್ಪ, ನೆಮ್ಮಾರ್, ಮೆಣಸೆ, ಕಿಗ್ಗಾ, ಮರ್ಕಲ್, ಕೆರೆಕಟ್ಟೆ, ಕುಂಚೇಬೈಲ್ ಸಹಿತ ಎಲ್ಲ ಕಡೆ ರೋಗ ವ್ಯಾಪಿಸಿದೆ. ಕೀಟನಾಶಕ ಸಿಂಪಡಿಸಿದರೂ ಬೇರುಹುಳ ಬಾಧೆ, ಹಳದಿ ಎಲೆ, ಎಲೆಚುಕ್ಕಿ ರೋಗ ಹತೋಟಿಗೆ ಬರುತ್ತಿಲ್ಲ ಎಂದು ರೈತರು ಹೇಳುತ್ತಾರೆ.

ಮಲೆನಾಡಿನ ಆರ್ಥಿಕತೆಗೆ ಕರಿನೆರಳು

ಬಾಳೆಹೊನ್ನೂರು: ಅಡಿಕೆ ತೋಟಗಳಲ್ಲಿ ಹಳದಿ ಎಲೆ , ಎಲೆಚುಕ್ಕಿ ರೋಗದಿಂದಾಗಿ ಮಲೆನಾಡಿನ ಆರ್ಥಿಕತೆಯ ಮೇಲೆ ಕರಿನೆರಳು ಮೂಡಿದೆ.

ಮೇಗೂರು ಸುತ್ತಮುತ್ತ ಕಾಣಿಸಿಕೊಂಡ ಹಳದಿ ಎಲೆ ರೋಗ ನಿಧಾನವಾಗಿ ಇಡೀ ತಾಲ್ಲೂಕಿನಲ್ಲಿ ಹರಡಿದೆ. ಎಲೆಚುಕ್ಕಿ ರೋಗವೂ ಎಲ್ಲ ಕಡೆ ವ್ಯಾಪ್ತಿಸುತ್ತಿದೆ. ಬೈನೆ, ಈಚಲು, ತೆಂಗು ಮರಗಳಿಗೆ ಎಲೆಚುಕ್ಕಿ ರೋಗ ಹರಡಿದೆ.

‘ಕಳೆದ ವರ್ಷ ಎಂಟು ಎಕರೆ ತೋಟದಲ್ಲಿ 40 ಕ್ವಿಂಟಲ್ ಒಣ ಅಡಿಕೆ ಫಸಲು ಕೈಗೆ ಸಿಕ್ಕಿತ್ತು. ಈ ವರ್ಷ ಎಲೆಚುಕ್ಕಿ ರೋಗ ಆವರಿಸಿದೆ. ಫಸಲು ನೆಲ ಕಚ್ಚಿದೆ. ಈ ಬಾರಿ 15 ಕ್ವಿಂಟಲ್ ಒಣ ಅಡಿಕೆ ಸಿಕ್ಕಿದರೆ ಹೆಚ್ಚು. ಈ ರೋಗದಿಂದ ಗಿಡಗಳನ್ನು ಪಾರು ಮಾಡುವುದು ಹೇಗೆ ಎಂಬುದೇ ಚಿಂತೆಯಾಗಿದೆ’ ಎಂದು ಗುಡ್ಡೇತೋಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೂವಿನಗುಂಡಿಯ ಕೀರ್ತಿರಾಜ್ ಹೇಳುತ್ತಾರೆ.

ವ್ಯಾಪಕವಾಗಿ ಹರಡಿದ ರೋಗ
ನರಸಿಂಹರಾಜಪುರ: ತಾಲ್ಲೂಕು ವ್ಯಾಪ್ತಿಯಲ್ಲಿ ಸುಮಾರು ಎರಡು ಸಾವಿರ ಹೆಕ್ಟೆರ್ ಅಡಿಕೆ ಬೆಳೆ ಎಲೆಚುಕ್ಕಿ ರೋಗ ತಗುಲಿದೆ. ತಾಲ್ಲೂಕಿನ ಸೀತೂರು, ಕಾನೂರು, ಕಟ್ಟಿನಮನೆ, ಗಡಿಗೇಶ್ವರ , ಶೆಟ್ಟಿಕೊಪ್ಪ ಗ್ರಾಮದ ಸ್ವಲ್ಪ ಭಾಗದಲ್ಲಿ ರೋಗ ವ್ಯಾಪಕವಾಗಿ ಕಂಡುಬಂದಿದೆ.
ಬೊರ್ಡೊ ದ್ರಾವಣ, ತೋಟಗಾರಿಕಾ ಇಲಾಖೆಯವರು ನೀಡಿರುವ ಔಷಧಿ ಸಿಂಪಡಿಸಿದರೂ ರೋಗ ನಿರೀಕ್ಷಿತ ನಿಯಂತ್ರಣಕ್ಕೆ ಬರುತ್ತಿಲ್ಲ. ಹವಾಮಾನದ ವೈಪರಿತ್ಯ ಹಾಗೂ ಎಲೆಚುಕ್ಕಿರೋಗ ಇವೆರೆಡರಿಂದಲೂ ಇಳುವರಿ ಸಾಕಷ್ಟು ಕುಸಿದಿದೆ. ಸರ್ಕಾರ ಬೆಳೆಗಾರರಿಗೆ ಪರಿಹಾರ ನೀಡಿದರೆ ಅನುಕೂಲ ಎಂದು ಗಡಿಗೇಶ್ವರ ಗ್ರಾಮದ ರೈತ ಅಜಿತ್ ಹೇಳುತ್ತಾರೆ.

ಎಲೆ ಚುಕ್ಕಿ ರೋಗ ಬಂದಿರುವ ತೋಟಗಳಿಗೆ ಭೇಟಿ ನೀಡಲಾಗಿದೆ. ರೋಗ ನಿಯಂತ್ರಣಕ್ಕೆ ಸಿಂಪಡಿಸಬೇಕಾದ ಔಷಧಿಗಳ ಬಗ್ಗೆ ಬೆಳೆಗಾರರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗಿದೆ. ಸರ್ಕಾರದಿಂದ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ನೀಡಿರುವ ಔಷಧಿಯನ್ನು ಬೆಳೆಗಾರರಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಜಯದೇವ್ ತಿಳಿಸಿದರು.

ಅಣಬೆ ರೋಗದ ಬರೆ

ತರೀಕೆರೆ: ತಾಲ್ಲೂಕಿನಲ್ಲಿ ಅಡಿಕೆ ತೋಟಗಳಿಗೆ ಅಣಬೆ ರೋಗ,ಹಿಡಗಲು ಮುಂಡಿ ರೋಗದ ಭೀತಿ ರೈತರನ್ನು ಕಾಡ ತೋಡಗಿದೆ.

ಅಮೃತಾಪುರ, ಲಕ್ಕವಳ್ಳಿ, ಕಸಬಾ, ಲಿಂಗದಹಳ್ಳಿ ಹೋಬಳಿಗಳಲ್ಲಿ ಅಡಿಕೆ ತೋಟಗಳು ಇವೆ. ಶಿಲೀಂಧ್ರವು ಈ ರೋಗಕ್ಕೆ ಕಾರಣ. ಗಿಡದ ಸುಳಿ ಒಣಗುತ್ತದೆ.

‘ಮಳೆಗಾಲದಲ್ಲಿ ತೋಟದಲ್ಲಿನ ನೀರು ಹರಿದು ಹೋಗಲು ಬಸಿ ಕಾಲುವೆ ನಿರ್ಮೀಸಬೇಕು.ರೋಗ ಇತರೆ ಮರಗಳಿಗೆ ಹರಡದಂತೆ ಮುಂಜಾಗ್ರತಾವಾಗಿ ಶಿಲೀಂಧ್ರ ನಾಶಕ ಸಿಂಪಡಣೆ ಮಾಡಬೇಕು’ ಎಂದು ತೋಟಗಾರಿಕೆ ಸಹಾಯಕ ನಿರ್ದೇಶಕ ಯತಿರಾಜ್ ಹೇಳುತ್ತಾರೆ.

‘ಸಾವಯವ ಕೃಷಿ ಪದ್ದತಿ ಅಳವಡಿಕೆಯಿಂದ ಅಣಬೆ, ಹಿಡಗಲು ಮುಂಡಿ ರೋಗ ನಿಯಂತ್ರಣ ಮಾಡಬಹುದು’ ಎಂದು ತರೀಕೆರೆ ಸಾವಯವ ಕೃಷಿಕ ಟಿ.ಎಸ್.ಗಣೇಶ್ ಹೇಳುತ್ತಾರೆ.

‘ವಾಡಿಕೆಗಿಂತ ಹೆಚ್ಚು ಮಳೆ; ರೋಗ ಉಲ್ಬಣ’

ಎಲೆಚುಕ್ಕಿರೋಗಕ್ಕೆ ‘ಫಿಲ್ಲೋಸ್ಟಿಕ್ ಅರೆಕಾ’, ‘ಕೊಲೆಟೋಟ್ರೈಕಂ ಗ್ಲಿಯೋಸ್ಟೋರಾಯ್ಡಸ್ ಫಿಲ್ಲೋಸ್ಡಿಕ್ ಶಿಲೀಂಧ್ರ ಕಾರಣ. ವಾಡಿಕೆಗಿಂತ ಹೆಚ್ಚು ಮಳೆ ಸುರಿದಿರುವುದು ರೋಗ ಉಲ್ಬಣಕ್ಕೆ ಕಾರಣ. ರೋಗ ನಿಯಂತ್ರಣಕ್ಕೆ ಅಡಕೆ ತೋಟಗಳಲ್ಲಿ ತೇವಾಂಶ ಇರದಂತೆ ನೋಡಿಕೊಳ್ಳಬೇಕು. ಮಳೆ ನೀರು ನಿಲ್ಲದಂತೆ ಬಸಿಗಾಲುವೆಗಳನ್ನು ನಿರ್ಮಿಸಿ, ಬೇಸಿಗೆಯಲ್ಲಿ ರೋಗಬಾಧಿತ ಗರಿ ತೆಗೆದು ಸುಡಬೇಕು. ಮುಂಗಾರಿನ ಪ್ರಾರಂಭದಲ್ಲಿ ಬೋರ್ಡೊ ದ್ರಾವಣ ಸಿಂಪಡಿಸಬೇಕು. ಮಾಹಿತಿಗಾಗಿ 08263- 228198 ಸಂಪರ್ಕಿಸಬಹುದು ಎಂದು ಮೂಡಿಗೆರೆ ತಾಲ್ಳೂಕಿನ ಹ್ಯಾಂಡ್ ಪೋಸ್ಟಿನ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಎ.ಟಿ.ಕೃಷ್ಣಮೂರ್ತಿ ತಿಳಿಸಿದರು.

(ಪ್ರಜಾವಾಣಿ ತಂಡ: ಬಿ.ಜೆ.ಧನ್ಯಪ್ರಸಾದ್‌, ಕೆ.ಎನ್.ರಾಘವೇಂದ್ರ, ಕೆ.ವಿ.ನಾಗರಾಜ್‌, ರವಿಕುಮಾರ್‌ ಶೆಟ್ಟಿಹಡ್ಲು, ಸತೀಶ್‌ ಜೈನ್‌, ರವಿ ಕೆಳಂಗಡಿ, ಎಚ್‌.ಎಂ.ರಾಜಶೇಖರಯ್ಯ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT