ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿಕೆ ಧಾರಣೆ ಚೇತರಿಕೆ, ಫಸಲು ಕುಸಿತ | ಹೆಚ್ಚಿನ ಬೆಲೆ ನೀಡುವ ಖಾಸಗಿ ವರ್ತಕರು

ಕ್ಯಾಂಪ್ಕೊ, ಮ್ಯಾಮ್ಕೋಸ್‌ನಿಂದ ಅಡಿಕೆ ಖರೀದಿ,
Last Updated 11 ಆಗಸ್ಟ್ 2022, 19:35 IST
ಅಕ್ಷರ ಗಾತ್ರ

ಬೀರೂರು: ಅಡಿಕೆ ವ್ಯವಹಾರದ ಸಹಕಾರ ಸಂಸ್ಥೆಗಳಲ್ಲಿ ರಾಶಿ ಇಡಿ ಅಡಿಕೆ ಧಾರಣೆಯು ಜುಲೈನಲ್ಲಿ ₹48 ಸಾವಿರದಿಂದ ₹49 ಸಾವಿರ ಇದ್ದು, ಆಗಸ್ಟ್‌ ತಿಂಗಳಿನಲ್ಲಿ ₹51,500ಕ್ಕೆ ತಲುಪಿದೆ. ಖಾಸಗಿ ವರ್ತಕರಲ್ಲಿ ಜುಲೈನಲ್ಲಿ ₹49 ಸಾವಿರ ಇದ್ದು, ಆಗಸ್ಟ್‌ನಲ್ಲಿ ₹53 ಸಾವಿರಕ್ಕೆ ತಲುಪಿದೆ.

ಬೀರೂರು ಪ್ರಮುಖ ಅಡಿಕೆ ವ್ಯಾಪಾರ ಕೇಂದ್ರವಾಗಿದ್ದು, ಕ್ಯಾಂಪ್ಕೊ ದಶಕಗಳ ಹಿಂದೆಯೇ ಇಲ್ಲಿ ಕಚೇರಿ ತೆರೆದಿದೆ. ಮ್ಯಾಮ್ಕೋಸ್‌ ಶಾಖೆ ನಡೆಸುತ್ತಿದೆ. ಅಡಿಕೆಯ ಎಲ್ಲ ವಿಧದ ಮಾದರಿಗಳನ್ನು( ಕೆಂಪಡಿಕೆ, ಚಾಲಿ, ಗೊರಬಲು, ರಾಶಿಇಡಿ, ಕೋಕಾ, ಪಟೋರಾ, ಪುಡಿ) ಕ್ಯಾಂಪ್ಕೊ ಖರೀದಿಸುತ್ತಿದೆ. ಮ್ಯಾಮ್ಕೋಸ್‌ ಕಮಿಷನ್‌ ದಲ್ಲಾಳಿ ಸಂಸ್ಥೆಯಾಗಿ ರೈತರ ಹಿತ ಕಾಯಲು ನೆರವಾಗುತ್ತಿದೆ. ಆದರೂ ಬಹಳಷ್ಟು ಬೆಳೆಗಾರರು ತಾತ್ಕಾಲಿಕ ಲಾಭಕ್ಕಾಗಿ ಕೈ ವ್ಯಾಪಾರಸ್ಥರು, ಖಾಸಗಿ ವರ್ತಕರ ಮೊರೆ ಹೋಗುವುದೇ ಹೆಚ್ಚಾಗಿದೆ. ಅಡಿಕೆ ಮಂಡಿಗಳೂ ಸಾಕಷ್ಟು ಸಂಖ್ಯೆಯಲ್ಲಿ ಕಾರ್ಯ ನಿರ್ವಹಿಸುತ್ತಿವೆ.

‘ಖಾಸಗಿ ವ್ಯಾಪಾರಸ್ಥರು ₹1ಸಾವಿರ ಹೆಚ್ಚುವರಿ ಹಣಕ್ಕೆ ಅಡಿಕೆ ಖರೀದಿ ಮಾಡಬಹುದು. ಆದರೆ ಬಿಲ್‌ ಇಲ್ಲದ, ಜಿಎಸ್‌ಟಿ, ಎಪಿಎಂಸಿ ಸೆಸ್‌ ಪಾವತಿ ಮಾಡದ ಖಾಸಗಿ ವರ್ತಕರು ಸರ್ಕಾರಕ್ಕೂ ತೆರಿಗೆ ಪಾವತಿಸುವುದಿಲ್ಲ. ಮ್ಯಾಮ್ಕೋಸ್‌ ತರಹದ ಸಂಸ್ಥೆ ಎಪಿಎಂಸಿ ಸೆಸ್‌ ಪಾವತಿಸಿ, ತನ್ನ ಕಮಿಷನ್‌ ಸೇರಿಸಿ ಮಾರಾಟ ಮಾಡುವುದರಿಂದ ಧಾರಣೆ ಸ್ಥಿರವಾಗಿರಲು ನೆರವಾಗುತ್ತದೆ’ಎನ್ನುತ್ತಾರೆ ಮ್ಯಾಮ್ಕೋಸ್ ವ್ಯವಸ್ಥಾಪಕ ಸುರೇಶ್.

ಕ್ಯಾಂಪ್ಕೊ ಶೇ4 ಜಿಎಸ್‌ಟಿ, ಎಪಿಎಂಸಿ ಸೆಸ್‌, ಸಹಕಾರ ಸಂಸ್ಥೆಗಳ ಟೆಂಡರ್‌ಗೆ ಕಮಿಷನ್‌ ಪಾವತಿಸುತ್ತದೆ. ದಾಸ್ತಾನು ಸಾಮರ್ಥ್ಯವೂ ಇದೆ. ದರ ಏಕಾಏಕಿ ಕುಸಿಯುವುದನ್ನು ತಡೆಯುತ್ತದೆ. ಕೈ ವ್ಯಾಪಾರಸ್ಥರು ಕೇವಲ ಲಾಭಕ್ಕೆ ಸೀಮಿತವಾಗಿರುತ್ತಾರೆ’ ಎನ್ನುತ್ತಾರೆ ಕ್ಯಾಂಪ್ಕೊ ಅಧಿಕಾರಿಗಳು.

‘ನಾವು ಕೈ ವ್ಯಾಪಾರಸ್ಥರಂತೆ ಏಕಾಏಕಿ ₹4 ಸಾವಿರದಿಂದ 5 ಸಾವಿರ ದರ ಕುಸಿತ ಮಾಡಲು ಸಾಧ್ಯವಿಲ್ಲ. ಬೆಳೆಗಾರರು ಹಾಗೂ ಸಂಸ್ಥೆಯ ಸದಸ್ಯರ(ಷೇರುದಾರರ) ಹಿತಕ್ಕಾಗಿ ನಿಧಿಗಳೂ ನಮ್ಮಲ್ಲಿ ಸಾಕಷ್ಟಿವೆ’ ಎನ್ನುತ್ತಾರೆ ಅವರು.

‘ಇತ್ತೀಚಿನ ದಿನಗಳಲ್ಲಿ ಚೇಣಿ ಕೊಡುವ ರೈತರು, ಹಣದ ಬದಲಾಗಿ ಒಂದು ಕ್ವಿಂಟಲ್‌ ಹಸಿ ಅಡಿಕೆಗೆ ಇಂತಿಷ್ಟು ಕೆ.ಜಿ. ಸಿದ್ಧಪಡಿಸಿದ ಅಡಿಕೆ ಕೊಡುವಂತೆ ಒಪ್ಪಂದ ಮಾಡಿಕೊಳ್ಳುತ್ತಾರೆ ಎನ್ನುತ್ತಾರೆ ಕೃಷಿಕ ಬಿ.ವಿ.ಸೋಮಶೇಖರ್‌.

‘ಈಚಿನ ದಿನಗಳಲ್ಲಿ ಚೇಣಿ ಮಾಡುವವರ ಸಂಖ್ಯೆ ಕಡಿಮೆ ಆಗುತ್ತಿದೆ. ನಾವು ಸಾಕಷ್ಟು ಶ್ರಮ ವಹಿಸಿ ಕೆಲಸ ಮಾಡಬೇಕು, ದರ ಒಂದೇ ರೀತಿ ಇದ್ದರೆ ಅಡಿಕೆ ಕೊಡಲು ಅಥವಾ ಹಣ ನೀಡಲು ಒಪ್ಪಂದ ಮಾಡಿಕೊಳ್ಳಬಹುದು. ಸದ್ಯ ಚೇಣಿ ಕೊಡುವವರು ಕ್ವಿಂಟಲ್‌ ಹಸಿ ಅಡಿಕೆಗೆ ₹6,500ರಿಂದ ₹7 ಸಾವಿರಕ್ಕೆ ಬೇಡಿಕೆ ಇಡುತ್ತಿದ್ದಾರೆ.

ಅಲ್ಲಿಗೆ ನಾವು ಅಡಿಕೆ ಮಾರಾಟ ಮಾಡಲು ಕ್ವಿಂಟಲ್‌ಗೆ ಕನಿಷ್ಠ ₹51ಸಾವಿರ ಧಾರಣೆ ಇರಬೇಕಾಗುತ್ತದೆಎನ್ನುತ್ತಾರೆ ಚೇಣಿದಾರ ಅಕ್ಬರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT