ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು: ತಪ್ಪದ ಕಾಲುಸಂಕದ ನಡಿಗೆ

Published 23 ಜುಲೈ 2023, 21:48 IST
Last Updated 23 ಜುಲೈ 2023, 21:48 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಮಳೆಗಾಲ ಬಂದರೆ ದ್ವೀಪವಾಗುವ ಊರು, ಮನೆ ತಲುಪುವ ಖಾತ್ರಿ ಇಲ್ಲ, ಕಾಲು ಜಾರಿದರೆ ನೀರು ಪಾಲಾಗುವ ಭಯ. ವರ್ಷವಿಡೀ ಕಾಲು ಸಂಕದ ಮೇಲೆ ಆತಂಕದ ನಡಿಗೆ...

ಇದು ಜಿಲ್ಲೆಯ ಮಲೆನಾಡು ಭಾಗದ ಹಲವು ಹಳ್ಳಿಗಳ ಜನರ ಬದುಕು. ಮರದ ದಿಮ್ಮಿ, ಕಟ್ಟಿಗೆ, ಹಲಗೆ, ಬಿದಿರು ಬಳಸಿ ಜನರೇ ಕಾಲುಸಂಕಗಳನ್ನು ನಿರ್ಮಿಸಿಕೊಂಡಿದ್ದಾರೆ.

ಕಳಸ, ಎನ್‌.ಆರ್.ಪುರ, ಶೃಂಗೇರಿ, ಕೊಪ್ಪ ತಾಲ್ಲೂಕುಗಳಲ್ಲಿ ಕಾಲುಸಂಕಗಳಿವೆ. ಮಳೆಗಾಲದಲ್ಲಿ ಹಳ್ಳ, ತೊರೆ, ಹೊಳೆಗಳು ಉಕ್ಕಿ ಹರಿಯುತ್ತವೆ. ಕಾಡು, ಗುಡ್ಡ ಭಾಗಗಳ ಹಲವು ಜನವಸತಿಗಳ ಸಂಪರ್ಕ ಸೇತುಗಳು ಈ ಕಾಲು ಸಂಕಗಳು. ಈ ಪ್ರದೇಶಗಳ ಶಾಲಾ–ಕಾಲೇಜು ವಿದ್ಯಾರ್ಥಿಗಳು, ಜನರು ನಿತ್ಯ ಕಾಲುಸಂಕದಲ್ಲೇ ಸಾಗಬೇಕು. ಒಂದು ಬದಿಯಿಂದ ಮತ್ತೊಂದು ಬದಿಗೆ ಸಾಗುವುದು ತಂತಿ ಮೇಲಿನ ನಡಿಗೆಯಷ್ಟು ಕಷ್ಟಕರ. ಸ್ವಲ್ಪ ವ್ಯತ್ಯಾಸವಾದರೂ ಹಳ್ಳ ಅಥವಾ ಹೊಳೆ ಪಾಲಾಗುವುದು ಖಚಿತ. 

ಜೆಡಿಎಸ್‌–ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ತೀರ್ಥಹಳ್ಳಿ ತಾಲ್ಲೂಕಿನ ಶಾಲಾ ಬಾಲಕಿ ಮತ್ತು ವ್ಯಕ್ತಿಯೊಬ್ಬರು ಕಾಲಸಂಕ ದಾಟುವಾಗ ಹಳ್ಳಕ್ಕೆ ಬಿದ್ದಿದ್ದರು. ಇದರಿಂದ ಎಚ್ಚೆತ್ತುಕೊಂಡಿದ್ದ ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶಾಲಾ ಸಂಪರ್ಕ ಸೇತು ಎಂಬ ಯೋಜನೆ ರೂಪಿಸಿ ಹಣವನ್ನೂ ಬಿಡುಗಡೆ ಮಾಡಿದ್ದರು.

2019–20ನೇ ಸಾಲಿನ ಬಜೆಟ್‌ನಲ್ಲಿ 1,317 ಕಿರು ಸೇತುವೆಗಳನ್ನು ನಿರ್ಮಿಸುವುದಾಗಿ ಘೋಷಿಸಲಾಗಿತ್ತು. ಈ ಯೋಜನೆಯಡಿ ಜಿಲ್ಲೆಯಲ್ಲಿ 186 ಕಾಮಗಾರಿಗೆ ಅನುಮೋದನೆ ನೀಡಲಾಗಿತ್ತು. ಈ ಪೈಕಿ ಹಲವು ಕಾಮಗಾರಿಗಳು ಇನ್ನೂ ಮುಗಿದಿಲ್ಲ, ಕೆಲವೆಡೆ ಇನ್ನೂ ಕಾಮಗಾರಿಯೇ ಆರಂಭವಾಗಿಲ್ಲ. ಆದ್ದರಿಂದ ಕಾಲುಸಂಕಗಳನ್ನು ದಾಟಿ ಜೀವನ ನಡೆಸಬೇಕಾದ ಸ್ಥಿತಿ ಮಲೆನಾಡಿನಲ್ಲಿ ಇನ್ನೂ ಇದೆ.

ಕಳಸ ತಾಲ್ಲೂಕಿನ ಬಲಿಗೆ ಸಮೀಪ ಕ್ಯಾತನಮಕ್ಕಿ ಗ್ರಾಮದಲ್ಲಿ ಕಾಲಸಂಕ ದಾಟುತ್ತಿರುವ ಜನ
ಕಳಸ ತಾಲ್ಲೂಕಿನ ಬಲಿಗೆ ಸಮೀಪ ಕ್ಯಾತನಮಕ್ಕಿ ಗ್ರಾಮದಲ್ಲಿ ಕಾಲಸಂಕ ದಾಟುತ್ತಿರುವ ಜನ
ಶೃಂಗೇರಿಯ ನೆಮ್ಮಾರ್ ಗ್ರಾಮಾ ಪಂಚಾಯಿತಿಯ ಭಲೇಕಡಿಯ ಅಪಾಯಕಾರಿ ಕಾಲುಸಂಕ
ಶೃಂಗೇರಿಯ ನೆಮ್ಮಾರ್ ಗ್ರಾಮಾ ಪಂಚಾಯಿತಿಯ ಭಲೇಕಡಿಯ ಅಪಾಯಕಾರಿ ಕಾಲುಸಂಕ
ಶೃಂಗೇರಿಯ ಕೆರೆ ಗ್ರಾಮ ಪಂಚಾಯಿತಿಯ ಗೂರ್ಗಿಯ ಕಾಲು ಸಂಕ
ಶೃಂಗೇರಿಯ ಕೆರೆ ಗ್ರಾಮ ಪಂಚಾಯಿತಿಯ ಗೂರ್ಗಿಯ ಕಾಲು ಸಂಕ

ಕಾಲುಸಂಕವಾಗಿದ್ದ ಮಾವಿನಮರವೂ ಇಲ್ಲ!

ನರಸಿಂಹರಾಜಪುರ: ತಾಲ್ಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಸುಬೂರು ಗ್ರಾಮದ ಹೊಸಕೊಪ್ಪ ನಿವಾಸಿಗಳಿಗೆ ಮಳೆಗಾಲದಲ್ಲಿ ಗ್ರಾಮದ ಮಧ್ಯದಲ್ಲಿ ಹರಿಯುವ ಹಳ್ಳದಾಟಲು ಸಂಪರ್ಕ ಸೇತುವೆಯಾಗಿದ್ದ ಮಾವಿನ ಮರವೂ ಸದ್ಯ ಇಲ್ಲವಾಗಿದ್ದು ಹರಿಯುವ ಹಳ್ಳವನ್ನು ನಡೆದೇ ದಾಟುವ ಸ್ಥಿತಿ ಇದೆ.

ಹೊಸಕೊಪ್ಪ ವ್ಯಾಪ್ತಿಯಲ್ಲಿ ಸುಮಾರು ಐದಾರೂ ಕುಟುಂಬಗಳಿದ್ದು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಮಳೆಗಾಲದಲ್ಲಿ ಮುಚ್ಚಿ ಹೋಗುವುದರಿಂದ ಗ್ರಾಮಸ್ಥರು ಶಾಲಾ– ಕಾಲೇಜು ಮಕ್ಕಳು ಒಂದುವರೆ ಕಿಲೋ ಮೀಟರ್ ದೂರವನ್ನು ಕಾಲು ದಾರಿಯಲ್ಲಿಯೇ ನಡೆದು ಬರುತ್ತಿದ್ದಾರೆ. ಮಾರ್ಗ ಮಧ್ಯಹರಿಯುವ ಸುಮಾರು 20 ಅಡಿ ಅಗಲವಿರುವ ಬಸವನಹಳ್ಳವನ್ನು ದಾಟಿ ಮುತ್ತಿನಕೊಪ್ಪಕ್ಕೆ ತಲುಪುತ್ತಿದ್ದಾರೆ.

ಈ ಹಿಂದೆ ಹಳ್ಳ ದಾಟಲು ಬಿದ್ದ ಮಾವಿನಮರ ಆಸರೆಯಾಗಿತ್ತು. ಪ್ರಸ್ತುತ ಅದೂ ಇಲ್ಲದಿರುವುದರಿಂದ ಹಳ್ಳವನ್ನು ಯಾವುದೇ ಆಸರೆಯಿಲ್ಲದೆ ದಾಟುವ ಸ್ಥಿತಿಯಿದೆ. ಈ ಗ್ರಾಮಕ್ಕೆ ಸುತ್ತಿ ಬಳಸಿ ಬರುವುದಾದರೆ ಸುಮಾರು ಎರಡು ಕಿಲೋ ಮೀಟರ್ ದೂರವಾಗುತ್ತದೆ. ಆಹಾರ ಸಾಮಗ್ರಿ ರಸಗೊಬ್ಬರ ಮತ್ತಿತರ ಪರಿಕರಗಳನ್ನು ಹೆಗಲ ಮೇಲೆ ಹೊತ್ತು ಹೋಗ ಬೇಕಾದ ಸ್ಥಿತಿಯಿದೆ.

‘ಮಕ್ಕಳನ್ನು ಪೋಷಕರು ಹೆಗಲ ಮೇಲೆ ಹೊತ್ತುಕೊಂಡು ಹಳ್ಳದಾಟುತ್ತಿದ್ದಾರೆ. ಇಲ್ಲಿ ಕಿರು ಸೇತುವೆ ನಿರ್ಮಿಸಿದರೆ ಅನುಕೂಲವಾಗುತ್ತದೆ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಎಸ್.ಸುಬ್ರಹ್ಮಣ್ಯ ಹೇಳುತ್ತಾರೆ. ತಾಲ್ಲೂಕಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಗ್ರಾಮದ ಜನ ಇಂದಿಗೂ ಹಳ್ಳ ದಾಟಲು ಕಾಲು ಸಂಕವನ್ನೇ ಆಶ್ರಯಿಸಿದ್ದಾರೆ. ಕಟ್ಟಿನಮನೆ ಹರಾವರಿಯ ಕಲ್ಲೂರು ಗ್ರಾಮಸ್ಥರಿಗೆ ಮಳೆಗಾಲದಲ್ಲಿ ಹಳ್ಳ ದಾಟಲು ದೊಡ್ಡ ಮರದ ದಿಮ್ಮಿಯೇ ಸಂಪರ್ಕ ಸೇತುವೆಯಾಗಿದೆ. ರಾಮಹಡ್ಲು ಗ್ರಾಮದ ವ್ಯಾಪ್ತಿಯಲ್ಲಿದ್ದ ಕಾಲುಸಂಕ ಬಿದ್ದು ಹೋಗಿದ್ದು ಇಲ್ಲಿ ಕಿರು ಸೇತುವೆ ನಿರ್ಮಿಸಲು ಅನುದಾನ ಬಿಡುಗಡೆಯಾಗಿದ್ದರೂ ಕಾಮಗಾರಿ ಪ್ರಾರಂಭವಾಗಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

ಶೃಂಗೇರಿ ತಾಲ್ಲೂಕಿನಲ್ಲಿ ಅಪಾಯಕಾರಿ ಕಾಲುಸಂಕ

ಶೃಂಗೇರಿ: ತಾಲ್ಲೂಕಿನ ಹಲವು ಹಳ್ಳಿಗಳ ಜನ ಕಾಲುಸಂಕದ ಮೇಲೆ ಜೀವ ಬಿಗಿ ಹಿಡಿದು ಸರ್ಕಸ್ ಮಾಡುವುದು ಅನಿವಾರ್ಯವಾಗಿದೆ. ತಾಲ್ಲೂಕಿನ ಕುಂಬ್ರಗೋಡು ಕೂಗೋಡು ಭಲೇಕಡಿ ಕ್ಯಾಕರಿಕೆ ಕೆಸಗೋಡು ಅಡಿಕೇಸು ಮೀನಗರಡಿ ಶಿರ್ಲು ತಾರೋಳ್ಳಿಕೊಡಿಗೆ ವಡ್ಡಿನಕಾರ್ಕಿ ಮೀನಗರಡಿ ಉಡತಾಳು ಗೂರ್ಗಿ ಮುಂಡಗಾರು ಮುಂಡೋಡಿ ಅವಿಗೆ ಹರೇಬೀಳು ಮತ್ತು ಹೊರಣೆ ಗ್ರಾಮಗಳಲ್ಲಿ ವಾಸಿಸುವರು ಇಂದಿಗೂ ಮೂಲ ಸವಲತ್ತುಗಳಿಂದ ವಂಚಿತರಾಗಿದ್ದಾರೆ. ಗ್ರಾಮಸ್ಥರು ಪಟ್ಟಣಕ್ಕೆ ತಲುಪಲು ಕಾಲುಸಂಕವೇ ಮಾರ್ಗ. ತಾಲ್ಲೂಕಿನಲ್ಲಿ ಒಟ್ಟು 33 ಕಾಲುಸಂಕಗಳಿಗೆ ಶಾಶ್ವತವಾಗಿ ಸೇತುವೆ ನಿರ್ಮಾಣವಾಗಬೇಕಿದೆ.

ಶೃಂಗೇರಿ ಪಟ್ಟಣದಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ನೆಮ್ಮಾರ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲೆನಾಡು ಗ್ರಾಮ ನಕ್ಸಲ್ ಪೀಡಿತ ಪ್ರದೇಶ. ಇಲ್ಲಿನ ಜನರಿಗೆ ಮಳೆಗಾಲದಲ್ಲಿ ರಸ್ತೆ ಕುಡಿಯುವ ನೀರು ವಿದ್ಯುತ್ ಸಂಪರ್ಕ ಕಡಿತದಿಂದ ಪರದಾಡುವ ಸ್ಥಿತಿ ಇದೆ. ಶೇ 85ರಷ್ಟು ಗಿರಿಜನರೇ ವಾಸಿಸುತ್ತಿದ್ದು ಶಾಲೆ ಆಸ್ಪತ್ರೆ ಸೇರಿ ಎಲ್ಲದಕ್ಕೂ ಪಟ್ಟಣ ತಲುಪಲು ಕಾಲಸಂಕ ದಾಟುವುದು ಅನಿವಾರ್ಯ. ‘ಕಾಲುಸಂಕ ದಾಟುವುದು ಅಪಾಯಕಾರಿ. ಮಳೆಗಾಲದಲ್ಲಿ ಸಮೀಪದ ಶಾಲೆಗಳಿಗೆ ಹೋಗಲು ಮಕ್ಕಳಿಗೆ ಸಾಧ್ಯವಾಗದೇ ಮನೆಯಲ್ಲಿ ಉಳಿಯುವ ಸ್ಥಿತಿ ಇದೆ. ಗ್ರಾಮೀಣ ಜನರ ಆರೋಗ್ಯ ರಕ್ಷಣೆಗಾಗಿ ಸರ್ಕಾರ ಮತ್ತು ಶಾಸಕರು ಕೂಡಲೇ ಕ್ರಮ ವಹಿಸಬೇಕು ಎಂದು ನೆಮ್ಮಾರ್ ದಿನೇಶ್ ಹೆಗ್ಡೆ ಒತ್ತಾಯಿಸಿದರು.

ಅಪಾಯಕಾರಿ ಕಾಲುಸಂಕ

ಕಳಸ: ‌ತಾಲೂಕಿನಲ್ಲಿ ತುಂಬಿ ಹರಿಯುವ ನದಿ ಹಳ್ಳ ದಾಟಲು ಹಲವು ಗ್ರಾಮಗಳ ಜನರಿಗೆ ಇಂದಿಗೂ ಕಾಲುಸಂಕಗಳೇ ಅನಿವಾರ್ಯ. ಶಾಲಾ ಮಕ್ಕಳು ಇದೇ ಕಾಲುಸಂಕ ಬಳಸಿ ಪ್ರತಿದಿನ ಶಾಲೆಗೆ ಬರಬೇಕು. ಕಾರ್ಮಿಕರೂ ತಮ್ಮ ದಿನದ ಕೂಲಿಗಾಗಿ ಇಂಥ ಅಪಾಯಕಾರಿ ಸಂಕ ದಾಟುತ್ತಾರೆ. ತಾಲ್ಲೂಕಿನ ಎಲ್ಲ ಗ್ರಾಮದಲ್ಲಿ ಈ ರೀತಿಯ ಕಾಲುಸಂಕ ಇದ್ದೇ ಇದೆ.ಕಳಕೋಡು ಕೊಣೆಬೈಲು ಸಂಸೆ ಸಮೀಪದ ಮರ್ಕೊಡು ಪ್ರದೇಶದಲ್ಲಿ ಅಪಾಯಕಾರಿ ಸಂಕ ಇವೆ. ಕಳೆದ ಅವಧಿಯಲ್ಲಿ ಶಾಸಕರಾಗಿದ್ದ ಎಂ.ಪಿ.ಕುಮಾರಸ್ವಾಮಿ ಅವರು ಅನೇಕ ಶಾಶ್ವತ ಕಾಲು ಸೇತುವೆ ನಿರ್ಮಾಣಕ್ಕೆ ಅನುದಾನ ನೀಡಿದ್ದರು. ಆದರೂ ಇನ್ನೂ ಕಾಲುಸಂಕದ ಮೇಲಿನ ನಡಿಗೆ ತಪ್ಪಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT