ಕಡೂರು: ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆ ತೆಂಗು. ಮಳೆ ಕೊರತೆಯಿಂದ ತೆಂಗಿನ ಮರಗಳಲ್ಲಿ ಈ ಬಾರಿ ಇಳುವರಿ ಕುಸಿಯುವ ಆತಂಕ ಇದೆ. ತೆಂಗಿನ ಕಾಯಿ ದರ ಸ್ಥಿರವಾಗಿದ್ದರೂ, ರೈತರು ಕಾಯಿಗಿಂತ ಎಳನೀರು ಮಾರಾಟಕ್ಕೆ ಈಚೆಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ.
ತೆಂಗಿನ ಕಾಯಿ (ದೊಡ್ಡದು) 1 ಸಾವಿರಕ್ಕೆ ₹12 ರಿಂದ ₹15 ಸಾವಿರದವರೆಗೆ ಮಧ್ಯಮ ಗಾತ್ರದ್ದು ₹ 8 ರಿಂದ ₹10 ಸಾವಿರದ ವರೆಗೆ ಮತ್ತು ಚಿಕ್ಕ ಕಾಯಿ ₹ 6 ರಿಂದ ₹8 ಸಾವಿರದವರೆಗೆ ಬೆಲೆ ಇದೆ. ರೈತರು, ಖರೀದಿದಾರರಿಗೆ 1 ಸಾವಿರ ತೆಂಗಿನ ಕಾಯಿಗೆ ಲಾಭದ ರೂಪದಲ್ಲಿ 100 ಕಾಯಿ ನೀಡಬೇಕಾಗುತ್ತದೆ. ರೈತರಿಂದ 1 ಸಾವಿರ ಕಾಯಿಗೆ ₹14 ರಿಂದ ₹15 ಸಾವಿರ ಕೊಟ್ಟು ಖರೀದಿಸುವ ವ್ಯಾಪಾರಸ್ಥರು, ಅದನ್ನು ₹28 ರಿಂದ ₹30 ಸಾವಿರ ದರಕ್ಕೆ ಮಾರಾಟ ಮಾಡುತ್ತಾರೆ. ರೈತರಿಂದ ಖರೀದಿಸಿದ ತೆಂಗಿನ ಕಾಯಿಯನ್ನು ದೆಹಲಿ, ಮುಂಬೈ ಮುಂತಾದ ಕಡೆ ಲಾರಿಗಳಲ್ಲಿ ಕಳುಹಿಸುತ್ತಾರೆ.
ಎಳನೀರು 1 ಸಾವಿರಕ್ಕೆ ₹14 ರಿಂದ ₹15 ಸಾವಿರ ಬೆಲೆಯಿದೆ. ವ್ಯಾಪಾರಿಗಳು ತಾವೇ ನೇರವಾಗಿ ತೋಟಕ್ಕೇ ಬಂದು ಎಳೆನೀರು ಖರೀದಿಸುತ್ತಾರೆ. ರೈತರಿಗೆ ಎಳನೀರು ಕೀಳುವ, ಸಾಗಾಣಿಕೆ ಮಾಡುವ ವೆಚ್ಚ ಇಲ್ಲ. ಹಾಗಾಗಿ ಎಳನೀರು ಕೊಡುವವರ ಸಂಖ್ಯೆ ಹೆಚ್ಚಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದು ಎಳನೀರಿಗೆ ₹30 ರಿಂದ ₹40ರವರೆಗೆ ದರ ಇದೆ. ಕೆಲ ವ್ಯಾಪಾರಸ್ಥರು ಮಂಗಳೂರು ಮುಂತಾದೆಡೆ ಎಳನೀರು ಸಾಗಿಸಿ ₹ 28 ರಿಂದ ₹30 ದರದಲ್ಲಿ ಮಾರುತ್ತಾರೆ.
ತೆಂಗಿನ ಕಾಯಿಯನ್ನು ಕೊಬ್ಬರಿ ಮಾಡುವವರ ಸಂಖ್ಯೆಯೂ ಕಡಿಮೆಯಾಗಿದೆ. ಸದ್ಯ ಕೊಬ್ಬರಿ ಬೆಲೆ ಕ್ವಿಂಟಲ್‌ಗೆ ₹8,500 ಆಸುಪಾಸಿನಲ್ಲಿದೆ. ರೈತರು ಎಳನೀರು ಕೊಡುವುದನ್ನೇ ಮುಂದುವರಿಸಿದರೆ ಮುಂದೊಂದು ದಿನ ತೆಂಗಿನ ಕಾಯಿ, ಕೊಬ್ಬರಿ ಕೊರತೆ ಎದುರಾಗಬಹುದು ಎನ್ನುತ್ತಾರೆ ವರ್ತಕರು.
ಕಳೆದ ವಾರ ಇಲ್ಲಿನ ಎಪಿಎಂಸಿಯಲ್ಲಿ 1 ಸಾವಿರ ತೆಂಗಿನಕಾಯಿ ₹8 ರಿಂದ ₹11 ಸಾವಿರ ದರದಲ್ಲಿ ಮಾರಾಟವಾಗಿದೆ. ಕೇವಲ 4 ಸಾವಿರ ಕಾಯಿಗಳು ಮಾತ್ರ ಮಾರಾಟವಾಗಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.