ಶುಕ್ರವಾರ, ಮಾರ್ಚ್ 24, 2023
30 °C
ಅಡಿಕೆಗೆ ಎಲೆಚುಕ್ಕಿ ರೋಗ: ಅಧಿವೇಶನದಲ್ಲಿ ಪರಿಹಾರ ಘೋಷಿಸದಿದ್ದರೆ ಸ್ವಯಂಪ್ರೇರಿತ ಬಂದ್

ಎಲೆಚುಕ್ಕಿ ರೋಗಕ್ಕೆ ಎಕರೆಗೆ ₹5 ಲಕ್ಷ ಪರಿಹಾರಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶೃಂಗೇರಿ: `ಎಲೆ ಚುಕ್ಕಿ ರೋಗದಿಂದ ತತ್ತರಿಸಿರುವ ಮಲೆನಾಡಿನ ಅಡಿಕೆ ಬೆಳೆಗಾರರಿಗೆ ಸರ್ಕಾರ ಎಕರೆಗೆ ₹5 ಲಕ್ಷ ಪರಿಹಾರ ಮತ್ತು ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್‍ ಅನ್ನು ಬೆಳಗಾವಿ ಅಧಿವೇಶನದಲ್ಲಿ ಘೋಷಣೆ ಮಾಡಬೇಕು. ಇಲ್ಲದಿದ್ದರೆ, ಶೃಂಗೇರಿ ಕ್ಷೇತ್ರದಲ್ಲಿ ಸ್ವಯಂ ಪ್ರೇರಿತ ಬಂದ್ ಹಾಗೂ ಪಾದಯಾತ್ರೆ ಹಮ್ಮಿಕೋಳ್ಳುತ್ತೇವೆ’ ಎಂದು ಮಲೆನಾಡು ಜನಪರ ಒಕ್ಕೂಟದ ಅಧ್ಯಕ್ಷ ಅನಿಲ್ ಹೊಸಕೊಪ್ಪ ಹೇಳಿದರು.

ಅಡಿಕೆ ಎಲೆಚುಕ್ಕಿ ರೋಗಕ್ಕೆ ಪರಿಹಾರ ಒದಗಿಸಬೇಕು ಮತ್ತು ಅರಣ್ಯ ಕಾಯ್ದೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಮಲೆನಾಡು ಜನಪರ ಒಕ್ಕೂಟದಿಂದ ಶೃಂಗೇರಿಯ ತಾಲ್ಲೂಕು ಕಚೇರಿಯಲ್ಲಿ ತಹಶೀಲ್ದಾರ್ ಗೌರಮ್ಮ ಅವರ ಮೂಲಕ ಸರ್ಕಾರ ಮನವಿ ಪತ್ರ ಸಲ್ಲಿಸಿ ಅವರು ಮಾತನಾಡಿದರು.

‘ಮಲೆನಾಡಿನ ಶೃಂಗೇರಿ, ಕೊಪ್ಪ, ಎನ್.ಆರ್ ಪುರ ಭಾಗಗಳಲ್ಲಿ ಅಡಿಕೆ ಕೃಷಿಯೇ ಜೀವನಾಧರ ಎಂದು ನಂಬಿಕೊಂಡಿದ್ದ ಕೃಷಿಕರು ಮತ್ತು ಕಾರ್ಮಿಕರು ಕಂಗಾಲಾಗಿದ್ದಾರೆ. ಕೃಷಿಕರು ಆತ್ಮಹತ್ಯೆಗೆ ಮುಂದಾಗಿದ್ದಾರೆ. ಕಂದಾಯ ಭೂಮಿಯಲ್ಲಿ ಸೆಕ್ಷನ್ 4(1) ಅರಣ್ಯ ಎಂದು ಅಧಿಸೂಚನೆ ಆಗಿದ್ದು, ಅರಣ್ಯ ವ್ಯವಸ್ಥಾಪನಾಧಿಕಾರಿಗಳು ಸ್ಥಳಕ್ಕೆ ಬಂದು, ಇಲ್ಲಿ ವಾಸವಿರುವ ಮನೆಗಳು ಹಾಗೂ ಕೃಷಿ ಭೂಮಿಯನ್ನು ಹೊರತು ಪಡಿಸಿ, ಉಳಿದದ್ದು ಅರಣ್ಯ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಿ, ರೈತರಿಗೆ ಹಕ್ಕು ಪತ್ರ ನೀಡಲು ಅನುವು ಮಾಡಿಕೊಡಬೇಕು.  ಬಗರ್ ಹುಕುಂ ಸಾಗುವಳಿ ಮಂಜೂರಿಗೆ ಅರಣ್ಯ ಇಲಾಖೆಯ ಅಭಿಪ್ರಾಯ ಪಡೆಯಬೇಕು. ರಾಜ್ಯ ಸರ್ಕಾರದ ಆದೇಶ ಹಿಂಪಡೆಯಬೇಕು. ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಬೇಕು’ ಎಂದು ಒತ್ತಾಯಿಸಿದರು.

ಒಕ್ಕೂಟದ ಸದಸ್ಯ ಜಗದೀಶ್ ಕಣದಮನೆ ಮಾತನಾಡಿ, ‘ಬಡವರನ್ನು ಒಕ್ಕಲೆಬ್ಬಿಸುವ ಮಾರಕ ಅರಣ್ಯ ಕಾಯ್ದೆ ಜಾರಿಯನ್ನು ತಡೆಯಬೇಕು. ನಿವೇಶನ ರಹಿತರಿಗೆ ನಿವೇಶನ ನೀಡಬೇಕು. ಹಕ್ಕು ಪತ್ರ ನೀಡಿರುವುದನ್ನು ಪಹಣಿಯಲ್ಲಿ ದಾಖಲಿಸಬೇಕು’ ಎಂದು ಒತ್ತಾಯಿಸಿದರು.
ಸಂತೋಷ್ ಕಾಳ್ಯ, ಅವಿನಾಶ್, ಆಶಿಕ್ , ತ್ರಿಮೂರ್ತಿ, ನೂತನ್ ಹೆಗ್ಡೆ, ವಿಜೇಂದ್ರ ಹಿಂಬಿಗೆ, ರಾಜ್‍ಕುಮಾರ್ ಹೆಗ್ಡೆ, ನಾಗರಾಜ್, ಪ್ರದೀಪ್ ಕಲ್ಲಾಳಿ, ನಾಗನ್ ಕುಪ್ಪನಮಕ್ಕಿ, ಪ್ರತೀಕ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು