ಆಲ್ದೂರು: ಆರಂಭದಲ್ಲಿ ಮುಂಗಾರು ಮಳೆ ಕೊರತೆಯನ್ನು ಎದುರಿಸಿದ್ದ ಕಾಫಿ ಬೆಳೆಗಾರರು, ಈಗ ಅತಿಯಾದ ಮಳೆಯಿಂದಾಗಿ ಸಮಸ್ಯೆ ಎದುರಿಸುತ್ತಿದ್ದಾರೆ.
ಆಲ್ದೂರು ಸುತ್ತಮುತ್ತ ಈಗ ಕೆಲವು ಹೋಬಳಿಗಳಲ್ಲಿ ಅತಿಯಾದ ಮಳೆಯಿಂದಾಗಿ ರೋಬಸ್ಟ ಮತ್ತು ಅರೇಬಿಕಾ ತಳಿ ಕಾಫಿಯಲ್ಲಿ ಕೊಳೆರೋಗ ಕಾಣಿಸಿಕೊಳ್ಳುತ್ತಿದೆ.
‘ಆವತಿ ಹೋಬಳಿಯ ಗ್ರಾಮಗಳಾದ ಐದಳ್ಳಿ, ಆವತಿ,ಬೆಟ್ಟದ ಮರಡಿ, ಬೈಗೂರು, ಹಂಗರಹಳ್ಳಿ, ಬಸರವಳ್ಳಿ, ಅರೇನೂರು, ಮಲ್ಲಂದೂರು, ಮುಂತಾದ ಕಡೆಗಳ ಕಾಫಿ ತೋಟಗಳಲ್ಲಿ ಕೊಳೆ ರೋಗ ಗಣನೀಯ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸಂಬಂಧಪಟ್ಟ ಇಲಾಖೆ ಮತ್ತು ಸರ್ಕಾರ ಬೆಳೆಗಾರರ ಸಂಕಷ್ಟಕ್ಕೆ ನೆರವಾಗಬೇಕು’ ಎಂದು ಮುಖಂಡ ಸಿಂಧು ಕುಮಾರ್ ಒತ್ತಾಯಿಸುತ್ತಾರೆ.
ವರ್ಷದ ಆರಂಭದಲ್ಲಿ ಮಳೆಯ ಕೊರತೆ ರೈತರಿಗೆ ಸಮಸ್ಯೆಯಾಗಿ ಕಾಡಿತ್ತು. ಆಈಗ ಒಂದೇ ಸಮನೆ ಮಳೆ ಸುರಿದಿದ್ದರಿಂದ ತೋಟಗಳಲ್ಲಿ ತೇವಾಂಶ ಹೆಚ್ಚಾಗಿ ಶಿಲೀಂದ್ರಗಳ ಮೂಲಕ ಗಿಡದಿಂದ ಗಿಡಕ್ಕೆ ಕೊಳೆ ರೋಗ ಹರಡುತ್ತಿದೆ. ಇನ್ನೊಂದೆಡೆ ಅವಧಿಗೂ ಮುನ್ನವೇ ಕಾಯಿ ಕಟ್ಟುವಿಕೆ ಆರಂಭವಾಗಿದ್ದು, ಪೂರ್ಣವಾಗಿ ಬಲಿಯದೆ ಇರುವುದರಿಂದ ಬೆಳಗಾರರು ಕೊಯ್ಲಿಗೂ ಕೈ ಹಾಕುವಂತಿಲ್ಲ. ಬಲಿಯದ ಕಾಯಿಗಳಿಂದ ಕೊಳೆ ರೋಗ ಇನ್ನಷ್ಟು ವೇಗವಾಗಿ ಹರಡುತ್ತಿದ್ದು, ನಷ್ಟದ ಭೀತಿ ಎದುರಾಗಿದೆ ಎನ್ನುತ್ತಾರೆ ಆಲ್ದೂರು ಕಾಫಿ ಬೆಳೆಗಾರರ ಹೋಬಳಿ ಅಧ್ಯಕ್ಷ ಸಿ. ಸುರೇಶ್.
ಪರಿಹಾರ ಹೆಚ್ಚಳಕ್ಕೆ ಮನವಿ: ಜೂನ್ ತಿಂಗಳಿನಲ್ಲಿ ಉಂಟಾದ ಮಳೆಯ ಅಭಾವದ ಕುರಿತು ಕಾಫಿ ಮಂಡಳಿಗೆ ಮನವಿ ಸಲ್ಲಿಸಿದ್ದೆವು. ಮಂಡಳಿ ಸಮೀಕ್ಷೆ ನಡೆಸಿ ಶೇ 13ರಷ್ಟು ಮಾತ್ರ ನಷ್ಟವಾಗಿದೆ ಎಂದು ವರದಿ ನೀಡಿತು. ಈಗ ಕೊಳೆ ರೋಗ ಆರಂಭವಾಗಿದ್ದು, ಮಾಹಿತಿ ನೀಡಲಾಗಿದೆ. ಶೇ 33ಕ್ಕಿಂತ ಹೆಚ್ಚು ನಷ್ಟವಾದರೆ ಮಾತ್ರ ಪರಿಹಾರ ಸಿಗುತ್ತದೆ. ಒಂದು ಹೆಕ್ಟೇರ್‌ಗೆ ₹18 ಸಾವಿರ ಪರಿಹಾರ ಧನ ನೀಡುತ್ತಿದ್ದು, ಗರಿಷ್ಠ ಎರಡು ಹೆಕ್ಟೇರ್ ಮಿತಿ ನಿಗದಿಪಡಿಸಿದ್ದಾರೆ. ಆದ್ದರಿಂದ ಒಕ್ಕೂಟದ ಪರವಾಗಿ ಹೆಕ್ಟೇರ್‌ಗೆ ₹50 ಸಾವಿರ ಪರಿಹಾರ ಮತ್ತು ಮಿತಿಯನ್ನು 10 ಹೆಕ್ಟೇರ್‌ಗೆ ಏರಿಕೆ ಮಾಡಬೇಕೆಂದು ಮನವಿ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಎಚ್.ಟಿ. ಮೋಹನ್ ತಿಳಿಸಿದರು.
ಬೆಳೆ ನಷ್ಟವಾದರೆ ಕಾಫಿ ಮಂಡಳಿ ಸದಸ್ಯರನ್ನು ಒಳಗೊಂಡ ಹೋಬಳಿವಾರು ಸಮಿತಿ ರಚಿಸಿ ಜಂಟಿ ಸಮೀಕ್ಷೆ ನಡೆಸಿ ವರದಿ ಸಿದ್ಧಪಡಿಸಲಾಗುತ್ತದೆ.- ವಿನಾಯಕ ಸಾಗರ್ ತಹಶೀಲ್ದಾರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.