ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡಿಗೆರೆ | ನೀರಿಲ್ಲದೆ ಒಣಗಿದ ಭತ್ತದ ತೆನೆ

Published 3 ಡಿಸೆಂಬರ್ 2023, 4:53 IST
Last Updated 3 ಡಿಸೆಂಬರ್ 2023, 4:53 IST
ಅಕ್ಷರ ಗಾತ್ರ

ಮೂಡಿಗೆರೆ: ನಷ್ಟದ ಬೆಳೆಯೆಂದೇ ಗುರುತಿಸಿಕೊಂಡಿರುವ ಭತ್ತಕ್ಕೆ ಈ ಬಾರಿ ಬರದ ಛಾಯೆ ಆವರಿಸಿದೆ. ತೆನೆ ಕಟ್ಟಿದ ಮೇಲೆ ನೀರಿಲ್ಲದೇ ತೆನೆಗಳು ಒಣಗುತ್ತಿದ್ದು, ಭತ್ತದ ಇಳುವರಿ ಕಡಿಮೆಯಾಗುವ ಆತಂಕ ರೈತರನ್ನು ಕಾಡುತ್ತಿದೆ.

ತಾಲ್ಲೂಕಿನಲ್ಲಿ 4,208 ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ಕಳೆದ ಬಾರಿಗಿಂತ ಈ ಬಾರಿ ಒಂದು ಸಾವಿರ ಎಕರೆ ಪ್ರದೇಶ ಭತ್ತದ ಬೆಳೆ ಕಡಿಮೆಯಾಗಿದೆ. ಜೂನ್‌ನಲ್ಲಿ ಸಮರ್ಪಕ ಮಳೆಯಾಗದ ಕಾರಣ ಅಗಡಿ ಸಸಿಮಡಿಗಳನ್ನು ನಿರ್ಮಿಸಿಕೊಳ್ಳಲಾಗದೆ ಭತ್ತದ ನಾಟಿಯನ್ನೇ ಕೈ ಬಿಡಲಾಗಿದೆ.

ಬಡವನದಿಣ್ಣೆ, ತ್ರಿಪುರ, ಬೆಟ್ಟದಮನೆ, ದೇವರುಂದ ಸೇರಿದಂತೆ ಹಲವೆಡೆ ಮಕ್ಕಿ ಗದ್ದೆಗಳಲ್ಲಿ ಖಾರಿ ಪದ್ಧತಿಯಲ್ಲಿ ನಾಟಿ ಮಾಡಿದ್ದ ಭತ್ತದ ಗದ್ದೆಗಳಿಗೂ ನೀರಿಲ್ಲದೆ ಪಾಳು ಬಿಡಲಾಗಿದೆ. ಭೈರಿಗದ್ದೆ, ಕುಂದೂರು, ಹುಲ್ಲೇಮನೆ ಪ್ರದೇಶಗಳಲ್ಲಿ ಸೂಕ್ತವಾಗಿ ಮಳೆಯಾಗದೆ ನಾಟಿ ಮಾಡಿದ್ದ ಭತ್ತದ ಪೈರಿನ ಬೆಳವಣಿಗೆ ಕುಂಠಿತವಾಗಿದ್ದು, ಇಳುವರಿ ಗಣನೀಯವಾಗಿ ತಗ್ಗುವ ಆತಂಕ ಕಾಡುತ್ತಿದೆ. ಮಕ್ಕಿ ಗದ್ದೆಗಳಲ್ಲಿ ಭತ್ತ ಬೆಳೆದ ರೈತರು, ಮಳೆಗಾಲದಲ್ಲೂ ನೀರಾಯಿಸಿಕೊಳ್ಳುವ ಸ್ಥಿತಿ ಇದೆ.

ತಾಲ್ಲೂಕಿನಲ್ಲಿ ಭತ್ತವನ್ನು ಮಳೆ ಆಶ್ರಿತವಾಗಿಯೆ ಬೆಳೆಯಲಾಗುತ್ತಿದ್ದು ಕೈಕೊಟ್ಟಿರುವ ಮಳೆಯಿಂದ ಪೈರಿನ ಬೆಳವಣಿಗೆಯಾಗದೆ‌ ನಷ್ಟ ಎದುರಿಸುವಂತಾಗಿದೆ.
ಲಕ್ಷ್ಮಣಗೌಡ, ಪ್ರಗತಿಪರ ರೈತ

‘ಈ ಬಾರಿ ಭತ್ತ ಬೆಳೆದವರಿಗೆ ಬಾರಿ ಸಂಕಷ್ಟ ಎದುರಾಯಿತು. ಪ್ರಾರಂಭದಲ್ಲಿ ಮಳೆಯಿಲ್ಲದೇ ಅಗಡಿ ಸಸಿಮಡಿಗಳನ್ನು ಮಾಡಿಕೊಳ್ಳಲು ಪರದಾಡುವಂತಾಯಿತು. ಸಸಿಮಡಿಗಳಲ್ಲಿ ಸಸಿ ಬಲಿಯುತ್ತಿದ್ದರೂ ಗದ್ದೆಗಳಿಗೆ ನೀರಾಗದೇ ನಾಟಿ ಕಾರ್ಯವನ್ನು ಇಪ್ಪತ್ತು ದಿನಗಳಿಗೂ ಹೆಚ್ಚು ತಡವಾಗಿ ಪ್ರಾರಂಭಿಸಬೇಕಾಯಿತು. ಸಸಿ ಬೇರೂರಿ ಬಲಿಯುವ ವೇಳೆ ನೀರಿನ ಅಗತ್ಯ ಹೆಚ್ಚಿರುತ್ತದೆ. ಆದರೆ, ಈ ಬಾರಿ ನಾಟಿ ಮಾಡಿ ತಿಂಗಳು ಕಳೆದರೂ ಮಳೆಯಿಲ್ಲದೆ ಪೈರಿನ ಬೆಳವಣಿಗೆಗೆ ಅಡ್ಡಿಯಾಯಿತು. ತೆನೆ ಬಲಿಯಲು ನೀರಿನ ಅವಶ್ಯಕತೆಯಿದ್ದು, ನೀರಿಲ್ಲದೇ ತೆನೆಗಳು ಜೊಳ್ಳಾಗುತ್ತಿವೆ. ಕಷ್ಟಪಟ್ಟು ನಾಟಿ ಮಾಡಿದ್ದರೂ, ಬರದಿಂದ ಬೆಳೆಯಿಲ್ಲದೆ ನಷ್ಟ ಅನುಭವಿಸುವಂತಾಗಿದೆ. ಭತ್ತದ ಗದ್ದೆಗಳಲ್ಲಿ ಬೆಳೆಯು ಶೇ 40ಕ್ಕೂ ಅಧಿಕ ನಷ್ಟ ಉಂಟಾಗಬಹುದು ಎಂಬ ಆತಂಕ ಕಾಡುತ್ತಿದೆ’ ಎನ್ನುತ್ತಾರೆ ಬಡವನದಿಣ್ಣೆಯ ರೈತ ಲಕ್ಷ್ಮಣಗೌಡ.

ವನ್ಯಪ್ರಾಣಿ ಹಾವಳಿಯಿಂದ ತಾಲ್ಲೂಕಿನಲ್ಲಿ ಭತ್ತ ಬೆಳೆಯುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ಈ ಬಾರಿ ಮಳೆ ಕೈಕೊಟ್ಟಿರುವುದರಿಂದ ಭತ್ತದ ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ನಾಟಿ ಮಾಡಿರುವ ರೈತರು ಕೂಡ ಬೆಳೆ ಕಡಿಮೆಯಾಗುವ ಆತಂಕದಲ್ಲೇ ದಿನ ದೂಡುತ್ತಿದ್ದಾರೆ. ಇನ್ನೇನು ಹದಿನೈದು ದಿನಗಳಲ್ಲಿ ಕಟಾವು ಪ್ರಾರಂಭವಾಗಲಿದ್ದು, ಇದುವರೆಗೂ ಮಳೆ ಬಾರದೇ ನಷ್ಟ ಅನುಭವಿಸಿರುವ ರೈತರಿಗೆ ನಾಲ್ಕೈದು ದಿನಗಳಿಂದ ತಾಲ್ಲೂಕಿನ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿರುವ ಮಳೆಯು ಈಗ ಸುರಿದು ಬೆಳೆ ಹಾನಿಗೊಳಿಸುವ ಆತಂಕ ಹುಟ್ಟಿಸಿದೆ.

ಫಸಲು ಕುಂಠಿತ: ಮೇವೂ ಕಡಿಮೆ

ಕೊಪ್ಪ: ತಾಲ್ಲೂಕಿನಲ್ಲಿ ಭತ್ತ ಮುಖ್ಯ ಆಹಾರ ಬೆಳೆಯಾಗಿದ್ದು ಈ ಬಾರಿ ಬರ ಕಾರಣಕ್ಕೆ ಫಸಲು ಕುಂಠಿತಗೊಂಡಿದೆ. ಇತ್ತೀಚೆಗಿನ ವರ್ಷಗಳಲ್ಲಿ ರೈತರು ಭತ್ತ ಬೆಳೆಯುವುದೂ ಕಡಿಮೆಯಾಗುತ್ತಿದೆ. ಈ ಮಧ್ಯೆ ಬರ ಅತಿವೃಷ್ಟಿ ಮುಂತಾದ ಕಾರಣಕ್ಕೆ ಭತ್ತ ಮತ್ತಷ್ಟು ಕಡಿಮೆಯಾಗುತ್ತಿದೆ. ಈ ಬಾರಿ ಶೇ 33 ರಿಂದ ಶೇ 50 ರಷ್ಟು ಇಳುವರಿ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಶೇ 31ರಷ್ಟು ಮಳೆ ಕೊರತೆಯಾಗಿದೆ. ಈಗ ಭತ್ತ ಕಟಾವಿನ ಹಂತಕ್ಕೆ ತಲುಪಿದ್ದು ನೀರಿನ ಕೊರತೆಯಿಂದ ಜಾನುವಾರುಗಳಿಗೆ ಮೇವಿನ ಸಮಸ್ಯೆಯೂ ಕಾಡಲಿದೆ ಎಂಬ ಆತಂಕದಲ್ಲಿ ರೈತರಿದ್ದಾರೆ.

ಮೂಡಿಗೆರೆ ತಾಲ್ಲೂಕಿನ ಬಡವನದಿಣ್ಣೆಯಲ್ಲಿ ನೀರಿನ ಕೊರತೆಯಿಂದ ಪೈರಿನ ಬೆಳವಣಿಗೆ ಕುಂಠಿತವಾಗಿ ಭತ್ತದ ಗದ್ದೆಗಳು ತೆನೆ ಹೊಡೆಯದೇ ಒಣಗುತ್ತಿವೆ
ಮೂಡಿಗೆರೆ ತಾಲ್ಲೂಕಿನ ಬಡವನದಿಣ್ಣೆಯಲ್ಲಿ ನೀರಿನ ಕೊರತೆಯಿಂದ ಪೈರಿನ ಬೆಳವಣಿಗೆ ಕುಂಠಿತವಾಗಿ ಭತ್ತದ ಗದ್ದೆಗಳು ತೆನೆ ಹೊಡೆಯದೇ ಒಣಗುತ್ತಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT