ಚಿಕ್ಕಮಗಳೂರು: ಭದ್ರಾ ಅಭಯಾರಣ್ಯದಲ್ಲಿ ಹಾದು ಹೋಗುವ ಮುತ್ತೋಡಿ– ಕೂಸಗಲ್–ಎನ್.ಆರ್.ಪುರ ರಸ್ತೆ ಮರು ನಿರ್ಮಾಣದ ಯೋಜನೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಯೋಜನೆ ಸಾಧಕ–ಬಾಧಕಗಳ ಬಗ್ಗೆ ಪರಿಶೀಲನೆ ನಡೆಸುವಂತೆ ಲೋಕೋಪಯೋಗಿ ಇಲಾಖೆಗೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ.
ಭದ್ರಾ ಜಲಾಶಯ ನಿರ್ಮಾಣವಾದ ನಂತರ ಕೂಸಗಲ್ ಮತ್ತು ಮುತ್ತೋಡಿ ನಡುವಿನ ಸಂಪರ್ಕ ಕಡಿತಗೊಂಡಿದೆ. ಜಲಾಶಯದ ಹಿನ್ನೀರಿನಲ್ಲಿ ರಸ್ತೆ ಮುಳುಗಡೆಯಾಗಿದೆ. ಚಿಕ್ಕಮಗಳೂರು–ಎನ್.ಆರ್.ಪುರಕ್ಕೆ ಇದ್ದ ನೇರ ಮಾರ್ಗ ಇದರಿಂದ ಮುಚ್ಚಿ ಹೋದಂತೆ ಆಗಿದೆ. ಈ ರಸ್ತೆಯಲ್ಲಿ ಚಿಕ್ಕಮಗಳೂರಿನಿಂದ ಎನ್.ಆರ್.ಪುರ ತಲುಪಲು 55 ಕಿಲೋ ಮೀಟರ್ ಮಾತ್ರ ಕ್ರಮಿಸಬೇಕಿತ್ತು.
ಈಗ ಬಾಳೆಹೊನ್ನೂರು ಮಾರ್ಗ ಅಥವಾ ತರೀಕೆರೆ ಮಾರ್ಗದಲ್ಲಿ ಸಂಚರಿಸಬೇಕಿದ್ದು, ಕನಿಷ್ಠ 97 ಕಿಲೋ ಮೀಟರ್ ಸುತ್ತಬೇಕಿದೆ. ಮುತ್ತೋಡಿಯಿಂದ- ಕೂಸಗಲ್ ತನಕ ಬದಲಿ ರಸ್ತೆ ನಿರ್ಮಿಸಲು ಯೋಚಿಸಲಾಗಿತ್ತಾದರೂ ಭದ್ರಾ ಅಭಯಾರಣ್ಯದ ವ್ಯಾಪ್ತಿಗೆ ಒಳಪಟ್ಟಿದ್ದರಿಂದ ಯೋಜನೆ ಸ್ಥಗಿತವಾಯಿತು. 2000-2002ರಲ್ಲಿ ಅಭಯಾರಣ್ಯದೊಳಗಿದ್ದ 13 ಹಳ್ಳಿಗಳ 700 ಕುಟುಂಬಗಳನ್ನು ಸ್ಥಳಾಂತರ ಮಾಡಲಾಯಿತು. ಇದಾದ ಬಳಿಕ ಬದಲಿ ರಸ್ತೆ ಪ್ರಸ್ತಾಪವೂ ನನೆಗುದಿಗೆ ಬಿದ್ದಿತು. ಕೂಸಗಲ್ ಬಳಿ ಸೇತುವೆ ನಿರ್ಮಿಸಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಬೇಕು ಎಂಬ ಒತ್ತಾಯ ಸ್ಥಳೀಯರಿಂದ ವ್ಯಕ್ತವಾಗಿದೆ.
ಎನ್.ಆರ್.ಪುರದಿಂದ ಕೂಸಲಗ್ ತನಕ ಈಗಾಗಲೇ ರಸ್ತೆ ಇದ್ದು, ಜನ ಸಂಚಾರವೂ ಇದೆ. ಅಲ್ಲಿಂದ ಮುಂದಕ್ಕೆ ಸೇತುವೆ ನಿರ್ಮಿಸಿದರೆ ತೇಗದಗುಡ್ಡ, ಕುರುಕಲು ಮನೆ, ದಬ್ಬಗಾರು, ಹೆಗ್ಗಾರ್ ಮುತ್ತುವಾನೆ, ಕೋದಿ, ಹಿತ್ತಲ ಕೊಂಕನಮನೆ, ಶಿರವಾಸೆ, ಮುತ್ತೊಡಿ, ಜೋಳದಾಳ ಮಾರ್ಗವಾಗಿ ಚಿಕ್ಕಮಗಳೂರು ತಲುಪಬಹುದು ಎನ್ನುವುದು ಅಲ್ಲಿನ ಜನರ ಅಭಿಪ್ರಾಯ.
ಸ್ಥಳೀಯ ಜನಪ್ರತಿನಿಧಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಕೆಯಾಗಿದೆ. ರಸ್ತೆ ನಿರ್ಮಾಣ ಸಾಧ್ಯವೇ ಎಂಬುದನ್ನು ಪರಿಶೀಲಿಸುವಂತೆ ಲೋಕೋಪಯೋಗಿ ಇಲಾಖೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಅರಣ್ಯ ಇಲಾಖೆಗೂ ಪತ್ರ ರವಾನೆಯಾಗಿದ್ದು, ಯಾವ ಮಾರ್ಗ ಎಂಬುದನ್ನು ಸಮರ್ಪಕವಾಗಿ ನಮೂದಿಸುವಂತೆ ಭದ್ರಾ ವನ್ಯಜೀವಿ ವಿಭಾಗದ ಅಧಿಕಾರಿಗಳು ಲೋಕೋಪಯೋಗಿ ಇಲಾಖೆಗೆ ವಾಪಸ್ ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.