ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀರೂರು: ಕಾಯಕಲ್ಪಕ್ಕೆ ಕಾದಿದೆ ಪ್ರಥಮ ದರ್ಜೆ ಕಾಲೇಜು

Published 16 ಮೇ 2024, 8:09 IST
Last Updated 16 ಮೇ 2024, 8:09 IST
ಅಕ್ಷರ ಗಾತ್ರ

ಬೀರೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಹಾಗೂ ಹಲವು ಮೂಲ ಸೌಕರ್ಯಗಳ ಕೊರತೆಯಿಂದ ನರಳುತ್ತಿದ್ದು, ತುರ್ತಾಗಿ ಕಾಯಕಲ್ಪ ಕಾಲೇಜು ಕಾದಿದೆ.

2007-08ರಲ್ಲಿ ಅಸ್ತಿತ್ವಕ್ಕೆ ಬಂದ ಕಾಲೇಜು 450ರಿಂದ 500 ವಿದ್ಯಾರ್ಥಿಗಳಿಂದ ತುಂಬಿರುತ್ತಿತ್ತು. ಬಿ.ಎ., ಬಿ.ಎಸ್‌ಸಿ, ಬಿ.ಕಾಂ, ಬಿಸಿಎ, ಬಿಬಿಎಂ ಪದವಿಗಳು ಲಭ್ಯವಿದ್ದವು. ಕ್ರಮೇಣ ವಿದ್ಯಾರ್ಥಿಗಳ ಪ್ರವೇಶಾತಿ ಕ್ಷೀಣಿಸತೊಡಗಿ ಈಗ ಕೇವಲ 189 ವಿದ್ಯಾರ್ಥಿಗಳಿದ್ದಾರೆ. ಪ್ರವೇಶಾತಿ ಕೊರತೆಯಿಂದ ಬಿಸಿಎ, ಬಿಬಿಎಂ ಕೋರ್ಸ್‌ಗಳನ್ನು ತೆಗೆದು ಹಾಕಲಾಗಿದೆ.

ಕೇವಲ 8-10 ವಿದ್ಯಾರ್ಥಿಗಳು ಬಿ.ಎಸ್‌ಸಿ ಪದವಿ ಪಡೆಯುತ್ತಿದ್ದಾರೆ. ಜಿಲ್ಲೆಯ ಏಕೈಕ ಸಿ.ಗ್ರೇಡ್‌ನ ಕಾಲೇಜು ಇದಾಗಿದ್ದು, ಇದನ್ನು ಮೇಲ್ದರ್ಜೆಗೆ ಏರಿಸಲು ಕಾಲೇಜು ಶಿಕ್ಷಣ ಇಲಾಖೆ, ವಿಶ್ವ ವಿದ್ಯಾಲಯ, ಸ್ಥಳೀಯ ಜನಪ್ರತಿನಿಧಿಗಳು ಮತ್ತು ಪೋಷಕರು ಕೈಜೋಡಿಸಬೇಕಾದ ಅಗತ್ಯವಿದೆ ಎಂದು ಸ್ಥಳೀಯರು ಹೇಳುತ್ತಾರೆ.

ವಿದ್ಯಾರ್ಥಿಗಳ ಕೊರತೆಗೆ ಏನು ಕಾರಣ ಎಂದು ಹುಡುಕಲು ಹೊರಟರೆ ಮೊದಲು ಕಾಣುವುದು ಸಾಕಷ್ಟು ವಿದ್ಯಾರ್ಥಿಗಳು ಸಮೀಪದ ಕಡೂರು, ಚಿಕ್ಕಮಗಳೂರುಗಳ ಕಾಲೇಜಿಗೆ ಪ್ರವೇಶ ಪಡೆಯುತ್ತಿರುವುದು. ಇನ್ನು ಹಲವರು ಎಂಜಿನಿಯರಿಂಗ್‌, ವೈದ್ಯಕೀಯ ಮೊದಲಾದ ವೃತ್ತಿಪರ ಶಿಕ್ಷಣ ಅರಸಿ ಹೋಗುವುದು. ಆರ್ಥಿಕವಾಗಿ ಸಬಲರಾದ ಪೋಷಕರು ತಮ್ಮ ಮಕ್ಕಳನ್ನು ಪಿಯುಸಿ ಹಂತದಿಂದಲೇ ಹೊರ ಜಿಲ್ಲೆಗಳ ಕಾಲೇಜಿಗೆ ದಾಖಲಿಸಿ ಪದವಿಯನ್ನು ಅಲ್ಲಿಯೇ ಪಡೆಯುತ್ತಿರುವುದು.

ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದರೂ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ ಇಲ್ಲ. 9 ಕಾಯಂ ಉಪನ್ಯಾಸಕರು, 12 ಅತಿಥಿ ಉಪನ್ಯಾಸಕರಿದ್ದಾರೆ. ಮುಖ್ಯವಾಗಿ ಇಂಗ್ಲಿಷ್‌ ವಿಷಯಕ್ಕೆ ಕಾಯಂ ಉಪನ್ಯಾಸಕರಿಲ್ಲದೆ ಅತಿಥಿ ಉಪನ್ಯಾಸಕರಿಂದಲೇ ಬೋಧನೆ ನಡೆಯುತ್ತಿದೆ.

ಕೆಲವು ಅತಿಥಿ ಉಪನ್ಯಾಸಕರು ಇಲ್ಲಿ ಸಹಿ ಹಾಕಿ ಕಡೂರಿನ ಖಾಸಗಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆರೋಪಗಳೂ ಇವೆ. ಇಲ್ಲಿಗೆ ನಿಯೋಜಿಸಲಾಗಿದ್ದ ಇಂಗ್ಲಿಷ್‌ ಭಾಷಾ ಉಪನ್ಯಾಸಕರನ್ನು ಜಂಟಿ ನಿರ್ದೇಶಕರ ಕಚೇರಿಗೆ ಎರವಲು ಪಡೆಯಲಾಗಿದೆ. ವಿಜ್ಞಾನ ವಿಭಾಗದಲ್ಲಿಯೂ ಕಾಯಂ ಉಪನ್ಯಾಸಕರು ಇಲ್ಲ. ಕಾಲೇಜು ಅಭಿವೃದ್ಧಿಗೆ ವಸತಿ ನಿಗಮದಿಂದ ₹1 ಕೋಟಿ ಮಂಜೂರಾಗಿದೆ. ಈ ಹಿಂದೆ ₹1.20 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಹೆಚ್ಚುವರಿ ಕಟ್ಟಡ ವರ್ಷಗಳೇ ಉರುಳಿದರೂ ಉದ್ಘಾಟನೆಯೂ ಆಗದೆ ಪೂರ್ಣಪ್ರಮಾಣದಲ್ಲಿ ಬಳಕೆಗೆ ಪಡೆಯಲು ಹಲವು ಅಡಚಣೆಗಳು ಇವೆ.

ಸದ್ಯದಲ್ಲಿಯೇ ನ್ಯಾಕ್‌ ಸಮಿತಿ ಕಾಲೇಜಿಗೆ ಭೇಟಿ ನೀಡಲಿದೆ. ಸ್ವಂತ ಆಡಿಟೋರಿಯಂ, ಕ್ರೀಡಾಂಗಣ, ಸೈಕಲ್‌ ಸ್ಟ್ಯಾಂಡ್, ಕ್ಯಾಂಟೀನ್‌, ಸ್ವಸ್ಥ ಶೌಚಾಲಯ ಇಲ್ಲದ ಕಾಲೇಜನ್ನು ಮೇಲೆತ್ತುವುದು ಪ್ರಯಾಸದಾಯಕ. ಜತೆಯಲ್ಲಿ ಹೊಸ ಶಾಸಕರು ಬಂದು ವರ್ಷ ಕಳೆದರೂ ಕಾಲೇಜು ಅಭಿವೃದ್ಧಿ ಸಮಿತಿ (ಸಿಡಿಸಿ) ಅಸ್ತಿತ್ವಕ್ಕೆ ಬಂದಿಲ್ಲ. ಹಳೆಯ ವಿದ್ಯಾರ್ಥಿಗಳ ಸಂಘವೇನೊ ಇದೆ, ಕಾಲೇಜನ್ನು ಮತ್ತೆ ಸುಸ್ಥಿತಿಗೆ ತರಲು ಅದೊಂದರಿಂದಲೇ ಸಾಧ್ಯವಿಲ್ಲ ಎನ್ನುತ್ತಾರೆ ಪೋಷಕರು.

ಪ್ರಮುಖವಾಗಿ ಅಜ್ಜಂಪುರದಲ್ಲಿ ಪ್ರಥಮ ದರ್ಜೆ ಕಾಲೇಜು ಅಸ್ತಿತ್ವಕ್ಕೆ ಬಂದ ಬಳಿಕ ಆ ಭಾಗದ ವಿದ್ಯಾರ್ಥಿಗಳಿಗೆ ಈ ಕಾಲೇಜಿನ ಅವಶ್ಯಕತೆ ಇಲ್ಲವಾಗಿದೆ. ಬೀರೂರಿನ ಕೆಎಲ್‌ಕೆ ಪದವಿಪೂರ್ವ ಕಾಲೇಜು, ಲಿಂಗದಹಳ್ಳಿಯ ಸರ್ಕಾರಿ ಪದವಿಪೂರ್ವ ಕಾಲೇಜು, ಬೀರೂರಿನ ಅರುಣೋದಯ ಪದವಿಪೂರ್ವ ಕಾಲೇಜು ಹೊರತು ಪಡಿಸಿದರೆ ಈ ಪ್ರಥಮ ದರ್ಜೆ ಕಾಲೇಜಿಗೆ ಫೀಡಿಂಗ್‌ ಕಾಲೇಜುಗಳೇ ಇಲ್ಲ. ಸಖರಾಯಪಟ್ಟಣದಲ್ಲಿಯೂ ಪ್ರಥಮ ದರ್ಜೆ ಕಾಲೇಜು ಶುರುವಾದ ಬಳಿಕ ಆ ಭಾಗದ ಮಕ್ಕಳು ಬರದಂತಾಗಿದ್ದಾರೆ.

ಕೋವಿಡ್‌ ಕಾಲದಿಂದ ಪಲ್ಲಟ ಹೊಂದಿರುವ ಇಡೀ ಶೈಕ್ಷಣಿಕ ವ್ಯವಸ್ಥೆಯ ಜತೆಗೆ ಎಲ್ಲ ಒತ್ತಡಗಳ ನಡುವೆಯೂ ಕಾಲೇಜಿನ ಅಭಿವೃದ್ಧಿಗೆ ಏನಾದರೂ ಮಾಡಲೇಬೇಕು ಎನ್ನುತ್ತಾರೆ ಪ್ರಾಂಶುಪಾಲ ಪ್ರವೀಣ್‌ಕುಮಾರ್‌.

ನಿದ್ರಾವಸ್ಥೆಯಲ್ಲಿದ್ದ ಎನ್‌ಎಸ್‌ಎಸ್‌ ಘಟಕ ಮತ್ತು ರೇಂಜರ್ಸ್‌-ರೋವರ್ಸ್‌ ಘಟಕಕ್ಕೆ ಮತ್ತೆ ಹುರುಪು ತುಂಬಿ ಚಟುವಟಿಕೆ ಆರಂಭಿಸಿದ್ದಾರೆ. ಆಟೋಟ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲು ಮುಂದಾಗಿದ್ದಾರೆ. ರಜಾ ಅವಧಿಯಲ್ಲಿಯೂ ಕಾಲೇಜು ಗ್ರಂಥಾಲಯ ಕಾರ್ಯನಿರ್ವಹಿಸಿ ವಿದ್ಯಾರ್ಥಿಗಳಿಗೆ ನೆರವಾಗುವಂತೆ ಮಾಡಿದ್ದಾರೆ. ರೆಡ್‌ಕ್ರಾಸ್‌ ಚಟುವಟಿಕೆಗಳು ಗರಿಗೆದರುವಂತೆ ಮಾಡುತ್ತಿದ್ದಾರೆ.

ಕಾಲೇಜಿಗೆ ಸಂಬಂಧಿಸಿದಂತೆ ಮೂರು ಎಕರೆಗೂ ಹೆಚ್ಚು ಸ್ಥಳವಿದ್ದು, ಅಲ್ಲಿ ಒಂದು ಒಳಾಂಗಣ ಕ್ರೀಡಾಂಗಣ ನಿರ್ಮಿಸುವ ಬಯಕೆಯೂ ಇದೆ. ವಾಲಿಬಾಲ್‌ ಕೋರ್ಟ್‌ ಇರುವುದನ್ನು ಮತ್ತಷ್ಟು ಮೇಲ್ದರ್ಜೆಗೆ ಏರಿಸುವ, ಹೊನಲು ಬೆಳಕಿನ ಅಂಕಣವಾಗಿಸುವ, ಕ್ರಿಕೆಟ್‌ ಟೀಂ ಕಟ್ಟುವ ಉದ್ದೇಶವಿದೆ ಎಂದು ಪ್ರಾಂಶುಪಾಲರು ವಿವರಿಸುತ್ತಾರೆ.

ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣ ವೃತ್ತಿಪರ ಶಿಕ್ಷಣ, ಕಡೂರು ಕಾಲೇಜಿಗೆ ವಿದ್ಯಾರ್ಥಿಗಳ ಒತ್ತು ಪಾರ್ಕ್‌, ಕ್ರೀಡಾಂಗಣ ಸೇರಿ ಮೂಲಸೌಕರ್ಯಗಳ ಕೊರತೆ
ಮಾರ್ಗೋಪಾಯ ಏನು
ಕಡೂರಿನಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಜತೆಗೆ ಕುವೆಂಪು ವಿವಿಯ ಸ್ನಾತಕೋತ್ತರ ಅಧ್ಯಯನ ಕೇಂದ್ರವೂ ಇದೆ. ಕಡೂರು ಕಾಲೇಜು ವಿದ್ಯಾರ್ಥಿಗಳ ಭಾರದಲ್ಲಿ ನಲುಗಿ ಹೋಗಿದೆ. ಬೀರೂರು ಹೊರ ವಲಯದಲ್ಲಿ ಇರುವ ಈ ಹಿಂದಿನ ಪಿಜೆಎನ್‌ಎಂ ಕಾಲೇಜಿನ ಕಟ್ಟಡ ಮತ್ತು ಜಾಗವನ್ನು ಸರ್ಕಾರದ ನೆರವಿನಿಂದ ವಿಶ್ವವಿದ್ಯಾಲಯಕ್ಕೆ ಹಸ್ತಾಂತರಿಸಿ ಅಲ್ಲಿ ಹೊಸದಾಗಿ ವಿಶ್ವವಿದ್ಯಾಲಯದ ಸಂಯೋಜಿತ ಕಾಲೇಜು ಆರಂಭಿಸಲು ಸಾಧ್ಯವಿದೆ. ಬೀರೂರಿನ ಕಾಲೇಜನ್ನು ಕೇವಲ ವಿದ್ಯಾರ್ಥಿನಿಯರಿಗಾಗಿಯೇ ಮೀಸಲಿರಿಸಿ ಕಡೂರು ಕಾಲೇಜಿನ ಒತ್ತಡ ಕಡಿಮೆ ಮಾಡಬಹುದಾಗಿದೆ ಎಂದು ಶಿಕ್ಷಣ ತಜ್ಞರು ಹೇಳುತ್ತಾರೆ. ಇನ್ನೊಂದು ಮಾರ್ಗೋಪಾಯ ಎಂದರೆ ಕಡೂರು ಕಾಲೇಜಿನೊಂದಿಗೆ ಇದನ್ನು ವಿಲೀನಗೊಳಿಸಿ ಇಲ್ಲಿ ಬಿ.ಎ ಬಿ.ಎಸ್‌ಸಿ ಬಿ.ಕಾಂ ಅಥವಾ ಅಲ್ಲಿ ಹೆಚ್ಚು ಒತ್ತಡ ಇರುವ ಯಾವುದಾದರೂ ಒಂದು ವಿಷಯಕ್ಕೆ ಮೀಸಲಾದ ಕಾಲೇಜಾಗಿ ಬದಲಾಯಿಸುವುದು. ವಿಶ್ವವಿದ್ಯಾಲಯ ನೆರವಿನೊಂದಿಗೆ ವಿದ್ಯಾರ್ಥಿ ನಿಲಯ ಆರಂಭಿಸಿ ವಸತಿ ಸಹಿತ ಪದವಿ ಕಾಲೇಜಾಗಿ ಪರಿವರ್ತಿಸುವುದು. ಹೀಗೆ ಹಲವು ದಾರಿಗಳು ಇವೆ. ಇದರಿಂದ ಮುಂದೊಂದು ದಿನ ಜಿಲ್ಲೆಗೇ ವಿಶ್ವವಿದ್ಯಾಲಯ ಮಂಜೂರಾದರೆ ಅದಕ್ಕೆ ಫೀಡಿಂಗ್‌ ಕಾಲೇಜುಗಳೆಂದು ಇವುಗಳನ್ನು ಗುರುತಿಸಬಹುದಾಗಿದೆ ಎಂದು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT